ಮಡಿಕೇರಿ | ರಸ್ತೆ ಕೊಡಿ, ಇಲ್ಲದಿದ್ದರೆ ಸಾವಿಗೆ ದಾರಿ ಮಾಡಿಕೊಡಿ: ದಯಾಮರಣಕ್ಕೆ ಯು.ಚೆಂಬು ಗ್ರಾಮಸ್ಥರ ಅರ್ಜಿ
ಮಡಿಕೇರಿ, ಎ.5: ‘ಬೆಟ್ಟಗುಡ್ಡಗಳ ನಡುವೆ ಪಯಸ್ವಿನಿ ನದಿ ದಾಟಿ ಮನೆ ಸೇರಬೇಕು. ಮನೆಯ ಬಳಿ ವಾಹನ ಹೋಗಲು ದಾರಿಯಲ್ಲ. ರಸ್ತೆ ಬದಿ ವಾಹನ ನಿಲ್ಲಿಸಿ ಕಿ.ಮೀ.ಗಟ್ಟಲೆ ನಡೆಯಲೇಬೇಕು. ಮನೆ ಇದ್ದರೂ ಮನೆಗೆ ದಾರಿ ಇಲ್ಲ’ ಎಂಬುವುದು ಮಡಿಕೇರಿ ತಾಲೂಕಿನ ಗಡಿಭಾಗವಾದ ಚೆಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಯು. ಚೆಂಬುವಿನ 4 ಕುಟುಂಬಗಳ ಅಳಲಾಗಿವೆ.
ಕಳೆದ 3 ದಶಕಗಳಿಂದ ಮನೆಗೆ ದಾರಿಯಿಲ್ಲದೆ 3 ಕಿ.ಮೀ. ನಡೆಯಬೇಕಾದ ಪರಿಸ್ಥಿತಿ ಯು.ಚೆಂಬುವಿನ ನಾಲ್ಕು ಕುಟುಂಬಗಳದ್ದು. ಹಲವು ಬಾರಿ ರಸ್ತೆಗಾಗಿ ಮನವಿ ಸಲ್ಲಿಸಿದ್ದರೂ ಯಾರೂ ಇತ್ತ ತಿರುಗಿ ನೋಡಿಲ್ಲ. ರಸ್ತೆಗಾಗಿ ಮನವಿ ಸಲ್ಲಿಸಿ ಬೇಸತ್ತ ಕುಟುಂಬವೊಂದು ದಯಾಮರಣಕ್ಕೆ ಅವಕಾಶ ನೀಡಿ ಎಂದು ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದೆ. ‘ರಸ್ತೆ ನೀಡಿ, ಇಲ್ಲವೋ ನಮ್ಮನ್ನು ಸಾಯಲು ಬಿಡಿ’ ಎಂದು ಕುಟುಂಬಸ್ಥರು ಆಡಳಿತ ವರ್ಗದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ದಾರಿಯಿಲ್ಲ, ಬೆನ್ನ ಹಿಂದೆ ಹೊತ್ತುಕೊಂಡು ಹೋಗಿ ಆಸ್ಪತ್ರೆ ಸೇರಿದ್ದರು:
ಯು.ಚೆಂಬು ಗ್ರಾಮದ 4 ಕುಟುಂಬಗಳ ಮನೆಗೆ ರಸ್ತೆಯಿಲ್ಲ. ಮೂರು ಕುಟುಂಬಗಳು ಪಯಸ್ವಿನಿ ನದಿ ದಾಟಿ ಮನೆ ಸೇರಬೇಕು. ಪಯಸ್ವಿನಿ ನದಿಯ ಬಳಿ ಯಾವುದೇ ಸೇತುವೆಯೂ ಇಲ್ಲ. ನೀರಿನಲ್ಲೇ ನಡೆಯಬೇಕು. ಮತ್ತೊಂದು ಕುಟುಂಬ ಬೆಟ್ಟ-ಗುಡ್ಡಗಳ ನಡುವೆ ನಡೆದು ಗೂಡು ಸೇರುತ್ತಿದೆ. 4 ಕುಟುಂಬಗಳಲ್ಲಿ ವೃದ್ಧರು, ಮಕ್ಕಳು ಸೇರಿ 20 ಕ್ಕೂ ಅಧಿಕ ಮಂದಿ ಜೀವನ ನಡೆಸುತ್ತಿದ್ದಾರೆ. ರಸ್ತೆಯಿಲ್ಲದ ಮನೆಯಿಂದ ಹೊರಬಾರದೆ, ಮನೆಯೇ ಪ್ರಪಂಚ ಎಂದು ಜೀವನ ಸಾಗಿ ಸುತ್ತಿದ್ದಾರೆ. ತಾಯಿಗೆ ಸ್ವಲ್ಪ ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿತ್ತು. ತಾಯಿ ಚಿಂತಾಜನಕ ಸ್ಥಿತಿಗೆ ತಲುಪಿದ್ದರು. ರಸ್ತೆಯಿಲ್ಲದ ಕಾರಣ ಮನೆಯ ಬಳಿಗೆ ಯಾವುದೇ ವಾಹನಗಳು ಬರುವುದಿಲ್ಲ. ಬೆಟ್ಟಗುಡ್ಡಗಳ ನಡುವೆ,ಕಾಡುಪ್ರಾಣಿಗಳು ಭಯದ ನಡುವೆ ತಾಯಿಯನ್ನು ನನ್ನ ಬೆನ್ನ ಹಿಂದೆ ಹೊತ್ತುಕೊಂಡು 3 ಕಿ.ಮೀ. ನಡೆದು ನಾನು ಆಸ್ಪತ್ರೆ ಸೇರಿಸಿದ್ದು ಎಂದು ಯು.ಚೆಂಬು ಗ್ರಾಮದ ಮಹೇಶ್ ಎಂ.ಪಿ. ಹೇಳುತ್ತಾರೆ.
