ಎಡಪಂಥೀಯ ಪಕ್ಷಗಳು ಎಲ್ಲಿ ಹೋದವು?
ಕಮ್ಯುನಿಸ್ಟ್ ಪಕ್ಷಗಳು ಸ್ವಯಂ ಸೇವಾ ಸಂಸ್ಥೆಗಳಲ್ಲ.ಬರೀ ಸೇವೆಯಷ್ಟೇ ಅವುಗಳ ಗುರಿಯಲ್ಲ. ಸಮಾಜದ ಮೂಲಭೂತ ಬದಲಾವಣೆ ಮತ್ತು ಹೊಸ ಸಮಾಜದ ನಿರ್ಮಾಣ ಅವುಗಳ ಗುರಿಯಾಗಿವೆ. ಮಾವೋವಾದಿಗಳನ್ನು ಹೊರತು ಪಡಿಸಿ ದೇಶದ ಬಹುತೇಕ ಕಮ್ಯುನಿಸ್ಟ್ ಪಕ್ಷಗಳು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡಿವೆ. ಚುನಾವಣೆಗಳನ್ನು ಸಮಾಜ ಬದಲಾವಣೆಯ ಒಂದು ಅಸ್ತ್ರವನ್ನಾಗಿ ಬಳಸಿಕೊಂಡು ರಾಜ್ಯಾಧಿಕಾರ ಸ್ವಾಧೀನ ಪಡಿಸಿಕೊಳ್ಳುವುದು ಎಡಪಂಥೀಯ ಪಕ್ಷಗಳ ನೈಜ ಗುರಿಯಾಗಿದೆ. ಹಾಗಿದ್ದಾಗ ಚುನಾವಣೆ ಗಳನ್ನು ಗಂಭೀರವಾಗಿ ಪರಿಗಣಿಸದಿರುವುದು ಸರಿಯಲ್ಲ.
ಅದೊಂದು ಕಾಲವಿತ್ತು. ಲೋಕಸಭೆಯಲ್ಲಿ ಮತ್ತು ರಾಜ್ಯ ವಿಧಾನ ಸಭೆಯಲ್ಲಿ ಎಡಪಂಥೀಯ ಪಕ್ಷಗಳು, ಅದರಲ್ಲೂ ಕಮ್ಯುನಿಸ್ಟ್ ಪಕ್ಷಗಳು ಪ್ರತಿಪಕ್ಷ ಸಾಲಿನಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದವು. ಜವಾಹರಲಾಲ್ ನೆಹರೂ ಅವರು ಪ್ರಧಾನಿಯಾಗಿದ್ದಾಗ ಕೇರಳದ ಕಮ್ಯುನಿಸ್ಟ್ ನಾಯಕ ಎ.ಕೆ.ಗೋಪಾಲನ್ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದರು. ರಾಜ್ಯಸಭೆಯಲ್ಲಿ ಭೂಪೇಶ್ ಗುಪ್ತಾ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಈಗಿನ ಬಿಜೆಪಿ ಆಗಿನ ಜನಸಂಘ ಕೇವಲ ಒಬ್ಬಿಬ್ಬರು ಸಂಸದರನ್ನು ಮಾತ್ರ ಹೊಂದಿತ್ತು.
