ಸರಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ಬದಲು RSS ನಂಟು ಹೊಂದಿರುವವರನ್ನು ನೇಮಿಸಿದ ಮಧ್ಯಪ್ರದೇಶ ಸರಕಾರ: ವರದಿ
ಬ್ಲಾಕ್, ಜಿಲ್ಲಾ ಸಮನ್ವಯಕಾರ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ಆರೋಪ
ಭೋಪಾಲ್: ಮಧ್ಯ ಪ್ರದೇಶ ಸರ್ಕಾರ ಇತ್ತೀಚೆಗೆ ಪಂಚಾಯತ್ (ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) ಕಾಯಿದೆ, 1996 ಇದರ ಪರಿಣಾಮಕಾರಿ ಅನುಷ್ಠಾನ ಉದ್ದೇಶದಿಂದ ಜಿಲ್ಲಾ ಸಮನ್ವಯಕಾರ ಮತ್ತು ಬ್ಲಾಕ್ ಸಮನ್ವಯಕಾರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಈ 89 ಹುದ್ದೆಗಳಿಗೆ 10,000 ಕ್ಕೂ ಮಿಕ್ಕಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರೆ ಅವರಲ್ಲಿ 890 ಮಂದಿಯನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ಅವರಲ್ಲಿ ಹಲವರು ಮೆರಿಟ್ ಲಿಸ್ಟ್ನಲ್ಲಿ ಸ್ಥಾನ ಪಡೆದು ಸಂದರ್ಶನಕ್ಕೆ ಆಹ್ವಾನಿಸಲಾಗುವುದು ಎಂದು ಹೇಳಲಾಗಿದ್ದರೂ ಹೆಚ್ಚಿನವರನ್ನು ಸಂದರ್ಶನಕ್ಕೆ ಆಹ್ವಾನಿಸಿರಲಿಲ್ಲ. ಅಲ್ಲದೆ ಮೆರಿಟ್ ಲಿಸ್ಟ್ನಲ್ಲಿರುವವರನ್ನು ಕೈಬಿಟ್ಟು ಮೆರಿಟ್ ಲಿಸ್ಟ್ನಲ್ಲಿಲ್ಲದ ಆರೆಸ್ಸೆಸ್ನೊಂದಿಗೆ ನಂಟು ಹೊಂದಿದ ಹಲವರಿಗೆ ಈ ಹುದ್ದೆಗಳು ಹೋಗಿವೆ ಎಂಬುದು ತಿಳಿದು ಬಂದಿದೆ ಎಂದು newslaundry.com ವರದಿ ಮಾಡಿದೆ.
ಈ ಹುದ್ದೆಗಳಿಗೆ ಅರ್ಜಿಯನ್ನು ಪಂಚಾಯತ್ ರಾಜ್ ಇಲಾಖೆಯು ರಾಷ್ಟ್ರೀಯ ಗ್ರಾಮ್ ಸ್ವರಾಜ್ ಅಭಿಯಾನ್ ಅಡಿ ಆಹ್ವಾನಿಸಿತ್ತು. ನೇಮಕಾತಿ ಪ್ರಕ್ರಿಯೆಯನ್ನು ಸರ್ಕಾರಿ ಏಜನ್ಸಿ ಆಗಿರುವ ಸಿಇಡಿಎಂಎಪಿ ನಡೆಸಿತ್ತು. ನಂತರ ಈ ಕಾರ್ಯವನ್ನು ಪಿಎಸ್ಯು ಅಂಗಸಂಸ್ಥೆ ಎಂಪಿಸಿಒಎನ್ ಲಿ. ಗೆ ಹೊರಗುತ್ತಿಗೆ ನೀಡಲಾಗಿತ್ತು ಎಂದು newslaundry.com ವರದಿ ಮಾಡಿದೆ.
ಹುದ್ದೆಗೆ ಆಯ್ಕೆಯಾದ 89 ಮಂದಿಯಲ್ಲಿ 88 ಮಂದಿಗೆ RSS ಜೊತೆ ನಂಟಿದೆ, ಇವರನ್ನು ನೇಮಿಸಲು ಎಲ್ಲಾ ನಿಯಮಗಳನ್ನು ರಾಜ್ಯದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಗಾಳಿಗೆ ತೂರಿದೆ ಎಂದು ಆರೋಪಿಸಲಾಗಿದೆ.
