ಕಾಡಿನಾಚೆಗೂ ಮುಟ್ಟಬೇಕಿದೆ 'ಕಾಡಿನ ರಾಜರ' ಕೂಗು
''ಕಾಡಿನ ಮಕ್ಕಳು ನಾವೇನೆ, ಕಾಡಿನ ರಾಜರು ನಾವೇನೆ''
ಜೇನು ಕುರುಬ ಆದಿವಾಸಿ ಸಮುದಾಯದ 27 ವರ್ಷದ ಶಿವು ಹೀಗೆ ಹಾಡುತ್ತಿದ್ದರೆ ಆ ಧ್ವನಿ ಕಾಡಿನಲ್ಲಿ ಅನುರಣಿಸುತ್ತದೆ. ಶಿವುಗೆ ಇತರ ಹಲವಾರು ಆದಿವಾಸಿಗಳು ಮತ್ತು ಸಂರಕ್ಷಣಾ ಕಾರ್ಯಕರ್ತರು ಜೊತೆಯಾಗುತ್ತಾರೆ.
ಕೊಡಗು ಜಿಲ್ಲೆಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಒಳಗೆ ತಮ್ಮನ್ನು ಕಾಡಿನ ಮೂಲ ನಿವಾಸಿಗಳೆಂದು ಪರಿಗಣಿಸಬೇಕು ಮತ್ತು ಆದಿವಾಸಿಗಳ ಸ್ಥಳಾಂತರವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸುವ ಚಳವಳಿ ಬೆಳೆಯುತ್ತಿದೆ. ಅರಣ್ಯಭೂಮಿಯ ಮೇಲಿನ ಆದಿವಾಸಿ ಸಮುದಾಯದ ಒಡೆತನವನ್ನು ಪ್ರತಿಪಾದಿಸುವ ಈ ಆಂದೋಲನ ಆದಿವಾಸಿಗಳು ಕಾಡಿನಲ್ಲಿ ನೆಲೆಸಲು ಅವಕಾಶ ಕಲ್ಪಿಸಬೇಕೆಂದು ಕೇಳುತ್ತಿದೆ.
ಆದಿವಾಸಿ ಸಮುದಾಯವು ತಲೆತಲಾಂತರದಿಂದ ಬಳಸಿದ್ದ ನೆಲವನ್ನು ರಾಷ್ಟ್ರೀಯ ಉದ್ಯಾನವನಗಳ ವ್ಯಾಪ್ತಿಗೆ ತೆಗೆದುಕೊಂಡಿರುವುದು ಮತ್ತು ಸಮುದಾಯವು ಅದನ್ನು ಬಳಸದಂತೆ ತಡೆಯುವ ನೀತಿಯನ್ನು ಜಾರಿಗೊಳಿಸಿ ಇಡೀ ಸಮುದಾಯದ ಬದುಕನ್ನು ಅತಂತ್ರಗೊಳಿಸಿರುವುದರ ವಿರುದ್ಧ ಈ ಆಂದೋಲನ ನಡೆಯುತ್ತಿದೆ.
ನಾಗರಹೊಳೆಯಲ್ಲಿ ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡುವ ಸಂಘಟನೆ ನಾಗರಹೊಳೆ ಆದಿವಾಸಿ ಜಮ್ಮಾ ಪಾಲೆ ಹಕ್ಕು ಸ್ಥಾಪನೆ ಸಮಿತಿ ನೇತೃತ್ವದಲ್ಲಿ ಆದಿವಾಸಿ ನಿವಾಸಿಗಳು ಮತ್ತು ಸಂರಕ್ಷಣಾ ಕಾರ್ಯಕರ್ತರ ಗುಂಪು ಮಾರ್ಚ್ 15ರಿಂದ 21ರವರೆಗೆ ಒಂದು ವಾರ ಕಾಡೊಳಗೆ ಮೆರವಣಿಗೆ ನಡೆಸಿತು. ನಾಗರಹೊಳೆಯ ಅರಣ್ಯದೊಳಕ್ಕೆ ಸಾಗುತ್ತ, ಪ್ರತಿಭಟನೆಯ ಹಾಡುಗಳನ್ನು ಹಾಡುತ್ತ ಆದಿವಾಸಿಗಳು ವಾಸಿಸುವ ಹಳ್ಳಿಗಳಲ್ಲಿ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಕುರಿತ ಚರ್ಚೆಗಳನ್ನು ನಡೆಸಲಾಯಿತು. ನಾಗರಹೊಳೆಯಲ್ಲಿರುವ ವಲಯ ಅರಣ್ಯಾಧಿಕಾರಿಗಳ ಕಚೇರಿಯೆದುರು ಮೆರವಣಿಗೆ ಕೊನೆಯಾಯಿತು. ಬಳಿಕ ಅಲ್ಲಿ ಧರಣಿ ನಡೆಸಿ, ಕಾಡಿನಲ್ಲಿ ವಾಸಿಸುವ ಆದಿವಾಸಿಗಳ ಹಕ್ಕನ್ನು ಅರಣ್ಯ ಇಲಾಖೆ ಅಂಗೀಕರಿಸಬೇಕು ಎಂದು ಒತ್ತಾಯಿಸಲಾಯಿತು.
