ಸಲೀಮ್ ದುರಾನಿ ಎಂಬ ಪ್ರಿನ್ಸ್ ಕ್ರಿಕೆಟಿಗ
ಕ್ರಿಕೆಟ್ ಸಭ್ಯರ ಆಟವಾಗಿದ್ದಾಗ ಆಡಿದವರು ಸಲೀಮ್ ದುರಾನಿ. ಎಲ್ಲರೊಳಗೊಂದಾದ ಜೀವ ಅವರು. ಅವರ ವರ್ಣರಂಜಿತ ವ್ಯಕ್ತಿತ್ವದಿಂದಾಗಿ ಅವರನ್ನು ಪ್ರಿನ್ಸ್ (ರಾಜಕುಮಾರ) ಎಂದು ಕರೆಯಲಾಗುತ್ತಿತ್ತು. ಹಣದ ಆಕರ್ಷಣೆಯಿಲ್ಲದೆ, ಕ್ರಿಕೆಟ್ ಆಕರ್ಷಣೆಯೇ ಬದುಕಾಗಿದ್ದ ಒಬ್ಬ ಜೀವ/ಜೀವನ ಪ್ರೀತಿಯ ಕ್ರೀಡಾಪಟು ಕ್ಯಾನ್ಸರ್ ರೋಗಕ್ಕೆ ತುತ್ತಾದಾಗ ಈ ಎಲ್ಲ ಹಿರಿಮೆ ಒಮ್ಮೆ ಕ್ರಿಕೆಟ್ ಪ್ರೇಮಿಗಳ ಬಾಯಲ್ಲಿ ಮೆಲುಕಾಯಿತಲ್ಲ, ಅದು ಸತ್ತ ಮೇಲೂ ಉಳಿಯುವ ಕೀರ್ತಿ. ಪ್ರಾಯಃ ಇಂಥವರು ನಮ್ಮ ಪಠ್ಯಪುಸ್ತಕಗಳಲ್ಲಿ ಎಳೆಯರಿಗೆ ಸ್ಫೂರ್ತಿಯಾದಾರು.
ಸಾಹಿತ್ಯ ಮತ್ತು ಕ್ರೀಡೆಗೆ ಅದರಲ್ಲೂ ಭಾರತದಲ್ಲಿ ಬಹು ಜನಪ್ರಿಯವಾಗಿರುವ ಕ್ರಿಕೆಟಿಗೆ ಒಂದು ಹೋಲಿಕೆಯಿದೆ. ಒಂದು ಕಾಲದ ಸಾಹಿತಿಗಳ ಬಗ್ಗೆ ಆನಂತರದ ತಲೆಮಾರಿನ ಸಾಹಿತಿಗಳಿಗೆ ಗೊತ್ತಿರುತ್ತದೆಯೇ ಹೊರತು ಇತರ ಸಾಮಾನ್ಯ ಸಾಹಿತ್ಯಾಸಕ್ತರಿಗೆ ಅಷ್ಟಾಗಿ ಗೊತ್ತಿರುವುದಿಲ್ಲ. ಈಗೀಗಿನ ಬರಹಗಾರರಿಗೆ ಹಿಂದಿನ ಸಾಹಿತಿಗಳು ಅಷ್ಟೊಂದು ಮುಖ್ಯವೆನಿಸುವುದಿಲ್ಲ. ಅಡಿಗ ಅಂದರೆ ಅರವಿಂದ, ವಾಸುದೇವ ಹೀಗೆ ಪ್ರಶ್ನೆ ಹಾಕುವವರೇ ಹೆಚ್ಚು. ಡಿವಿಜಿ ಎಂದರೆ ಡಿ.ವಿ. ಗುರುಪ್ರಸಾದ್ ಎಂಬ ಪೊಲೀಸ್ ಅಧಿಕಾರಿಯನ್ನು ನೆನಪಿಸಿದವರುಂಟು. ಇಂದಿನ ಸಂಖ್ಯಾ ಬಾಹುಳ್ಯದಲ್ಲಿ ನೆನಪಿಡುವುದೂ ಕಷ್ಟ. ಇಂತಹ ಅನೇಕ ಉದಾಹರಣೆಗಳಿವೆ. ಅವೆಲ್ಲ ಇಲ್ಲಿ ಪ್ರಸ್ತುತವಲ್ಲ.