ಯಾರಿಗಾದರೂ ಅನಾರೋಗ್ಯ ದಲ್ಲಿ ಏರುಪೇರಾದರೆ ಆಸ್ಪತ್ರೆ ಸೇರುವುದು ಕಷ್ಟಕರ ವಿಷಯ. ಪಯಸ್ವಿನಿ ನದಿ ದಾಟಿ ಅನಾ ರೋಗ್ಯ ಪೀಡಿತರು ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಗ್ರಾಮಸ್ಥರದ್ದು. ಆದರೂ ಇದುವರೆಗೆ ಜಿಲ್ಲಾಡಳಿತ ಇವರ ಕೂಗಿಗೆ ಸ್ಪಂದಿಸಿಯೇ ಇಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ನಡೆದೇ ಶಾಲೆ ಸೇರುವ ವಿದ್ಯಾರ್ಥಿಗಳು: ಯು.ಚೆಂಬುವಿನ 4 ಕುಟುಂಗಳಲ್ಲಿ ಮಕ್ಕಳು ಕೂಡ ಇದ್ದಾರೆ. ಶಾಲಾ ವಿದ್ಯಾರ್ಥಿಗಳು ಪ್ರತಿನಿತ್ಯ 3 ಕಿ.ಮೀ. ಮನೆಯಿಂದ ನಡೆದೇ ಶಾಲೆ ಸೇರುತ್ತಾರೆ. ಮಳೆಗಾಲದಲ್ಲಿ ಶಾಲೆಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿ ಇದೆ. ಶಾಲೆಗೆ ಹೋಗುವಾಗ ಕಿರಿದಾದ ದಾರಿಯಲ್ಲಿ ಜಾರಿ ಬಿದ್ದು ಅನೇಕ ಬಾರಿ ವಿದ್ಯಾರ್ಥಿಗಳಿಗೆ ಗಾಯವುಂಟಾದ ಘಟನೆಗಳೂ ನಡೆದಿದೆ.
ಕೃಷಿ ಚಟುವಟಿಕೆಗಳಿಗೆ ತೊಂದರೆ: ಮನೆಗೆ ದಾರಿಯಿಲ್ಲದ ಕಾರಣದಿಂದ ಯು.ಚೆಂಬುವಿನ ನಾಲ್ಕು ಕುಟುಂಬಗಳ ಕೃಷಿ ಚಟುವಟಿಕೆಗಳಿಗೂ ಹಿನ್ನಡೆಯಾಗಿದೆ. ಕರಿಮೆಣಸು, ಕಾಫಿ ಹಾಗೂ ಅಡಿಕೆ ಕೊಯ್ಲಿಗೆ ಕೂಲಿ ಕಾರ್ಮಿಕರಿಗೆ ಅಧಿಕ ಸಂಬಳ ನೀಡಿದರೂ ಬಾರದ ಕಾರಣ ಅಡಿಕೆ ಹಾಗೂ ಕರಿಮೆಣಸು ಬೆಳೆಯುವುದನ್ನೇ ಗ್ರಾಮಸ್ಥರು ನಿಲ್ಲಿಸಿದ್ದಾರೆ. ಅದಲ್ಲದೆ ಗ್ರಾಮದಲ್ಲಿ ಹಸುವನ್ನು ಸಾಕುತ್ತಿದ್ದ ಜನರು ಹಸುವಿಗೆ ಮೇವಿಲ್ಲದೆ ಹಾಗೂ ಹಸುಗಳಿಗೆ ರೋಗಭಾದಿಸಿದರೆ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ರಸ್ತೆಯಿಲ್ಲದ ಕಾರಣದಿಂದ ಹೈನುಗಾರಿಕೆಯಲ್ಲಿ ಆಸಕ್ತಿ ತೋರುತ್ತಿದ್ದ ಗ್ರಾಮಸ್ಥರು ಹಸು ಸಾಕುವುದನ್ನೂ ನಿಲ್ಲಿಸಿದ್ದಾರೆ.