ಕರ್ನಾಟಕದ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿದೆ. ಕಾಂಗ್ರೆಸ್, ಬಿಜೆಪಿ, ಜಾತ್ಯತೀತ ಜನತಾ ದಳ ಮತ್ತು ರವಿ ಕೃಷ್ಣಾ ರೆಡ್ಡಿಯವರ ಕರ್ನಾಟಕ ರಾಷ್ಟ್ರ ಸಮಿತಿ ಹಾಗೂ ಎಸ್‌ಡಿಪಿಐಗಳು ಅಬ್ಬರದ ಚುನಾವಣಾ ಪ್ರಚಾರವನ್ನು ಆರಂಭಿಸಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತು ಗೃಹ ಸಚಿವ ಅಮಿತ್ ಶಾ ಈಗಾಗಲೇ ಒಂದೆರಡು ಸಲ ರಾಜ್ಯಕ್ಕೆ ಭೇಟಿ ನೀಡಿ ಹೋಗಿದ್ದಾರೆ. ಇನ್ನು ಅನೇಕ ಸಲ ಬರಲಿದ್ದಾರೆ. ಕಾಂಗ್ರೆಸ್ ಕೂಡ ಹಿಂದೆ ಉಳಿದಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮತ್ತು ರಾಹುಲ್ ಗಾಂಧಿಯವರು ಇಲ್ಲಿ ಬಂದು ತಮ್ಮ ಪಕ್ಷದ ಪ್ರಚಾರ ಸಭೆಗಳನ್ನು ದ್ದೇಶಿಸಿ ಮಾತಾಡಿ ಹೋಗಿದ್ದಾರೆ. ಕಾಂಗ್ರೆಸ್ ಪಕ್ಷದ ಏಕೈಕ ಮಾಸ್ ಲೀಡರ್ ಸಿದ್ದರಾಮಯ್ಯನವರು ರಾಜ್ಯದ ಮೂಲೆ ಮೂಲೆಗಳನ್ನು ಸುತ್ತುತ್ತಿದ್ದಾರೆ. ಯಡಿಯೂರಪ್ಪನವರೂ ಗರ್ಭಗುಡಿಯ ಪುರೋಹಿತರಿಂದಾದ ಇಚ್ಞ ಸಹಿಸಿಯೂ ಒಲ್ಲದ ಮನಸ್ಸಿನಿಂದ ಪ್ರವಾಸ ಮಾಡುತ್ತಿದ್ದಾರೆ. ಆದರೆ, ಈ ಅಬ್ಬರದ ಪ್ರಚಾರದಲ್ಲಿ ಎಡಪಂಥೀಯ ಪಕ್ಷಗಳು ಯಾಕೋ ಕಾಣುತ್ತಿಲ್ಲ. ಈ ಬಗ್ಗೆ ನನ್ನ ಬಿಜೆಪಿ ಶಾಸಕ ಮಿತ್ರರೊಬ್ಬರು ತಮಾಷೆ ಮಾಡಿದರು. ಹೌದಲ್ಲವೇ ಈ ರಾಷ್ಟ್ರೀಯ ಎಡಪಂಥೀಯ ಪಕ್ಷಗಳು ಎಲ್ಲಿವೆ?
ಇದು ರಾಷ್ಟ್ರದ ರಾಜಕೀಯ ಚಿತ್ರಣ. ಕರ್ನಾಟಕದಲ್ಲೂ ಕಮ್ಯುನಿಸ್ಟ್ ಪಕ್ಷಗಳು ಆಗ ಪ್ರಭಾವೀ ರಾಜಕೀಯ ಶಕ್ತಿಯಾಗಿದ್ದವು. 50, 60, 70ರ ದಶಕದಲ್ಲಿ ಅವಿಭಜಿತ ಕಮ್ಯುನಿಸ್ಟ್ ಪಕ್ಷದ 2ರಿಂದ 4 ಸದಸ್ಯರು ವಿಧಾನಸಭೆಗೆ ಚುನಾಯಿತ ರಾಗಿ ಬರುತ್ತಿದ್ದರು. 50ರ ದಶಕದಲ್ಲಿ ಕೋಲಾರದ ಕೆಜಿಎಫ್‌ನಿಂದ ಎಂ.ಸಿ. ನರಸಿಂಹನ್, ವಾಸನ್ ಚುನಾಯಿತರಾಗಿದ್ದರು. 1962 ರ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಮತಕ್ಷೇತ್ರದಿಂದ ಗಂಗಾಧರ ನಮೋಶಿ ಮತ್ತು ಮಂಗಳೂರಿನಿಂದ ಕೃಷ್ಣ ಶೆಟ್ಟಿ ಅವರು ವಿಧಾನಸಭೆಗೆ ಚುನಾಯಿತರಾಗಿ ಬಂದಿದ್ದರು.
