ಮಂಗಳೂರು ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಅಧಿಕ: ಚುನಾವಣಾಧಿಕಾರಿ ರಾಜು
ಮಂಗಳೂರು, ಮಾ.30: ಮಂಗಳೂರು ವಿಧಾನಸಭಾ ಕ್ಷೇತ್ರ (204)ದಲ್ಲಿ 98,240 ಪುರುಷರು ಮತ್ತು 1,01,754 ಮಹಿಳೆಯರು ಹಾಗೂ 7 ಮಂದಿ ಲಿಂಗತ್ವ ಅಲ್ಪಸಂಖ್ಯಾತರ ಸಹಿತ 2,00,001 ಮತದಾರರಿದ್ದಾರೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ರಾಜು ಕೆ. ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಲೋಕಸಭೆಯಲ್ಲಿ 1,97,000 ಮತದಾರರಿದ್ದು, ಈ ಸಂಖ್ಯೆ 2,00,001ಕ್ಕೆ ಏರಿಕೆಯಾಗಿದೆ. ಒಟ್ಟು 210 ಪೋಲಿಂಗ್ ಸೆಂಟರ್ಗಳಿದ್ದು, ಇವುಗಳಲ್ಲಿ 139 ಗ್ರಾಮಾಂತರ ಮತ್ತು 71ನಗರದಲ್ಲಿವೆ. 18-19 ವಯೋಮಿತಿಯ ಪುರುಷರು 2,077, ಮಹಿಳೆಯರು 1,785, ಲಿಂಗತ್ವ ಅಲ್ಪಸಂಖ್ಯಾತರು ಇಬ್ಬರು, 80ಕ್ಕಿಂತ ಅಧಿಕ ವಯಸ್ಸಿನವರು 3,602 ಮಂದಿ ಇದ್ದಾರೆ. 21ಮಂದಿ ಸೆಕ್ಟರ್ ಆಫೀಸರ್, 6 ವೀಡಿಯೋ ವಿಚಕ್ಷಣ ತಂಡ, 2 ಲೆಕ್ಕಪತ್ರ, 3 ವೀಡಿಯೋ ವೀವಿಂಗ್ ಟೀಮ್, 6 ಫ್ಲೈಯಿಂಗ್ ಸ್ಕ್ವ್ಯಾಡ್, 6 ಲೆಕ್ಕಪತ್ರ ವಿಚಕ್ಷಣ ತಂಡ ಸಹಿತ ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ 66 ನಾನಾ ವಿಭಾಗಗಳು ನಿಗಾವಹಿಸಲಿದೆ ಎಂದರು.
ಕ್ಷೇತ್ರ ವ್ಯಾಪ್ತಿಯ ತಲಪಾಡಿ, ಕಿನ್ಯಾ, ನರಿಂಗಾನ, ಕೈರಂಗಳ, ಬಾಳೆಪುಣಿ, ಇರಾ ಗ್ರಾಮಗಳು ಕೇರಳಕ್ಕೆ ಹೊಂದಿಕೊಂಡ ಗಡಿಭಾಗಗಳಾಗಿವೆ. ತಲಪಾಡಿ, ಮುಡಿಪು, ಫರಂಗಿಪೇಟೆ ಸಹಿತ ಮೂರು ಚೆಕ್ಪೋಸ್ಟ್ಗಳನ್ನು ತೆರೆಯಲಾಗುವುದು ಎಂದರು.
ಎನ್ಐಟಿಕೆಯಲ್ಲಿ ಮತ ಎಣಿಕೆ: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮತಯಂತ್ರಗಳನ್ನು ಭದ್ರವಾಗಿಡಲಾಗು ವುದು. ಮತ ಎಣಿಕೆ ಎನ್ಐಟಿಕೆ ಸುರತ್ಕಲ್ನಲ್ಲಿ ನಡೆಯಲಿದೆ. ಈಗಾಗಲೇ ಕಂಟ್ರೋಲ್ ರೂಂ ತೆರೆಯಲಾಗಿದ್ದು, ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಉಪಚುನಾವಣಾಧಿಕಾರಿ ಪ್ರಭಾಕರ್ ಕಾಜೂರೆ, ಮಂಗಳೂರು ತಹಶೀಲ್ದಾರ್ ಪುಟ್ಟರಾಜು ಉಪಸ್ಥಿತರಿದ್ದರು.