ನಾಗರಹೊಳೆಯ ಜೇನು ಕುರುಬ, ಬೆಟ್ಟ ಕುರುಬ ಮತ್ತು ಯೆರವ ಆದಿವಾಸಿ ಸಮುದಾಯದವರು ತಲೆಮಾರುಗಳಿಂದ ಕಾಡಿನಲ್ಲಿ ವಾಸಿಸುತ್ತಿದ್ದಾರೆ. ಅರಣ್ಯದ ಪ್ರತೀ ವೈಶಿಷ್ಟ್ಯವೂ ಅವರಿಗೆ ಗೊತ್ತಿದೆ. ಅದಕ್ಕೆ ಒಂದು ಬಗೆಯ ಆಧ್ಯಾತ್ಮಿಕ ಮಹತ್ವವಿದೆ. ಆಹಾರ ಮತ್ತು ಔಷಧಕ್ಕಾಗಿ ಬೀಜಗಳು ಮತ್ತು ಬೇರುಗಳು, ಉರುವಲಿಗಾಗಿ ಕಟ್ಟಿಗೆಗಳು, ಹಗ್ಗ, ಚಾಪೆ, ಪೊರಕೆ ಮತ್ತು ಬುಟ್ಟಿಗಳ ತಯಾರಿಕೆಗೆ ಎಲೆ ಮತ್ತು ಹುಲ್ಲು ಹೀಗೆ ಜೀವನಕ್ಕಾಗಿ ಅರಣ್ಯ ಉತ್ಪನ್ನಗಳನ್ನೇ ಅವಲಂಬಿಸಿರುವ ಸಮುದಾಯಗಳು ಇವು.
ನಾಗರಹೊಳೆಯನ್ನು ಹುಲಿ ಸಂರಕ್ಷಿತ ಪ್ರದೇಶವೆಂದು 1999ರಲ್ಲಿ ಘೋಷಿಸಿದಾಗಿನಿಂದ ಕಳೆದ 24 ವರ್ಷಗಳಲ್ಲಿ ನೂರಾರು ಆದಿವಾಸಿಗಳನ್ನು ಅರಣ್ಯದಿಂದ ಸ್ಥಳಾಂತರಿಸಲಾಗಿದೆ ಎಂದು ನಾಗರಹೊಳೆ ಚಳವಳಿಯ ಯುವ ಮುಂದಾಳು ಶಿವು ಹೇಳುತ್ತಾರೆ. ವನ್ಯಜೀವಿ ಸಂರಕ್ಷಣೆ ಹೆಸರಿನಲ್ಲಿ ತಮ್ಮನ್ನು ಹೊರಹಾಕಲಾಗಿದೆ ಎಂಬ ಸಂಕಟ ಅವರದು.