1967ರ ವಿಧಾನಸಭಾ ಚುನಾವಣೆಯಲ್ಲಿ ಬೀದರ್ ಜಿಲ್ಲೆಯ ಹುಮನಾಬಾದ್‌ನಿಂದ ವಿ.ಎನ್.ಪಾಟೀಲರು ಮತ್ತು ಬೆಂಗಳೂರಿನ ಮಲ್ಲೇಶ್ವರ ದಿಂದ ಎಂ.ಎಸ್.ಕೃಷ್ಣನ್ ಭಾರತ ಕಮ್ಯುನಿಸ್ಟ್ ಪಕ್ಷದಿಂದ ಚುನಾಯಿತರಾಗಿ ಬಂದಿದ್ದರು.
1972 ರಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದಿಂದ ಬಿ.ವಿ.ಕಕ್ಕಿಲ್ಲಾಯರು ಬಂಟ್ವಾಳ ದಿಂದ ಮತ್ತು ಶರಣಪ್ಪ ಭೈರಿ ದಾವಣಗೆರೆಯಿಂದ ಚುನಾಯಿತರಾಗಿ ಬಂದಿದ್ದರು. 1983ರಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದಿಂದ ಎಂ.ಎಸ್. ಕೃಷ್ಣನ್, ಪಂಪಾಪತಿ, ಕೆ.ಬಿ.ಶಾಣಪ್ಪ ಮತ್ತು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದಿಂದ ಎಸ್. ಸೂರ್ಯನಾರಾಯಣ ರಾವ್ ಬೆಂಗಳೂರಿನ ವರ್ತೂರಿನಿಂದ, ಪಿ.ರಾಮಚಂದ್ರ ರಾವ್ ಮಂಗಳೂರಿನ ಉಳ್ಳಾಲದಿಂದ, ವೆಂಕಟರಾಮಯ್ಯ ನವರು ಕೋಲಾರದ ಮುಳಬಾಗಿಲಿನಿಂದ ಗೆದ್ದು ಬಂದಿದ್ದರು. 1985ರಲ್ಲಿ ಬೆಂಗಳೂರಿನ ರಾಜಾಜಿನಗರದಿಂದ ಎಂ.ಎಸ್.ಕೃಷ್ಣ ನ್, ದಾವಣಗೆರೆಯಿಂದ ಪಂಪಾಪತಿ, ಕಲಬುರಗಿಯ ಶಹಬಾದ್ ನಿಂದ ಕೆ.ಬಿ.ಶಾಣಪ್ಪ, ಸಂಡೂರಿನಿಂದ ಯು.ಭೂಪತಿ ಅವರು ಮತ್ತು ಸಿಪಿಎಂನಿಂದ ರಾಮಚಂದ್ರರಾವ್ ಮತ್ತು ಕೆಜಿಎಫ್‌ನಿಂದ ಮಣಿ ಚುನಾಯಿತರಾಗಿ ಬಂದಿದ್ದರು. ಆ ನಂತರ ಗೆದ್ದು ಬಂದ ಏಕೈಕ ಕಮ್ಯುನಿಸ್ಟ್ ಸದಸ್ಯರೆಂದರೆ ಬಾಗೇಪಲ್ಲಿಯ ಜಿ.ವಿ.ಶ್ರೀ ರಾಮರೆಡ್ಡಿ ಅವರು ಮಾತ್ರ.
ಹಿಂದಿನ 2018ರ ಚುನಾವಣೆಯಲ್ಲಿ 51,000 ಮತಗಳನ್ನು ಪಡೆದು ಅವರೂ ಪರಾಭವಗೊಂಡರು. ಹೀಗಾಗಿ ಕಳೆದ ಎರಡು ದಶಕಗಳಿಂದ ರಾಜ್ಯದ ಶಾಸನ ಸಭೆಯಲ್ಲಿ ಕಮ್ಯುನಿಸ್ಟ್ ಸದಸ್ಯರೇ ಇಲ್ಲ. ಅಂದಿನ ಕಮ್ಯುನಿಸ್ಟ್ ಸಂಸದರಾಗಿದ್ದ ಗೋಪಾಲನ್, ಶ್ರೀಪಾದ ಅಮೃತ ಡಾಂಗೆ, ಪ್ರೊಫೆಸರ್ ಹಿರೇನ್ ಮುಖರ್ಜಿ, ಭೂಪೇಶ್ ಗುಪ್ತ್ತಾ, ಜ್ಯೋತಿ ರ್ಮಯ ಬಸು,ಸಮರ ಮುಖರ್ಜಿ,ನಿರೇನ್ ಘೋಷ್, ಝಡ್.ಎ.ಅಹ್ಮದ್ ,ರೇಣು ಚಕ್ರವರ್ತಿ, ಗೀತಾ ಮುಖರ್ಜಿ ಅಂಥವರ ವಿದ್ವತ್ಪೂರ್ಣ ಭಾಷಣಗಳನ್ನು ಕೇಳುವ ಅವಕಾಶ ನನಗೆ ಸಿಕ್ಕಿತ್ತು. ಇಂದಿನ ಪೀಳಿಗೆಗೆ ಅಂಥ ಅವಕಾಶ ಸಿಕ್ಕಿಲ್ಲ. ಲೋಕಸಭೆಯಲ್ಲಿ ಐವತ್ತು ಸದಸ್ಯರನ್ನು ಅವಿಭಜಿತ ಕಮ್ಯುನಿಸ್ಟ್ ಪಕ್ಷ ಹೊಂದಿತ್ತು. ಆ ನಂತರ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದು 2004ರಲ್ಲಿ. ಎರಡೂ ಕಮ್ಯುನಿಸ್ಟ್ ಪಕ್ಷಗಳನ್ನು ಒಳಗೊಂಡ ಎಡರಂಗದ ಸದಸ್ಯ ಬಲ ಅರವತ್ತನ್ನು ದಾಟಿತ್ತು. ಈಗ ಎಲ್ಲ ಮಾಧ್ಯಮಗಳು ಅಮಿತ್ ಶಾಗೆ ಚಾಣಕ್ಯ ಅನ್ನುತ್ತವೆ. ಆಗ ಕಮ್ಯುನಿಸ್ಟ್ ನಾಯಕ ಹರಕಿಷನ್ ಸಿಂಗ್ ಸುರ್ಜಿತ್‌ರನ್ನು ದೇಶ, ವಿದೇಶದ ಮಾಧ್ಯಮಗಳು 'ಚಾಣಕ್ಯ' ಎಂದು ಕರೆಯುತ್ತಿದ್ದವು. ಸುರ್ಜಿತ್ ಬದುಕಿರುವವರೆಗೆ ಕೋಮುವಾದಿ ಶಕ್ತಿಗಳು ಬಾಲ ಬಿಚ್ಚಲು ಬಿಡಲಿಲ್ಲ. ಎಲ್ಲ ಜಾತ್ಯತೀತ ಪಕ್ಷ ಮತ್ತು ಸಂಘಟನೆಗಳನ್ನು ಒಂದೇ ವೇದಿಕೆಗೆ ತರುವ ಚಾಣಾಕ್ಷತನ ಅವರಿಗಿತ್ತು.ಕಾಂಗ್ರೆಸ್‌ನ ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ಉತ್ತರ ಪ್ರದೇಶ ಮತ್ತು ಬಿಹಾರ ಮುಖ್ಯ ಮಂತ್ರಿಗಳಾಗಿದ್ದ ಸಮಾಜವಾದಿಗಳೂ ಆದ ಮುಲಾಯಂ ಸಿಂಗ್ ಯಾದವ್, ಲಾಲು ಪ್ರಸಾದ್ ಯಾದವ್, ಅವರು ಸುರ್ಜಿತ್‌ರು ಹಾಕಿದ ಗೆರೆಯನ್ನು ದಾಟುತ್ತಿರಲಿಲ್ಲ. ನಮ್ಮ ದೇವೇಗೌಡರನ್ನು ಪ್ರಧಾನ ಮಂತಿ ಯನ್ನಾಗಿ ಮಾಡಿದವರು ಸುರ್ಜಿತ್‌ರು.