ಕ್ರಿಕೆಟಿನ ಮನೋರಂಜಕ ಮತ್ತು ಮನಮೋಹಕ ಆಲ್‌ರೌಂಡರ್ ಸಲೀಮ್‌ಅಝೀಝ್ ದುರಾನಿ ಮೊನ್ನೆ ಎಪ್ರಿಲ್ 2, 2023ರಂದು ತನ್ನ 88ನೇ ವರ್ಷದಲ್ಲಿ ಗತಿಸಿದರು. ಅಂಕೆ-ಸಂಖ್ಯೆಯ ದೃಷ್ಟಿಯಿಂದ ಇವರು ಭಾರತದ ಸಾರ್ವಕಾಲಿಕ ಶ್ರೇಷ್ಠ ಆಟಗಾರರಿಗೆ ಹೋಲಿಕೆಯಲ್ಲ. ಪ್ರಾಯಃ ಅಂತಹ ಶ್ರೇಷ್ಠತೆಯ ಮಾನದಂಡಕ್ಕೆ ಸಿಕ್ಕುವಷ್ಟು ಪಂದ್ಯಗಳನ್ನು ಅವರು ಆಡಲೇ ಇಲ್ಲ. ಆತ ಆಡುವ ಕಾಲದಲ್ಲಿ ಟೆಸ್ಟ್ ಪಂದ್ಯಗಳಲ್ಲದೆ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಷ್ಟೇ ಇದ್ದವು. ಈಗಿನಂತೆ ಒಂದು ದಿನದ ಕ್ರಿಕೆಟ್, ಟಿ-20 ಕ್ರಿಕೆಟ್ ಆಗ ಇರಲಿಲ್ಲ. ಈಗಿನಷ್ಟು ಟೆಸ್ಟ್ ಪಂದ್ಯಗಳೂ ಇರಲಿಲ್ಲ. ಆದ್ದರಿಂದ ಹಳೆಯ ಸಾಹಿತಿಗಳ ಹಾಗೆ ಕ್ರಿಕೆಟ್ ಆಟದ ಅಚ್ಚ ಪ್ರೇಮಿಗಳ ಹೊರತು ಇತರರಿಗೆ ಸಲೀಮ್ ದುರಾನಿ ಅಷ್ಟಾಗಿ ಪರಿಚಯವಿರಲು ಸಾಧ್ಯವಿಲ್ಲ. ಆಗ ಟಿವಿ ಮುಂತಾದ ಮಾಧ್ಯಮಗಳೂ ಇರಲಿಲ್ಲ. ಆದ್ದರಿಂದ ಅವರು ಸಾರ್ವತ್ರಿಕ ಜನಪ್ರಿಯರೂ ಅಲ್ಲ. ಕ್ರಿಕೆಟ್ ನಿಯಂತ್ರಣ ಮಂಡಳಿಗೆ ರಾಜಕೀಯ ನಾಯಕರು ಕಾಲಿಡುತ್ತಿರುವ ಈ ಕಾಲದಲ್ಲಿ ಕ್ರಿಕೆಟ್ ಆಟಗಾರರಲ್ಲಿ ಕೆಲವರು ಅದು ಹೇಗೋ ಪೀಠಭದ್ರರಾದರೆ ಇನ್ನುಳಿದವರು ಹಿಂದುಳಿಯುತ್ತಿದ್ದಾರೆ. ಅಂಥ ಹಿಂದಿನ ಸಾಲಿನವರಲ್ಲಿ ದುರಾನಿಯೂ ಒಬ್ಬರು. ಆಡುವುದಷ್ಟೇ ಗೊತ್ತಿದ್ದ ದುರಾನಿ ನಿವೃತ್ತ ಜೀವನದಲ್ಲಿ ಜನಪ್ರಿಯತೆಯ ಸಾಧನಗಳನ್ನು ಮೈಗೆ ಬಳಿದುಕೊಳ್ಳಲಿಲ್ಲ. ಈ ದೃಷ್ಟಿಯಿಂದ ಆತ ಒಬ್ಬ ಹಳೆಯ ಹಿರಿಯ ಸಾಹಿತಿ.