ಅರಣ್ಯ ಇಲಾಖೆ ನೀಡಿರುವ ಅಧಿಕೃತ ಅಂಕಿ ಅಂಶಗಳ ಪ್ರಕಾರ ನಾಗರಹೊಳೆಯಲ್ಲಿರುವ 2,785 ಆದಿವಾಸಿ ಕುಟುಂಬಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಕುಟುಂಬಗಳನ್ನು ಕಳೆದ ಎರಡು ದಶಕಗಳಲ್ಲಿ ಸ್ಥಳಾಂತರಿಸಲಾಗಿದೆ. ಅವರು ತಾವಾಗಿಯೇ ಸ್ಥಳಾಂತರಗೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಇಲ್ಲಿಂದ ಹೊರಹೋಗಿ ವಾಸಿಸಬಯಸುವವರಿಗೆ ಪರಿಹಾರ ನೀಡುತ್ತಿದ್ದೇವೆ ಮತ್ತು ಕಾಡಿನ ಹೊರಗೆ ಉತ್ತಮ ಸೌಲಭ್ಯ ಒದಗಿಸುತ್ತಿದ್ದೇವೆ ಎಂದೂ ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ. ಆದರೆ, ಒಂದು ಬಾರಿ ಪರಿಹಾರ ಕೊಟ್ಟರೆ ಸಾಕಾಗುವುದಿಲ್ಲ. ತಮಗೆ ಹಣಕ್ಕಿಂತ ಹೆಚ್ಚಾಗಿ ಕಾಡಿನ ಜೊತೆಗಿನ ಬಾಂಧವ್ಯ ಮುಖ್ಯ ಎನ್ನುವುದು ಸಮುದಾಯದ ಮುಖಂಡರು ಮತ್ತು ನಿವಾಸಿಗಳ ವಾದ.
ಶಿವು ಮತ್ತು ನಾಗರಹೊಳೆಯ ನಾಲ್ಕೇರಿ ಗ್ರಾಮದ 45 ವರ್ಷದ ಗ್ರಾಮ ಪಂಚಾಯತ್ ಸದಸ್ಯೆ ಜೆ.ಆರ್.ಲಕ್ಷ್ಮೀ ಅವರಂತಹ ಮುಂದಾಳುಗಳು ಅರಣ್ಯ ಭೂಮಿಯಿಂದ ಆದಿವಾಸಿಗಳನ್ನು ಸ್ಥಳಾಂತರಿಸುವ ಸರಕಾರದ ಪ್ರಯತ್ನದ ವಿರುದ್ಧ ಹೋರಾಡುತ್ತಿದ್ದಾರೆ. ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳ (ಅರಣ್ಯ ಹಕ್ಕುಗಳ ಗುರುತಿಸುವಿಕೆ) ಕಾಯ್ದೆ 2006ರ ಅಡಿಯಲ್ಲಿ ಹಕ್ಕುಗಳನ್ನು ಪಡೆಯಲು, ಸಮುದಾಯದ ಅರಣ್ಯ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಅರಣ್ಯನಿವಾಸಿಗಳನ್ನು ಸಂಘಟಿಸುವಲ್ಲಿ ತೊಡಗಿದ್ದಾರೆ. ಈ ಕಾಯ್ದೆ ಆದಿವಾಸಿಗಳು ಅರಣ್ಯದೊಂದಿಗೆ ಹೊಂದಿರುವ ಸಂಬಂಧವನ್ನು ಪರಿಗಣಿಸುತ್ತದೆ ಮತ್ತು ಅರಣ್ಯವನ್ನು ಪ್ರವೇಶಿಸಲು ಮತ್ತು ಅದರ ಉತ್ಪನ್ನಗಳನ್ನು ಬಳಸಲು ಸಮುದಾಯ ಮತ್ತು ವೈಯಕ್ತಿಕ ಹಕ್ಕುಗಳನ್ನು ನೀಡುತ್ತದೆ.