ಈ ಸಲದ ವಿಧಾನಸಭಾ ಚುನಾವಣೆಯ ಬಗ್ಗೆ ಎಡಪಂಥೀಯ ಪಕ್ಷಗಳಲ್ಲಿ ಅಷ್ಟೊಂದು ಉತ್ಸಾಹ ಕಾಣುತ್ತಿಲ್ಲ. ಭಾರತ ಕಮ್ಯುನಿಸ್ಟ್ ಪಕ್ಷ ಆರು ಮತಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ಹೇಳಿದೆ. ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ತನ್ನ ಕೋಟೆ ಬಾಗೇಪಲ್ಲಿಯನ್ನು ಗೆದ್ದು ಕೊಳ್ಳಲು ಯತ್ನಿಸುತ್ತಿದೆ. ಉಳಿದೆಡೆ ಅದರ ಸುದ್ದಿ ಇಲ್ಲ. ಸೋಶಿಯಲಿಸ್ಟ್ ಯುನಿಟಿ ಸೆಂಟರ್, ( ಕಮ್ಯುನಿಸ್ಟ್) ಎಸ್‌ಯುಸಿಐ ಪಕ್ಷ 14 ಮತಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ, ಬಾಗೇಪಲ್ಲಿಯನ್ನು ಹೊರತು ಪಡಿಸಿ ಗೆದ್ದು ಬರುವ ಭರವಸೆಯನ್ನು ಯಾವ ಕ್ಷೇತ್ರದ ಬಗೆಗೂ ಹೊಂದಿಲ್ಲ. ಸಿಪಿಐ ಮಾರ್ಕ್ಸ್‌ವಾದಿ ಮತ್ತು ಲೆನಿನ್‌ವಾದಿ (ಲಿಬರೇಶನ್) ಬೆಂಗಳೂರಿನ ಕೃಷ್ಣರಾಜಪುರಂ ನಿಂದ ಕಾರ್ಮಿಕ ನಾಯಕ ಪಿ.ಪಿ.ಅಪ್ಪಣ್ಣ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಕನಕಗಿರಿಯಲ್ಲೂ ಅದು ಸ್ಪರ್ಧಿಸುವ ಸಂಭವವಿದೆ.ಆದರೆ ರಾಜಕೀಯ ಪರಿಸ್ಥಿತಿಯ ಮೇಲೆ ಪ್ರಭಾವವನ್ನು ಬೀರುವ ಮೊದಲಿನ ಸಾಮರ್ಥ್ಯವನ್ನು ಕಮ್ಯುನಿಸ್ಟ್ ಪಕ್ಷಗಳು ಉಳಿಸಿಕೊಂಡಿಲ್ಲ.
ಸೀಟುಗಳಿಕೆ ಹೋಗಲಿ ಎಡಪಂಥೀಯ ಪಕ್ಷಗಳ ಮತ ಗಳಿಕೆಯ ಪ್ರಮಾಣವೂ ಚುನಾವಣೆಯಿಂದ ಚುನಾವಣಗೆ ಕುಸಿಯುತ್ತಿದೆ. ಕಳೆದ 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ, ಸಿಪಿಎಂ, ಎಸ್‌ಯುಸಿಐ, ಫಾರ್ವರ್ಡ್ ಬ್ಲಾಕ್, ಸೇರಿದಂತೆ ಎಲ್ಲಾ ಎಡಪಂಥೀಯ ಪಕ್ಷಗಳು ಪಡೆದ ಮತ ಪ್ರಮಾಣ ಶೇ.0.53 ಮಾತ್ರ.