ಈ ಹುದ್ದೆಗಳಿಗೆ ಜಾಹೀರಾತುಗಳನ್ನು ನವೆಂಬರ್ 2021ರಲ್ಲಿ ಪ್ರಕಟಿಸಲಾಗಿತ್ತು. ಬ್ಲಾಕ್ ಸಮನ್ವಯಕಾರ ಹುದ್ದೆಗಳಿಗೆ ರೂ. 25000 ವೇತನ ಹಾಗೂ ಜಿಲ್ಲಾ ಸಮನ್ವಯಕಾರರಿಗೆ ರೂ. 30,000 ವೇತನ ಎಂದು ನಿಗದಿಪಡಿಸಲಾಗಿತ್ತಲ್ಲದೆ ಅರ್ಜಿ ಶುಲ್ಕ ರೂ. 500 ಎಂದು ಹೇಳಲಾಗಿತ್ತು.
ಅಂಕಗಳು ಮತ್ತು ಶೈಕ್ಷಣಿಕ ಅರ್ಹತೆಗಳ ಆಧಾರದಲ್ಲಿ ಫೆಬ್ರವರಿ 4 ರಂದು ಮೆರಿಟ್ ಲಿಸ್ಟ್ ಪ್ರಕಟಗೊಂಡಿದ್ದರೆ ಸಂದರ್ಶನಗಳು ಫೆಬ್ರವರಿ 9, 10, 11 ಕ್ಕೆ ನಿಗದಿಯಾಗಿತ್ತು. ಕನಿಷ್ಠ 12 ಅಭ್ಯರ್ಥಿಗಳು ಮೆರಿಟ್ ಲಿಸ್ಟ್ನಲ್ಲಿದ್ದರೂ ಸಂದರ್ಶನಗಳನ್ನು ರದ್ದುಪಡಿಸಲಾಗಿತ್ತು ಎಂದು ಮಾಹಿತಿ ನೀಡಿದ್ದರೆಂದು newslaundry.com ವರದಿ ಮಾಡಿದೆ.
ಕೇಸರಿ ನಂಟು:
ಪಿಇಎಸ್ಎ ಬ್ಲಾಕ್ ಸಮನ್ವಯಕಾರರಾಗಿ 74 ಹಾಗೂ ಜಿಲ್ಲಾ ಸಮನ್ವಯಕಾರರಾಗಿ 14 ಮಂದಿ ನೇಮಕಗೊಂಡಿದ್ದಾರೆ. ಆದರೆ ಯಾರ ಹೆಸರೂ ಮೆರಿಟ್ ಪಟ್ಟಿಯಲ್ಲಿಲ್ಲ. ಎಲ್ಲರೂ ಬುಡಕಟ್ಟು ಸಮುದಾಯಗಳ ಜನಸಂಖ್ಯೆ ಅಧಿಕವಾಗಿರುವ ಬರ್ವಾನಿ, ಡಿಂಡೋರಿ, ಅಲಿರಾಜಪುರ್, ಧರ್, ಖರ್ಗೋನೆ, ಶಹದೋಲ್, ರತ್ಲಂ, ನರ್ಮದಾಪುರಂ, ಮಂಡ್ಲ, ಅನುಪ್ಪುರ್, ಬೆತುಲ್, ಛಿಂದ್ವಾರ ಮತ್ತು ಖಂಡ್ವಾದವರಾಗಿದ್ದಾರೆ.
ನೇಮಕಗೊಂಡವರು ಫೆಬ್ರವರಿ 13 ರಿಂದ 15 ರ ತನಕ ಭೋಪಾಲದಲ್ಲಿ ನಡೆದ ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಚೌಹಾಣ್ ಮತ್ತವರ ಆಫೀಸರ್ ಆನ್ ಡ್ಯುಟಿ ಲಕ್ಷ್ಮಣ್ ಸಿಂಗ್ ಮರ್ಕಮ್ ಹಾಜರಿದ್ದರು. ಮರ್ಕಮ್ ಅವರು ಭಾರತೀಯ ನೌಕಾಪಡೆಯ ಆರ್ಮಮೆಂಟ್ ಸರ್ವಿಸ್ ಅಧಿಕಾರಿಯೂ ಆಗಿದ್ದು ಬಿಜೆಪಿ (BJP) ಮತ್ತು ಆರೆಸ್ಸೆಸ್ (RSS) ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.
ಆಯ್ಕೆಯಾದ ಎಲ್ಲಾ 88 ಮಂದಿಗೆ ಸಂಘ ಪರಿವಾರದ ನಂಟಿದೆ ಎಂದು newslaundry.com ಕಂಡುಕೊಂಡಿದೆ. ಸಂಪರ್ಕಿಸಲು ಯತ್ನಿಸಿದವರು ಕರೆ ಕಟ್ ಮಾಡಿದ್ದಾರೆ ಅಥವಾ ಬೆದರಿಕೆ ಹಾಕಿದ್ದಾರೆ ಎಂದೂ ವರದಿ ತಿಳಿಸಿದೆ.
