2ಬಿ ಮೀಸಲಾತಿ ರದ್ದತಿ: ಸಾಮಾಜಿಕ ಅನ್ಯಾಯದ ಪರಮಾವಧಿ
ಒಂದು ವಿಶ್ಲೇಷಣೆ
ಭಾಗ - 01
ಭಾರತದಲ್ಲಿ ಶೋಷಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಎಂಬ ಸಾಮಾಜಿಕ ನ್ಯಾಯವು ಸ್ವಾತಂತ್ರ್ಯ ಪೂರ್ವದಲ್ಲೇ ಹುಟ್ಟಿದ ಪರಿಕಲ್ಪನೆಯಾಗಿದೆ. ಇದು ಈ ನೆಲದಲ್ಲಿ ಅನಾದಿ ಕಾಲದಿಂದಲೂ ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದ ಬಹುದೊಡ್ಡ ಜನಸಮುದಾಯಗಳಿಗೆ ಪರಿಹಾರಾತ್ಮಕವಾಗಿ ಕಲ್ಪಿಸಲಾದ ವ್ಯವಸ್ಥೆಯಾಗಿದೆ.
ಮೀಸಲಾತಿ ಎನ್ನುವುದು ದೀರ್ಘಕಾಲೀನ ಪರಿಹಾರ ಕ್ರಮ. ಭಾರತೀಯ ಮೀಸಲಾತಿ ವ್ಯವಸ್ಥೆ ಕೇವಲ ಆರ್ಥಿಕ ದೃಷ್ಟಿಕೋನದಿಂದ ಹುಟ್ಟಿದ ವ್ಯವಸ್ಥೆಯಲ್ಲ. ಇಲ್ಲಿನ ತಳಸಮುದಾಯಗಳು ಶತಶತಮಾನ ಗಳಿಂದ ಅವಕಾಶವಂಚಿತವಾಗಿತ್ತು. ಸಾಮಾಜಿಕವಾಗಿ ಶೋಷಣೆ, ಜಾತಿ ಅಸಮಾನತೆ, ಶೈಕ್ಷಣಿಕವಾಗಿ ಹಿಂದುಳಿದಿರುವಿಕೆ, ಆರ್ಥಿಕವಾಗಿ ದುರ್ಬಲ, ರಾಜಕೀಯವಾಗಿ ಬಲಹೀನರಾಗಿದ್ದ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ, ರಾಜಕೀಯದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ಭಾರತದ ಪ್ರಜಾಪ್ರಭುತ್ವವನ್ನು ಸಶಕ್ತ ಗೊಳಿಸುವ ಮೂಲ ಉದ್ದೇಶದಿಂದ ಮೀಸಲಾತಿ ವ್ಯವಸ್ಥೆ ಜಾರಿಗೊಳಿಸಲಾಗಿತ್ತು.
ಮೀಸಲಾತಿಯ ಹಿನ್ನೆಲೆ
(ಸ್ವಾತಂತ್ರ್ಯ ಪೂರ್ವದಲ್ಲಿ )
ಬ್ರಿಟಿಷ್ ಆಡಳಿತದ ಕಾಲದಲ್ಲೇ ಮೀಸಲಾತಿ ವ್ಯವಸ್ಥೆ ಅನುಷ್ಠಾನಕ್ಕೆ ಬಂದಿತ್ತು. ಅಂದಿನ ಬ್ರಿಟಿಷ್ ಆಡಳಿತವು ಜನಗಣತಿಯನ್ನು ಜಾರಿಗೊಳಿಸಿದ ಪರಿಣಾಮವಾಗಿ ದೇಶದ ವಿವಿಧ ಪ್ರಾಂತಗಳಲ್ಲಿ ವಿವಿಧ ಸಮುದಾ ಯಗಳ ಜನಸಂಖ್ಯಾ ಪ್ರಮಾಣವನ್ನು ತಿಳಿಯಲು ಸಾಧ್ಯವಾಯಿತು. ತಳಸಮುದಾಯ ಮತ್ತು ಹಿಂದುಳಿದ ವರ್ಗಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಕೊಲ್ಹಾಪುರ ಸಂಸ್ಥಾನದ ರಾಜ ಶಾಹುಮಹಾರಾಜರು ತಮ್ಮ ಸಂಸ್ಥಾನದಲ್ಲಿ ಮೀಸಲಾತಿ ಜಾರಿಗೊಳಿಸುವ ಐತಿಹಾಸಿಕ ನಿರ್ಧಾರ ಕೈಗೊಂಡರು. ೧೯೦೨ರಲ್ಲಿ ಶೋಷಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಶೇ.೫೦ರ ಮೀಸಲಾತಿಯನ್ನು ನೀಡುವ ಮೂಲಕ ಕ್ರಾಂತಿಕಾರಕ ನಿರ್ಧಾರ ತೆಗೆದುಕೊಂಡರು.
