2019ರ ದುಬೈ ಬಸ್ ಅಪಘಾತದಲ್ಲಿ ಗಾಯಗೊಂಡ ಭಾರತೀಯನಿಗೆ ರೂ.11 ಕೋಟಿ ಪರಿಹಾರ !
ದುಬೈ: ದುಬೈನಲ್ಲಿ 2019ರಲ್ಲಿ ನಡೆದ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ಭಾರತೀಯರೊಬ್ಬರಿಗೆ 5 ದಶಲಕ್ಷ ದಿರ್ಹಮ್ (ಸುಮಾರು 11 ಕೋಟಿ ರೂಪಾಯಿ) ಪರಿಹಾರ ನೀಡಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಈ ದುರಂತದಲ್ಲಿ 12 ಮಂದಿ ಭಾರತೀಯರು ಸೇರಿದಂತೆ 17 ಮಂದಿ ಮೃತಪಟ್ಟಿದ್ದರು.
ಒಮನ್‌ನಿಂದ ಯುಎಇಗೆ ತೆರಳುತ್ತಿದ್ದ ಬಸ್ ದುಬೈನಲ್ಲಿ ಅಪಘಾತಕ್ಕೀಡಾಗಿತ್ತು. ಇದರಲ್ಲಿ ಗಾಯಗೊಂಡ ಮೊಹ್ಮದ್ ಬೇಗ್ ಮಿರ್ಜಾ ಎಂಬ 20 ವರ್ಷ ವಯಸ್ಸಿನ ಎಂಜಿನಿಯರಿಂಗ್ ವಿದ್ಯಾರ್ಥಿ ಈ ದೊಡ್ಡ ಮೊತ್ತದ ಪರಿಹಾರ ಪಡೆದಿದ್ದಾಗಿ ಖಲೀಜ್ ಟೈಮ್ಸ್ ವರದಿ ಮಾಡಿದೆ.
ಅಪಘಾತಕ್ಕೆ ಕಾರಣನಾದ ಒಮನ್ ಮೂಲದ ಚಾಲಕನಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 34 ಲಕ್ಷ ದಿರ್ಹಮ್ ದಂಡವನ್ನು ವಿಧಿಸಲಾಗಿದೆ. ಇದನ್ನು ಸಂತ್ರಸ್ತರ ಕುಟುಂಬಗಳಿಗೆ ನೀಡುವಂತೆ ಆದೇಶಿಸಲಾಗಿದೆ.
ಮಿರ್ಜಾ ಅವರ ವಕೀಲರ ಹೇಳಿಕೆ ಪ್ರಕಾರ, ಪ್ರಾಥಮಿಕ ರಾಜಿ ನ್ಯಾಯಾಲಯವಾದ ಯುಎಇ ವಿಮಾ ಪ್ರಾಧಿಕಾರ 10 ಲಕ್ಷ ದಿರ್ಹಮ್ ಪರಿಹಾರ ಘೋಷಿಸಿತ್ತು. ಅರ್ಜಿದಾರರು ಬಳಿಕ ದುಬೈ ಕೋರ್ಟ್ ಆಫ್ ಫಸ್ಟ್ ಇನ್‌ಸ್ಟ್ಯಾನ್‌ಗೆ ದೂರು ನೀಡಿದರು. ನ್ಯಾಯಾಲಯ ಪರಿಹಾರ ಮತ್ತವನ್ನು 50 ಲಕ್ಷ ದಿರ್ಹಮ್ ಗೆ ಹೆಚ್ಚಿಸಿದೆ ಎಂದು ವರದಿ ವಿವರಿಸಿದೆ.