ಪಿಇಎಸ್ಎ ಜಿಲ್ಲಾ ಸಮನ್ವಯಕಾರರಾಗಿ ಬರ್ವಾನಿ ಕ್ಷೇತ್ರಕ್ಕೆ ಆಯ್ಕೆಯಾದ ಪ್ರೀತಂ ರಾಜ್ ಬಡೋಲೆ ಆರೆಸ್ಸೆಸ್ ಬುಡಕಟ್ಟು ಕಲ್ಯಾಣ ಘಟಕದ ಬೆಂಬಲಿತ ಜನಜಾತಿ ಸುರಕ್ಷಾ ಮಂಚ್ ಇದರ ಪ್ರಚಾರ ಮುಖ್ಯಸ್ಥರಾಗಿದ್ದಾರೆ. ಈತ ಆಗಾಗ ಲಕ್ಷ್ಮಣ್ ಸಿಂಗ್ ಮರ್ಕಮ್ ಜೊತೆಗಿರುವ ಫೋಟೋ ಪೋಸ್ಟ್ ಮಾಡುತ್ತಾರೆ.
ಧರ್ ಜಿಲ್ಲೆಯ ದಹಿ ತೆಹ್ಸಿಲ್ನ ಬ್ಲಾಕ್ ಸಮನ್ವಯಕಾರನಾಗಿ ಆಯ್ಕೆಯಾಗಿರುವ ಮಹೇಂದ್ರ ಸಿಂಗ್ ಭಭರ್ ಎಂಬಾತ ಧರ್ನ ಭಾರತೀಯ ಜನತಾ ಯುವ ಮೋರ್ಚಾ ಇದರ ಸಾಮಾಜಿಕ ಜಾಲತಾಣ ಸಮನ್ವಯಕಾರನಾಗಿದ್ದಾನೆ.
ಅಲಿರಾಜ್ಪುರ್ ಜಿಲ್ಲೆ ಭಾಬ್ರ ತೆಹ್ಸಿಲ ಬ್ಲಾಕ್ ಸಮನ್ವಯಕಾರನಾಗಿ ನೇಮಕಗೊಂಡಿರುವ ಜೀತೇಂದ್ರ ಸಿಂಗ್ ಜಮ್ರಾ ಆರೆಸ್ಸೆಸ್ ಕಾರ್ಯಕ್ರಮಗಳಲ್ಲಿ, ರ್ಯಾಲಿಗಳಲ್ಲಿ ಭಾಗವಹಿಸುತ್ತಾನೆಯಲ್ಲದೆ ಮರ್ಕಮ್ ಅಭಿಮಾನಿಯಾಗಿದ್ದು, ಮುಖ್ಯಮಂತ್ರಿಯ ಸಮೀಪವರ್ತಿ ಎಂದು ತಿಳಿಯಲಾದ ಇಂದೋರ್ ಬಿಜೆಪಿ ನಾಯಕ ನಿಶಾಂತ್ ಖರೆ ಅವರ ಅಭಿಮಾನಿ ಕೂಡ ಆಗಿದ್ಧಾನೆ. ಮಂಡ್ಲ ಜಿಲ್ಲೆಯ ಬಿಚ್ಚಿಯ ತಹ್ಸಿಲ್ ಇಲ್ಲಿನ ಬ್ಲಾಕ್ ಸಮನ್ವಯಕಾರನಾಗಿ ನೇಮಕಗೊಂಡಿರುವ ಸೋನು ಲಾಲ್ ಮರವಿ ಆರೆಸ್ಸೆಸ್ ವಿದ್ಯಾರ್ಥಿ ಘಟಕ ಎಬಿವಿಪಿ ಇದರ ಔಿಭಾಗ್ ಸಹಕಾರ್ಯ ಪ್ರಮುಖ್ ಆಗಿದ್ದಾನೆ ಎಂದು ವರದಿ newslaundry.com ಮಾಡಿದೆ.
ಧರ್ ಜಿಲ್ಲೆಯ ತಿರ್ಲಾ ತೆಹ್ಸಿಲ್ ಬ್ಲಾಕ್ ಸಮನ್ವಯಕಾರನಾಗಿ ನೇಮಕಗೊಂಡಿರುವ ರೇವ್ಸಿಂಗ್ ಭನ್ವರ್ ಆರೆಸ್ಸೆಸ್ ಕಾರ್ಯಕರ್ತನಲ್ಲದೆ ಎಬಿವಿಪಿ ಇದರ ಮಾಜಿ ರಾಷ್ಟ್ರೀಯ ಕಾರ್ಯಕಾರಿ ಸದಸ್ಯನಾಗಿದ್ದಾನೆ.
