ಸಿದ್ದರಾಮಯ್ಯ, ಸುರ್ಜೇವಾಲಾ ವಿರುದ್ಧ ಬಿಜೆಪಿ ದೂರು
ಬೆಂಗಳೂರು, ಮಾ.30: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವರುಣಾ ಕ್ಷೇತ್ರದ ಬಿಳಗುಲಿ ಗ್ರಾಮದಲ್ಲಿ ತಮ್ಮ ಚುನಾವಣಾ ಪ್ರಚಾರದ ವೇಳೆ ನೀತಿ ಸಂಹಿತೆ ಜಾರಿಯಾದ ಬಳಿಕ, ಮಾ.29ರ ಸಂಜೆ 4.15ರ ಸುಮಾರಿಗೆ ಪ್ರಚಾರ ಸ್ಥಳದಲ್ಲಿದ್ದ ವಾಲಗ ಮತ್ತು ಡೋಲು ಬಾರಿಸುವವರಿಗೆ 1 ಸಾವಿರ ರೂ.ನೀಡಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ದೂರು ನೀಡಿದೆ.
ಗುರುವಾರ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ಬಿಜೆಪಿ ನಿಯೋಗವು ನಗರದ ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಈ ಸಂಬಂಧ ದೂರು ಸಲ್ಲಿಸಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದೆ.
ಅಲ್ಲದೆ, ಚುನಾವಣಾ ಆಯೋಗದ ವಿಶ್ವಾಸಾರ್ಹತೆಗೆ ಚ್ಯುತಿ ಬರುವಂತೆ ಸಿದ್ದರಾಮಯ್ಯ ಮಾತನಾಡಿದ್ದಾಗಿ ಇನ್ನೊಂದು ದೂರು ನೀಡಲಾಗಿದೆ. ‘ಕಾಂಗ್ರೆಸ್ ಕಟ್ಟಿಹಾಕುವುದಕ್ಕಾಗಿಯೇ ಹೆಚ್ಚು ಆದಾಯ ತೆರಿಗೆ ಅಧಿಕಾರಿಗಳನ್ನು ಚುನಾವಣಾ ಆಯೋಗ ನಿಯೋಜಿಸಿದೆ’ ಎಂದು ಹೇಳಿದ್ದು, ಇದು ಸಂವಿಧಾನಾತ್ಮಕ ಸಂಸ್ಥೆಯ ವಿರುದ್ಧ ಆಧಾರರಹಿತ ಆರೋಪವಾಗಿದೆ. ಇದರಿಂದ ಜನರ ಮನಸ್ಸಿನಲ್ಲಿ ಸಂಸ್ಥೆಯ ವಿರುದ್ಧ ನಕಾರಾತ್ಮಕ ಅಭಿಪ್ರಾಯ ಮೂಡಿಸುವಂತಿದೆ. ಆದುದರಿಂದ, ಸಿದ್ದರಾಮಯ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ.
ಸುರ್ಜೇವಾಲಾ ವಿರುದ್ಧ ದೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕರ್ನಾಟಕ ಚುನಾವಣೆ ಸಂಬಂಧ ನೀಡಿದ ಹೇಳಿಕೆಯಲ್ಲಿ “ದಿ ಬಿಜೆಪಿ 40 ಪರ್ಸೆಂಟ್ ಕಮಿಷನ್ ಸರಕಾರ, ವಿಚ್ ಹ್ಯಾಸ್ ಬ್ರೇಜನ್ಲಿ ಲೂಟೆಡ್ ದಿ ಸ್ಟೇಟ್” ಎಂದುದಾಗಿ ಬಿಜೆಪಿ ವಿರುದ್ಧ ಆಧಾರರಹಿತ ಆರೋಪ ಮಾಡಿ ಮತದಾರರಲ್ಲಿ ತಪ್ಪು ಮಾಹಿತಿ ನೀಡಿ, ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಸುರ್ಜೇವಾಲಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.