ಪಡಿತರ ಸಬ್ಸಿಡಿಗೆ ಕತ್ತರಿ: ಮಹಾರಾಷ್ಟ್ರದಲ್ಲೊಂದು ಪ್ರಯೋಗ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈ ದೇಶದಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನೇ ನೆಚ್ಚಿಕೊಂಡು ಕೋಟ್ಯಂತರ ಜನರು ಬದುಕು ನಡೆಸುತ್ತಿದ್ದಾರೆ. ಆಧಾರ್ ಹೊಂದಿಲ್ಲ ಎನ್ನುವ ನೆಪವೊಡ್ಡಿ ದೇಶದ ಹಲವೆಡೆ ಪಡಿತರ ಧಾನ್ಯ ವಿತರಣೆ ಸ್ಥಗಿತಗೊಳಿಸಿದ ಪರಿಣಾಮವಾಗಿ ಸಂಭವಿಸಿದ ಸಾವುನೋವುಗಳು, ಭಾರತದ ಬಡತನದ ಕರಾಳರೂಪವನ್ನು ವಿಶ್ವಕ್ಕೆ ಪರಿಚಯಿಸಿದ್ದವು. ಜಾರ್ಖಂಡ್ನಲ್ಲಿ ಡಿಜಿಟಲೀಕರಣದ ಸಂದರ್ಭದಲ್ಲಿ ಎದುರಾದ ತಾಂತ್ರಿಕ ಕಾರಣದಿಂದಲೂ ಹಲವರ ಪಡಿತರ ಚೀಟಿಗಳು ರದ್ದಾಗಿದ್ದವು. ಈ ಸಂದರ್ಭದಲ್ಲಿ ಹಲವರು ಆಹಾರವಿಲ್ಲದೆ ಹಸಿವಿನಿಂದ ಸಾವಿಗೀಡಾಗಿರುವುದು ಮಾಧ್ಯಮಗಳ ಮೂಲಕ ಬೆಳಕಿಗೆ ಬಂದವು. ಜಾರ್ಖಂಡ್ ದೂರದ ಊರಿನ ಮಾತಾಯಿತು. ಇಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಪಡಿತರ ವ್ಯವಸ್ಥೆಯ ಅಧ್ವಾನದಿಂದ ನಡೆದ ದುರಂತಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾದವು. ಉತ್ತರ ಕನ್ನಡ ಜಿಲ್ಲೆಯ ಬೇಲೆ ಹಿತ್ತಲು ಗ್ರಾಮದಲ್ಲಿ ಪಡಿತರ ಸಿಗದೇ ಇರುವ ಕಾರಣದಿಂದ 15 ದಿನಗಳಲ್ಲಿ ಮೂವರು ಮೃತಪಟ್ಟ ದಾರುಣ ಘಟನೆ 2017ರಲ್ಲಿ ಸಂಭವಿಸಿತ್ತು. ಈ ಕುಟುಂಬಕ್ಕೆ ಪಡಿತರವೇ ಆಧಾರವಾಗಿತ್ತು. ಆದರೆ ಆಧಾರ್ ಜೋಡಣೆ ಮಾಡಿಲ್ಲ ಎನ್ನುವ ಕಾರಣಕ್ಕಾಗಿ ಇವರಿಗೆ ಪಡಿತರವನ್ನು ಸ್ಥಗಿತಗೊಳಿಸಿದ್ದರು. ಪರಿಣಾಮವಾಗಿ ಪಡಿತರವಿಲ್ಲದೆ ಹಸಿವಿನಿಂದಲೇ ಸುಮಾರು ಎರಡುವಾರ ದಿನ ದೂಡಿದ್ದಾರೆ. ಬಳಿಕ ತೀವ್ರ ಅನಾರೋಗ್ಯಕ್ಕೀಡಾಗಿ ಸುಮಾರು 15 ದಿನಗಳಲ್ಲಿ ಒಬ್ಬೊಬ್ಬರಾಗಿ ಮೃತಪಟ್ಟಿದ್ದಾರೆ. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾಗುತ್ತಿರುವಂತೆಯೇ, ಸರಕಾರ ಪಡಿತರಕ್ಕೆ ಆಧಾರ್ ಕಡ್ಡಾಯವಲ್ಲ ಎಂದು ಸ್ಪಷ್ಟ ಪಡಿಸಿ, ಅಂತಹ ಕುಟುಂಬಗಳಿಗೆ ಪಡಿತರ ವ್ಯವಸ್ಥೆಯನ್ನು ಮುಂದುವರಿಸಲು ಆದೇಶ ನೀಡಿತ್ತು. ಸಬ್ಸಿಡಿ ದರದ ಪಡಿತರವನ್ನು ಈ ದೇಶ ಎಷ್ಟರಮಟ್ಟಿಗೆ ನೆಚ್ಚಿಕೊಂಡಿದೆ ಎನ್ನುವುದಕ್ಕೆ ಇವುಗಳು ಸಾಕ್ಷಿಯಾಗಿವೆ.