ಧರ್ ಜಿಲ್ಲೆಯ ಗಂಧವಾನಿ ತೆಹ್ಸಿಲ್ ಬ್ಲಾಕ್ ಸಮನ್ವಯಕಾರ ಸಂದೀಪ್ ಕುಂಆರ್ ಸಿಸೋಡಿಯಾ ಹಾಗೂ ಅದೇ ಜಿಲ್ಲೆಯ ಕುಚ್ಚಿ ತೆಹ್ಸಿಲ್ನ ಬ್ಲಾಕ್ ಸಮನ್ವಯಕಾರ ವಿಜಯ್ ಬಘೇಲ್ ಹಾಗೂ ಧರ್ನ ಜಿಲ್ಲಾ ಸಮನ್ವಯಕಾರ ದಿಲೀಪ್ ಮಚ್ಚರ್ ಆರೆಸ್ಸೆಸ್ ಕಾರ್ಯಕರ್ತರಾಗಿದ್ದಾರೆ.
ಅದೇ ರೀತಿ ಶಹದೋಲ್ನ ಜೈಸಿಂಘ್ನಗರ್ ತೆಹ್ಸಿಲ್ ಬ್ಲಾಕ್ ಸಂಘಟಕ ಶಾರ್ದಾ ಮೌರ್ಯ, ರತ್ನಂನ ಜಿಲ್ಲಾ ಸಮನ್ವಯಕಾರ ದಿನೇಶ್ ವನನೈಯ್ಯ ಕೂಡ ಆರೆಸ್ಸೆಸ್ ಕಾರ್ಯಕರ್ತರಾಗಿದ್ದಾರೆ. ದಿನೇಶ್ ಜನಜಾತಿ ಸುರ್ಕಷಾ ಮಂಚ್ ಸಕ್ರಿಯ ಸದಸ್ಯನೂ ಆಗಿದ್ದಾನೆ. ನರ್ಮದಾಪುರಂ ಜಿಲ್ಲಾ ಸಮನ್ವಯಕಾರ ಅರವಿಂದ್ ಧ್ರುವೆ ಬಿಜೆಪಿಯ ಸಕ್ರಿಯ ಸದಸ್ಯನಾಗಿದ್ದಾನೆ, ಅನುಪ್ಪುರ್ ತೆಹ್ಸಿಲ್ನ ಸಮನ್ವಯಕಾರಿ ಬಲ್ರಾಮ್ ಬೈಗಾ ವಿಹಿಂಪ, ಬಜರಂಗದಳ ಮತ್ತು ಎಬಿವಿಪಿ ಜೊತೆ ನಂಟು ಹೊಂದಿದ್ದರೆ, ಜೈತಾರಿ ತೆಹ್ಸಿಲ್ ಸಮನ್ವಯಕಾರ ನೀಲಮಣಿ ಸಿಂಗ್ ಬಿಜೆಪಿಯ ಬುಡಕಟ್ಟು ಘಟಕದ ಸದಸ್ಯನಾಗಿದ್ದಾನೆ.
ಇದೇ ರೀತಿ ಇನ್ನೂ ಹಲವು ಬಿಜೆಪಿ, ಆರೆಸ್ಸೆಸ್ ನಂಟು ಹೊಂದಿದವರು ಅಥವಾ ಅವುಗಳ ಸಹಸಂಘಟನೆಗಳೊಂದಿಗೆ ನಂಟು ಹೊಂದಿದವರು ಸಮನ್ವಯಕಾರರಾಗಿ ಆಯ್ಕೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ನೇಮಕಾತಿಗಳಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಎಂಪಿಸಿಒಎನ್ ಡೆಪ್ಯುಟಿ ಮ್ಯಾನೇಜರ್ ಸುನೀಲ್ ಶ್ರೀವಾಸ್ತವ ಅವರನ್ನು ಪ್ರಶ್ನಿಸಿದಾಗ ನೇಮಕಾತಿಯನ್ನು ಪಂಚಾಯತ್ ನಿರ್ದೇಶನಾಲಯ ಹೊರಗುತ್ತಿಗೆ ನೀಡಿತ್ತು. ನಮ್ಮಲ್ಲಿ ಲಭ್ಯ ಡೇಟಾ ಅನುಸಾರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಆದರೆ ಅಭ್ಯರ್ಥಿಗಳ ಆರೆಸ್ಸೆಸ್ ಹಿನ್ನೆಲೆ ಕುರಿತ ಪ್ರಶ್ನೆಗೆ ನನಗೇನೂ ಗೊತ್ತಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮರ್ಕಮ್ ಅವರನ್ನು ಪ್ರಶ್ನಿಸಿದಾಗ ಆ ಬಗ್ಗೆ ಮಾತನಾಡಲು ತಾನು ಸಂಬಂಧಿತ ವ್ಯಕ್ತಿಯಲ್ಲ ಎಂದಿದ್ದಾರೆ. ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ.