ಕಾಂಗ್ರೆಸ್ ಸೇರ್ಪಡೆ ವದಂತಿ ಬಗ್ಗೆ ಸಚಿವ ಕೆ. ಗೋಪಾಲಯ್ಯ ಪ್ರತಿಕ್ರಿಯಿಸಿದ್ದು ಹೀಗೆ...
ಬೆಂಗಳೂರು: ತಾವು ಕಾಂಗ್ರೆಸ್ (Congress) ಸೇರ್ಪಡೆಯಾಗುತ್ತಿರುವುದಾಗಿ ಹಬ್ಬಿರುವ ಸುದ್ದಿಯ ಕುರಿತು ಸ್ಪಷ್ಟಣೆ ನೀಡಿರುವ ಅಬಕಾರಿ ಸಚಿವ ಕೆ.ಗೋಪಾಲಯ್ಯ, ‘ಬಿಜೆಪಿ (BJP) ನನಗೆ ದೊಡ್ಡ ಗೌರವ ನೀಡಿದೆ. ನಾನು ಇರುವವರೆಗೂ ಬಿಜೆಪಿಯಲ್ಲಿ ಇರುತ್ತೇನೆ. ಬೇರೆ ಯಾವ ಪಕ್ಷಕ್ಕೂ ಹೋಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ ಪಕ್ಷದ ಮುಖಂಡರ ಜೊತೆ ಕ್ಷೇತ್ರದಲ್ಲಿ ಸಂಚರಿಸಿ ಬಿಜೆಪಿಗೆ ಮತವನ್ನು ಕೇಳುತ್ತಿದ್ದೇವೆ. ಮನೆ ಮನೆಗೆ ಭೇಟಿ ನೀಡುತ್ತಿದ್ದೇವೆ, ಬೂತ್ ಮಟ್ಟದ ಸಭೆಗಳನ್ನು ನಡೆಸುತ್ತಿದ್ದೇವೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬರುವ ಅನೇಕ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಉಪ ಚುನಾವಣೆಯಲ್ಲಿ ಗೆದ್ದಿದ್ದೇನೆ ಸಚಿವ ಸ್ಥಾನವನ್ನು ಕೊಟ್ಟಿದ್ದಾರೆ. ನನ್ನ ಕ್ಷೇತ್ರದ ಜನರ ಗೌರವವನ್ನು ಉಳಿಸಿಕೊಂಡು ಬಿಜೆಪಿಯಲ್ಲಿ ಇರುತ್ತೇನೆ ಎಂದು ಗೋಪಾಲಯ್ಯ ಹೇಳಿದರು.
ಕ್ಷೇತ್ರದ ಜನರಿಗಾಗಿ ನಾನು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನೂರಕ್ಕೆ ನೂರು ಭಾಗ ನನಗೆ ಆತ್ಮವಿಶ್ವಾಸ ಇದೆ. ಜನರು ನನಗೆ ನೀಡುತ್ತಿರುವ ಗೌರವ ನಾನು ನಿರೀಕ್ಷೆ ಮಾಡಿರಲಿಲ್ಲ. ಉತ್ತಮ ಮಟ್ಟದಲ್ಲಿ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಗೋಪಾಲಯ್ಯ ತಿಳಿಸಿದರು.
ಇದನ್ನೂ ಓದಿ: ಟೋಲ್ ಶುಲ್ಕ ಹೆಚ್ಚಳ: ಒಪ್ಪಿಕೊಳ್ಳುವುದು ಕಷ್ಟ, ಆದರೂ ಇದು ಸಹಜ ಪ್ರಕ್ರಿಯೆ ಎಂದ ಸಂಸದ ಪ್ರತಾಪ್ ಸಿಂಹ