2ಬಿ ಮೀಸಲಾತಿ ರದ್ದತಿ: ಸಾಮಾಜಿಕ ಅನ್ಯಾಯದ ಪರಮಾವಧಿ
ಒಂದು ವಿಶ್ಲೇಷಣೆ
►► ಭಾಗ - 02
ಮೀಸಲಾತಿಯ ಹಿನ್ನೆಲೆ, ಕರ್ನಾಟಕದಲ್ಲಿ ಮೀಸಲಾತಿಯ ಆರಂಭ, ಸ್ವಾತಂತ್ರ್ಯಾನಂತರದಲ್ಲಿ ಕನ್ನಡ ನಾಡಿನಲ್ಲಿ ಮೀಸಲಾತಿ ವ್ಯವಸ್ಥೆ ನಡೆದು ಬಂದ ಹಾದಿಯ ಬಗ್ಗೆ ಕಳೆದ ಸಂಚಿಕೆಯ ಭಾಗ ಒಂದರಲ್ಲಿ ವಿವರಿಸಲಾಗಿತ್ತು. ಇಲ್ಲಿ ಕರ್ನಾಟಕ ಸರಕಾರವು ಸಾರ್ವತ್ರಿಕ ಚುನಾವಣೆಯ ಹೊಸ್ತಿಲಲ್ಲಿ 2ಬಿ ಪ್ರವರ್ಗವನ್ನು ರದ್ದು ಮಾಡಿ ಮರು ಹಂಚಿಕೆ ಮಾಡಿರುವ ಕ್ರಮದ ಪರಿಣಾಮಗಳ ಬಗ್ಗೆ ವಿಶ್ಲೇಷಿಸಲಾಗಿದೆ.
ದಿನಾಂಕ 24-03-2023ರ ಶುಕ್ರವಾರದಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 2ಬಿ ಪ್ರವರ್ಗವನ್ನು ರದ್ದುಮಾಡಿ ಅದರಲ್ಲಿನ ಶೇ. 4 ಮೀಸಲಾತಿಯನ್ನು ತಲಾ 2ರಂತೆ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಗೆ ಹಂಚಲಾಗಿದೆ. 2ಬಿ ಪ್ರವರ್ಗದಲ್ಲಿ ಮುಸ್ಲಿಮ್ ಸಮುದಾಯ ಮೀಸಲಾತಿಯನ್ನು ಪಡೆಯುತ್ತಿತ್ತು.
2022ರ ಅಕ್ಟೋಬರ್ ತಿಂಗಳ ನಂತರದಲ್ಲಿ ಎರಡು ಬಾರಿ ಮೀಸಲಾತಿ ಪ್ರಮಾಣದಲ್ಲಿ ಬದಲಾವಣೆ ಮಾಡಿರುವುದನ್ನು ಗಮನಿಸಬಹುದು. ಅಂದರೆ ಕಳೆದ ಆರು ತಿಂಗಳ ಒಳಗೆ ನಮ್ಮ ರಾಜ್ಯದಲ್ಲಿ ಮೂರು ರೀತಿಯ ಮೀಸಲಾತಿ ಹಂಚಿಕೆಯ ಪ್ರಮಾಣ ಅಸ್ತಿತ್ವದಲ್ಲಿ ಇದ್ದುದನ್ನು ಗಮನಿಸಬಹುದು.
ಅಕ್ಟೋಬರ್ 2022ರ ಆರಂಭದಲ್ಲಿ
ರಾಜ್ಯದಲ್ಲಿ ಇದ್ದ ಮೀಸಲಾತಿ ಪ್ರಮಾಣ.
ಅನುಸೂಚಿತ ಜಾತಿ ---------ಶೇ.15
ಅನುಸೂಚಿತ ಪಂಗಡ -------ಶೇ.03
ಪ್ರವರ್ಗ 1 --------------04ಶೇ.
2ಎ -------------------15ಶೇ.
2ಬಿ--------------------04ಶೇ.
3ಎ -------------------04ಶೇ.
3ಬಿ -------------------05ಶೇ.
ಒಟ್ಟು ಪ್ರಮಾಣ ----------50ಶೇ.
--------------------------
ಅಕ್ಟೋಬರ್ 2022ರಲ್ಲಿ ರಾಜ್ಯ ಸರಕಾರವು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ
ಹೆಚ್ಚಿಸಿದ ಬಳಿಕದ ಮೀಸಲಾತಿ ಪ್ರಮಾಣ.
ಅನುಸೂಚಿತ ಜಾತಿ ---------ಶೇ.17
ಅನುಸೂಚಿತ ಪಂಗಡ -------ಶೇ.07
ಪ್ರವರ್ಗ 1 -------------ಶೇ.04
2ಎ -------------------ಶೇ.15
2ಬಿ -------------------ಶೇ.04
3ಎ -------------------ಶೇ.04
3ಬಿ -------------------ಶೇ.05
ಒಟ್ಟು ಪ್ರಮಾಣ -----------ಶೇ.56
----------------------------
24-03-2023ರಂದು ರಾಜ್ಯದಲ್ಲಿ 2ಬಿ ರದ್ದತಿಯ ಬಳಿಕ ಮೀಸಲಾತಿ ಪ್ರಮಾಣ
ಈ ರೀತಿ ಇದೆ.
ಅನುಸೂಚಿತ ಜಾತಿ ---------ಶೇ.17
ಅನುಸೂಚಿತ ಪಂಗಡ -------ಶೇ.07
ಪ್ರವರ್ಗ 1 --------------ಶೇ.04
2ಎ -------------------ಶೇ.15
2ಸಿ -------------------ಶೇ.06
2ಡಿ ----------------- -ಶೇ.07
ಒಟ್ಟು ಮೀಸಲಾತಿ ಪ್ರಮಾಣ --56ಶೇ.
ಕೇಂದ್ರ ಸರಕಾರ ಕೊಡಮಾಡಿದ ಆರ್ಥಿಕ ದುರ್ಬಲ ವರ್ಗದ (ಇಡಬ್ಲ್ಯುಎಸ್)ಮೀಸಲಾತಿ ಪ್ರಮಾಣ -ಶೇ. 10
ಈ ಎರಡೂ ಪ್ರಮಾಣ ಸೇರಿ ಶೇ. 66 ಮೀಸಲಾತಿ ಸದ್ಯ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇದೆ.
2ಬಿ ಪ್ರವರ್ಗ ಮುಸ್ಲಿಮ್ ಸಮುದಾಯಕ್ಕೆ ಲಭಿಸಿದ್ದರಿಂದ ಆದ ಲಾಭಗಳೇನು?
ಸರಕಾರಿ, ಅನುದಾನಿತ ಮತ್ತು ಸರಕಾರದಿಂದ ನಿಯಂತ್ರಿಸಲ್ಪಡುತ್ತಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಪ್ರತೀ ನೂರು ದಾಖಲಾತಿಯಲ್ಲಿ ನಾಲ್ಕು ಅವಕಾಶಗಳು ಮುಸ್ಲಿಮ್ ಸಮುದಾಯದ ಹಿಂದುಳಿದ (ನಿಗದಿತ ಆದಾಯದ ಮಿತಿಯ ಒಳಗೆ ಇರುವ ಕುಟುಂಬದ) ವಿದ್ಯಾರ್ಥಿಗಳಿಗೆ ಲಭಿಸುತ್ತಿತ್ತು. ಉಳಿದಂತೆ ಮೆರಿಟ್ ಇರುವವರು ಸಾಮಾನ್ಯ ಕೋಟಾದಲ್ಲಿ ಅವಕಾಶ ಪಡೆಯಬಹುದಿತ್ತು.
ಸರಕಾರಿ ಇಲಾಖೆ, ಅನುದಾನಿತ ಸಂಸ್ಥೆಗಳು, ಸರಕಾರದಿಂದ ಸೃಜಿಸಲ್ಪಟ್ಟ ನಿಗಮ, ಮಂಡಳಿ, ಸರಕಾರದಿಂದ ನಿಯಂತ್ರಿಸಲ್ಪಡುತ್ತಿರುವ ಅರೆ ಸರಕಾರಿ ಉದ್ಯಮಗಳು, ಹಣಕಾಸು ಸಂಸ್ಥೆಗಳು ಇತ್ಯಾದಿಯಲ್ಲಿನ ಉದ್ಯೋಗಗಳಲ್ಲಿ ಹಿಂದುಳಿದ ಮುಸ್ಲಿಮ್ ಸಮುದಾಯದ ಅಭ್ಯರ್ಥಿಗಳಿಗೆ ಪ್ರತೀ ನೂರು ಅವಕಾಶಗಳಲ್ಲಿ ನಾಲ್ಕು ಅವಕಾಶಗಳು ಲಭಿಸುತ್ತಿತ್ತು.
ಇದರಿಂದ ಈ ರಾಜ್ಯದ ಒಂದಷ್ಟು ಬಡ ಮುಸ್ಲಿಮ್ ವಿದ್ಯಾರ್ಥಿಗಳು ಪದವಿ, ಸ್ನಾತಕ ಪದವಿ, ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯವಾಯಿತು.
