2ಬಿ ಮೀಸಲಾತಿಯನ್ನು ಮರುಸ್ಥಾಪಿಸುವಂತೆ ತಂಝೀಮ್ ಆಗ್ರಹ
ಭಟ್ಕಳ: ಇಲ್ಲಿನ ಸಾಮಾಜಿಕ ರಾಜಕೀಯ ಸಂಸ್ಥೆಯಾಗಿರುವ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ರಾಜ್ಯದಲ್ಲಿ 2ಬಿ ಮೀಸಲಾತಿ ರದ್ದುಪಡಿಸಿದ್ದನ್ನು ವಿರೋಧಿಸಿ ಹಾಗೂ ಅದನ್ನು ಮರುಸ್ಥಾಪಿಸಿ ಸಾಮಾಜಿಕ ನ್ಯಾಯ ಪಾಲಿಸುವಂತೆ ಇಲ್ಲಿನ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಶೈಕ್ಷಣಿಕ ಮತ್ತು ಉದ್ಯೋಗದ ಸವಲತ್ತುಗಳಿಗೆ ಮೀಸಲಿರಿಸಿದ ಶೇ.4ರ ಪ್ರವರ್ಗ ‘2ಬಿ’ಮೀಸಲಾತಿಯನ್ನು ಸರಕಾರ ರದ್ದುಗೊಳಿಸಿ ಇತರ ಸಮುದಾಯಕ್ಕೆ ನೀಡಿದ ಕ್ರಮ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದು ಇದನ್ನೂ ನಾವು ತೀವ್ರವಾಗಿ ಖಂಡಿಸುತ್ತೇವೆ. ಹಾಗೂ ಅಲ್ಪಸಂಖ್ಯಾತ ಮುಸ್ಲಿಮರನ್ನು 2ಬಿ ಮೀಸಲಾತಿಯಿಂದ ಕೈಬಿಡುವ ನಿರ್ಧಾರವನ್ನು ಕೂಡಲೇ ಹಿಂತೆಗೆದುಕೊಂಡು ಮುಸ್ಲಿಮರಿಗೆ ನೀಡುತ್ತಿದ್ದ ಶೇ.4 ಮೀಸಲಾತಿಯ ಬದಲಿಗೆ ಶೇ.7ಮೀಸಲಾತಿ ನೀಡಿ ಆದೇಶಿಸಬೇಕೆಂದು ನಾವು ಈ ಮೂಲಕ ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಸಂವಿಧಾನ ಬದ್ಧವಾಗಿರುವ ಮುಸ್ಲಿಮ್ ಸಮುದಾಯದ 2ಬಿ ಮೀಸಲಾತಿಯನ್ನು ರಾಜ್ಯ ಸರಕಾರ ರದ್ದುಗೊಳಿಸಿರುವುದು ಮತೀಯ ತಾರತಮ್ಯ ಮತ್ತು ಸಮುದಾಯವನ್ನು ಶೈಕ್ಷಣಿಕ ಹಕ್ಕುಗಳಿಂದ ವಂಚಿಸುವ ಪ್ರಯತ್ನವಾಗಿದೆ. ಮುಸ್ಲಿಮರ ಹಕ್ಕನ್ನು ಕಸಿದು ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಗಳಿಗೆ ಹಂಚಿರುವುದು ಅನ್ಯಾಯದ ಪರಮಾವಧಿಯಾಗಿದೆ ಎಂದು ಆರೋಪಿಸಿದ್ದು, ರಾಜ್ಯ ಸರಕಾರ ತಕ್ಷಣ ಮುಸ್ಲಿಮ್ ಸಮುದಾಯದ ಮೀಸಲಾತಿಯನ್ನು ಮರು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ, ಮಾಜಿ ಅಧ್ಯಕ್ಷ ಎಸ್.ಎಂ. ಸೈಯ್ಯದ್ ಪರ್ವಾಝ್, ಅಲ್ತಾಫ್ ಖರೂರಿ, ಅಝೀಝರ್ರಹ್ಮಾನ್ ನದ್ವಿ ಸೇರಿದಂತೆ ತಂಝೀಮ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.