ಮೈಸೂರು ಸಂಸ್ಥಾನದ ಒಡೆಯರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ತನ್ನ ರಾಜ್ಯದ ಸಕಲ ಪ್ರಜೆಗಳ ಸರ್ವಾಂಗೀಣ ಪ್ರಗತಿಯ ಕನಸು ಕಂಡಿದ್ದರು. ದೂರದೃಷ್ಟಿಯ ಒಡೆಯರಾದ ಕೃಷ್ಣರಾಜರು ೧೯೧೮-೧೯ರಲ್ಲಿ ಲೆಸ್ಲಿ ಮಿಲ್ಲರ್ ಎಂಬ ನ್ಯಾಯಾಧೀಶರ ನೇತೃತ್ವದ ಸಮಿತಿಯನ್ನು ನೇಮಿಸಿ ಹಿಂದುಳಿದ ಮತ್ತು ತಳಸಮುದಾಯಗಳ ಜನರ ವಾಸ್ತವಿಕ ವರದಿಯನ್ನು ಪಡೆದುಕೊಂಡರು. ಈ ವರದಿಯನ್ನು ಆಧರಿಸಿ ಹಿಂದು ಳಿದ ವರ್ಗ ( ಮುಸ್ಲಿಮ್ ಸಮುದಾಯವೂ ಸೇರಿದಂತೆ) ಹಾಗೂ ಅವಕಾಶ ವಂಚಿತ ಸಮುದಾಯಗಳಿಗೆ ಶೇ.೫೦ ರ ಮೀಸಲಾತಿಯನ್ನು ಜಾರಿಗೊಳಿಸಿದರು. ಇದು ಕನ್ನಡ ನಾಡಿನಲ್ಲಿ ಸಾಮಾಜಿಕ ನ್ಯಾಯಕ್ಕೆ ಬರೆದ ಮೊದಲ ಮುನ್ನುಡಿಯಾಗಿತ್ತು. ಲೆಸ್ಲಿ ಮಿಲ್ಲರ್ ಸಮಿತಿಯಲ್ಲಿ ಲಿಂಗಾಯಿತ, ಒಕ್ಕಲಿಗ, ಮುಸ್ಲಿಮ್, ಕ್ರೈಸ್ತ ಸಮುದಾಯಗಳ ಪ್ರತಿನಿಧಿಗಳು ಇದ್ದರು ಎಂಬುದು ಕೂಡಾ ಗಮನಾರ್ಹ ಅಂಶ. ಲೆಸ್ಲಿ ಮಿಲ್ಲರ್ ಸಮಿತಿಯ ವರದಿಯಲ್ಲಿ ಅವಕಾಶ ವಂಚಿತ ಸಮುದಾ ಯಗಳ ಮಕ್ಕಳಿಗೆ ಶಿಕ್ಷಣದಲ್ಲಿ ಪ್ರವೇಶಾವಕಾಶ, ವಿದ್ಯಾರ್ಥಿ ವೇತನ ನೀಡಿಕೆ, ವಿದ್ಯಾರ್ಥಿನಿಲಯಗಳ ಸ್ಥಾಪನೆಯ ಶಿಫಾರಸು ಕೂಡಾ ಸೇರಿದ್ದವು. ಆದ್ಯ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತಂದ ಶಾಹು ಮಹಾರಾಜರಾಗಲಿ ಅಥವಾ ನಾಲ್ವಡಿ ಕೃಷ್ಣರಾಜ ಒಡೆಯರಾಗಲಿ ಆನು ವಂಶೀಯವಾಗಿ ಅಧಿಕಾರಕ್ಕೆ ಬಂದವರು. ಇವರಿಗೆ ಪ್ರಜೆಗಳ ಮತ ದಾನದ ಮೂಲಕ ಅಧಿಕಾರಕ್ಕೆ ಬರುವ ಅನಿವಾರ್ಯತೆ ಇರಲಿಲ್ಲ.