ಕಾಡಾನೆ ಭೀತಿ: ಒಂದೆಡೆ ಮನೆಗೆ ದಾರಿಯಿಲ್ಲದೆ, ಮನೆಯಿಂದ ಹೊರಬಾರಲು ಹಿಂದೇಟು ಹಾಕುತ್ತಿರುವ ಯು.ಚೆಂಬುವಿನ ನಾಲ್ಕು ಕುಟುಂಬಗಳಿಗೆ ಆನೆ ಕಾಟ ತಪ್ಪಿದಲ್ಲ. ಸಂಜೆ 5 ಗಂಟೆಯೊಳಗೆ ಏನಾದರೂ ಮಾಡಿ ಮನೆ ಸೇರಲೇ ಬೇಕು. ಇಲ್ಲದಿದ್ದರೆ ಆನೆಗಳು ದಾಳಿ ಮಾಡುವ ಸಾಧ್ಯತೆವಿದ್ದು, ಇದರಿಂದ ಗ್ರಾಮಸ್ಥರು ಮನೆಯಿಂದ ಹೊರಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಆಡಳಿತ ವ್ಯವಸ್ಥೆಗೆ ಇನ್ನಾದರೂ ಎಚ್ಚೆತ್ತು ಈ ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿವೆ.
ಏನಿದು ರಸ್ತೆ ವಿವಾದ?; 1926 ರಲ್ಲಿ ಯು.ಚೆಂಬುವಿನ ಅರಣ್ಯ ಪ್ರದೇಶವನ್ನು ಖಾಸಗಿ ಸಂಸ್ಥೆಗೆ 999 ವರ್ಷಕ್ಕೆ ಗುತ್ತಿಗೆಗೆ ನೀಡಲಾಗಿತ್ತು. ಅರಣ್ಯ ಪ್ರದೇಶವನ್ನು ನಾಶಗೊಳಿಸಿ ರಬ್ಬರ್ ತೋಟವನ್ನಾಗಿ ಮಾರ್ಪಾಡು ಮಾಡಿದ್ದರು. ಅರಣ್ಯದಂಚಿನಲ್ಲಿ ಕುಟುಂಬಗಳು ಜೀವನ ನಡೆಸುತ್ತಾ ಬಂದಿದೆ. ಅರಣ್ಯವನ್ನು ರಬ್ಬರ್ ತೋಟವನ್ನಾಗಿ ಪರಿವರ್ತಿಸಿದಕ್ಕೆ ಆಡಳಿತ ವರ್ಗ ಗುತ್ತಿಗೆಗೆ ನೀಡಿದವರನ್ನು ಪ್ರಶ್ನಿಸಲು ಹೋಗಿಲ್ಲ. ಆದರೆ, ರಸ್ತೆಯ ಬಗ್ಗೆ ಮನವಿ ನೀಡಿದರೆ ಮೀಸಲು ಅರಣ್ಯ ಎಂದು ಕಾರಣಗಳು ಹೇಳಿ ಸತಾಯಿಸುತ್ತಿದ್ದಾರೆ ಎಂದು ಯು.ಚೆಂಬು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಹಿಂದೆ ಯು.ಚೆಂಬು ಗ್ರಾಮದ ನಾಲ್ಕು ಮನೆಗಳಿಗೆ ಹಾದು ಹೋಗಲು ಸಮೀಪವಿರುವ ಕೊಚ್ಚಿನ್ ಮಲಬಾರ್ ಎಸ್ಟೇಟ್ ರಸ್ತೆಯನ್ನು ನೀಡುತ್ತಿದ್ದರು. ಇದೀಗ ಹೊಸದಾಗಿ ಒಡೆತನವೊಂದಿರುವ ಪ್ರೈವೆಟ್ ಲಿಮಿಟೆಡ್ ಇಂಡಿಯಾ ಸಂಸ್ಥೆಯೊಂದು ಏಕಾಏಕಿ ಸಂಚಾರಕ್ಕೆ ನಿರ್ಬಂಧ ಹೇರಿರುವುದರಿಂದ ದೈನದಿಂದ ಜೀವನ ಸಾಗಿಸಲು ಅಸಾಧ್ಯವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅನಾರೋಗ್ಯ ಸಮಸ್ಯೆಯಲ್ಲೂ ವಾಹನ ಸಂಚಾರದ ಸೌಕರ್ಯವಿಲ್ಲದೆ ಪಯಸ್ವಿನಿ ದಾಟಿ ನಡೆದುಕೊಂಡೇ ಆಸ್ಪತ್ರೆ ಸೇರುತ್ತಿದ್ದಾರೆ.ಅರಣ್ಯ ಇಲಾಖೆ ಖಾಸಗಿ ಸಂಸ್ಥೆಯವರೊಂದಿಗೆ ಶಾಮೀಲಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
