ಮೊದಲ ಪಟ್ಟಿ ಬಿಡುಗಡೆಗೇ ಹಿಂಜರಿಯುತ್ತಿರುವ ಬಿಜೆಪಿ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಚುನಾವಣೆ ಘೋಷಣೆಯಾದ ಬೆನ್ನಿಗೇ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಕಾವು ಪಡೆಯುತ್ತಿವೆ. ಅದಾಗಲೇ ಕೋಟ್ಯಂತರ ರೂ. ಬೆಲೆ ಬಾಳುವ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ನಗದು, ಸೀರೆಗಳು ಪತ್ತೆಯಾಗುತ್ತಿವೆ. ಜನರನ್ನು ಭಾಷೆ, ಧರ್ಮ, ಜಾತಿಗಳ ಹೆಸರಿನಲ್ಲಿ ಪ್ರಚೋದಿಸುವ ಭಾಷಣಗಳು ಬೇಸಿಗೆಯ ಬಿಸಿಯ ಜೊತೆಗೆ ಸ್ಪರ್ಧಿಸುತ್ತಿವೆ. ಯಕ್ಷಗಾನದಲ್ಲಿ ಪ್ರಸಂಗದ ಆರಂಭದಲ್ಲಿ ಸಾಂಪ್ರದಾಯಿಕ ಬಾಲಗೋಪಾಲ ವೇಷಗಳನ್ನು ವೇದಿಕೆಗೆ ಕಳುಹಿಸಿ ಕುಣಿಸಿದಂತೆ, ಬಿಜೆಪಿ ‘ಉರಿ ಗೌಡ-ನಂಜೇಗೌಡ’ ವೇಷಗಳನ್ನು ಕುಣಿಸುವುದಕ್ಕೆ ಹೊರಟು ರಸ ಭಂಗ ಅನುಭವಿಸಿದೆ. ಈ ವೇಷಗಳ ನಡುವೆ ಸಿ.ಟಿ. ರವಿಯಂಥವರ ಕೋಡಂಗಿ ವೇಷಗಳು ಜನರನ್ನು ಒಂದಿಷ್ಟು ರಂಜಿಸಿವೆ. ಇವೆಲ್ಲದರ ನಡುವೆ ಕಾಂಗ್ರೆಸ್ ಪಕ್ಷ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿರೀಕ್ಷಿತ ಹೆಸರುಗಳೇ ಆಗಿರುವುದರಿಂದ ಎಲ್ಲೂ ಅಸಮಾಧಾನ ಎದ್ದು ಕಾಣುವಂತಿರಲಿಲ್ಲ. ಎರಡನೆಯ ಪಟ್ಟಿ ಬಿಡುಗಡೆಯ ಸಂದರ್ಭದಲ್ಲೂ ಇದೇ ವಾತಾವರಣ ಕಾಂಗ್ರೆಸ್‌ನಲ್ಲಿ ಇರುತ್ತದೆಯೇ ಎನ್ನುವುದನ್ನು ಕಾದು ನೋಡಬೇಕು. ಕಾಂಗ್ರೆಸ್ ಮೊದಲ ಪಟ್ಟಿಯನ್ನಾದರೂ ಬಿಡುಗಡೆ ಮಾಡಿದೆ. ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡುವ ಧೈರ್ಯವನ್ನೂ ಈವರೆಗೆ ಪ್ರದರ್ಶಿಸಿಲ್ಲ. ಸಾಧಾರಣವಾಗಿ, ಹೆಚ್ಚಿನ ಪಕ್ಷಗಳು ಹಾಲಿ ಶಾಸಕರನ್ನು ಗೆಲ್ಲುವ ಕುದುರೆಗಳು ಎಂದು ಭಾವಿಸಿ ಅವರಿಗೆ ಮತ್ತೆ ಟಿಕೆಟ್ ನೀಡುತ್ತವೆ. ಆದರೆ ಬಿಜೆಪಿಯಲ್ಲಿ ‘‘ಹಾಲಿ ಶಾಸಕರಲ್ಲಿ ಹಲವರಿಗೆ ಟಿಕೆಟ್ ಇಲ್ಲ’’ ಎನ್ನುವ ಸೂಚನೆ ಈಗಾಗಲೇ ನೀಡಿದ್ದಾರೆ. ಹಲವು ಹಿರಿಯರನ್ನು ಬದಿಗೆ ಸರಿಸಿ ಅವರ ಜಾಗಕ್ಕೆ ಆರೆಸ್ಸೆಸ್‌ನ ಯುವ ಮುಖಗಳನ್ನು ತಂದು ಕೂರಿಸುವ ಯೋಜನೆಯೊಂದು ಕೇಶವ ಕೃಪಾದಲ್ಲಿ ಈಗಾಗಲೇ ರೂಪುಗೊಂಡಿದೆ. ಅವುಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಸ್ಫೋಟಗೊಳ್ಳಬಹುದಾದ ಭಿನ್ನಮತಗಳ ಬಗ್ಗೆ ಬಿಜೆಪಿ ಮತ್ತು ಆರೆಸ್ಸೆಸ್ ಮುಖಂಡರಿಗೆ ಭಯವಿದ್ದಂತಿದೆ. ಆದುದರಿಂದ, ಮೊದಲ ಪಟ್ಟಿ ಬಿಡುಗಡೆಯೇ ಬಿಜೆಪಿಯ ಪಾಲಿಗೆ ಕಷ್ಟವೆನಿಸಿ ಬಿಟ್ಟಿದೆ.
ಇನ್ನುಳಿದಂತೆ, ರಾಜ್ಯದಲ್ಲಿ ಚುನಾವಣೆ ಘೋಷಣೆಗೆ ಮೊದಲೇ ಕಾಂಗ್ರೆಸನ್ನು ಮಣಿಸುವ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನೊಳಗಿರುವ ಒಂದು ಗುಂಪು ಜೊತೆಗೂಡಿದಂತಿದೆ. ರಾಜ್ಯದಲ್ಲಿ ಕಾಂಗ್ರೆಸನ್ನು ಸೋಲಿಸುವುದೆಂದರೆ, ಸಿದ್ದರಾಮಯ್ಯರನ್ನು ಸೋಲಿಸುವುದು ಎನ್ನುವುದನ್ನು ಬಿಜೆಪಿ ಈಗಾಗಲೇ ಘೋಷಿಸಿದೆ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುತ್ತಿದ್ದಾರೆ ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಕಾಣಿಸುತ್ತಿದ್ದಂತೆಯೇ ಬಿಜೆಪಿಯ ನಾಯಕರು ಕೋಲಾರದಲ್ಲಿ ನೆರೆದು, ಅವರ ವಿರುದ್ಧ ಪ್ರಚಾರಕ್ಕೆ ತೊಡಗಿಕೊಂಡಿದ್ದರು. ಈಗಲೂ ಬಿಜೆಪಿ ಕಾಂಗ್ರೆಸ್ ವಿರುದ್ಧ ಮಾತನಾಡಿರುವುದಕ್ಕಿಂತ ಸಿದ್ದರಾಮಯ್ಯರ ವಿರುದ್ಧ ಮಾತನಾಡಿರುವುದೇ ಅಧಿಕ. ರಾಜ್ಯದಲ್ಲಿ ಕಾಂಗ್ರೆಸ್‌ನ ಜೀವ ಸಿದ್ದರಾಮಯ್ಯರ ಸೋಲು-ಗೆಲುವುಗಳಲ್ಲಿದೆ ಎಂದು ಬಿಜೆಪಿಯ ನಾಯಕರು ಭಾವಿಸಿಕೊಂಡಿದ್ದಾರೆ. ಆದುದರಿಂದಲೇ, ಸಿದ್ದರಾಮಯ್ಯರನ್ನು ಸೋಲಿಸುವುದಕ್ಕೆ ಬಿಜೆಪಿಯೊಳಗೆ ಕಾರ್ಯತಂತ್ರ ಆರಂಭವಾಗಿದೆ.