ಆದುದರಿಂದ ಇವರು ಜಾರಿಗೆ ತಂದ ಮೊತ್ತ ಮೊದಲ ಮೀಸಲಾತಿ ವ್ಯವಸ್ಥೆ ಮತ ಪಡೆಯುವ ಹಂಬಲ ಎಂದು ಹೇಳಲಾದೀತೇ? ಮೀಸಲಾತಿ ಎನ್ನುವುದು ಮತ ಪಡೆಯಲು ಮಾಡಿದ ಹುನ್ನಾರ ಎಂದು ಆರೋಪ ಮಾಡುತ್ತಲೇ ಬರಲಾಗಿದೆ. ಆದರೆ ಸ್ವಾತಂತ್ರ್ಯ ಪೂರ್ವದಲ್ಲೇ ಈ ಪ್ರಜಾ ಸ್ನೇಹಿ ರಾಜರುಗಳು ದಮನಿತರಿಗೆ ನ್ಯಾಯ ಒದಗಿಸುವ ಸಲುವಾಗಿ ಈ ಮೀಸಲಾತಿಯನ್ನು ಜಾರಿಗೆ ತಂದರು.
ಇದಕ್ಕಿಂತಲೂ ಪೂರ್ವದಲ್ಲಿ ೧೮೮೨ ರಲ್ಲಿ ಹಂಟರ್ ಆಯೋಗ ನೇಮಕಗೊಂಡಾಗ ಮಹಾತ್ಮ ಜ್ಯೋತಿ ಬಾ ಫುಲೆಯವರು ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸಿದ್ದರು .
ಸ್ವಾತಂತ್ರ್ಯ ನಂತರದಲ್ಲಿ ಮೀಸಲಾತಿ:
(ಕರ್ನಾಟಕಕ್ಕೆ ಸಂಬಂಧಿಸಿದಂತೆ )
ನಾಗನಗೌಡ ಸಮಿತಿ:
೧೯೬೦ ರಲ್ಲಿ ನೇಮಕವಾದ ನಾಗನಗೌಡ ಸಮಿತಿಯು ಮೈಸೂರು ಸಂಸ್ಥಾನದಲ್ಲಿ ಸುಮಾರು ೩೯೯ ಹಿಂದುಳಿದ ಸಮುದಾಯಗಳನ್ನು ಗುರುತಿಸಿತು. ಹಿಂದುಳಿದ (Backward) ಮತ್ತು ಅತಿ ಹಿಂದುಳಿದ (Most Backward) ಎಂಬ ಎರಡು ಪ್ರವರ್ಗ ಗಳಾಗಿ ವಿಂಗಡಿಸಿದ ಈ ಸಮಿತಿಯು ಶಿಕ್ಷಣದಲ್ಲಿ ಶೇ.೫೦ ಮತ್ತು ಉದ್ಯೋಗದಲ್ಲಿ ಶೇ.೪೫ ರ ಮೀಸಲಾತಿಯನ್ನು ಶಿಫಾರಸು ಮಾಡಿತು. ವಾರ್ಷಿಕ ೨,೪೦೦ರೂ. ಆದಾಯದ ಮಿತಿಯನ್ನು ವಿಧಿಸಲಾಗಿತ್ತು.