ಸಣ್ಣ ಮಕ್ಕಳಿದ್ದಾಗ ಯಾವುದೇ ಸಮುದಾಯದ ಮಕ್ಕಳು ಶಿಕ್ಷಕರಾಗಲಿ, ಹಿರಿಯರಾಗಲಿ ದೊಡ್ಡವರಾದ ಮೇಲೆ ನೀವು ಏನಾಗುತ್ತೀರಿ ಎಂದು ಕೇಳಿದಾಗ ಥಟ್ಟನೆ ಕೊಡುವ ಉತ್ತರ: ‘‘ನಾನು ಡಾಕ್ಟರ್ ಆಗುತ್ತೇನೆ, ಇಂಜಿನಿಯರ್ ಆಗುತ್ತೇನೆ’’ ಎಂದು. ಆದರೆ ಬಡತನದ ಬೇಗೆಯಲ್ಲಿ ಬೇಯುತ್ತಿರುವ ಆ ಮಕ್ಕಳಿಗೆ ತಾವು ಬಾಲ್ಯದಲ್ಲಿ ಕಂಡ ಕನಸನ್ನು ಈಡೇರಿಸಲು ಸಾಧ್ಯವಾಗುವುದಿಲ್ಲ. ಒಪ್ಪತ್ತಿನ ಆಹಾರಕ್ಕೂ ತತ್ವಾರ ಇರುವ ಬಡ ಕೂಲಿ ಕಾರ್ಮಿಕನ ಮಕ್ಕಳು, ಬೀದಿಬದಿ ವ್ಯಾಪಾರಿಯ ಮಕ್ಕಳು, ಪಂಕ್ಚರ್ ಹಾಕುವವನ, ಗುಜರಿ ಹೆಕ್ಕುವವನ ಮಕ್ಕಳು ಒಂದಷ್ಟು ಉಚಿತ ಸಿಗುವ ಪ್ರಾಥಮಿಕ ಶಿಕ್ಷಣ ಪಡೆದು ಅಲ್ಲೇ ನಿಲ್ಲಿಸಿ ಮತ್ತೆ ತಂದೆಗೆ, ತಾಯಿಗೆ ಸಾಥ್ ನೀಡುತ್ತಿದ್ದರು. ಈಗಲೂ ಅದು ಮುಂದುವರಿದೇ ಇದೆ.
ಆದರೆ ಕಳೆದ ಮೂವತ್ತು ವರ್ಷಗಳಲ್ಲಿ ಒಂದಷ್ಟು ಬಡ ಮಕ್ಕಳು, ಕೊಳಚೆ ಪ್ರದೇಶದ ಮಕ್ಕಳು ಕೂಡಾ ಉನ್ನತ ವಿದ್ಯಾಭ್ಯಾಸ ಮಾಡಿ ಸ್ವಂತ ಕಾಲ ಮೇಲೆ ನಿಂತು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.ಅದಕ್ಕೆ ಕಾರಣ 2ಬಿ ಮೀಸಲಾತಿ.
ಒಂದಷ್ಟು ಮುಸ್ಲಿಮ್ ವಿದ್ಯಾವಂತರು ಸರಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಪಡೆದುಕೊಂಡು ಸೇವೆ ಸಲ್ಲಿಸುತ್ತಿದ್ದಾರೆ.ಅದಕ್ಕೆ ಕಾರಣ 2ಬಿ ಮೀಸಲಾತಿ.
ಪ್ರಾಥಮಿಕ ಹಂತದಲ್ಲೇ ಶಿಕ್ಷಣ ಮೊಟಕುಗೊಳಿಸುತ್ತಿದ್ದ ಮುಸ್ಲಿಮ್ ಸಮುದಾಯದ ಬಹುತೇಕ ಮಕ್ಕಳು ಇಂದು ಪ್ರೌಢ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿಯವರೆಗೆ ಶಿಕ್ಷಣ ಪಡೆಯುತ್ತಿರುವುದನ್ನು ಕಾಣಬಹುದು. ಇದಕ್ಕೆ ಕಾರಣ ಅವರು ತಮ್ಮ 2ಬಿ ಕೋಟಾದಡಿ ಪಡೆಯುತ್ತಿರುವ ವಿದ್ಯಾರ್ಥಿ ವೇತನ, ಶಿಷ್ಯವೇತನ, ಪ್ರೋತ್ಸಾಹಧನ ಇತ್ಯಾದಿ.
ದೂರದ ಊರಿಗೆ ಹೋಗಿ ಶಿಕ್ಷಣ ಪಡೆಯಲು ಸಾಧ್ಯವಿಲ್ಲದ ಅದೆಷ್ಟೋ ವಿದ್ಯಾರ್ಥಿಗಳ ಪಾಲಿಗೆ ಈ 2ಬಿ ಮೀಸಲಾತಿಯು ಸರಕಾರಿ ಉಚಿತ ವಿದ್ಯಾರ್ಥಿನಿಲಯದ (ಸರಕಾರಿ ಹಾಸ್ಟೆಲ್) ಬಾಗಿಲನ್ನು ತೆರೆದು ಅವಕಾಶ ನೀಡಿತು. ಇದರಿಂದ ಅಪಾರ ಸಂಖ್ಯೆಯ ಬಡ ವಿದ್ಯಾರ್ಥಿಗಳ ಪಾಲಿಗೆ 2ಬಿ ವರದಾನವಾಗಿ ಪರಿಣಮಿಸಿತು.