ವಿಪರ್ಯಾಸವೆಂದರೆ, ಎಂದಿನಂತೆಯೇ ಕಾಂಗ್ರೆಸ್‌ನೊಳಗೂ ಸಿದ್ದರಾಮಯ್ಯ ವಿರುದ್ಧ ಕತ್ತಿ ಮಸೆಯುವ ಪ್ರಯತ್ನಕ್ಕೆ ಚಾಲನೆ ದೊರಕಿದೆ. ಚುನಾವಣಾ ಸಮೀಕ್ಷೆಯೊಂದು ‘ಕಾಂಗ್ರೆಸ್‌ಗೆ ಬಹುಮತ’ ಘೋಷಣೆ ಮಾಡಿದ ಬೆನ್ನಿಗೇ ಈ ಪಿತೂರಿ ತೀವ್ರ ರೂಪ ಪಡೆಯುತ್ತಿದೆ. ಕಾಂಗ್ರೆಸ್ ಗೆದ್ದರೆ ಮುಖ್ಯಮಂತ್ರಿ ಯಾರು? ಎನ್ನುವ ಪ್ರಶ್ನೆಗೆ ಉತ್ತರ ಕಾಂಗ್ರೆಸ್‌ನೊಳಗೆ ಸುಲಭವಿಲ್ಲ. ಕಾಂಗ್ರೆಸ್‌ನ ಹೊರ ಮುಖ ಸಿದ್ದರಾಮಯ್ಯ ಅವರದೇ ಆಗಿದ್ದರೂ, ಯಾರಿಗೂ ಕಾಣಿಸದ ಅದರ ಒಳ ಮುಖ ಡಿಕೆಶಿ ಅವರಾಗಿದ್ದಾರೆ. ಕಾಂಗ್ರೆಸ್ ಇಂದು ರಾಜ್ಯದಲ್ಲಿ ಅಸ್ತಿತ್ವ ಉಳಿಸಿಕೊಂಡಿರುವುದು ಸಿದ್ದರಾಮಯ್ಯ ಅವರ ಜಾತ್ಯತೀತ ಮೌಲ್ಯ, ಜನಪರ ಚಿಂತನೆಗಳಿಂದಲ್ಲ, ತನ್ನ ಜನಬಲ, ಹಣಬಲದಿಂದ ಎಂದು ಡಿಕೆಶಿ ಅವರೂ ಈಗಾಗಲೇ ಪ್ರತಿಪಾದಿಸಿದ್ದಾರೆ. ‘‘ಈ ಬಾರಿ ಮುಖ್ಯಮಂತ್ರಿಯಾಗದೇ ಇದ್ದರೆ ಮುಂದೆ ಕಷ್ಟ’’ ಎನ್ನುವ ಒಳ ಆತಂಕ ಡಿಕೆಶಿಯವರಲ್ಲಿದೆ. ಆದುದರಿಂದ, ‘‘ನಾನೂ ಮುಖ್ಯಮಂತ್ರಿ ಅಭ್ಯರ್ಥಿ’’ ಎನ್ನುವುದನ್ನು ಘೋಷಿಸಿಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯರ ಸುದೀರ್ಘ ರಾಜಕೀಯ ಅನುಭವ, ಅವರ ಮುತ್ಸದ್ದಿತನದ ಮುಂದೆ ಡಿಕೆಶಿ ಸ್ಪರ್ಧಿಸುವುದು ಕಷ್ಟ. ಆದುದರಿಂದ, ಸಿದ್ದರಾಮಯ್ಯ ಮುಖ್ಯಮಂತ್ರಿ ಗಾದಿಗೆ ಸ್ಪರ್ಧಿಸದೇ ಇರಬೇಕಾದರೆ ಅವರು ಚುನಾವಣೆಯಲ್ಲಿ ಸೋಲಬೇಕು. ಸಿದ್ದರಾಮಯ್ಯ ಅವರು ಬಿಜೆಪಿಗಿಂತಲೂ ಪಕ್ಷದೊಳಗಿರುವ ಮಸಲತ್ತುಗಳಿಗೆ ಹೆಚ್ಚು ಹೆದರಿದಂತಿದೆ. ಆದುದರಿಂದಲೇ ಪದೇ ಪದೇ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮಾತನ್ನಾಡುತ್ತಿದ್ದಾರೆ. ಪುತ್ರ ವಾತ್ಸಲ್ಯವೂ ಅವರನ್ನು ಧರ್ಮಸಂಕಟಕ್ಕೀಡು ಮಾಡಿದೆ. ವರುಣಾ ಕ್ಷೇತ್ರದಿಂದ ತಾನು ಸ್ಪರ್ಧಿಸಿ ಗೆದ್ದರೆ, ಮಗನ ಗತಿಯೇನು ಎನ್ನುವುದರ ಬಗ್ಗೆಯೂ ಅವರು ಚಿಂತೆಗೀಡಾಗಿದ್ದಾರೆ.