ಎಲ್. ಜಿ . ಹಾವನೂರ್ ಆಯೋಗ:
ಮುಂದೆ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ೧೯೭೫ರಲ್ಲಿ ಎಲ್ ಜಿ ಹಾವನೂರ್ ಆಯೋಗವನ್ನು ರಚಿಸಲಾಯಿತು. ಹಾವನೂರ್ ಆಯೋಗವು ತನ್ನ ವರದಿಯಲ್ಲಿ ಹಿಂದುಳಿದ ಸಮುದಾಯ, ಹಿಂದುಳಿದ ಜಾತಿ, ಹಿಂದುಳಿದ ಪಂಗಡ, ಮುಂದುವರಿದಿ ರುವ ಆದರೆ ಆರ್ಥಿಕವಾಗಿ ಬಡವರಾಗಿರುವ ವರ್ಗಗಳನ್ನು ಗುರುತಿಸಿ
ಮೀಸಲಾತಿಯನ್ನು ಶಿಫಾರಸು ಮಾಡಿತು. ಅಂದು ಬಹತೇಕ ಭೂ ಒಡೆತನ ಹೊಂದಿದ್ದ ಕೆಲವು ಸಮುದಾಯಗಳನ್ನು ಮೀಸಲಾತಿಯಿಂದ ಹೊರಗೆ ಇಟ್ಟಿದ್ದರೂ ಕೂಡಾ ಸರಕಾರ ಅನುಷ್ಠಾನ ಮಾಡುವ ಸಂದರ್ಭದಲ್ಲಿ ಇಂತಹ ಸಮುದಾಯಗಳನ್ನೂ ಸೇರಿಸಿ ಮೀಸಲಾತಿ ಕಲ್ಪಿಸಿತು. ಹಿಂದುಳಿದ ಸಮುದಾಯಗಳಿಗೆ ಶೇ.೨೦, ಜಾತಿಗಳಿಗೆ ಶೇ.೧೦, ಪಂಗಡಗಳಿಗೆ ಶೇ.೫ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಬಡವರಿಗೆ ಶೇ.೧ ರ ಮೀಸಲಾತಿ ಜಾರಿಗೆ ಬಂತು. ಹಾವನೂರ್ ವರದಿಯ ಪ್ರಕಾರ ಜಾರಿಗೆ ಬಂದ ಮೀಸಲಾತಿ ವ್ಯವಸ್ಥೆಯಲ್ಲಿ ಮುಸ್ಲಿಮರು ಶೇ.೨೦ರ ಹಿಂದುಳಿದ ಸಮುದಾಯದ ವ್ಯಾಪ್ತಿಯಲ್ಲಿದ್ದರು. ವಾರ್ಷಿಕ ೧೦,೦೦೦ ರೂ. ಆದಾಯದ ಮಿತಿಯನ್ನು ವಿಧಿಸಲಾಗಿತ್ತು.
ಹಾವನೂರ್ ವರದಿಯನ್ನು ಸರ್ವೋಚ್ಚ ನ್ಯಾಯಾಲಯವು ಕೂಡಾ ಹಿಂದುಳಿದ ವರ್ಗಗಳ ವೈಜ್ಞಾನಿಕ ಅಧ್ಯಯನ ಎಂದು ಕರೆದಿದೆ.
ವೆಂಕಟಸ್ವಾಮಿ ಆಯೋಗ:
ಮುಂದೆ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದ ಅವಧಿ ಯಲ್ಲಿ ೧೯೮೬ ರಲ್ಲಿ ವೆಂಕಟಸ್ವಾಮಿ ಆಯೋಗವನ್ನು ರಚಿಸಲಾಯಿತು. ಈ ಆಯೋಗವು ಹಿಂದುಳಿದ ವರ್ಗಗಳ ವಿವಿಧ ಸಮುದಾಯಗಳನ್ನು ಎ,ಬಿ,ಸಿ,ಡಿ,ಇ ಎಂಬ ಐದು ಗುಂಪುಗಳಾಗಿ ವಿಂಗಡಿಸಿತು. ಅಲ್ಲದೆ ‘ಎ’ ಗುಂಪಿಗೆ ಆದಾಯದ ಮಿತಿ ತೆಗೆದು ಹಾಕುವ ಶಿಫಾರಸು ಮಾಡಿತು.