ಸಬ್ಸಿಡಿ ಎನ್ನುವುದು ಈ ದೇಶದ ಜನ ಸಾಮಾನ್ಯರಿಗೆ ಸರಕಾರ ನೀಡುತ್ತಿರುವ ಭಿಕ್ಷೆಯಲ್ಲ. ಅದು ಶ್ರೀಮಂತರ ನೇರ ತೆರಿಗೆಯ ದುಂದು ವೆಚ್ಚವೂ ಅಲ್ಲ. ಈ ದೇಶದ ಪ್ರತೀ ಪ್ರಜೆಯೂ ಪರೋಕ್ಷವಾದ ತೆರಿಗೆಯನ್ನು ಕಟ್ಟುತ್ತಾನೆ. ಅವನ ಮೂಲಭೂತ ಅಗತ್ಯಗಳನ್ನು ಈಡೇರಿಸುವುದು ಸರಕಾರದ ಕರ್ತವ್ಯ. ಬಡತನ, ಅಪೌಷ್ಟಿಕತೆ ಆಡಳಿತದ ವೈಫಲ್ಯವಾಗಿವೆ. ಆ ವೈಫಲ್ಯವನ್ನು ಸರಿಪಡಿಸುವ ಹೊಣೆಗಾರಿಕೆಯೂ ಸರಕಾರದ್ದು. ಎಲ್ಲರಿಗೂ ಆಹಾರ, ಆರೋಗ್ಯ, ಶಿಕ್ಷಣವನ್ನು ಒದಗಿಸುವುದು ಸರಕಾರದ ಕರ್ತವ್ಯ. ಕಡಿಮೆ ಬೆಲೆಯಲ್ಲಿ ಸಬ್ಸಿಡಿಯನ್ನು ನೀಡಿದರೆ ಜನರು ಸೋಮಾರಿಗಳಾಗುತ್ತಾರೆ ಎನ್ನುವುದು ಪ್ರತಿಗಾಮಿ ಶಕ್ತಿಗಳು ಹುಟ್ಟುಹಾಕಿರುವ ವಾದ. ಕಡಿಮೆ ದರದಲ್ಲಿ ಅಕ್ಕಿ, ಗೋಧಿ ವಿತರಿಸಿದ್ದೇ ಆದರೆ ಉಳಿಕೆ ಹಣದಿಂದ ಜನಸಾಮಾನ್ಯರಿಗೆ ದೈನಂದಿನ ಬದುಕಿಗೆ ಸಂಬಂಧಿಸಿದ ಇತರ ಅಗತ್ಯಗಳನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತದೆ. ಕೊರೋನೋತ್ತರ ದಿನಗಳಲ್ಲಿ, ದೇಶದಲ್ಲಿ ನಿರುದ್ಯೋಗ ಹೆಚ್ಚಿದೆ. ಸಹಜವಾಗಿಯೇ ಬಡತನ, ಅಪೌಷ್ಟಿಕತೆಗಳು ಇದರ ಜೊತೆ ಜೊತೆಗೇ ಮಿತಿ ಮೀರಿವೆ. ಇಂತಹ ಸಂದರ್ಭದಲ್ಲಿ ಸಬ್ಸಿಡಿ ಪಡಿತರ ಪೂರೈಕೆ ಜನಸಾಮಾನ್ಯರ ಬದುಕನ್ನು ಒಂದಿಷ್ಟು ಸಹನೀಯಗೊಳಿಸಿದೆ. ವಿಪರ್ಯಾಸವೆಂದರೆ, ಜನಸಾಮಾನ್ಯರನ್ನು ಪೊರೆಯುತ್ತಿರುವ ಈ ಸಬ್ಸಿಡಿ ಆಹಾರ ವಿತರಣೆಗೆ ಬೇರೆ ಬೇರೆ ರೂಪದಲ್ಲಿ ಕಲ್ಲು ಹಾಕುವ ಕಾರ್ಯ ಸರಕಾರ ಮಾಡುತ್ತಲೇ ಬಂದಿದೆ. ಒಂದೆಡೆ ಗೋದಾಮುಗಳಲ್ಲಿ ಸಹಸ್ರಾರು ಟನ್ ಆಹಾರ ಧಾನ್ಯ ಕೊಳೆತು ಹೋಗುತ್ತಿದ್ದರೆ, ಇನ್ನೊಂದೆಡೆ ಬಡವರಿಗೆ ಸಬ್ಸಿಡಿಯಲ್ಲಿ ನೀಡುವ ಆಹಾರ ಧಾನ್ಯಗಳನ್ನು ಹಂತಹಂತವಾಗಿ ಇಳಿಕೆ ಮಾಡುತ್ತಾ ಬರುತ್ತಿದೆ. ಸಬ್ಸಿಡಿಯನ್ನು ಇಲ್ಲವಾಗಿಸಲು ಹತ್ತು ಹಲವು ಒಳದಾರಿಗಳನ್ನು ಸರಕಾರ ಹುಡುಕುತ್ತಿದೆ.