ಆದರೆ ಚರಿತ್ರೆ ದುರುದ್ದೇಶದ ಹೊರತಾಗಿ ಯಾರನ್ನೂ ಅಳಿಸುವುದಿಲ್ಲ. ಹಾಗೆಯೇ ಸಲೀಮ್ ದುರಾನಿಯೂ. ಈತ ಅಫ್ಘಾನಿಸ್ತಾನದ ಪಠಾಣ. ಕಾಬೂಲಿನಲ್ಲಿ 11-12-1934ರಲ್ಲಿ ಹುಟ್ಟಿ 10 ತಿಂಗಳ ತೀರ ಎಳವೆಯಲ್ಲೇ ಹೆತ್ತವರೊಂದಿಗೆ ಕರಾಚಿಗೆ ವಲಸೆ ಬಂದರು. ಈತನ ತಂದೆ ಅಬ್ದುಲ್ ಅಝೀಝ್ ದುರಾನಿ ಸ್ವತಃ ಒಬ್ಬ ಪರಿಣತ ಕ್ರಿಕೆೆಟ್ ಆಟಗಾರ; ಕ್ರಿಕೆಟ್ ಕೋಚ್. ಅದು ಸ್ವಾತಂತ್ರ್ಯಪೂರ್ವ ವಸಾಹತುಶಾಹಿ ಕಾಲ. ಈಗಿನ ಗಡಿಗಳು ಆಗ ಇರಲಿಲ್ಲ. ಆದ್ದರಿಂದ ನೆರೆಯ ಸೌರಾಷ್ಟ್ರದ (ಈಗಿನ ಗುಜರಾತಿನ) ಜಾಮ್ ನಗರಕ್ಕೆ ಬಂದ ಈ ಕುಟುಂಬದ ನಿರ್ವಹಣೆಗೆ ನೆರವಾದದ್ದು ಅಝೀಝ್ ದುರಾನಿಯ ಕ್ರಿಕೆಟ್ ತರಬೇತಿ. ಅಲ್ಲಿನ ಕ್ರಿಕೆಟ್ ಆಸಕ್ತ ಜಾಮ್ ಸಾಹೆಬ್ ದಿಗ್ವಿಜಯ ಸಿಂಗ್ ರಂಜಿತ್‌ಸಿಂಗ್ ಜಡೇಜ ಅವರು ಆತನಿಗೆ ಸಬ್-ಇನ್‌ಸ್ಪೆಕ್ಟರ್ ಹುದ್ದೆ ನೀಡಿ ಅಲ್ಲೇ ಬದುಕನ್ನು ಮುಂದುವರಿಸಲು ನೆರವಾದರು. 1932ರಿಂದ 38ರ ವರೆಗೆ ಸಿಂದ್ ಮತ್ತು ನವಾನಗರ್ ತಂಡಗಳಿಗೆ ರಣಜಿ ಟ್ರೋಫಿ ಕ್ರಿಕೆಟ್ ಆಡಿದ್ದ ಈತ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳಲ್ಲಿ ಭಾರತದ ವಿಕೆಟ್ ಕೀಪರ್ ಆಗಿಯೂ ಆಡಿದರು. ಆನಂತರ ಇಡೀ ಕುಟುಂಬವೇ ಜಾಮ್ ನಗರಕ್ಕೆ ವಲಸೆಹೊಂದಿತು.
ಉತ್ತಮ ದೇಹದಾರ್ಢ್ಯ ಹೊಂದಿದ ಸಲೀಮ್ ದುರಾನಿ ಕ್ರಿಕೆಟನ್ನು ಅಭ್ಯಾಸ ಮಾಡಿದರು. ಶಿಕ್ಷಣ ಸೆಕೆಂಡರಿ ಶಾಲೆಯ ಹಂತಕ್ಕೆ ಮುಗಿದುಹೋಯಿತು. ಶಾಲಾ ದಿನಗಳಲ್ಲಿ ಸಲೀಮ್ ದುರಾನಿ ಎರಡು ಕೈಗಳಲ್ಲೂ ಬೌಲ್ ಮಾಡುತ್ತಿದ್ದರು. ಆತನ ಬೌಲಿಂಗ್ ವೈಖರಿ ನೋಡಿದ ಆತನ ತಂದೆಯ ಸ್ನೇಹಿತ ಮತ್ತು ನವಾನಗರ ತಂಡದ ಆಟಗಾರ ಮುಂದೆ ವಿಶ್ವವಿಖ್ಯಾತ ಆಲ್‌ರೌಂಡರ್ ಎನಿಸಿಕೊಂಡ ವಿನೂ ಮಂಕಡ್ ಆತನಿಗೆ ಎಡಗೈ ಬೌಲಿಂಗ್ ಅಭ್ಯಾಸ ಮಾಡಲು ಹೇಳಿದರು. ಸಲೀಮ್ ದುರಾನಿ ಒಂದು ಸಂದರ್ಶನದಲ್ಲಿ ವಿನೂ ಮಂಕಡ್ ತನಗೆ ಎಡಗೈ ಅಭ್ಯಾಸವಾಗಲೆಂದು ಬಲಗೈಯನ್ನು ಬೆನ್ನ ಹಿಂದಕ್ಕೆ ಕಟ್ಟುತ್ತಿದ್ದರೆಂದು ಹೇಳಿದ್ದರು. 1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯಾದಾಗ ಅಬ್ದುಲ್ ಅಝೀಝ್ ದುರಾನಿ ಕರಾಚಿಗೆ ಮರಳಿದರು. ಅವರು ತರಬೇತಿ ನೀಡಿದ ಕ್ರಿಕೆಟಿಗರಲ್ಲಿ ಪಾಕಿಸ್ತಾನದ ಆರಂಭಿಕ ಆಟಗಾರ ಮತ್ತು ವಿಶ್ವದಾಖಲೆ ಸ್ಥಾಪಿಸಿದ ಹನೀಫ್ ಮುಹಮ್ಮದ್ ಕೂಡಾ ಸೇರಿದ್ದರು. ಸಲೀಮ್ ದುರಾನಿ ಮತ್ತು ಕುಟುಂಬದ ಇತರ ಸದಸ್ಯರು ಜಾಮ್ ನಗರದಲ್ಲೇ ಉಳಿದರು. ಸಲೀಮ್ ದುರಾನಿ ಮೊನ್ನೆ ಕೊನೆಯುಸಿರೆಳೆಯುವವರೆಗೂ ಜಾಮ್‌ನಗರದಲ್ಲೇ ಬದುಕಿದರು. ಆರಂಭದಲ್ಲಿ ಶಾಲಾತಂಡವನ್ನು ಪ್ರತಿನಿಧಿಸಿದ್ದ ಸಲೀಮ್ ದುರಾನಿ ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ 6 ವಿಕೆಟ್ ಪಡೆದಿದ್ದರು.