ಚಿನ್ನಪ್ಪರೆಡ್ಡಿ ಆಯೋಗ:
ಕರ್ನಾಟಕ ಸರಕಾರದಿಂದ ನೇಮಕಗೊಂಡ ಚಿನ್ನಪ್ಪರೆಡ್ಡಿ ಆಯೋಗವು ೧೯೯೦ರಲ್ಲಿ ತನ್ನ ವರದಿಯನ್ನು ನೀಡಿತು. ಈ ವರದಿ ಮತ್ತು ಅಂದಿನ ಅಲ್ಪಸಂಖ್ಯಾತ ಆಯೋಗದ ವರದಿಯನ್ನು ಆಧರಿಸಿ ಕರ್ನಾಟಕ ಸರಕಾರವು ೨ಎ (ಶೇ.೧೫ ), ೨ಬಿ ( ಶೇ.೦೪), ೩ಎ ( ಶೇ.೪), ೩ಬಿ (ಶೇ.೫), ಪ್ರವರ್ಗ ೧( ಶೇ ೪) ರ ಗುಂಪುಗಳನ್ನು ರಚಿಸಿ ಹಿಂದುಳಿದ ಸಮುದಾಯಗಳಿಗೆ ಶೇ.೩೨ರ ಮೀಸಲಾತಿಯನ್ನು ಕಲ್ಪಿಸಲಾಯಿತು. ಅಂದಿನ ಅಲ್ಪಸಂಖ್ಯಾತ ಆಯೋಗವು (ರಹಮಾನ್ ಖಾನ್ ಅಧ್ಯಕ್ಷತೆ) ಮುಸ್ಲಿಮರ ಸಾಮಾಜಿಕ, ಶೈಕ್ಷಣಿಕ ಹಿಂದುಳಿಯುವಿಕೆಯನ್ನು ಅಧ್ಯಯನ ಮಾಡಿ ಶೇ.೬ರ ಮೀಸಲಾತಿಯನ್ನು ಶಿಫಾರಸು ಮಾಡಿತ್ತು. ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ನೇತೃತ್ವದ ಸರಕಾರ ಶೇ.೬ ಮೀಸಲಾತಿಯನ್ನು ನೀಡಲು ಮುಂದಾಗಿದ್ದರೂ ಕೂಡಾ ಒಟ್ಟು ಮೀಸಲಾತಿಯ ಪ್ರಮಾಣ ಶೇ.೫೦ನ್ನು ಮೀರಬಾರದು ಎಂಬ ನ್ಯಾಯಾಲಯದ ಆದೇಶದಂತೆ ಮುಸ್ಲಿಮರಿಗೆ ಶೇ.೪ನ್ನು ಮಿತಿಗೊಳಿಸಲಾ ಯಿತು. ಮುಂದೆ ಅಧಿಕಾರಕ್ಕೆ ಬಂದ ದೇವೇಗೌಡರ ನೇತೃತ್ವದ ಸರಕಾರ ಈ ಮೀಸಲಾತಿ ನೀತಿಯನ್ನು ರಾಜ್ಯದಲ್ಲಿ ಯಥಾವತ್ತಾಗಿ ಜಾರಿಗೆ ತಂದರು. ಚಿನ್ನಪ್ಪ ರೆಡ್ಡಿ ಆಯೋಗದ ಶಿಫಾರಸು ಆಧರಿಸಿ ಸುಮಾರು ೨೮ ವರ್ಷಗಳ ಹಿಂದೆ ಅನುಷ್ಠಾನಗೊಂಡ ಮೀಸಲಾತಿ ವ್ಯವಸ್ಥೆ ನಮ್ಮ ರಾಜ್ಯದಲ್ಲಿ ನಿನ್ನೆ ಮೊನ್ನೆಯವರೆಗೂ ಜಾರಿಯಲ್ಲಿತ್ತು.