ನಿಮಗೆ ನೆನಪಿರಬಹುದು. ಈ ದೇಶದ ಜನತೆಗೆ ಯಾವ ಸುಳಿವೂ ನೀಡದಂತೆ ಅವರ ಗ್ಯಾಸ್ ಸಿಲಿಂಡರ್ ಸಬ್ಸಿಡಿಯನ್ನು ಸರಕಾರ ಕಿತ್ತುಕೊಂಡಿತು. ದೇಶದ ಜನತೆಗೆ ಮಾಡಿದ ಮಹಾ ವಂಚನೆ ಇದು. ಆರಂಭದಲ್ಲಿ ಅನಿಲ ಸಬ್ಸಿಡಿಯನ್ನು ಪಡೆಯಲು ಆಧಾರ್ಗೆ ಜೋಡಿಸುವುದು ಕಡ್ಡಾಯ ಎನ್ನುವ ಆದೇಶ ಹೊರಡಿಸಿತು. ಆಗಿನ್ನೂ ಆಧಾರ್ ಸಾರ್ವಜನಿಕ ವಲಯದಲ್ಲಿ ಕಡ್ಡಾಯವಾಗಿರಲಿಲ್ಲ. ಸಹಸ್ರಾರು ಜನರು ಇನ್ನೂ ಆಧಾರ್ ಕಾರ್ಡ್ ಮಾಡಿಸಿರಲಿಲ್ಲ. ಆಧಾರ್ಗೆ ಜೋಡಿಸದವರ ಅನಿಲ ಸಬ್ಸಿಡಿಗೆ ಸರಕಾರ ಕತ್ತರಿ ಹಾಕಿತು. ಬಳಿಕ, ಸಬ್ಸಿಡಿ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ಹೇಳಿತು. ಒಂದೆರಡು ತಿಂಗಳು ಈ ಸಬ್ಸಿಡಿ ಹಣವನ್ನು ಹಾಕಿದಂತೆ ನಟಿಸಿತು. ಬಳಿಕ ವಿವಿಧ ತಾಂತ್ರಿಕ ಕಾರಣಗಳಿಂದ ಸಬ್ಸಿಡಿ ವಿತರಣೆಯಲ್ಲಿ ಅಡಚಣೆ ಶುರುವಾಯಿತು. ಹೀಗೆ ಹಂತಹಂತವಾಗಿ ಜನರನ್ನು ಮಾನಸಿಕವಾಗಿ ಸಿದ್ಧಗೊಳಿಸಿ, ನಿಧಾನಕ್ಕೆ ಸಬ್ಸಿಡಿಯನ್ನೇ ಇಲ್ಲವಾಗಿಸಿತು. ಇದೀಗ ಆಹಾರ ಪಡಿತರದಲ್ಲೂ ಇಂತಹದೇ ತಂತ್ರವನ್ನು ಅನುಸರಿಸಲು ಸರಕಾರ ಮುಂದಾಗಿದೆ. ಅದರ ಪ್ರಯೋಗವೊಂದು ಮಹಾರಾಷ್ಟ್ರದಲ್ಲಿ ನಡೆಯುತ್ತಿದೆ.