ಬಳಿಕ 1953ರಲ್ಲಿ ಸೌರಾಷ್ಟ್ರ ತಂಡದ ಪರವಾಗಿ ರಣಜಿ ಟ್ರೋಫಿ ಪಂದ್ಯದ ಮೂಲಕ ಪ್ರಥಮ ದರ್ಜೆ ಕ್ರಿಕೆಟಿಗೆ ಪದಾರ್ಪಣೆ ಮಾಡಿ ಮೊದಲ ಪಂದ್ಯದಲ್ಲೇ ಶತಕ ಗಳಿಸಿದರು. 1954ರಲ್ಲಿ ಗುಜರಾತ್ ತಂಡಕ್ಕೆ ಸೇರ್ಪಡೆಯಾದರು. 1956ರಲ್ಲಿ ಅಲ್ಲಿಂದ ಬಿಟ್ಟು ರಾಜಸ್ಥಾನ ತಂಡವನ್ನು ಸೇರಿ ಮುಂದೆ 1978ರಲ್ಲಿ ಕ್ರಿಕೆಟಿನಿಂದ ನಿವೃತ್ತನಾಗುವ ವರೆಗೂ ಆ ತಂಡಕ್ಕೆ ಆಡಿದರು. ತನ್ನ 24ನೇ ವರ್ಷಕ್ಕೆ ಮುಂಬೈಯ ಬ್ರೆಬೊರ್ನ್ ಮೈದಾನದಲ್ಲಿ ಟೆಸ್ಟ್ ರಂಗಕ್ಕೆ ಪದಾರ್ಪಣೆ ಮಾಡಿದರು. ಆ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 10 ಬೌಂಡರಿ ಮತ್ತು 2 ಸಿಕ್ಸರ್‌ನೊಂದಿಗೆ 71 ರನ್ನುಗಳನ್ನು ಮತ್ತು 1973ರಲ್ಲಿ ಚೆನ್ನೈಯಲ್ಲಿ ಮತ್ತೆ 2 ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ ಪೇರಿಸಿದ 70 ರನ್ನುಗಳ ವೈಖರಿ ಇಂದಿನ ಒಂದು ದಿನದ ಕ್ರಿಕೆಟ್ ಮಾತ್ರವಲ್ಲ, ಟಿ-20ಕ್ಕೂ ಸರಿಸಮಾನ. 1961-62ರ ಇಂಗ್ಲೆಂಡಿನ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಕೋಲ್ಕತಾ ಮತ್ತು ಚೆನ್ನೈ ಟೆಸ್ಟ್‌ಗಳಲ್ಲಿ 8 ಮತ್ತು 10 ವಿಕೆಟ್‌ಗಳನ್ನು ಪಡೆಯುವ ಮೂಲಕ ತಂಡದ ಸರಣಿ ಗೆಲುವಿಗೆ ಕಾರಣರಾದರು. 1962ರಲ್ಲಿ ವಿಂಡೀಸ್ ಪ್ರವಾಸ ತಂಡದಲ್ಲಿ ಆಯ್ಕೆಯಾಗಿ ತನ್ನ ಮೊದಲ ಮತ್ತು ಏಕೈಕ ಶತಕವನ್ನು ಪಡೆದರು; ಹಾಗೂ 3 ವಿಕೆಟ್ ಪಡೆದರು. ಸಲೀಮ್‌ನ ಶತಕ ಮತ್ತು ಈ ಎಲ್ಲ ಅರ್ಧ ಶತಕಗಳು ಬಂದಿರುವುದು ಆಗಿನ ವಿಶ್ವವಿಖ್ಯಾತ ವೇಗದ ಬೌಲಿಂಗ್‌ನ ಎದುರು ಎಂಬುದನ್ನು ಮರೆಯಬಾರದು. ತಂಡದ 9ನೆಯ ಆಟಗಾರನಾಗಿ ಆಡಿ ಆನಂತರ 3ನೇ ಕ್ರಮಾಂಕಕ್ಕೆ ಏರಿದ್ದು ಅವರ ಸಾಧನೆ. (ಮುಂದೆ ಚಂದು ಬೋರ್ಡೆಯೂ ಇದೇ ಸಾಧನೆ ಮಾಡಿದರು.) 