ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಕಲಾಕ್ಷೇತ್ರ ಫೌಂಡೇಶನ್‌ನ ಕಾಲೇಜು ಎಪ್ರಿಲ್ 6 ರವರೆಗೆ ಬಂದ್
ಚೆನ್ನೈ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ನಾಲ್ಕು ಮಂದಿ ಪುರುಷ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ತನ್ನ ರುಕ್ಮಿಣಿ ದೇವಿ ಕಾಲೇಜ್ ಆಫ್ ಫೈನ್ ಆರ್ಟ್ಸ್ ಎಪ್ರಿಲ್ 6 ರ ತನಕ ಕಾರ್ಯನಿರ್ವಹಿಸುವುದಿಲ್ಲ ಎಂದು ಚೆನ್ನೈನ ಕಲಾಕ್ಷೇತ್ರ ಫೌಂಡೇಶನ್ ಹೇಳಿದೆ.
ಗುರುವಾರ ಸಂಜೆ ಸಂಸ್ಥೆಯ ಪ್ರಾಂಶುಪಾಲರು ಆದೇಶವೊಂದನ್ನು ಹೊರಡಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ತೊರೆಯುವಂತೆ ಸೂಚನೆ ನೀಡಿದ್ದಾರೆ. ಆದರೆ ಇದಕ್ಕೆ ಸಮ್ಮತಿಸದ ಪ್ರತಿಭಟನಾನಿರತ ವಿದ್ಯಾರ್ಥಿಗಳು, ಆರೋಪ ಎದುರಿಸುತ್ತಿರುವ ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳದ ಹೊರತು ತಾವು ಕದಲುವುದಿಲ್ಲ ಎಂದು ಹೇಳಿದ್ದಾರೆ.
ನಂತರದ ಬೆಳವಣಿಗೆಯಲ್ಲಿ ಅಕಾಡೆಮಿ ನಿರ್ದೇಶಕಿ ರೇವತಿ ರಾಮಚಂದ್ರನ್ ಅವರು ವಿದ್ಯಾರ್ಥಿಗಳಿಗೆ ಹಾಸ್ಟೆಲಿನಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿದರು. ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕ್ರಮದ ಭರವಸೆಯನ್ನು ಅವರು ನೀಡಿದರಾದರೂ ಈ ಕುರಿತು ಲಿಖಿತ ಭರವಸೆಯನ್ನು ಅಕಾಡೆಮಿ ನೀಡುವ ತನಕ ಪ್ರತಿಭಟನೆಗಳನ್ನು ಮುಂದುವರಿಸುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಇಂದು 'ಬ್ಯಾಲೆ' ಒಂದನ್ನು ಪ್ರದರ್ಶಿಸಲಿರುವ ಹರಿ ಪದ್ಮನ್ ವಿರುದ್ಧ ಕ್ರಮವನ್ನು ಅಕಾಡೆಮಿ ಕಳೆದ ವಾರ ಕ್ರಮ ಕೈಗೊಳ್ಳದೇ ಇದ್ದಾಗ ಈ ವಿಚಾರ ಮತ್ತಷ್ಟು ಸುದ್ದಿಯಾಯಿತು. ಸಂಜಿತ್ ಲಾಲ್, ಸಾಯಿ ಕೃಷ್ಣನ್ ಮತ್ತು ಶ್ರೀನಾಥ್ ಎಂಬ ಮೂವರು ಶಿಕ್ಷಕರೂ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಸಂಸ್ಥೆಯ ಆಂತರಿಕ ದೂರುಗಳ ಸಮಿತಿ ಆರೋಪಗಳ ಕುರಿತಂತೆ ತನಿಖೆ ನಡೆಸಿದರೂ ಆರೋಪಗಳಲ್ಲಿ ಸತ್ಯವಿಲ್ಲವೆಂದು ಕಂಡುಬಂದಿತ್ತು ಎಂದು ಅಕಾಡೆಮಿ ಮಾರ್ಚ್ 19 ರಂದು ಹೇಳಿತ್ತು. ಈ ಹೇಳಿಕೆಯ ಆಧಾರದಲ್ಲಿ ಆರೋಪಿ ಪುರುಷರು ಹಾಗೂ ಅವರನ್ನು ರಕ್ಷಿಸುತ್ತಿದಾರೆಂಬ ಆರೋಪ ಹೊತ್ತ ರೇವತಿ ಅವರ ವಿರುದ್ಧದ ದೂರನ್ನು ಮುಚ್ಚಲಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ತಿಳಿಸಿದರೂ ಮೂರು ದಿನಗಳ ನಂತರ ಎಲ್ಲಾ ನಾಲ್ಕು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ.
ಮಾರ್ಚ್ 20 ರಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಭರತನಾಟ್ಯಂ ಶಿಕ್ಷಕರಾಗಿರುವ ಹರಿ ಪದ್ಮನ್ ಅವರು ಗುರುವಾರ ಬೆಳಿಗ್ಗೆ ನಡೆದ ಪ್ರಾರ್ಥನಾ ಸಭೆಗೆ ಆಗಮಿಸಿದಾಗ ಅಲ್ಲಿದ್ದ ವಿದ್ಯಾರ್ಥಿಗಳು ಸಭೆಯನ್ನು ಬಹಿಷ್ಕರಿಸಿ ಪದ್ಮನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.
ವಿದ್ಯಾರ್ಥಿಗಳು ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೂ ದೂರಿ ಪತ್ರ ಬರೆದಿದ್ದಾರೆ.