ರೈತರ ಆತ್ಮಹತ್ಯೆಗಾಗಿ ಮಹಾರಾಷ್ಟ್ರ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿತ್ತು. ರೈತರ ಆತ್ಮಹತ್ಯೆಗಳಿಗೆ ಕುಖ್ಯಾತವಾದ ಸುಮಾರು 14 ಜಿಲ್ಲೆಗಳನ್ನು ಸರಕಾರ ಗುರುತಿಸಿ ಆ ಪ್ರದೇಶಗಳಿಗೆ ವಿಶೇಷ ಪಡಿತರ ಧಾನ್ಯ ವಿತರಿಸುವ ವ್ಯವಸ್ಥೆಯನ್ನು ಮಾಡಿತ್ತು. ಔರಂಗಾಬಾದ್, ಜಾಲ್ನಾ, ಭೀಡ್, ನಾಂದೇಡ್, ಉಸ್ಮಾನಾಬಾದ್, ಅಮರಾವತಿ, ವಾಶಿಂ ಮೊದಲಾದ ಪ್ರದೇಶಗಳಲ್ಲಿ ಪ್ರತೀ ಕೃಷಿ ಕುಟುಂಬಗಳ ಸದಸ್ಯರಿಗೆ ಮಾಸಿಕ ಐದು ಕೆಜಿ ಧಾನ್ಯವನ್ನು ಸರಕಾರ ವಿತರಿಸುತ್ತಾ ಬಂದಿತ್ತು. ಸಬ್ಸಿಡಿ ದರದಲ್ಲಿ ಪ್ರತೀ ಕೆಜಿ ಅಕ್ಕಿಗೆ ಮೂರು ರೂಪಾಯಿ ಮತ್ತು ಗೋಧಿಗೆ ಎರಡು ರೂಪಾಯಿಯನ್ನು ಜನರು ಪಾವತಿಸುತ್ತಾ ಬರುತ್ತಿದ್ದರು. ಇದೀಗ ಸರಕಾರ ಈ ಸಬ್ಸಿಡಿಯನ್ನು ಹಿಂದೆಗೆಯಲು ಯೋಜನೆಯೊಂದನ್ನು ರೂಪಿಸಿದೆ. ನೇರವಾಗಿ ಹಿಂದೆಗೆದರೆ ಜನರು ಪ್ರತಿಭಟಿಸುತ್ತಾರೆ ಎನ್ನುವ ಕಾರಣಕ್ಕಾಗಿ, ಪ್ರತೀ ಸದಸ್ಯರ ಸಬ್ಸಿಡಿಯನ್ನು ನಗದು ರೂಪದಲ್ಲಿ ಅವರ ಬ್ಯಾಂಕ್ಗೆ ಪಾವತಿಸಲು ಹೊರಟಿದೆ. ಅದೂ, ಓರ್ವ ಸದಸ್ಯನಿಗೆ ಮಾಸಿಕ 150 ರೂಪಾಯಿಯಂತೆ. ಅಕ್ಕಿಯ ಬದಲಿಗೆ ಈ ಹಣವನ್ನು ಪಡೆದುಕೊಂಡು, ಈ ಹಣದಿಂದ ಮಾರುಕಟ್ಟೆಯ ದರದಲ್ಲಿ ಧಾನ್ಯಗಳನ್ನು ಕೊಂಡುಕೊಳ್ಳಬೇಕು.
