ಕ್ಷಮೆ ಯಾಚಿಸಬೇಕಾಗಿರುವ 'ಇಂದಿನ ಸಾವರ್ಕರ್'ಗಳು!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
'ಮೋದಿಗಳ ಭ್ರಷ್ಟಾಚಾರ'ವನ್ನು ಪ್ರಶ್ನಿಸಿ ಜೈಲು ಶಿಕ್ಷೆಗೊಳಗಾಗಿ, ತನ್ನ ಸಂಸತ್ ಸದಸ್ಯತ್ವವನ್ನು ಕಳೆದುಕೊಂಡ ರಾಹುಲ್ ಗಾಂಧಿ ಪ್ರಕರಣ ಬೇರೆ ಬೇರೆ ತಿರುವುಗಳನ್ನು ಪಡೆಯುತ್ತಿದೆ. ರಾಹುಲ್ ಗಾಂಧಿ ಎತ್ತಿರುವ ಪ್ರಶ್ನೆಯನ್ನು ವಿಷಯಾಂತರಗೊಳಿಸುವುದಕ್ಕೆ ಹಲವರು ಪ್ರಯತ್ನಿಸುತ್ತಿದ್ದಾರೆ. ಅದರ ಭಾಗವಾಗಿ, ಕೆಲವರು ರಾಹುಲ್‌ಗಾಂಧಿಯವರು ವಿ.ಡಿ. ಸಾವರ್ಕರ್ ಅವರ ಬಗ್ಗೆ ನೀಡಿದ ಹೇಳಿಕೆಯನ್ನು ಮುನ್ನೆಲೆಗೆ ತಂದು 'ಅದಾನಿ-ಮೋದಿ' ಸಂಬಂಧವನ್ನು ಬದಿಗೆ ಸರಿಸುವ ಪ್ರಯತ್ನ ನಡೆಯುತ್ತಿದ್ದಾರೆ. ಪತ್ರಕರ್ತನೊಬ್ಬನ ಪ್ರಶ್ನೆಯೊಂದಕ್ಕೆ ರಾಹುಲ್ ಗಾಂಧಿ ''ಕ್ಷಮೆ ಯಾಚನೆ ಮಾಡಲು ನಾನು ಸಾವರ್ಕರ್ ಅಲ್ಲ ಗಾಂಧಿ' ಎಂದು ಕಟುವಾಗಿ ಉತ್ತರಿಸಿದ್ದರು. ಸಾವರ್ಕರ್ ಅವರು ಬ್ರಿಟಿಷರ ಕ್ಷಮೆಯಾಚನೆ ಮಾಡಿರುವುದನ್ನು ರಾಹುಲ್‌ಗಾಂಧಿ ಈ ಹಿಂದೆಯೂ ಹಲವು ಬಾರಿ ಪ್ರಸ್ತಾಪಿಸಿದ್ದರು. ವಿ. ಡಿ. ಸಾವರ್ಕರ್ ಅವರನ್ನು ಸ್ವಾತಂತ್ರ ಹೋರಾಟಗಾರರೆಂದು ಬಿಂಬಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದಾಗ ಅದನ್ನು ಅವರು ಕಟುವಾಗಿ ವಿರೋಧಿಸಿದ್ದರು.
