ನರೇಂದ್ರ ಮೋದಿ ಬಗ್ಗೆ ಹಗುರ ಮಾತು: ಬಿಜೆಪಿ ಶಾಸಕರದ್ದು ಎನ್ನಲಾದ ಆಡಿಯೋ ವೈರಲ್
ರಾಯಚೂರು: ಚುನಾವಣೆಗೆ ತಿಂಗಳು ಬಾಕಿಯಿರುವಾಗ ಬಿಜೆಪಿ ಶಾಸಕರದ್ದು ಎನ್ನಲಾದ ಸ್ಫೋಟಕ ಆಡಿಯೋ ಒಂದು ವೈರಲ್ ಆಗಿದೆ. ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಹಗುರವಾಗಿ ಮಾತನಾಡಿರುವ ಆಡಿಯೋ ವೈರಲ್ ಆಗಿರುವುದು ಸ್ಥಳೀಯ ಬಿಜೆಪಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಆಡಿಯೋ ರಾಯಚೂರು ನಗರ ಕ್ಷೇತ್ರದ ಶಾಸಕ ಡಾ. ಶಿವರಾಜ್ ಪಾಟೀಲ್ ಅವರದ್ದು ಎನ್ನಲಾಗಿದೆ. ಈ ಆಡಿಯೋ ಕರವೇ ಜಿಲ್ಲಾಧ್ಯಕ್ಷ ಅಶೋಕ್ ಜೈನ್ ಜೊತೆ ಮಾತನಾಡಿದ ಪೋನ್ ಸಂಭಾಷಣೆ ಎಂದು ಹೇಳಲಾಗಿದೆ.
ಆಡಿಯೋದಲ್ಲಿ ರಾಜಕೀಯ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ದು, ನರೇಂದ್ರ ಮೋದಿ ಮಾತ್ರವಲ್ಲದೆ ಸೋಮಶೇಖರ್ ರೆಡ್ಡಿ ಹಾಗೂ ಶ್ರೀರಾಮುಲು ಬಗ್ಗೆಯೂ ಹಗುರವಾಗಿ ಮಾತಾಡಿದ್ದಾರೆ ಎನ್ನಲಾಗಿದೆ.
“ಮೋದಿ ರೈಟ್ ಹ್ಯಾಂಡ್ ಗೆ ನಾನು ಕೇಳಲ್ಲ. ನಾನೇ ಸಿಂಗಲ್ ಆರ್ಮಿ, ನನಗೆ ರೈಟ್ ಇಲ್ಲ, ಲೆಫ್ಟ್ ಇಲ್ಲ. ನನ್ನ ಕೈ ನನ್ನ ಕಾಲು, ನಾನೇ ಮೋದಿ, ನಾನೇ ಟ್ರಂಪ್. ಯಾವ ಬದನೆಕಾಯಿ ಮಾತು ಸಹ ನಾನು ಕೇಳಂಗಿಲ್ಲ. ಯಾವ ಮೋದಿಯಿಲ್ಲ, ಪಾದಿಯಿಲ್ಲ ನಾನೇ ಶಿವರಾಜ್ ಪಾಟೀಲ್. ಶಿವರಾಜ್ ಪಾಟೀಲ್ ದೇವರು, ನಾನೇ ಇದ್ರೆ ಜಗತ್ತು” ಎಂದೆಲ್ಲಾ ಹೇಳುವುದು ಆಡಿಯೋದಲ್ಲಿ ಕೇಳಿ ಬಂದಿದೆ.
3 ನಿಮಿಷ 19 ಸೆಕೆಂಡ್ ಗಳ ಪೋನ್ ಸಂಭಾಷಣೆಯ ಆಡಿಯೋ ಇದಾಗಿದ್ದು, “ನನ್ನ ಮುಂದೆ ಹೇಳಿದ್ರೆ ಏನೂ ನಡೆಯಂಗಿಲ್ಲ. ಮೊದಲಿನಿಂದಲೂ ನನ್ನ ಕ್ಷೇತ್ರಕ್ಕೆ ಲೀಡರ್ ಗಳಿಗೆ ಬಾ ಅಂತೀನಾ...? ನನಗೆ ಯಾರೂ ಇಲ್ಲ...ನಾನು ಸಿಂಗಲ್ ಆರ್ಮಿ... ಎಲೆಕ್ಷನ್ ನಲ್ಲಿ ಸೋತರೂ ಚಿಂತೆಯಿಲ್ಲ, ಗೆದ್ರು ಚಿಂತೆಯಿಲ್ಲ, ಮಲಗಿದರು ಚಿಂತೆಯಿಲ್ಲ... ಜಗತ್ತಿನಲ್ಲಿ ಚಿಂತೆಯಿಲ್ಲದ ಪುರುಷ ಅಂದ್ರೆ ಅದು ಶಿವರಾಜ್ ಪಾಟೀಲ್. ನಾನು ದೇವರು ಇದ್ದಂಗೆ, ಅದಕ್ಕೆ ನಮ್ಮ ಹುಡುಗರಿಗೆ ಹೇಳ್ತಿನಿ..ದಿನಾಲೂ ನನ್ನ ಕಾಲಿಗೆ ನಮಸ್ಕಾರ ಮಾಡ್ರಿ ಅಂತ ಹೇಳ್ತಿನಿ.. ಶಿವರಾಜ್ ಪಾಟೀಲ್ ದೈವ ಬರೆಸಿಕೊಳ್ಳಲ್ಲ..ನಾನೇ ದೈವ ಬರಿತೀನಿ.” ಎಂದು ಹೇಳುವುದು ಈ ಆಡಿಯೋದಲ್ಲಿ ಕೇಳುತ್ತದೆ.