'ತಾಯಿಗೆ ಅನಾರೋಗ್ಯ ಉಂಟಾದಾಗ ನನ್ನ ಬೆನ್ನ ಹಿಂದೆ ನದಿ ನೀರಿನಲ್ಲೇ ಹೊತ್ತುಕೊಂಡು ಹೋಗಿದ್ದೇನೆ. ರಸ್ತೆಯಿಲ್ಲದೆ ಬೆಳೆದ ಬೆಳೆಗಳು ನಷ್ಟವೊಂದಿದೆ. ರಸ್ತೆಗಾಗಿ ಮನವಿ ಸಲ್ಲಿಸಿ ಸಾಕಾಗಿದೆ. ಅಧಿಕಾರಿಗಳು ಉಳ್ಳವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ರಸ್ತೆ ನೀಡಬೇಕೆಂದು ಆದೇಶವಾಗಿದ್ದರೂ ರಸ್ತೆ ನೀಡಲು ಕ್ರಮ ಕೈಗೊಂಡಿಲ್ಲ. ಈ ತಿಂಗಳು ರಸ್ತೆ ನೀಡದಿದ್ದರೆ ನಮ್ಮ ಕುಟುಂಬದವರು ಸಾವಿನ ದಾರಿ ಹಿಡಿಯುತ್ತೇವೆ. ಮಾನವೀಯತೆಯ ನೆಲೆಯಲ್ಲಿ ಯು.ಚೆಂಬುವಿನ ನಾಲ್ಕು ಕುಟುಂಬಗಳ ಮನೆಗೆ ದಾರಿ ಮಾಡಿಕೊಡಿ'.
ಮಹೇಶ್ ಎಂ.ಪಿ,ಯು.ಚೆಂಬು ಗ್ರಾಮಸ್ಥ
---------------------------------------------------
'ರಸ್ತೆಯಿಲ್ಲದ ಮಕ್ಕಳಿಗೆ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಮನೆ ಬೀಳುವ ಹಂತಕ್ಕೆ ತಲುಪಿದೆ. ಮನೆಗೆ ಮೂರು ಕಿ.ಲೋಮೀಟರ್ ನಡೆಯಬೇಕೆಂದು ಹೇಳಿ ಕೂಲಿಯಾಳುಗಳು ಯಾರು ಕೂಡ ಕೆಲಸಕ್ಕೆ ಬರುತ್ತಿಲ್ಲ. ಆನೆ ಭಯದಿಂದ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿ ವಯಸ್ಸಾದ ತಾಯಿ ಇದ್ದಾರೆ. ಅನಾರೋಗ್ಯ ಸಮಸ್ಯೆ ಉಂಟಾದರೆ, ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ನಾವು ಕಳೆದ ಹಲವಾರು ವರ್ಷಗಳಿಂದ ನಾವು ಇಲ್ಲಿಯೇ ಜೀವನ ನಡೆಸುತ್ತಿದ್ದೇವೆ. ಮಾನವೀಯತೆಯ ದೃಷ್ಟಿಯಿಂದ ನಮಗೆ ರಸ್ತೆ ಮಾಡಿಕೊಡಿ. ಇಲ್ಲದಿದ್ದರೆ ನಾವು ಸಾವಿನ ದಾರಿ ಹಿಡಿಯಬೇಕಾಗಿದೆ. ರಸ್ತೆಯಿಲ್ಲದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ'.
ಪಾವನಕೃಷ್ಣ ಪಿ.ಕೆ. ಯು. ಚೆಂಬು ಗ್ರಾಮ, ದಯಾಮರಣಕ್ಕೆ ಅರ್ಜಿ ಸಲ್ಲಿಸಿರುವ ವ್ಯಕ್ತಿ