ಇಲ್ಲಿ ಸರಕಾರ 2ಬಿ ಪ್ರವರ್ಗದಡಿ ನೀಡಿದ ವಿದ್ಯಾರ್ಥಿವೇತನದ ನೆರವಿನಿಂದ ಶಿಕ್ಷಣ ಪಡೆದು ವಿದೇಶಗಳಲ್ಲಿ ದುಡಿದು ಅಲ್ಲಿಂದ ಸ್ವದೇಶಕ್ಕೆ ಸಂಪಾದಿಸಿ ತರುವ ಮೂಲಕ ಇಲ್ಲಿನ ವಿದೇಶಿ ವಿನಿಮಯ ಹೆಚ್ಚಾಗಲು ಅದೆಷ್ಟೋ ಮಂದಿ ಕಾರಣರಾಗಿದ್ದಾರೆ.
ಈ ರೀತಿ ಕಳೆದ ಮೂರು ದಶಕಗಳಲ್ಲಿ ಅಪಾರ ಸಂಖ್ಯೆಯ ಮಕ್ಕಳು, ಯುವಜನರು 2ಬಿ ಮೀಸಲಾತಿಯಿಂದ ತಮ್ಮ ಬದುಕನ್ನು ಬದಲಾಯಿಸಿಕೊಂಡಿದ್ದಾರೆ. ರಾಷ್ಟ್ರ ನಿರ್ಮಾಣದ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಮುಸ್ಲಿಮ್ ಸಮುದಾಯದ ಅಸಂಘಟಿತ ವಲಯದ ಜನ, ಸಾಮಾನ್ಯ ಜನ ಸಮೂಹ ಕೂಡಾ 2ಬಿ ಪ್ರವರ್ಗದಿಂದ ಸರಕಾರದಿಂದ ಸಿಗುವ ಸೌಲಭ್ಯವನ್ನು ಪಡೆದು ತಮ್ಮ ಬದುಕನ್ನು ಉತ್ತಮ ಪಡಿಸಿಕೊಂಡಿದ್ದಾರೆ.
ಇದು ಕೇವಲ ಮುಸ್ಲಿಮ್ ಸಮುದಾಯದ ಜನರಿಗೆ ಮಾತ್ರ ಲಭಿಸಿದ ಕೊಡುಗೆಯಲ್ಲ. ಮೀಸಲಾತಿ ಸೌಲಭ್ಯ ಪಡೆದಿರುವ ಎಲ್ಲಾ ಸಮುದಾಯಗಳಿಗೂ ಒಂದಲ್ಲಾ ಒಂದು ರೀತಿಯ ಪ್ರಯೋಜನಗಳಾಗಿವೆ. ಹಿಂದುಳಿದ ಜನರ ಬದುಕು ನಿಂತ ನೀರಾಗಬಾರದು, ಅಭಿವೃದ್ಧಿಯ ಪಥದಲ್ಲಿ ಸಾಗಬೇಕು ಎಂಬ ಉದ್ದೇಶದಿಂದಲೇ ಈ ಮೀಸಲಾತಿಯನ್ನು ಜಾರಿಗೆ ತಂದಿರುವುದು.
ಇದೀಗ ಸರಕಾರ ಸಾಮಾಜಿಕ ಅನ್ಯಾಯದ ಕ್ರಮವೊಂದರಲ್ಲಿ ಮುಸ್ಲಿಮ್ ಸಮುದಾಯಕ್ಕೆ ಇದ್ದ ಒಂದು ಅವಕಾಶವನ್ನು ರದ್ದು ಪಡಿಸಿ ಮತ್ತೊಂದು ಇಡಬ್ಲ್ಯುಎಸ್ ಕೋಟಾಕ್ಕೆ ಬಲವಂತದಿಂದ ತಳ್ಳಿಬಿಟ್ಟಿದೆ. ಇದು ಯಾರೂ ಅಪೇಕ್ಷಿಸಿದ ಅಥವಾ ನಮಗೆ ಇಡಬ್ಲ್ಯುಎಸ್ ಕೋಟಾದಡಿ ಸೇರಿಸಿ ಎಂದು ಬೇಡಿಕೆ ಸಲ್ಲಿಸಿ ಪಡೆದ ಸೌಲಭ್ಯವಲ್ಲ. ಬದಲಾಗಿ ನೀವು ಸ್ವಲ್ಪಸಮಯ ಅಲ್ಲಿ ಬಿದ್ದಿರಿ ಎಂಬರ್ಥದಲ್ಲಿ ಒತ್ತಾಯ ಪೂರ್ವಕವಾಗಿ ತಳ್ಳಲ್ಪಟ್ಟ ಕ್ರಮದಂತೆ ಕಾಣುತ್ತದೆ.