ಈ ನಡುವೆ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಕೆಲವು ಸಮುದಾಯಗಳು ಕೆಲವು ವರ್ಷಗಳಿಂದ ಮೀಸಲಾತಿ ಪ್ರಮಾಣ ಹೆಚ್ಚಳ, ಒಳಮೀಸಲಾತಿ ಬೇಡಿಕೆ, ಪ್ರವರ್ಗ ಬದಲಾವಣೆ ಇತ್ಯಾದಿ ಬೇಡಿಕೆಗಳನ್ನು ಇಟ್ಟು ಹೋರಾಟಗಳನ್ನು ಮಾಡುತ್ತಲೇ ಇತ್ತು. ಉಪವಾಸ ಸತ್ಯಾಗ್ರಹ, ಬೃಹತ್ ಚಳವಳಿಗಳ ಮೂಲಕ ಸರಕಾರಕ್ಕೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಗಡುವು ನೀಡುತ್ತಲೇ ಇತ್ತು. ನ್ಯಾಯಮೂರ್ತಿ ಸದಾಶಿವ ಆಯೋಗ, ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ವರದಿಯನ್ನು ಆಧರಿಸಿ ಪರಿಶಿಷ್ಟ ಸಮುದಾಯದ ಮೀಸಲಾತಿ ಹೆಚ್ಚಳದ ಬೇಡಿಕೆ ಮತ್ತು ಒಳಮೀಸಲಾತಿಯ ಬೇಡಿಕೆ ಗಟ್ಟಿಯಾಗಿ ಕೇಳಿಬಂದಿತ್ತು. ಇದನ್ನು ಬಗೆಹರಿಸುವ ಸಲುವಾಗಿ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ನೇತೃತ್ವದ ಸರಕಾರ ಕೆಲವು ತಿಂಗಳ ಹಿಂದೆ ಒಟ್ಟು ಮೀಸಲಾತಿ ಪ್ರಮಾಣದಲ್ಲಿ ಶೇ.೫೦ರ ಮಿತಿಯನ್ನು ದಾಟಿ ಪರಿಶಿಷ್ಟ ಜಾತಿಗಳಿಗಿದ್ದ ಶೇ.೧೫ರ ಮೀಸಲಾತಿಯನ್ನು ಶೇ.೧೭ ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಶೇ.೩ ರ ಮೀಸಲಾತಿಯನ್ನು ಶೇ.೭ಕ್ಕೆ ಹೆಚ್ಚಿಸುವ ಮಹತ್ವದ ತೀರ್ಮಾನವನ್ನು ತೆಗೆದು ಕೊಂಡಿತು. ಇದರಿಂದ ಒಟ್ಟು ಶೇ.೬ ಮೀಸಲಾತಿ ಪ್ರಮಾಣ ಹೆಚ್ಚಾಗಿಒಟ್ಟಾರೆ ಮೀಸಲಾತಿ ಪ್ರಮಾಣವು ಶೇ.೫೬ಕ್ಕೆ ನಿಗದಿಯಾ ಯಿತು. ೨೦೨೨ರ ಅಕ್ಟೋಬರ್ ತಿಂಗಳಲ್ಲಿ ತೆಗೆದುಕೊಂಡ ಈ ನಿರ್ಣಯವನ್ನು ವಿಧಾನಮಂಡಲದಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಗಿದ್ದು ರಾಜ್ಯಪಾಲರ ಅಂಕಿತವೂ ಈಗಾಗಲೇ ಬಿದ್ದಿದೆ. ಇದೀಗ ಒಟ್ಟಾರೆ ಮೀಸಲಾತಿ ಪ್ರಮಾಣ (EWS ಹೊರತುಪಡಿಸಿ) ಶೇ.೫೦ ರಿಂದ ೫೬ಕ್ಕೆ ತಲುಪಿದ ಪರಿಣಾಮ ಇದಕ್ಕೆ ಸಂವಿಧಾನಾತ್ಮಕ ರಕ್ಷಣೆ ಪಡೆಯಲು ಸಂವಿಧಾನದ ೯ನೇ ಪರಿಚ್ಛೇದಕ್ಕೆ ಸೇರಿಸಬೇಕಾಗಿದೆ.