1966ರ ವರೆಗೂ ಟೆಸ್ಟ್ ಆಡಿದ ದುರಾನಿ ಮತ್ತೆ ತಂಡಕ್ಕೆ ಆಯ್ಕೆಯಾದದ್ದು 1971ರ ವಿಂಡೀಸ್ ಪ್ರವಾಸದಲ್ಲಿ. (ಸುನೀಲ್ ಗವಾಸ್ಕರ್ ತನ್ನ ಟೆಸ್ಟ್ ಕ್ರಿಕೆಟ್ ಜೀವನವನ್ನು ಆರಂಭಿಸಿ ದಾಖಲೆ ಓಟಗಳನ್ನು ಗಳಿಸಿದ ಸರಣಿ ಅದು. ದಿಲೀಪ್ ಸರದೇಸಾಯಿ ಅದ್ಭುತ ಕ್ರಿಕೆಟ್ ಆಡಿದ ಸರಣಿಯೂ ಅದೇ.) ಈ ಸರಣಿಯಲ್ಲಿ ದುರಾನಿ ಕ್ಲೈವ್‌ಲಾಯ್ಡಿ ಮತ್ತು (ಸರ್) ಗ್ಯಾರಿ ಸೋಬರ್ಸ್ ಅವರ ವಿಕೆಟ್‌ಗಳನ್ನು ಸತತ ಎರಡು ಚೆಂಡುಗಳಲ್ಲಿ ಪಡೆದು ಭಾರತದ ಜಯಕ್ಕೆ ಮುಖ್ಯ ಕಾರಣರಲ್ಲೊಬ್ಬರಾದರು.
1972-73ರಲ್ಲಿ ಖಾಯಂ ಆಟಗಾರರಾಗಿದ್ದು ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದರು; 1973ರಲ್ಲಿ ಕೋಲ್ಕತಾ ಟೆಸ್ಟ್‌ನಲ್ಲಿ ಅರ್ಧ ಶತಕ ಗಳಿಸಿದರೂ ಮುಂದಿನ ಕಾನ್ಪುರ ಟೆಸ್ಟಿಗೆ ಅವರನ್ನು ಕೈಬಿಡಲಾಯಿತು. ಪ್ರೇಕ್ಷಕರು ರೊಚ್ಚಿಗೆದ್ದರು. ‘ಸಲೀಮ್ ಇಲ್ಲದಿದ್ದರೆ ಪಂದ್ಯ ಬೇಡ’ ಎಂಬ ಫಲಕಗಳನ್ನು ಪ್ರದರ್ಶಿಸಿದರು. ಆಯ್ಕೆದಾರರು ಮುಂದಿನ ಪಂದ್ಯಕ್ಕೆ ಸಲೀಮ್‌ರನ್ನು ಆಯ್ಕೆ ಮಾಡಲೇಬೇಕಾಯಿತು. ಆ ಸರಣಿಯ ಕೊನೆಯ ಪಂದ್ಯವನ್ನು ಮುಂಬೈಯ ಬ್ರಬೊರ್ನ್ ಮೈದಾನದಲ್ಲಿ ಆಡಿದ ಸಲೀಮ್ ಮತ್ತೆ ಟೆಸ್ಟ್ ಆಡಲಿಲ್ಲ. ಹೀಗೆ 13 ವರ್ಷಗಳ ತೂಗುಯ್ಯ್‌ಲೆಯ ಟೆಸ್ಟ್ ಕ್ರಿಕೆಟ್ ಕೊನೆಯಾಯಿತು. ಮುಂದೆ 5 ವರ್ಷಗಳ ಕಾಲ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮುಂದುವರಿದು ಅದಕ್ಕೂ ಕೊನೆಹಾಡಿದರು. 