ಸರಕಾರದ ನಿಲುವು ಮತ್ತು ವಾಸ್ತವಿಕತೆ
2ಬಿ ಮೀಸಲಾತಿ ರದ್ದತಿಗೆ ಸರಕಾರ ನೀಡಿದ ಕಾರಣ-ಧಾರ್ಮಿಕ ಅಲ್ಪಸಂಖ್ಯಾತರು ಎಂಬ ನೆಲೆಯಲ್ಲಿ ಮೀಸಲಾತಿಗೆ ಅವಕಾಶವಿಲ್ಲ ಎಂಬುದಾಗಿದೆ. ಇತರ ಧಾರ್ಮಿಕ ಅಲ್ಪಸಂಖ್ಯಾತರು ಕೂಡಾ ಈ ಹಿಂದಿನಿಂದಲೂ ಮೀಸಲಾತಿ ಪ್ರವರ್ಗದಡಿ ಇದ್ದು ಈಗಲೂ ಮುಂದುವರಿಯುತ್ತಿದ್ದಾರೆ. ಇದು ಮುಸ್ಲಿಮರಿಗೆ ಮಾತ್ರ ಅನ್ವಯವಾಗುವುದೇ?
ಮೀಸಲಾತಿ ಪಡೆಯುತ್ತಿರುವ ಎಲ್ಲಾ ಸಮುದಾಯಗಳು ಒಂದಲ್ಲಾ ಒಂದು ಧರ್ಮಕ್ಕೆ ಸೇರಿವೆ. ಹಾಗೆ ನೋಡಿದರೆ ಅಲ್ಪ ಪ್ರಮಾಣದ ಮೀಸಲಾತಿ ಹೊರತು ಪಡಿಸಿ ಉಳಿದಂತೆ ಬಹುಪಾಲು ಮೀಸಲಾತಿ ಹಿಂದೂ ಧರ್ಮದ ವಿವಿಧ ಸಮುದಾಯಗಳಿಗೆ ಸಲ್ಲುತ್ತಿವೆ. ಅಂದರೆ ಮೀಸಲಾತಿ ಸೌಲಭ್ಯ ಪಡೆಯುತ್ತಿರುವ ಎಲ್ಲಾ ಸಮುದಾಯಗಳು ಕೂಡಾ ಧಾರ್ಮಿಕ ಹಿನ್ನೆಲೆಯಿಂದಲೇ ಬಂದಿವೆ.
ಸರಕಾರದೊಂದಿಗೆ ವೀರಶೈವ ಲಿಂಗಾಯತ ಅಥವಾ ಒಕ್ಕಲಿಗ ಸಮುದಾಯಗಳು 2ಬಿ ಪಾಲಿನ ಮೀಸಲಾತಿ ಕೇಳಿತ್ತೇ? ಇಲ್ಲ, ಈ ಎರಡೂ ಸಮುದಾಯಗಳು ಸೇರಿದಂತೆ ಇನ್ನೂ ಕೆಲ ಸಮುದಾಯಗಳು ತಮಗೆ ಮೀಸಲಾತಿ ಪ್ರಮಾಣ ಹೆಚ್ಚಿಸಿ ಎಂದು ಆಗ್ರಹ ಪಡಿಸುತ್ತಿತ್ತೇ ವಿನಹಃ 2ಬಿ ರದ್ದು ಮಾಡಿ ಅಲ್ಲಿಂದ ಕಿತ್ತು ಕೊಡಿ ಎಂದು ಕೇಳಿರಲಿಲ್ಲ.
ಬಹುತೇಕ ಎಲ್ಲಾ ಸಮುದಾಯಗಳು ಕೂಡಾ ಇತ್ತೀಚೆಗೆ ತಮಗೆ ಮೀಸಲಾತಿ ಪ್ರಮಾಣ ಹೆಚ್ಚು ಮಾಡಿ ಎಂದು ಪ್ರಬಲ ಹೋರಾಟ ನಡೆಸುತ್ತಿದ್ದಾಗ ಯಾವುದೇ ಬೇಡಿಕೆ ಯಾ ಹೋರಾಟ ಮಾಡದೆ ಬೀದಿಗಿಳಿಯದೆ, ಸರಕಾರವನ್ನು ಈ ವಿಷಯದಲ್ಲಿ ಇಕ್ಕಟ್ಟಿಗೆ ಸಿಲುಕಿಸದೆ ಇದ್ದ 4ಶೇ. ಮೀಸಲಾತಿಯಲ್ಲಿ ಸಂತೃಪ್ತರಾಗಿದ್ದು ಮುಸ್ಲಿಮ್ ಸಮುದಾಯಕ್ಕೆ ಮುಳುವಾಯಿತೇ?