೨೦೧೯ರಲ್ಲಿ ಕೇಂದ್ರ ಸರಕಾರವು ಈವರೆಗೆ ಮೀಸಲಾತಿಯಿಂದ ಹೊರಗುಳಿದಿದ್ದ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರಿ ದಿರುವ ಆದರೆ ಆರ್ಥಿಕವಾಗಿ ಹಿಂದುಳಿದಿರುವ ಸಾಮಾನ್ಯ ವರ್ಗದ ಜನ ಸಮುದಾಯಗಳಿಗೆ ಶೇ.೧೦ ಮೀಸಲಾತಿಯನ್ನು ಅನುಷ್ಠಾನ ಮಾಡಿತು. ಶಾಸನಾತ್ಮಕವಾಗಿ ರಚಿಸಲಾದ ಈ ಹೊಸ ಮೀಸಲಾತಿಯನ್ನು ನಂತರದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದರೂ ವಾದ ಪ್ರತಿವಾದಗಳ ಬಳಿಕ ಸರ್ವೋಚ್ಚ ನ್ಯಾಯಾಲಯವು ಈ ವಿಶೇಷ EWS ಮೀಸಲಾತಿಯನ್ನು ಕಾನೂನುಬದ್ಧ ಎಂದು ತೀರ್ಪುನೀಡಿದೆ. ಈ ಶೇ.೧೦ರ EWS(Eonomic Weeker Section) ಅಡಿ ವಿವಿಧ ಸಮುದಾಯಗಳನ್ನು ಸೇರಿಸುವ ಅಧಿಕಾರವನ್ನು ಆಯಾಯ ರಾಜ್ಯ ಸರಕಾರಗಳಿಗೆ ನೀಡಿದೆ.
ಮೀಸಲಾತಿ ಯಾರಿಗೆ ಮತ್ತು ಏಕೆ?
ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತುಆರ್ಥಿಕವಾಗಿ ಶೋಷಣೆಗೆ ಒಳಗಾದ ಅಥವಾ ಹಿಂದುಳಿದಿ ರುವ ಸಮುದಾಯಕ್ಕೆ ಸರಕಾರದ ಅವಕಾಶಗಳಲ್ಲಿ ಪ್ರಾತಿನಿಧ್ಯ ಸಿಗುವಂ ತಾಗಲು ಮಾಡುವ ಶಾಸನಬದ್ಧ ವ್ಯವಸ್ಥೆಯೇ ಮೀಸಲಾತಿ.
ಇದು ತಲೆ ತಲಾಂತರದಿಂದ ಅವಕಾಶವಂಚಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯಕೊಡುವ ಅಧಿಕೃತ ಪರಿಹಾರದ ಭಾಗವಾಗಿದೆ. ಮೀಸಲಾತಿ ಎಂದಾಕ್ಷಣ ಅರ್ಥಿಕ ಹಿಂದುಳಿದಿರುವಿಕೆಗೆ ಪರಿಹಾರ ಎಂದೇ ಬಹುತೇಕ ಜನ ಅರ್ಥೈಸುತ್ತಾರೆ. ವಾಸ್ತವಿಕವಾಗಿ ಮೀಸಲಾತಿ ಎನ್ನುವುದು ಸಾಮಾಜಿಕವಾಗಿ ತಳಸ್ತರದಲ್ಲಿ ಇದ್ದು ಮುಖ್ಯ ವಾಹಿನಿಯಿಂದ ಬಹುದೂರ ತಳ್ಳಲ್ಪಟ್ಟ ಸಮುದಾಯಗಳಿಗೆ ನೀಡುವ ಶಾಸನಬದ್ಧ ಪರಿಹಾರ.
