ಉಡುಪಿ ಜಿಲ್ಲೆಯಲ್ಲಿ ಪಾಮ್ ಸಂಡೆ ಆಚರಣೆ
ಉಡುಪಿ: ಯೇಸು ಸ್ವಾಮಿ ಜೆರುಸಲೇಂ ನಗರವನ್ನು ಪ್ರವೇಶಿಸಿದ ಸಂಕೇತವಾಗಿ ಆಚರಿಸುವ ಗರಿಗಳ ರವಿವಾರ (ಪಾಮ್ ಸಂಡೆ)ಯನ್ನು ಉಡುಪಿ ಜಿಲ್ಲೆಯಾದ್ಯಂತ ಕ್ರೆಸ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ನಡೆದ ಧಾರ್ಮಿಕ ವಿಧಿ ವಿಧಾನದಲ್ಲಿ ಭಾಗವಹಿಸಿದರು. ಈ ವೇಳೆ ಚರ್ಚ್ನ ಪ್ರಧಾನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ಉಡುಪಿ ಧರ್ಮಪ್ರಾಂತ್ಯದ ಕುಲಪತಿ ವಂ.ಡಾ. ರೋಶನ್ ಡಿಸೋಜ, ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂ.ಜೋನ್ಸನ್ ಎಲ್.ಸಿಕ್ವೇರಾ, ಹಿರಿಯ ಧರ್ಮಗುರು ವಂ. ವಿಲಿಯಂ ಮಾರ್ಟಿಸ್ ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯ ಎಲ್ಲ ಚರ್ಚ್ಗಳಲ್ಲಿ ಕ್ರೆಸ್ತ ಬಾಂಧವರು ಬೆಳಗ್ಗಿನ ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡು ತೆಂಗಿನ ಗರಿಗಳನ್ನು ಹಿಡಿದುಕೊಂಡು ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಚರ್ಚ್ಗಳಲ್ಲಿ ಯೇಸುವಿನ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡು ಬಲಿಪೂಜೆಯಲ್ಲಿ ಭಾಗವಹಿಸಿದರು.
ಧರ್ಮಪ್ರಾಂತ್ಯದ ಪ್ರಧಾನ ದೇವಾಲಯವಾದ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ದೇವಾಲಯದ ಪ್ರಧಾನ ಧರ್ಮಗುರು ವಂ. ವಲೇರಿಯನ್ ಮೆಂಡೊನ್ಸಾ ಧಾರ್ಮಿಕ ವಿಧಿವಿಧಾನದ ನೇತೃತ್ವ ವಹಿಸಿದ್ದರು.
ಪಾಮ್ ಸಂಡೆ ಆಚರಣೆಯೊಂದಿಗೆ ಕ್ರೆಸ್ತರ ಪವಿತ್ರ ಸಪ್ತಾಹ ಆರಂಭ ಗೊಳ್ಳುತ್ತದೆ. ಯೇಸುಕ್ರಿಸ್ತರು ಜೆರುಸಲೇಂ ನಗರವನ್ನು ಪ್ರವೇಶಿಸಿದಾಗ ಅಲ್ಲಿನ ಭಕ್ತರು ಒಲಿವ್ ಮರದ ಗರಿಗಳನ್ನು ಹಿಡಿದು ಯೇಸುವಿಗೆ ವೈಭವದಿಂದ ಸ್ವಾಗತಿಸಿದ ಸಂಕೇತವಾಗಿ ತೆಂಗಿನ ಗರಿಗಳನ್ನು ಹಿಡಿದು ಕ್ರೆಸ್ತರು ಮೆರವಣಿಗೆಯಲ್ಲಿ ತೆರಳಿ ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.
ಪವಿತ್ರ ಸಪ್ತಾಹವು ಕ್ರೆಸ್ತರಿಗೆ ಅತೀ ಮಹತ್ವದಾಗಿದ್ದು, ಗುರುವಾರ ಯೇಸು ಕ್ರಿಸ್ತರು ಕೊನೆಯ ಭೋಜನ ಸ್ಮರಣೆ ಮಾಡಿದ್ದರೆ, ಶುಕ್ರವಾರ ಯೇಸುಕ್ರಿಸ್ತರ ಮರಣದ ದಿನವಾದ ಗುಡ್ ಫ್ರೈಡೆ ಆಚರಿಸಿ ಇಡೀ ದಿನವನ್ನು ಉಪವಾಸ, ಧ್ಯಾನದಲ್ಲಿ ಕಳೆಯುತ್ತಾರೆ. ಶನಿವಾರ ಈಸ್ಟರ್ ಜಾಗರಣೆ ಮತ್ತು ಭಾನುವಾರ ಯೇಸುಕ್ರಿಸ್ತರ ಪುನರುತ್ಥಾನದ ಪ್ರಯುಕ್ತ ಈಸ್ಟರ್ ಹಬ್ಬ ಆಚರಿಸಲಾಗುತ್ತದೆ.