ಹಿಂದುಳಿದ ಅಥವಾ ಅಲ್ಪಸಂಖ್ಯಾತ ಶಾಶ್ವತ ಆಯೋಗಗಳು ಮುಸ್ಲಿಮ್ ಸಮುದಾಯ ಮುಂದುವರಿದಿದೆ ಎಂದು ಅವರ ಪಾಲಿನ ಮೀಸಲಾತಿ ತೆಗೆದು ಇತರ ಸಮುದಾಯಗಳಿಗೆ ಹಂಚಿ ಎಂದು ವರದಿ ನೀಡಿದೆಯೇ? ಈ ಸಮುದಾಯ ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಮುಂದುವರಿದಿದ್ದು ಇನ್ನು ಆರ್ಥಿಕವಾಗಿ ಮಾತ್ರ ದುರ್ಬಲ ಎಂಬ ಅಭಿಪ್ರಾಯಕ್ಕೆ ಬರಲು ಯಾವ ವೈಜ್ಞಾನಿಕ ಆಧಾರವನ್ನು ಬಳಸಿಕೊಳ್ಳಲಾಗಿದೆ.
ಒಂದು ವೇಳೆ ಹಾಗೆಯೇ ತೀರ್ಮಾನಿಸಿದ್ದರೆ ಮುಸ್ಲಿಮ್ ಸಮುದಾಯದ ಮೀಸಲಾತಿ ಕಿತ್ತು ಹಂಚಿಕೆ ಮಾಡಲಾದ ಸಮುದಾಯಗಳು ಮುಸ್ಲಿಮ್ ಸಮುದಾಯಕ್ಕಿಂತಲೂ ಹಿಂದುಳಿದಿದೆಯೇ?
ಒಂದು ಹಿಂದುಳಿದ ಸಮುದಾಯದ ಮೀಸಲಾತಿಯನ್ನು ಏಕಪಕ್ಷೀಯವಾಗಿ ತೆಗೆದು ಆ ಸಮುದಾಯವನ್ನು ಇಡಬ್ಲ್ಯುಎಸ್ಗೆ ಸೇರಿಸಲು ಪೂರಕವಾಗಿ ಬಳಸಲಾದ ಮಾನದಂಡಗಳೇನು?
ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಕೇಂದ್ರ, ರಾಜ್ಯ ಶಾಸನ ಸಭೆಗಳ ಪ್ರಾತಿನಿಧ್ಯವನ್ನು ಲೆಕ್ಕ ಹಾಕಲಾಗಿದೆಯೇ?
ಸರಕಾರಿ-ಅರೆ ಸರಕಾರಿ, ಅನುದಾನಿತ ಸಂಸ್ಥೆ, ಉದ್ಯಮಗಳಲ್ಲಿನ ಒಟ್ಟಾರೆ ನೌಕರರು ಮತ್ತು ಅಧಿಕಾರಿಗಳ ಪ್ರಾತಿನಿಧ್ಯವನ್ನು ಸಮೀಕ್ಷೆ ನಡೆಸಲಾಗಿದೆಯೇ?
ಕೊಳಚೆ ಪ್ರದೇಶದ ನಿವಾಸಿಗಳು ಅವರ ಅನುಪಾತ, ಅದರಲ್ಲಿ ಮುಸ್ಲಿಮ್ ಸಮುದಾಯದ ಜನರ ಪಾಲು, ಜೀವನ, ದುಡಿಮೆ, ಶೈಕ್ಷಣಿಕ ಮಟ್ಟ ಇತ್ಯಾದಿ ಸ್ಥಿತಿಗತಿಗಳ ಅಧ್ಯಯನ ನಡೆಸಲಾಗಿದೆಯೇ?
ಈ ಪ್ರಶ್ನೆಗಳಿಗೆ ಉತ್ತರ ಹೌದು ಎಂದಾದರೆ ಅ ವರದಿಯನ್ನು ರಾಜ್ಯದ ಜನರ ಮುಂದೆ ಬಹಿರಂಗ ಪಡಿಸುವ ಹೊಣೆಗಾರಿಕೆ ಸರಕಾರದ್ದಾಗಿದೆ. ಒಂದು ವೇಳೆ ಇಲ್ಲ ಎಂದಾದರೆ ಈ 2ಬಿ ಮೀಸಲಾತಿ ರದ್ದತಿಯು ಅವೈಜ್ಞಾನಿಕ ಮತ್ತು ಅಸಾಂವಿಧಾನಿಕ ಕ್ರಮವಾಗಿದೆ.
ಇಡಬ್ಲ್ಯುಎಸ್ ಕೋಟಾದಡಿ ಮುಸ್ಲಿಮರು ಪರಿಣಾಮವೇನು?
ಮೀಸಲಾತಿಯನ್ನು ವಿರೋಧಿಸುತ್ತಿದ್ದ ಮತ್ತು ಮೀಸಲಾತಿಯಿಂದ ನಮಗೆ ನಷ್ಟ ಎಂದು ನಂಬಿದ್ದ ಮೀಸಲಾತಿಯಿಂದ ಹೊರಗಿದ್ದ ಮೇಲ್ವರ್ಗದ ಆದರೆ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ವಿಶೇಷ ಕೋಟಾದಡಿ ಶೇ. 10ರ ಮೀಸಲಾತಿಯನ್ನು ಕೇಂದ್ರ ಸರಕಾರ 2019ರಲ್ಲಿ ಕಲ್ಪಿಸಿತು. ಈ ಮೀಸಲಾತಿಗೆ ಸಮುದಾಯಗಳನ್ನು ಸೇರಿಸುವ ಅಧಿಕಾರವನ್ನು ರಾಜ್ಯ ಸರಕಾರಕ್ಕೆ ನೀಡಲಾಯಿತು.
ಆರ್ಥಿಕವಾಗಿ ದುರ್ಬಲರಾಗುವುದಕ್ಕೂ, ಸಾಮಾಜಿಕವಾಗಿ ದುರ್ಬಲರಾಗುವುದಕ್ಕೂ ಬಹಳ ವ್ಯತ್ಯಾಸವಿದೆ. ಕೇಂದ್ರ ಸರಕಾರದ ಈ ವಿಶೇಷ ಮೀಸಲಾತಿಗೆ ಯಾವುದೇ ಸಮುದಾಯವನ್ನು ಸೇರಿಸಬೇಕಾದಲ್ಲಿ ಆ ಸಮುದಾಯ ಆರ್ಥಿಕ ಹೊರತುಪಡಿಸಿ ಇತರ ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರಿದಿರಬೇಕು. ಸಮಾಜದಲ್ಲಿ ತಲೆ ತಲಾಂತರದಿಂದ ಮೇಲ್ಸ್ತರದಲ್ಲಿದ್ದಿರಬೇಕು. ರಾಜಕೀಯ ಪ್ರಾತಿನಿಧ್ಯವನ್ನು ಸಾಕಷ್ಟು ಪಡೆದಿರಬೇಕು. ಇಂತಹ ಮಾನದಂಡವಿರುವ ಸಮುದಾಯ ಯಾ ಜಾತಿಯನ್ನು ಈ ಗುಂಪಿಗೆ ಸೇರಿಸಬಹುದು. ಈ ಎಲ್ಲಾ ಉಲ್ಲೇಖಿತ ಅಂಶಗಳಿಗೆ ಪೂರಕ ಅಧ್ಯಯನಯೋಗ್ಯ ಆಧಾರವಿರಬೇಕು. ಇಂತಹ ಯಾವುದೇ ಮಾನದಂಡ ಇಲ್ಲದೆ ಈ ಕ್ರಮವನ್ನು ಸರಕಾರ ತೆಗೆದುಕೊಂಡಿದೆ.
ಇನ್ನು ಅರ್ಧಕ್ಕರ್ಧ ಎಸೆಸೆಲ್ಸಿ, ಪಿಯುಸಿ ಪಾಸಾಗಲು ಹೆಣಗಾಡುತ್ತಿರುವ ಸಮುದಾಯದ ಮಕ್ಕಳು ಇಡಬ್ಲ್ಯುಎಸ್ನಲ್ಲಿ ಬರುವ ಮೇಲ್ವರ್ಗದ ಮಕ್ಕಳೊಂದಿಗೆ ಸ್ಪರ್ಧಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಕಾಡುತ್ತಿದೆ.
ಅದೂ ಒಂದಷ್ಟು ಸಮಯ ಆ ಕೋಟಾದಲ್ಲಿ ಇರಿಸಿ ಈ ಸಮುದಾಯ ರಾಜ್ಯದಲ್ಲೇ ಅತಿ ಮುಂದುವರಿದಿದೆ ಎಂದು ಹೇಳಿ ಅಲ್ಲಿಂದಲೂ ಹೊರದಬ್ಬುವ ಪ್ರಯತ್ನ ಎಂಬಂತೆ ಕಾಣುತ್ತಿದೆ. ಸರಕಾರದ ಈ ನಿಲುವಿನಿಂದ ಮುಸ್ಲಿಮ್ ಸಮುದಾಯದ ಮೇಲೆ ತಕ್ಷಣದ ಗಂಭೀರ ಪರಿಣಾಮ ಬೀರಲಿದೆ.