ನಾಗರಹೊಳೆಯಿಂದ ಆದಿವಾಸಿಗಳು ನಿರಾಶ್ರಿತರಾಗುತ್ತಿದ್ದರೂ, ಅರಣ್ಯ ಹಕ್ಕು ಕಾಯ್ದೆ (ಎಫ್ಆರ್ಎ) ಅಡಿಯಲ್ಲಿ ಹಕ್ಕುಗಳನ್ನು ಪಡೆಯಲು ಅವರು ಸಲ್ಲಿಸಿದ ಅರ್ಜಿಗಳನ್ನು ಕೊಡಗು ಜಿಲ್ಲಾಡಳಿತ ತಿರಸ್ಕರಿಸಿದೆ ಎಂಬುದು ಈ ಹೋರಾಟಗಾರರ ನೋವು. ಹಕ್ಕು ಸಾಧಿಸುತ್ತಿರುವ ಭೂಮಿಯನ್ನು ಕೃಷಿ ಮಾಡಿರುವ ಅಥವಾ ಬಳಸಿರುವುದನ್ನು ಸಾಬೀತುಪಡಿಸಲು 2005ರ ಹಿಂದಿನ ಸರಕಾರಿ ದಾಖಲೆಗಳಿಗಾಗಿ ಕೇಳುತ್ತಿದ್ದಾರೆ ಎಂಬುದು ಅವರ ದೂರು.
ಆದರೆ, ಆದಿವಾಸಿಗಳಿಗೆ ಅರಣ್ಯ ಹಕ್ಕು ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಕೊಡಗಿನ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ (ಐಟಿಡಿಪಿ) ಕಚೇರಿ ಹೇಳುವ ಪ್ರಕಾರ, ಆದಿವಾಸಿಗಳು ಭೂಮಿಯ ಹಕ್ಕುಗಳಿಗಾಗಿ ಸಲ್ಲಿಸಿದ ಅರ್ಜಿಗಳಲ್ಲಿ ಶೇ. 20ರಷ್ಟನ್ನು ಮಾತ್ರ ತಿರಸ್ಕರಿಸಲಾಗಿದೆ. ಆದರೆ ಇದು ನವೆಂಬರ್ 2022ರ ರಾಜ್ಯವ್ಯಾಪಿ ಅಂಕಿಅಂಶಗಳಿಗೆ ವಿರುದ್ಧವಿದೆ. ಆ ಅಂಕಿಅಂಶದ ಪ್ರಕಾರ, ಎಫ್ಆರ್ಎ ಅಡಿಯಲ್ಲಿ ಸಲ್ಲಿಸಲಾದ ಸುಮಾರು ಶೇ. 84ರಷ್ಟು ಅರ್ಜಿಗಳನ್ನು ಕರ್ನಾಟಕದಲ್ಲಿ ತಿರಸ್ಕರಿಸಲಾಗಿದೆ. ಭೂಮಿಯನ್ನು ಬಳಸುತ್ತಿದ್ದಾರೆ ಎಂದು ಸಾಬೀತುಪಡಿಸಲು ಸಾಕಷ್ಟು ದಾಖಲೆಗಳಿಲ್ಲದ ಕಾರಣ ತಿರಸ್ಕರಿಸಲಾಗಿದೆ ಎಂಬುದು ಅಧಿಕಾರಿಗಳ ವಾದ. ಆದರೆ ಜಿಲ್ಲಾಡಳಿತದ ಈ ವಾದದ ಬಗ್ಗೆ ನಿವಾಸಿಗಳಿಗೆ ನಂಬಿಕೆಯಿಲ್ಲ.
ಒಂದು ವಾರ ನಡೆದ ಜಾಥಾದ ವೇಳೆ ಭೇಟಿ ನೀಡಿದ ಎಲ್ಲಾ ಗ್ರಾಮಗಳಲ್ಲಿ ಭೂಮಿ ಮತ್ತು ಅರಣ್ಯ ಹಕ್ಕುಗಳ ವಿಚಾರವೇ ಚರ್ಚೆಯ ವಿಷಯವಾಗಿತ್ತು. ಹಕ್ಕುಗಳನ್ನು ಮರುಪರಿಶೀಲಿಸುವವರೆಗೆ ಸ್ಥಳಾಂತರ ಪ್ರಕ್ರಿಯೆ ನಿಲ್ಲಿಸುವಂತೆ ಆದಿವಾಸಿಗಳು ಮತ್ತು ಸಂರಕ್ಷಣಾ ಹೋರಾಟಗಾರರು ಒತ್ತಾಯಿಸಿದರು.