ಒಂದು ದೇಹದ ಕೆಲವೇ ಅಂಗಗಳು ಸದೃಢವಾಗಿದ್ದು ಉಳಿದ ಅಂಗಗಳು ಊನವಾಗಿದ್ದರೆ ಅಥವಾ ನಿತ್ರಾಣಗೊಂಡಿದ್ದರೆ ಹೇಗೆಯೋ ಹಾಗೆಯೇ ಒಂದು ದೇಶದಲ್ಲಿ ಕೆಲವೇ ಸಮುದಾಯ ಗಳು ಸಶಕ್ತರಾಗಿ ಬಹುತೇಕ ಸಮುದಾಯಗಳು ಅಶಕ್ತರಾಗಿದ್ದರೆ ಆ ದೇಶದ ಅಭಿವೃದ್ಧಿ ಹೇಗೆ ಸಾಧ್ಯ?
ದೇಶದ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಯತ್ನದ ಭಾಗವೇ ಈ ಮೀಸಲಾತಿ. ಈ ಪ್ರಯತ್ನ ಎಷ್ಟು ವರ್ಷಗಳ ಕಾಲ ಎಂಬ ಪ್ರಶ್ನೆ ಇದ್ದೇ ಇದೆ. ಹಿಂದುಳಿದ ಸಮುದಾಯಗಳು ತಮ್ಮ ಅಸ್ತಿತ್ವವನ್ನು ತಮ್ಮದೇ ಅಸ್ಮಿತೆಯ ಮೂಲಕ ಕಂಡುಕೊಳ್ಳುವ ಕಾಲದವರೆಗೆ, ಯಾರ ನೆರವಿಲ್ಲದೆ ಸ್ವಯಂ ಜಾಗೃತರಾಗಿ ತಮ್ಮ ಹಕ್ಕುಗಳನ್ನು ಪಡೆಯುವವರೆಗೆ, ಸಾಮಾಜಿಕ ತುಳಿತದಿಂದ ಮುಕ್ತಿ ಸಿಗುವ ವರೆಗೆ, ರಾಜಕೀಯ,ಆರ್ಥಿಕ ಪ್ರಾತಿನಿಧ್ಯ ಗಳಿಸುವವರೆಗೆ, ಸಮಸಮಾಜದ ನಿರ್ಮಾಣವಾಗುವವರೆಗೆ ಈ ಮೀಸಲಾತಿ ಇರಬೇ ಕಾಗುತ್ತದೆ. ಆದ್ದರಿಂದಲೇ ಕಾಲಕಾಲಕ್ಕೆ ಈ ಮೀಸಲಾತಿಯನ್ನು ಮುಂದುವರಿಸುತ್ತಲೇ ಬರಲಾಗಿದೆ. ಆರಂಭದಲ್ಲಿ ಹತ್ತು ವರ್ಷ ಗಳ ಕಾಲ ಎಂದು ನಿಗದಿ ಮಾಡಿದ್ದರೂ ಇಷ್ಟು ವರ್ಷಗಳಲ್ಲಿ ಗುರಿ ಈಡೇರದೆ ಇರುವುದರಿಂದ ಇನ್ನೂ ಮುಂದುವರಿಸಲಾಗಿದೆ. ಆದಾಗ್ಯೂ ಹಿಂದುಳಿದ ಸಮುದಾಯಗಳಲ್ಲಿ ನಿಗದಿತ ಆದಾಯ, ನಿಶ್ಚಿತ ಆದಾಯ ಅಥವಾ ಸರಕಾರಿ ಅಧಿಕಾರಿಯಾಗಿರುವ ಕುಟುಂಬಗಳನ್ನು ಈ ಮೀಸಲಾತಿಯ ಅವಕಾಶಗಳಿಂದ ಹೊರಗಿಟ್ಟು ಅದೇ ಸಮುದಾಯದ ಇತರರಿಗೆ ಈ ಅವಕಾಶ ಕೊಡಲಾಗುತ್ತಿದೆ.
ಬಿಡಿ ಬಿಡಿಯಾಗಿರುವ ಸಮುದಾಯಗಳ ಅವಕಾಶ ವಂಚಿತರಿಗೆ ಮೀಸಲಾತಿಯ ಸೌಲಭ್ಯ ನೀಡಲಾಗುತ್ತಾ ಬರಲಾಗಿದೆ ಮತ್ತು ಇದು ಅನಿವಾರ್ಯವೂ ಆಗಿದೆ.