ಸಿಇಟಿ, ನೀಟ್, ಜೆಇಇ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಪೈಕಿ 2ಬಿ ಅರ್ಹತೆ ಇರುವ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಸಿಗದೆ ಇರುವ ಅಥವಾ ನಿರಾಕರಿಸುವ ಸಾಧ್ಯತೆ ಇದೆ. ಸರಕಾರದಿಂದ ಸ್ಪಷ್ಟ ಆದೇಶ ಇಲ್ಲದಿರುವ ಕಾರಣ ವಿದ್ಯಾರ್ಥಿಗಳು ಅತಂತ್ರರಾಗುವ ಸಾಧ್ಯತೆ ಇದೆ. ಸಿಗುವ ಅವಕಾಶಗಳು ಕೂಡಾ ಸಿಗದೆ ಪ್ರತಿಭಾವಂತ ವಿದ್ಯಾರ್ಥಿಗಳು ಹತಾಶರಾಗಬಹುದು. ಅತ್ತ 2ಬಿಯೂ ಇಲ್ಲ, ಇತ್ತ ಇಡಬ್ಲ್ಯುಎಸ್ ಕೂಡಾ ಇಲ್ಲದೆ ವಿದ್ಯಾರ್ಥಿಗಳು ಅಥವಾ ಉದ್ಯೋಗಾಕಾಂಕ್ಷಿಗಳು ತ್ರಿಶಂಕು ಸ್ಥಿತಿ ಅನುಭವಿಸಬಹುದು.
ನ್ಯಾಯಾಲಯದಲ್ಲಿ ಸರಕಾರದ ನಿರ್ಧಾರವನ್ನು ಪ್ರಶ್ನಿಸುವ ಸಂದರ್ಭದಲ್ಲಿ ವಿಚಾರಣಾ ಅವಧಿಯಲ್ಲಿ ಈ ಮೊದಲಿನ 2ಬಿಯಲ್ಲಿ ಪ್ರಮಾಣಪತ್ರ ಪಡೆಯಲು ಮಧ್ಯಂತರ ಆದೇಶ ಪಡೆಯಬೇಕಾದುದು ಅವಶ್ಯ. ಇಲ್ಲದೆ ಹೋದಲ್ಲಿ ಆ ನಿರ್ವಾತದ ಸಮಯದಲ್ಲಿ ಅನೇಕ ಅರ್ಹ ಜನರು ಅವಕಾಶ ವಂಚಿತರಾಗುವ ಸಾಧ್ಯತೆ ಇದೆ.
ದಾರಿ ಯಾವುದು?
ಸಮಗ್ರವಾಗಿ ಸಮುದಾಯದ ವಾಸ್ತವಿಕ ಸ್ಥಿತಿಗತಿಯ ದಾಖಲೆಗಳೊಂದಿಗೆ ನ್ಯಾಯಾಲಯದಲ್ಲಿ ನ್ಯಾಯ ಕೇಳುವುದೇ ಬಹುಮುಖ್ಯ ದಾರಿ. ವೀರಶೈವ ಲಿಂಗಾಯತ, ಒಕ್ಕಲಿಗ ಮತ್ತು ಇತರ ಸಮುದಾಯಗಳ ಪ್ರಮುಖರ ಜೊತೆ ಸಂವಾದ ನಡೆಸಿ ಅವರ ವಿಶ್ವಾಸವನ್ನು ಕೂಡಾ ಗಳಿಸಬೇಕಾದುದು ಅಗತ್ಯ.
ಈಗಾಗಲೇ ಕಿತ್ತು ಹಾಕಿರುವ ಸೌಲಭ್ಯವನ್ನು ಪುನರ್ ಸ್ಥಾಪಿಸಲು ಮೀಸಲಾತಿ ತಜ್ಞರ ಸಲಹೆ, ಮಾರ್ಗದರ್ಶನ ಪಡೆಯುವ ಮೂಲಕ ಮುಂದುವರಿಯಬೇಕು. ರಾಜ್ಯದ-ಕೇಂದ್ರದ ಆಡಳಿತಗಾರರ ಭೇಟಿಯ ಮೂಲಕ ವಂಚಿತ ಅವಕಾಶವನ್ನು ಮರಳಿಗಳಿಸುವ ಪ್ರಯತ್ನ ಕೂಡಾ ಮಾಡಬೇಕಾದುದು ಅವಶ್ಯ.