ಕಾಡಿನಿಂದ ಹೊರಬಂದು ವಾಸಿಸುತ್ತಿರುವವರಿಗೆ ಕಾಡೊಳಗೆ ಹೋಗುವುದಕ್ಕೇ ಅರಣ್ಯಾಧಿಕಾರಿಗಳು ಬಿಡುತ್ತಿಲ್ಲ. ಹೀಗೆಂದು ಗೊತ್ತಿದ್ದರೆ ಅರಣ್ಯದಿಂದ ಹೊರಗೇ ಬರುತ್ತಿರಲಿಲ್ಲ ಎಂದು ಸಂಕಟ ತೋಡಿಕೊಳುತ್ತಿದ್ದಾರೆ, ಅರಣ್ಯ ಪ್ರದೇಶದ ಹೊರಗಿನ ಶಿಬಿರಗಳಲ್ಲಿ ವಾಸಿಸುತ್ತಿರುವ ಕೆಲ ಆದಿವಾಸಿಗಳು. ಅರಣ್ಯ ಸಿಬ್ಬಂದಿಯೊಂದಿಗಿನ ಆದಿವಾಸಿಗಳ ಈ ಸಂಘರ್ಷ, ನಾಗರಹೊಳೆಯಲ್ಲಿ ಆದಿವಾಸಿಗಳು ಮತ್ತು ಅರಣ್ಯ ಇಲಾಖೆಯ ನಡುವಿನ ಹಳಸಿದ ಸಂಬಂಧವನ್ನು ಸೂಚಿಸುತ್ತದೆ. ಕಾಡೊಳಗಿನ ಪ್ರಾಣಿಗಳಿಗೆ ನಾವು ತೊಂದರೆ ಉಂಟುಮಾಡುವುದಿಲ್ಲ. ಅವುಗಳ ಬಗ್ಗೆ ನಮಗೂ ನಮ್ಮ ಬಗ್ಗೆ ಅವಕ್ಕೂ ಗೊತ್ತಿದೆ ಎನ್ನುತ್ತಾರೆ ನಾಗರಹೊಳೆಯ ಬುಡಕಟ್ಟು ಮುಖಂಡ 53ರ ಹರೆಯದ ಜೆ.ಕೆ. ತಿಮ್ಮ.
ಅರಣ್ಯ ಇಲಾಖೆಯೊಂದಿಗಿನ ಘರ್ಷಣೆ ಅನೇಕ ಆದಿವಾಸಿಗಳ ಜೀವಗಳನ್ನು ಬಲಿತೆಗೆದುಕೊಂಡಿದೆ. ಕಳೆದ ಹತ್ತು ವರ್ಷಗಳಲ್ಲಿ ಅರಣ್ಯ ಸಿಬ್ಬಂದಿ ಆದಿವಾಸಿ ಸಮುದಾಯದ ಕನಿಷ್ಠ 7 ಮಂದಿಯನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ತಿಮ್ಮ ಆರೋಪಿಸುತ್ತಾರೆ. ಅರಣ್ಯ ಇಲಾಖೆಯ ಅಧಿಕಾರಿಗಳ ಕಿರುಕುಳದ ವಿರುದ್ಧ ಹೋರಾಡಿದ್ದಕ್ಕೂ ಕೆಲವರನ್ನು ಕೊಲ್ಲಲಾಗಿದೆ ಎಂಬುದು ಅವರ ಆರೋಪ.
ಜಾಥಾದಲ್ಲಿ ಭಾರತದ ವಿವಿಧ ರಾಜ್ಯಗಳ ಸಂರಕ್ಷಣಾ ಕಾರ್ಯಕರ್ತರು ಪಾಲ್ಗೊಂಡಿದ್ದರು. ನಾಗರಹೊಳೆ ಅರಣ್ಯದ ಒಳಗಿನ ಆದಿವಾಸಿ ಸಮುದಾಯದ ಪವಿತ್ರ ತೋಪುಗಳಿಗೆ ಭೇಟಿ ನೀಡಿದರು. ಈ ಪ್ರತಿಯೊಂದು ಗೊತ್ತುಪಡಿಸಿದ ತೋಪುಗಳು ಅವರ ಪೂರ್ವಜರು ಅಥವಾ ಪ್ರಕೃತಿಯ ಜೊತೆಗೆ ವಿಶಿಷ್ಟ ಸಂಬಂಧ ಹೊಂದಿವೆ. ಬರಗೂರು ರಾಶೆ ಹುಲಿಯ ರೂಪದ ಚೇತನ, ಅಮ್ಮಾಳೆ ಆನೆಯ ರೂಪ, ಕರಡಿಕಲ್ಲು ದೊರೆ ಕರಡಿ ರೂಪದಲ್ಲಿದೆ ಎನ್ನುತ್ತಾರೆ ತಿಮ್ಮ. ಇವು ಹಿಂದೂ ಧರ್ಮದ ದೇವರುಗಳಿಗಿಂತ ಭಿನ್ನ ಎಂದು ಅವರು ಹೇಳುತ್ತಾರೆ.
