ರಾಹುಲ್ ಗಾಂಧಿ ಅನರ್ಹತೆ: ಪ್ರಜಾಪ್ರಭುತ್ವದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್
ಹೊಸದಿಲ್ಲಿ: ಲೋಕಸಭಾ ಸದಸ್ಯತ್ವದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಅನರ್ಹತೆ ಕುರಿತು ವಿವಿಧ ಪ್ರತಿಪಕ್ಷಗಳ ಆಕ್ರೋಶದ ನಡುವೆಯೇ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ಭಾರತೀಯ ಪ್ರಜಾಪ್ರಭುತ್ವದ ಕುರಿತು ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಶಾಂತಿನಿಕೇತನದ ವಿಶ್ವಭಾರತಿ ವಿವಿಯ ಅರ್ಥಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ಸುದಿಪ್ತಾ ಭಟ್ಟಾಚಾರ್ಜೀ ಅವರಿಗೆ ಬರೆದಿರುವ ಪತ್ರದಲ್ಲಿ ಸೇನ್, ಭಾರತದಲ್ಲಿ ಪ್ರತಿಪಕ್ಷ ನಾಯಕನೋರ್ವನಿಗೆ ವಿರೋಧಿಸುವ ಹಕ್ಕು ಇದೆಯೇ ಅಥವಾ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
‘ಭಾರತದಲ್ಲಿ ವಿರೋಧ ಪಕ್ಷದ ನಾಯಕ ಇನ್ನು ಮುಂದೆ ವಿರೋಧಿಸುವಂತಿಲ್ಲ ಎನ್ನುವುದು ನಿಜವಾಗಬಹುದೇ? ಕಿರಿಯ ನ್ಯಾಯಾಂಗ ಅಧಿಕಾರಿಯು ಸಹ ಅತ್ಯುನ್ನತ ಪ್ರತಿಪಕ್ಷ ನಾಯಕರನ್ನು ದೂರ ಮಾಡಬಹುದೇ? ಭಾರತದಲ್ಲಿ ಪ್ರಜಾಪ್ರಭುತ್ವದ ಸ್ಥಿತಿ ಎಲ್ಲಿಗೆ ಬಂದಿದೆ?’ ಎಂದು ಸೇನ್ ಪತ್ರದಲ್ಲಿ ಬರೆದಿದ್ದಾರೆ.
ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಸೇನ್ ಭಾವಿಸಿದ್ದಾರೆ ಎಂದು ಪತ್ರವನ್ನು ಸ್ವೀಕರಿಸಿರುವ ಭಟ್ಟಾಚಾರ್ಜೀ ಸುದ್ದಿಸಂಸ್ಥೆಗೆ ತಿಳಿಸಿದರು.