ಸ್ವಾತಂತ್ರ ಕಾಲದಲ್ಲಿ ವಿ.ಡಿ. ಸಾವರ್ಕರ್ ನಡೆಗಳು ಅತ್ಯಂತ ಸಂಶಯಾಸ್ಪದವಾಗಿದ್ದು, ಅವರು ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದಾರೆ ಎನ್ನುವ ಪ್ರತಿಪಾದನೆಯನ್ನು ಹಲವು ಇತಿಹಾಸಕಾರರು ಅಲ್ಲಗಳೆದಿದ್ದಾರೆ. ಬಿಜೆಪಿ ಅವರನ್ನು ಸ್ವಾತಂತ್ರ ವೀರ ಎಂದು ಮುನ್ನೆಲೆಗೆ ತರಲು ಪ್ರಯತ್ನಿಸಿದಾಗ ಸಾವರ್ಕರ್ ಮೇಲಿರುವ ಆರೋಪಗಳು ಕೂಡ ಮುನ್ನ್ನೆಲೆಗೆ ಬರುವುದು ಸಹಜವಾಗಿದೆ. ಇದೀಗ ರಾಹುಲ್‌ಗಾಂಧಿ ಸಾವರ್ಕರ್ ಅವರನ್ನು ಅವಮಾನಿಸಿದ್ದಾರೆ ಎಂದು ಅವರ ಮೊಮ್ಮಗ ರಂಜಿತ್ ಸಾವರ್ಕರ್ ಆರೋಪಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಮಿತ್ರ ಪಕ್ಷವಾಗಿರುವ ಹಿಂದುತ್ವ ವಾದಿ ಪ್ರತಿಪಾದಕ ಉದ್ಧವ್ ಠಾಕ್ರೆ ಅವರ ಶಿವಸೇನೆಯೂ ರಾಹುಲ್ ಗಾಂಧಿಯ ಸಾರ್ವಕರ್ ಹೇಳಿಕೆಯ ಬಗ್ಗೆ ಅಸಮಾಧಾನಗೊಂಡಿದೆ. ''ರಾಹುಲ್‌ಗಾಂಧಿ ಸಾವರ್ಕರ್ ಹೇಳಿಕೆಗಾಗಿ ಕ್ಷಮೆಯಾಚಿಸಬೇಕು. ಇಲ್ಲದೇ ಇದ್ದರೆ ಅವರ ಮೇಲೆ ಪ್ರಕರಣ ದಾಖಲಿಸುವುದಾಗಿ'' ಸಾವರ್ಕರ್ ಮೊಮ್ಮಗ ಬೆದರಿಕೆ ಹಾಕಿದ್ದಾರೆ.
''ಕ್ಷಮೆ ಯಾಚಿಸುವುದಕ್ಕೆ ನಾನು ಸಾವರ್ಕರ್ ಅಲ್ಲ'' ಎಂದು ಹೇಳುವುದು ಯಾಕೆ ಮತ್ತು ಹೇಗೆ ಅಪರಾಧ? ಈ ಮೂಲಕ ವಿ. ಡಿ. ಸಾವರ್ಕರ್ ಅವರು ಬ್ರಿಟಿಷರ ಮುಂದೆ ಕ್ಷಮೆ ಯಾಚಿಸಿರುವುದು ಸುಳ್ಳು ಎಂದು ಹೇಳುತ್ತಿದ್ದಾರೆಯೆ? ಅಥವಾ ಕ್ಷಮೆ ಯಾಚಿಸಿರುವುದು ಈ ದೇಶಕ್ಕೆ ಗೌರವಾರ್ಹವಾದ ವಿಷಯವೆಂದು ಪ್ರತಿಪಾದಿಸುತ್ತಿದ್ದಾರೆಯೆ? . ''ಬ್ರಿಟಿಷರ ವಿರುದ್ಧ ಸಾವರ್ಕರ್ ಕ್ಷಮೆ ಯಾಚಿಸಿರುವುದಕ್ಕೆ ದಾಖಲೆ ನೀಡಿ'' ಎಂದು ಕೇಳಿದ್ದರೆ ಅದಕ್ಕೆ ಅರ್ಥವಿದೆ. ಆ ದಾಖಲೆಯನ್ನು ನೀಡಲು ವಿಫಲವಾದರೆ, ಇದನ್ನು ದುರುದ್ದೇಶಪೂರ್ವಕ ಆರೋಪವೆಂದು ಕರೆದು ರಾಹುಲ್‌ಗಾಂಧಿಯ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹಾಕಬಹುದು. ಆದರೆ ಬ್ರಿಟಿಷರ ಜೊತೆಗೆ ಸಾವರ್ಕರ್ ಅವರು ಎರಡೆರಡು ಬಾರಿ ಕ್ಷಮೆಯಾಚನೆ ಮಾಡಿರುವ ಬಗ್ಗೆ ಅಧಿಕೃತ ದಾಖಲೆಗಳಿವೆ. ಅತ್ಯಂತ ವಿನೀತವಾಗಿ, ದಯನೀಯ ರೀತಿಯಲ್ಲಿ , ಮನಕರಗುವಂತೆ ಬ್ರಿಟಿಷರನ್ನು ದೊರೆಗಳೆಂದು ಒಪ್ಪಿ ಅವರು ಕ್ಷ ಮೆ ಯಾಚನೆ ಮಾಡಿರುವ ಪತ್ರಗಳು ಈಗಲೂ ಲಭ್ಯ ಇವೆ. ಈಗಾಗಲೇ ಈ ಪತ್ರಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಜೊತೆಗೆ, ಸ್ವಾತಂತ್ರ ಹೋರಾಟಗಾರರಿಗೆ ದ್ರೋಹವೆಸಗಿದ ಆರೋಪಗಳೂ ಸಾವರ್ಕರ್ ಮೇಲಿವೆ.