ಆದರೆ ಇತ್ತೀಚಿನ ವರ್ಷಗಳಲ್ಲಿ, ತಮ್ಮ ಪವಿತ್ರ ತೋಪುಗಳಲ್ಲಿ ಹಿಂದುತ್ವದ ಪ್ರಭಾವ ಹೆಚ್ಚುತ್ತಿರುವುದನ್ನು ಅವರು ಗಮನಿಸುತ್ತಿದ್ದಾರೆ. ಅವರು ಪ್ರಾರ್ಥನೆ ಮಾಡುವ ಸ್ಥಳಗಳಲ್ಲಿ ಈಗ ತ್ರಿಶೂಲಗಳು ಮತ್ತು ಕೇಸರಿ ಧ್ವಜಗಳು ಕಾಣಿಸತೊಡಗಿವೆ. ಇದು ನಮ್ಮ ಸಂಸ್ಕೃತಿಯ ಭಾಗವಲ್ಲ. ಆದರೆ ಅವನ್ನು ಅಲ್ಲಿ ಇರಿಸಿರುವವರ ನಂಬಿಕೆಗಳನ್ನು ವಿರೋಧಿಸಲು ನಮಗೆ ಇಷ್ಟವಿಲ್ಲ ಎನ್ನುತ್ತಾರೆ ತಿಮ್ಮ. ಆದಾಗ್ಯೂ ಅರಣ್ಯ ಹಕ್ಕುಗಳ ಚಳವಳಿಯಲ್ಲಿರುವ ಅವರಿಗೆ ನಂಬಿಕೆಗಳ ಮೇಲಿನ ಇಂಥ ಆಕ್ರಮಣವನ್ನು ವಿರೋಧಿಸುವ ಅಗತ್ಯವೂ ಕಾಣದೆ ಇಲ್ಲ. ಕೋಮುವಾದಿ ಅಂಶಗಳಿಗೆ ಬಲಿಯಾಗಲು ಸಾಧ್ಯವಿಲ್ಲ. ಅದು ಅಂತಿಮವಾಗಿ ನಮ್ಮ ಆದಿವಾಸಿ ಗುರುತನ್ನೇ ಅಳಿಸಿಹಾಕುತ್ತದೆ. ಆದಿವಾಸಿ ಸಮುದಾಯದ ಗುರುತನ್ನು ಉಳಿಸಿಕೊಳ್ಳಬೇಕಾದರೆ ನಾವು ಕಾಡಿನೊಂದಿಗೆ ನಮ್ಮ ಬಾಂಧವ್ಯ ಕಾಪಾಡಿಕೊಳ್ಳಬೇಕು ಎಂದು ಶಿವು ಹೇಳುತ್ತಾರೆ. ನಾವು ಕಾಡನ್ನು ತೊರೆದರೆ, ಅದರ ಮರಗಳು, ಪಕ್ಷಿಗಳು ಮತ್ತು ಪ್ರಾಣಿಗಳೊಂದಿಗೆ ವಾಸಿಸುವ ಮತ್ತು ಸಹಬಾಳ್ವೆಯ ಎಲ್ಲಾ ತಿಳುವಳಿಕೆ ಬುಡಮೇಲಾಗುತ್ತದೆ ಎಂಬುದರ ಬಗ್ಗೆಯೂ ಅವರಿಗೆ ಅರಿವಿದೆ.
(ಕೃಪೆ: thenewsminute.com)