13 ವರ್ಷಗಳ ಟೆಸ್ಟ್ ಕ್ರಿಕೆಟ್‌ನಲ್ಲಿ ಕೇವಲ 29 ಟೆಸ್ಟ್‌ಗಳನ್ನು ಆಡಿದರೂ ಈತ 1 ಶತಕ ಮತ್ತು 7 ಅರ್ಧ ಶತಕಗಳೊಂದಿಗೆ 1,202 ರನ್ನುಗಳನ್ನು ಸಂಪಾದಿಸಿದರು; 74 ವಿಕೆಟ್‌ಗಳನ್ನು ಪಡೆದರು; 3 ಬಾರಿ 5 ವಿಕೆಟ್‌ಗಳನ್ನು, 1 ಬಾರಿ 10 ವಿಕೆಟ್‌ಗಳನ್ನು ಪಡೆದ ಹಿರಿಮೆ ಈತನದ್ದು. 25 ವರ್ಷಗಳ ಕಾಲ ಆಡಿದ 170 ಪ್ರಥಮ ದರ್ಜೆ ಪಂದ್ಯಗಳಲ್ಲಿ 8,545 ರನ್ನುಗಳು, 14 ಶತಕಗಳು, 45 ಅರ್ಧ ಶತಕಗಳು, 484 ವಿಕೆಟ್‌ಗಳು, 21 ಬಾರಿ 5 ವಿಕೆಟ್‌ಗಳು, 5 ಬಾರಿ 10 ವಿಕೆಟ್‌ಗಳು ಇವರ ಸಾಧನೆ. ಅಂಕಿ-ಸಂಖ್ಯೆಗಳು ನೈಜ ಪ್ರತಿಭೆಯನ್ನು ತೋರಿಸುವುದಿಲ್ಲ. ಸಲೀಮ್ ತನ್ನ ಬಗ್ಗೆ, ಜನಪ್ರಿಯತೆಯ ಬಗ್ಗೆ ಯೋಚಿಸಿದ್ದಕ್ಕಿಂತ, ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ ಕ್ರಿಕೆಟ್‌ನ್ನು ಪ್ರೀತಿಸಿದ್ದರು.
ಆದ್ದರಿಂದ ಆತನಿಗೆ ಕ್ರಿಕೆಟ್ ರನ್ನು ಪೇರಿಸುವ, ಅಂಕಿ-ಅಂಶಗಳ ಸರದಾರನಾಗುವ ಆಟವಾಗದೆ ಒಂದು ವ್ಯಾಮೋಹವಾಗಿತ್ತು. ಪ್ರೇಕ್ಷಕರು ಕೂಗಿ ಕೇಳಿದರೆ ಸಿಕ್ಸರ್ ಬಾರಿಸುವ ಇರಾದೆ ಮತ್ತು ಸಾಮರ್ಥ್ಯ ಸಲೀಮ್‌ಗಿತ್ತು. 6 ಅಡಿ 2 ಇಂಚು ಎತ್ತರದ ಬೆಳ್ಳನೆಯ ಸ್ಫುರದ್ರೂಪಿ ಸಲೀಮ್‌ನನ್ನು ನೋಡುವು ದಕ್ಕಾಗಿಯೇ ಆಗ ಅನೇಕ ಮಹಿಳೆಯರು ಕ್ರಿಕೆಟ್ ಪಂದ್ಯಕ್ಕೆ ಬರುತ್ತಿದ್ದರಂತೆ. ಎಂ.ಎಲ್. ಜಯಸಿಂಹ, ಫಾರೂಕ್ ಇಂಜಿನಿಯರ್ ಮುಂತಾದವರು ಇಂತಹ ಡಾರ್ಲಿಂಗ್ ಕ್ರಿಕೆಟಿಗರು. ಇದರ ಅನ್ವರ್ಥರೂಪಕವಾಗಿ ಸಲೀಮ್ ಕೊನೆಯ ಕ್ರಿಕೆಟ್ ಟೆಸ್ಟ್ ಹೊತ್ತಿಗೆ ಹಿಂದಿ ಚಿತ್ರ ‘ಚರಿತ್ರ’ದಲ್ಲಿ ಪರ್ವೀನ್ ಬಾಬಿಗೆ ನಾಯಕನಾಗಿ ಅಭಿನಯಿಸಿದ್ದರು. (ಇನ್ನೊಂದು ಚಿತ್ರ ‘ಶರ್ಮಿಲೀ’ಯಲ್ಲಿ ರಾಖಿಯೆದುರು ನಟಿಸಬೇಕಿತ್ತು; ಆದರೆ ಕ್ರಿಕೆಟ್ ಪಂದ್ಯಗಳ ಹಾವಳಿಯಿಂದಾಗಿ ಅದನ್ನು ನಿರಾಕರಿಸಿದ್ದರಿಂದ ಶಶಿ ಕಪೂರ್ ಆ ಪಾತ್ರವನ್ನು ನಿರ್ವಹಿಸಿದ.) ಪ್ರಾಯಃ ಕ್ರಿಕೆಟ್‌ನ ಬದಲಿಗೆ ಬಾಲಿವುಡ್‌ಗೆ ಈತ ಹೋಗಿದ್ದರೆ ಸ್ಫುರದ್ರೂಪಿ ರಾಜೇಶ್ ಖನ್ನಾನ ಹಾಗೆ ಸೂಪರ್ ಸ್ಟಾರ್ ಆಗುತ್ತಿದ್ದರೇನೋ ಗೊತ್ತಿಲ್ಲ. ಸಲೀಮ್ ದುರಾನಿ ಭಾರತದ ಕ್ರಿಕೆಟಿಗರ ಪೈಕಿ ಅರ್ಜುನ ಪ್ರಶಸ್ತಿಯನ್ನು (1961) ಪಡೆದ ಮೊದಲ ಆಟಗಾರ. ಆಗಿನ್ನೂ ಅವರಿಗೆ 27 ವರ್ಷ. ಮುಂದೆ ಸರ್ವಶ್ರೇಷ್ಠ ಜೀವನ ಸಾಧನೆಗಾಗಿ ಸಿ.ಕೆ.ನಾಯ್ಡು ಪ್ರಶಸ್ತಿಯನ್ನೂ ಪಡೆದರು. ಆದರೆ ಆರ್ಥಿಕವಾಗಿ ಎಂದೂ ಏನನ್ನೂ ಬಯಸದ ಸಲೀಮ್ ಕೊನೆಯ ವರೆಗೂ ಮಧ್ಯಮ ವರ್ಗದವನಾಗಿಯೇ ಬದುಕಿದರು. ಸದಾ ಆಲ್ಕೋಹಾಲ್ ಮತ್ತು ಸಿಗರೇಟುಗಳನ್ನು ಪ್ರೀತಿಸುತ್ತಿದ್ದರು; ಆದರೆ ದಾಸನಾಗಲಿಲ್ಲ.
ಬಿಸಿಸಿಐ ಅವರಿಗೆ 15 ಲಕ್ಷ ರೂಪಾಯಿಗಳನ್ನು ನೀಡಿ ಕೈತೊಳೆದುಕೊಂಡಿತ್ತು. ಇದು ಇಂದಿನ ಒಂದು ಪಂದ್ಯದ ಸಂಭಾವನೆಗಿಂತಲೂ ಕಡಿಮೆ. ಒಂದೆರಡು ಚಿಕ್ಕ ಘಟನೆಗಳು ಅವರ ಹಿರಿಮೆಯನ್ನು ಹೇಳುತ್ತವೆ: 1971ರ ವೆಸ್ಟ್‌ಇಂಡೀಸ್ ಪ್ರವಾಸದ 2ನೇ ಪಂದ್ಯದಲ್ಲಿ ಭಾರತ ಗೆಲ್ಲಬೇಕಾದರೆ (ಮೊದಲ ಟೆಸ್ಟ್ ಡ್ರಾ ಆಗಿತ್ತು!) 2ನೇ ಇನ್ನಿಂಗ್ಸ್‌ನಲ್ಲಿ ವಿಂಡೀಸನ್ನು ಕಡಿಮೆ ರನ್ನುಗಳಿಗೆ ಕಟ್ಟಿಹಾಕಬೇಕಾಗಿತ್ತು. ನಾಯಕ ವಾಡೇಕರ್ ದಿನದ ಆಟದ ಬಳಿಕ ತಂಡದವರೊಂದಿಗೆ ಮರುದಿನದ ಆಟದ ಕುರಿತು ಚರ್ಚಿಸುತ್ತಿದ್ದಾಗ ಸಲೀಮ್ ತನಗೆ ಮರುದಿನ ಬೌಲಿಂಗ್ ನೀಡಿದರೆ ತಾನು 2 ಪ್ರಮುಖ ವಿಕೆಟ್‌ಗಳನ್ನು ಪಡೆದುಕೊಡುವುದಾಗಿ ಹೇಳಿದರು. ವಾಡೇಕರ್ ಇದನ್ನು ತಮಾಷೆಯೆಂದು ಸ್ವೀಕರಿಸಿದರೂ ಮರುದಿನ ಸಲೀಮ್‌ಗೆ ಬೌಲಿಂಗ್ ನೀಡಿದರು. ಸಲೀಮ್ ಎರಡು ಬಾಲ್‌ಗಳಲ್ಲಿ ಕ್ಲೈವ್ ಲಾಯ್ಡಿ ಮತ್ತು (ಸರ್) ಗ್ಯಾರಿ ಸೋಬರ್ಸ್ ರ ವಿಕೆಟ್ ಪಡೆದದ್ದು ಇತಿಹಾಸ ನಿರ್ಮಿಸಿತು.
ಕ್ರಿಕೆಟ್ ಪಂಡಿತರ ಪ್ರಕಾರ ಇಂದು ವಿರಾಟ್ ಕೊಹ್ಲಿ ಗಳಿಸಿದ್ದ ಜನಪ್ರಿಯತೆಯನ್ನು ಆಗ ಸಲೀಮ್ ದುರಾನಿ ಹೊಂದಿದ್ದರು. ಪ್ರಾಯಃ ಅಫ್ಘಾನಿಸ್ತಾನಿನ ಪಠಾಣನೊಬ್ಬ ಭಾರತ ಕ್ರಿಕೆಟ್ ಟೆಸ್ಟ್ ತಂಡದಲ್ಲಿ ಆಡಿದ ಬೇರೆ ಉದಾಹರಣೆಯಿಲ್ಲ. ಗ್ಯಾರಿ ಸೋಬರ್ಸ್‌ರಂತೆ ಇವರೂ ಅಗ್ರಗಣ್ಯ ಆಲ್‌ರೌಂಡರ್ ಆಗಬಹುದಿತ್ತಲ್ಲ, ಏನಡ್ಡಿ ಎಂದು ಕೇಳಿದಾಗ ‘‘ಸೋಬರ್ಸ್ ಗೆ ಕ್ರಿಕೆಟ್ ಉಸಿರು. ನನಗೋ ವಿವಿಧ ಆಕರ್ಷಣೆಗಳು. ಹಾಗಾಗಿ ಕ್ರಿಕೆಟ್ ಮೈದಾನದಲ್ಲೇ ಕ್ರಿಕೆಟನ್ನು ಮರೆಯುತ್ತಿದ್ದೆ’’ ಎಂದರಂತೆ ಸಲೀಮ್. ರೈಲಿನಲ್ಲಿ ಸುನೀಲ್ ಗವಾಸ್ಕರ್ ಜೊತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಬ್ಲಾಂಕೆಟ್ ಮರೆತು ಚಳಿಗೆ ಚಡಪಡಿಸುತ್ತಿದ್ದ ಗವಾಸ್ಕರ್‌ಗೆ ಎಚ್ಚರಾದಾಗ ಅವರ ಮೇಲೆ ಸಲೀಮ್ ದುರಾನಿ ಹೊದೆಸಿದ್ದ ಬ್ಲಾಂಕೆಟ್ಟಿತ್ತಂತೆ. ಕ್ರಿಕೆಟ್ ಸಭ್ಯರ ಆಟವಾಗಿದ್ದಾಗ ಆಡಿದವರು ಸಲೀಮ್ ದುರಾನಿ. ಎಲ್ಲರೊಳಗೊಂದಾದ ಜೀವ ಅವರು. ಅವರ ವರ್ಣರಂಜಿತ ವ್ಯಕ್ತಿತ್ವದಿಂದಾಗಿ ಅವರನ್ನು ಪ್ರಿನ್ಸ್ (ರಾಜಕುಮಾರ) ಎಂದು ಕರೆಯಲಾಗುತ್ತಿತ್ತು. ಹಣದ ಆಕರ್ಷಣೆಯಿಲ್ಲದೆ, ಕ್ರಿಕೆಟ್ ಆಕರ್ಷಣೆಯೇ ಬದುಕಾಗಿದ್ದ ಒಬ್ಬ ಜೀವ/ಜೀವನ ಪ್ರೀತಿಯ ಕ್ರೀಡಾಪಟು ಕ್ಯಾನ್ಸರ್ ರೋಗಕ್ಕೆ ತುತ್ತಾದಾಗ ಈ ಎಲ್ಲ ಹಿರಿಮೆ ಒಮ್ಮೆ ಕ್ರಿಕೆಟ್ ಪ್ರೇಮಿಗಳ ಬಾಯಲ್ಲಿ ಮೆಲುಕಾಯಿತಲ್ಲ, ಅದು ಸತ್ತ ಮೇಲೂ ಉಳಿಯುವ ಕೀರ್ತಿ. ಪ್ರಾಯಃ ಇಂಥವರು ನಮ್ಮ ಪಠ್ಯಪುಸ್ತಕಗಳಲ್ಲಿ ಎಳೆಯರಿಗೆ ಸ್ಫೂರ್ತಿಯಾದಾರು.