ಮುಖ್ಯವಾಗಿ, 150 ರೂಪಾಯಿಗೆ ಐದು ಕೆಜಿ ಅಕ್ಕಿಯನ್ನು ಪಡೆಯಲು ಸಾಧ್ಯವೆ? ಎನ್ನುವುದು. ಇದರ ಜೊತೆಗೇ, ಬ್ಯಾಂಕ್ ಖಾತೆಗೆ ಈ 150 ರೂಪಾಯಿ ಸಬ್ಸಿಡಿ ಹಣ ತಾಂತ್ರಿಕ ಕಾರಣದಿಂದ ಬೀಳದೆ ಇದ್ದರೆ ಪಡಿತರವನ್ನೇ ಅವಲಂಬಿಸಿದ ಕುಟುಂಬದ ಗತಿಯೇನು? ಬ್ಯಾಂಕಿಗೆ ಸಬ್ಸಿಡಿ ವರ್ಗಾವಣೆ ಈಗಾಗಲೇ ಹತ್ತು ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ. ಅಕ್ಕಿ ದೈನಂದಿನ ಅಗತ್ಯ. ಪಡಿತರ ಅಂಗಡಿಯ ಮುಂದೆ ಕ್ಯೂ ನಿಲ್ಲುವುದಕ್ಕೂ, ಬ್ಯಾಂಕಿನ ಮುಂದೆ ಸರದಿಯಲ್ಲಿ ನಿಲ್ಲುವುದಕ್ಕೂ ವ್ಯತ್ಯಾಸವಿದೆ. ತನ್ನ 150 ರೂಪಾಯಿಯನ್ನು ಪಡೆಯಲು ಪ್ರತೀ ಸದಸ್ಯನೂ ಬ್ಯಾಂಕಿನ ಮೆಟ್ಟಿಲು ತುಳಿಯಬೇಕಾಗುತ್ತದೆ. ಬ್ಯಾಂಕ್ ಗಳು ತಮ್ಮ ಹೊಸ ಹೊಸ ನಿಯಮಗಳ ಮೂಲಕ ಗ್ರಾಹಕರನ್ನು ದೋಚುವ ಮೂಲಕ ಸುದ್ದಿಯಲ್ಲಿವೆ. ಬ್ಯಾಂಕ್ ಎನ್ನುವ ರಾವಣನ ಹೊಟ್ಟೆಗೆ 150 ರೂಪಾಯಿ ಎನ್ನುವುದು ಅರೆಕಾಸಿನ ಮಜ್ಜಿಗೆ. ಜನಸಾಮಾನ್ಯನೊಬ್ಬ ತನ್ನ ಖಾತೆಗೆ ಬಂದು ಬಿದ್ದ ಆ ಸಬ್ಸಿಡಿಯನ್ನು ಹೊರತೆಗೆದು, ಅದರಿಂದ ಅಕ್ಕಿ ಕೊಂಡು ಗಂಜಿ ಬೇಯಿಸುವುದು ಸುಲಭವಿಲ್ಲ. ಬ್ಯಾಂಕ್ಖಾತೆಗೆ ನಗದು ವರ್ಗಾವಣೆಯ ಹೆಸರಿನಲ್ಲಿ ಸತಾಯಿಸಿ, ನಿಧಾನಕ್ಕೆ ಸಬ್ಸಿಡಿಯನ್ನು ಇಲ್ಲವಾಗಿಸುವುದು ಸರಕಾರದ ಉದ್ದೇಶ. ಸರಕಾರದ ಈ ನಿರ್ಧಾರದ ವಿರುದ್ಧ ಈಗಾಗಲೇ ಜನಸಾಮಾನ್ಯರು ಬಂಡೆದಿದ್ದಾರೆ. ಇದು ಮಹಾರಾಷ್ಟ್ರಕ್ಕಷ್ಟೇ ಸೀಮಿತವಾಗಿರುವ ಸಮಸ್ಯೆಯಲ್ಲ. ಯಾಕೆಂದರೆ, ಸರಕಾರದ ಪ್ರಯೋಗ ಮಹಾರಾಷ್ಟ್ರದಲ್ಲಿ ಯಶಸ್ವಿಯಾದರೆ, ಇತರ ರಾಜ್ಯಗಳ ಪಡಿತರ ವ್ಯವಸ್ಥೆಯಲ್ಲೂ ಇದನ್ನು ಜಾರಿಗೊಳಿಸುವ ಎಲ್ಲ ಸಾಧ್ಯತೆಗಳಿವೆ. ಕೊರೋನ, ಲಾಕ್ಡೌನ್ ದಿನಗಳ ಬಳಿಕ ಮಹಾರಾಷ್ಟ್ರವೂ ಸೇರಿದಂತೆ ದೇಶದಲ್ಲಿ ಕೃಷಿ ಕ್ಷೇತ್ರದಲ್ಲಿ ಮಾತ್ರವಲ್ಲ, ಎಲ್ಲ ವಲಯಗಳಲ್ಲಿ ಆತ್ಮಹತ್ಯೆಗಳು ಹೆಚ್ಚಿವೆ. ಇಂತಹ ಸಂದರ್ಭದಲ್ಲಿ ಸಬ್ಸಿಡಿ ಪಡಿತರ ವಿತರಣೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವ ಬದಲು, ಸರಕಾರ ಅವುಗಳನ್ನು ಕಿತ್ತು ಹಾಕಲು ಯೋಜನೆ ರೂಪಿಸಿರುವುದು ಖಂಡನೀಯವಾಗಿದೆ.