ಸಿದ್ದರಾಮಯ್ಯ ಅವರ ವಿರುದ್ಧ ಯಡಿಯೂರಪ್ಪ ಅವರ ಪುತ್ರನನ್ನು ಕಣಕ್ಕಿಳಿಸುವ ಬಿಜೆಪಿಯ ತಂತ್ರ ಆರಂಭದಲ್ಲೇ ವಿಫಲವಾಯಿತು. ಒಂದು ಕಲ್ಲಿನಿಂದ ಎರಡು ಹಕ್ಕಿ ಕೆಡಹುವ ಯೋಜನೆ ಬಿಜೆಪಿಯದ್ದಾಗಿತ್ತು. ಯಡಿಯೂರಪ್ಪ ಅವರು ಮಗನ ಮೂಲಕ ಬಿಜೆಪಿಯೊಳಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಪುತ್ರನನ್ನು ಇಳಿಸಿದರೆ, ಯಾರು ಸೋತರೂ ಬಿಜೆಪಿಗೆ ಲಾಭ. ಒಂದಲ್ಲ ಒಂದು ದಿನ ಆರೆಸ್ಸೆಸ್‌ಗೆ ಸಮಸ್ಯೆಯಾಗಬಹುದಾದ ಯಡಿಯೂರಪ್ಪರ ಪುತ್ರ ವರುಣಾದಲ್ಲಿ ಸೋತರೆ, ಕೇಶವ ಕೃಪಾದ ಮಂದಿ ಹಾಲು ಕುಡಿಯುತ್ತಾರೆ. ಆರೆಸ್ಸೆಸ್ ದುರುದ್ದೇಶ ಗೊತ್ತಿರುವುದರಿಂದಲೇ ಯಡಿಯೂರಪ್ಪ ವದಂತಿಯನ್ನು ಸಾರಾಸಗಟಾಗಿ ನಿರಾಕರಿಸಿದರು. ‘‘ವರುಣಾದಲ್ಲಿ ಮಗ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ’’ ಎನ್ನುವ ಮೂಲಕ ಬಿಜೆಪಿಯೊಳಗಿನ ಕು‘ತಂತ್ರಿ’ಗಳ ಆಸೆಗೆ ತಣ್ಣೀರು ಎರಚಿದರು.
ಒಟ್ಟಿನಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಳಗೆ ಯಡಿಯೂರಪ್ಪ ಅವರನ್ನು ಸೋಲಿಸುವ ಪ್ರಯತ್ನಗಳು ನಡೆಯುತ್ತಿದ್ದರೆ, ಕಾಂಗ್ರೆಸ್‌ನೊಳಗೆ ಸಿದ್ದರಾಮಯ್ಯ ಅವರನ್ನು ಸೋಲಿಸುವ ಪ್ರಯತ್ನವೂ ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಒಳಗಿನ ಈ ಸ್ಪರ್ಧೆಗಳಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದರ ಆಧಾರದ ಮೇಲೆ ಮೇ ೧೦ರಂದು ನಡೆಯುವ ಚುನಾವಣೆಯ ಫಲಿತಾಂಶ ನಿಂತಿದೆ. ಬಿಜೆಪಿ ತನ್ನ ಮೊದಲ ಪಟ್ಟಿ ಮತ್ತು ಕಾಂಗ್ರೆಸ್ ತನ್ನ ಎರಡನೇ ಪಟ್ಟಿಯನ್ನು ಪ್ರಕಟಿಸುವುದರೊಂದಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ನೊಳಗೆ ಯಾರು ಯಾರ ವಿರುದ್ಧ ಸ್ಪರ್ಧಿಸಲಿದ್ದಾರೆ ಎನ್ನುವುದು ಸ್ಪಷ್ಟವಾಗ ತೊಡಗುತ್ತದೆ.