ಸಾವರ್ಕರ್ ಸ್ವಾತಂತ್ರ ಹೋರಾಟಕ್ಕೆ ಸಂಬಂಧಿಸಿ ಕಾಲಾಪಾನಿ ಶಿಕ್ಷೆ ಅನುಭವಿಸಿರುವುದಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. 'ಬ್ರಾಹ್ಮಣ ವಿರೋಧಿಯೆಂಬ ಕಾರಣಕ್ಕೆ ಬ್ರಿಟಿಷ್ ಅಧಿಕಾರಿ'ಯೊಬ್ಬನನ್ನು ಕೊಂದು ಹಾಕಲು ತರುಣನೊಬ್ಬನಿಗೆ ಪಿಸ್ತೂಲ್ ಸರಬರಾಜು ಮಾಡಿ ತಲೆಮರೆಸಿಕೊಂಡಿರುವುದು ಅವರ ಮೇಲಿದ್ದ ಪ್ರಮುಖ ಆರೋಪ. ಆ ಕಾರಣಕ್ಕಾಗಿಯೇ ಅವರು ಜೈಲು ಪಾಲಾಗಿದ್ದರು ಎಂದು ಹೇಳಲಾಗುತ್ತದೆ. ಬ್ರಿಟಿಷರು ನೀಡಿದ್ದ ಕಾಲಾಪಾನಿ ಶಿಕ್ಷೆಯಿಂದ ಪಾರಾಗಲು ಹಲವು ಪ್ರಯತ್ನಗಳನ್ನು ಮಾಡಿ ವಿಫಲರಾದ ಬಳಿಕ ಅವರು ಕ್ಷಮೆಯಾಚನೆ ಮಾಡಿ ಬಿಡುಗಡೆಗೊಳ್ಳುತ್ತಾರೆ. ಹಾಗೆ ಬಿಡುಗಡೆಗೊಂಡ ಬಳಿಕ ಅವರು ಬ್ರಿಟಿಷರಿಂದ ಪಿಂಚಣಿಯನ್ನು ಪಡೆದುಕೊಂಡು ಉಳಿದ ದಿನಗಳನ್ನು ಕಳೆಯುತ್ತಾರೆ. ಅವರು ಪಿಂಚಣಿ ಪಡೆದಿರುವುದಕ್ಕೂ ದಾಖಲೆಗಳಿವೆ. ಪಿಂಚಣಿ ಪಡೆದು ಅವರಷ್ಟಕ್ಕೇ ಬದುಕಿದ್ದರೆ ಯಾರೂ ಪ್ರಶ್ನಿಸುತ್ತಿರಲಿಲ್ಲ. ಬ್ರಿಟಿಷರಿಗೆ ನೀಡಿದ ಕ್ಷಮಾಪಣಾ ಪತ್ರದಲ್ಲಿ ತಿಳಿಸಿದಂತೆ ಅವರು, ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸುವ ಯುವಕರನ್ನು ತಡೆಯುವುದಕ್ಕಾಗಿ ಶ್ರಮಿಸತೊಡಗಿದರು. ಸುಭಾಶ್ ಚಂದ್ರ ಭೋಸರು ಯುವಕರಿಗೆ ತಮ್ಮ ಸೇನೆ ಸೇರಲು ಕರೆ ನೀಡಿದಾಗ, ಅದಕ್ಕೆ ಸೇರದಂತೆ 'ತಿಳಿ ಹೇಳುವ' ಪ್ರಯತ್ನ ನಡೆಸಿದರು. ಬ್ರಿಟಿಷರ ಜೊತೆಗೆ ಸ್ನೇಹಪರರಾಗಿ ಇದ್ದು ಹಿಂದುತ್ವವಾದವನ್ನು ಹರಡಲು ಬದುಕನ್ನು ಮೀಸಲಿರಿಸಿದರು. ಅಷ್ಟೇ ಅಲ್ಲ. ಕಟ್ಟಕಡೆಗೆ ಅವರು ಮಹಾತ್ಮ್ಮಾಗಾಂಧೀಜಿಯ ಕೊಲೆಯಲ್ಲಿ 7ನೇ ಆರೋಪಿಯಾಗಿ ಗುರುತಿಸಿಕೊಂಡರು. ಸಾವರ್ಕರ್ ಮಾಡಿದ ಈ ಎಲ್ಲ ತಪ್ಪಿಗಾಗಿ ಇಂದು ರಾಹುಲ್ ಗಾಂಧಿ ಯಾಕೆ ಕ್ಷಮೆ ಯಾಚಿಸಬೇಕು?
ಸಾವರ್ಕರ್ ಅವರು ಮಾಡಿದ ಈ ಎಲ್ಲ ತಲೆತಗ್ಗಿಸಬೇಕಾದ ಕೃತ್ಯಗಳು ಮುನ್ನೆಲೆಗೆ ಬರುತ್ತಿರುವುದು ಬಿಜೆಪಿ ಮತ್ತು ಆರೆಸ್ಸೆಸ್ ಕಾರಣದಿಂದ. ಕೇಂದ್ರ ಸರಕಾರದ ನೇತೃತ್ವದಲ್ಲಿ ಸಾವರ್ಕರ್‌ರನ್ನು ಈ ದೇಶದ ನಿಜವಾದ 'ವೀರ' ಎಂದು ಬಿಂಬಿಸುವ ಪ್ರಯತ್ನ ನಡೆದಾಗ ಸಾವರ್ಕರ್ ಅವರ ಮೇಲಿನೆಲ್ಲ ಕೃತ್ಯಗಳಿಗೆ ನೀವು ಏನೆಂದು ಸ್ಪಷ್ಟೀಕರಣ ನೀಡುತ್ತೀರಿ? ಯಾರಾದರೂ ಪ್ರಶ್ನಿಸಿದರೆ ಅದರಿಂದ ಅವಮಾನವಾಗುವಂತಹದೇನಿದೆ? ಸ್ವಾತಂತ್ರ ಪೂರ್ವದಲ್ಲಿ ಸಾವರ್ಕರ್ ಈ ಕೃತ್ಯಗಳನ್ನು ಎಸಗಿಲ್ಲ ಎಂದಾದರೆ ಅದನ್ನಾದರೂ ಹೇಳಲಿ. ''ಸಾವರ್ಕರ್ ಬ್ರಿಟಿಷರ ಜೊತೆಗೆ ಹೋರಾಟ ಮಾಡಿಲ್ಲ. ಅವರು ಬ್ರಿಟಿಷರಿಂದ ಪಿಂಚಣಿಯನ್ನು ಪಡೆದಿಲ್ಲ. ಗಾಂಧೀಜಿಯನ್ನು ಕೊಂದ ಆರೋಪಿಗಳಲ್ಲಿ ಅವರು ಒಬ್ಬರಾಗಿರಲಿಲ್ಲ'' ಎಂದು ಹೇಳಿಕೆ ನೀಡುವ ಧೈರ್ಯ ಬಿಜೆಪಿ ನಾಯಕರಿಗಾಗಲಿ, ಆರೆಸ್ಸೆಸ್ ಮುಖಂಡರಿಗಾಗಲಿ ಇದೆಯೆ? ಅಥವಾ ರಾಹುಲ್‌ಗಾಂಧಿಯಿಂದ ಕ್ಷಮೆಯಾಚನೆಯನ್ನು ನಿರೀಕ್ಷಿಸುತ್ತಿರುವ ಸಾವರ್ಕರ್ ಮೊಮ್ಮಗನಾದರೂ ಅವೆಲ್ಲವನ್ನು ಸುಳ್ಳು ಎಂದು ಹೇಳಬಲ್ಲರೆ? ಸಾವರ್ಕರ್ ನಿಜಕ್ಕೂ ವೀರ ಎಂದಾದರೆ, ಮೇಲಿನೆಲ್ಲ ಕೃತ್ಯಗಳು ಸಮರ್ಥನೀಯವಾಗುತ್ತದೆ. ಇಷ್ಟಕ್ಕೂ ಸಾವರ್ಕರ್ ಅವರನ್ನು 'ವೀರ' ಎಂದು ಕರೆದಿರುವುದೇ ಸ್ವತಃ ಸಾವರ್ಕರ್ ಎಂದು ಇತಿಹಾಸಕಾರರು ಈಗಾಗಲೇ ನಿರೂಪಿಸಿದ್ದಾರೆ. ತಮ್ಮ ಬಗ್ಗೆ ತಾವೇ ಗುಪ್ತನಾಮದಲ್ಲಿ ರಚಿಸಿದ ಕೃತಿಯೊಂದರಲ್ಲಿ ತಮ್ಮನ್ನು ತಾವೇ ಸಾವರ್ಕರ್ 'ವೀರ' ಎಂದು ಕರೆದುಕೊಂಡಿದ್ದಾರೆ. ಆದುದರಿಂದ, ಯಾವಾಗ ಸಾವರ್ಕರ್ ಅವರನ್ನು ಕೆಲವು ಶಕ್ತಿಗಳು ಈ ದೇಶದ 'ಹೀರೋ' ಮಾಡಲು ಹೊರಟವೋ ಆಗಲೇ ದೇಶದ ಸ್ವಾತಂತ್ರ ಹೋರಾಟಗಾರರಿಗೆ ಅವಮಾನವಾಯಿತು. ಗಾಂಧೀಜಿಯ ವೌಲ್ಯಗಳಿಗೆ ಅಪಮಾನವಾಯಿತು. ಆದುದರಿಂದ ಯಾರು ಸಾವರ್ಕರ್‌ರನ್ನು ತಮ್ಮ ನಾಯಕನಾಗಿ ಸ್ವೀಕರಿಸಿದ್ದಾರೆಯೋ ಅವರು ಈ ದೇಶದ ಜನರ ಕ್ಷಮೆಯಾಚಿಸಬೇಕು.
'ಕ್ಷಮೆಯಾಚಿಸುವುದಕ್ಕೂ, ಕ್ಷಮಿಸುವುದಕ್ಕೂ' ಅಪಾರ ಧೈರ್ಯ ಬೇಕು ಎಂದು ಮಹಾತ್ಮ್ಮಾಗಾಂಧೀಜಿ ನುಡಿದಿದ್ದರು. ಇದನ್ನು ಹೇಳುವ ಸಂದರ್ಭದಲ್ಲಿ, 'ಯಾರೊಂದಿಗೆ ಕ್ಷಮೆ ಯಾಚನೆ ಮತ್ತು ಯಾರಿಗೆ ಕ್ಷಮಾಪಣೆ' ಎನ್ನುವುದರ ಬಗ್ಗೆ ಅವರಿಗೆ ಸ್ಪಷ್ಟ ಅರಿವಿತ್ತು. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಅವರು ಎಂದಿಗೂ ಬ್ರಿಟಿಷರ ಬಳಿ ಕ್ಷಮೆ ಯಾಚನೆ ಮಾಡಿರಲಿಲ್ಲ. ಬ್ರಿಟಿಷರ ದೌರ್ಜನ್ಯವನ್ನು ಅವರು ಕ್ಷಮಿಸಲೂ ಇಲ್ಲ. ನಮ್ಮ ಸ್ವಾತಂತ್ರದ ಹಕ್ಕಿಗಾಗಿ ಕೊನೆಯ ಉಸಿರಿರುವ ವರೆಗೂ ಹೋರಾಡುತ್ತಾ ಹುತಾತ್ಮರಾಗುವುದು ಲೇಸು ಎನ್ನುವುದು ಗಾಂಧೀಜಿಯ ನಿಲುವಾಗಿತ್ತು. 'ದೇಶಕ್ಕೆ ವಂಚಿಸಿ ವಿದೇಶದಲ್ಲಿ ಕಾಲ ಕಳೆಯುತ್ತಿರುವ ಭ್ರಷ್ಟ ಮೋದಿ'ಗಳಿಗಾಗಿ ಕ್ಷಮೆಯಾಚಿಸಿ ಎಂದು ಒತ್ತಾಯಿಸುತ್ತಿರುವವರು ತಮ್ಮ ಆದರ್ಶವಾಗಿ ಸಾವರ್ಕರ್ ಅವರನ್ನು ಸ್ವೀಕರಿಸಿರುವುದು ಆಕಸ್ಮಿಕ ಅಲ್ಲ. ಗಾಂಧೀಜಿಯೇನಾದರೂ ಬದುಕಿದ್ದಿದ್ದರೆ ಇವರನ್ನೆಂದಿಗೂ ಕ್ಷಮಿಸುತ್ತಿರಲಿಲ್ಲ ಮಾತ್ರವಲ್ಲ, ಈ ಆಧುನಿಕ ಸಾವರ್ಕರ್‌ಗಳು ದೇಶದ ಕ್ಷಮೆಯಾಚಿಸುವವರೆಗೆ ತನ್ನ ಸ್ವಾತಂತ್ರ ಹೋರಾಟದಿಂದ ವಿರಮಿಸುತ್ತಿರಲಿಲ್ಲ ಎನ್ನುವುದನ್ನು ನಾವಿಂದು ನೆನಪಿನಲ್ಲಿಡಬೇಕಾಗಿದೆ