ಕಮ್ಯುನಿಸ್ಟ್ ಪಕ್ಷಗಳು ದುರ್ಬಲಗೊಳ್ಳಲು ಸ್ಥಳೀಯ ಮಾತ್ರವಲ್ಲ ಹಲವು ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಕಾರಣಗಳಿವೆ. ತೊಂಭತ್ತರ ದಶಕದಲ್ಲಿ ಕುಸಿದು ಬಿದ್ದ ಸೋವಿಯತ್ ರಶ್ಯದ ಸಮಾಜವಾದಿ ವ್ಯವಸ್ಥೆ, ಪೂರ್ವ ಯುರೋಪಿಯನ್ ಇತರ ದೇಶಗಳಲ್ಲಿನ ಕಮ್ಯುನಿಸ್ಟ್ ಸರಕಾರಗಳ ಪತನ, ಅದೇ ಸಂದರ್ಭದಲ್ಲಿ ವಕ್ಕರಿಸಿದ ಜಾಗತೀಕರಣ ಮತ್ತು ಮಾರುಕಟ್ಟೆ ಆರ್ಥಿಕತೆ ನಂತರದ ನವ ಉದಾರೀಕರಣದ ಆರ್ಥಿಕ ನೀತಿಯ ಪರಿಣಾಮ ವಾಗಿ ಕಮ್ಯುನಿಸ್ಟ್ ಪಕ್ಷಗಳ ಬೆನ್ನೆಲುಬಾಗಿದ್ದ ಕಾರ್ಮಿಕ ಚಳವಳಿ ದುರ್ಬಲ ಗೊಂಡಿತು. ಟ್ರೇಡ್ ಯುನಿಯನ್ ಚಳವಳಿಯ ಆಚೆ ಸೈದ್ಧಾಂತಿಕ ನೆಲೆಯನ್ನು ವಿಸ್ತರಿಸಲು ಕಮ್ಯುನಿಸ್ಟ್ ಪಕ್ಷಗಳೂ ಕಾರ್ಯತಂತ್ರ ರೂಪಿಸಲಿಲ್ಲ. ವಿಶೇಷವಾಗಿ ಹೊಸ ಪೀಳಿಗೆಯ ಯುವಕರ ಮನಸ್ಸನ್ನು ಗೆಲ್ಲಲು ಎಡಪಂಥೀಯ ಪಕ್ಷಗಳಿಂದ ಸಾಧ್ಯವಾಗಲಿಲ್ಲ.
ಬದಲಾದ ಸನ್ನಿವೇಶದಲ್ಲಿ ಹೊಸ ಕಾರ್ಯಕ್ರಮ ಮತ್ತು ಹೋರಾಟದ ತಂತ್ರವನ್ನು ರೂಪಿಸಲು ಕಮ್ಯುನಿಸ್ಟ್ ಪಕ್ಷಗಳಿಂದ ಸಾಧ್ಯವಾಗಲಿಲ್ಲ. ಕಮ್ಯುನಿಸ್ಟ್ ಪಕ್ಷಗಳ ಪ್ರತಿಭಟನೆಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಅಂಗನವಾಡಿ, ಬಿಸಿಯೂಟ, ಕಟ್ಟಡ ಕಾರ್ಮಿಕರು, ಬ್ಯಾಂಕ್, ಜೀವವಿಮೆ ನೌಕರರು ಬರುತ್ತಾರಾದರೂ ಆರ್ಥಿಕ ಬೇಡಿಕೆಗಳ ಆಚೆ ರಾಜಕೀಯವಾಗಿ, ಸೈದ್ಧಾಂತಿಕ, ಮಾನಸಿಕ ವಾಗಿ ಕಮ್ಯುನಿಸ್ಟ್ ಪಕ್ಷಗಳ ಜೊತೆ ಬರಲೊಪ್ಪದ ಬಹುತೇಕ ಕಾರ್ಮಿಕರು ಚುನಾವಣೆಯಲ್ಲಿ ಜಾತಿ, ಮತಗಳ ವ್ಯಾಮೋಹಕ್ಕೆ ಒಳಗಾಗಿ ಬಹುತೇಕ ಬಿಜೆಪಿ ಪ್ರಚಾರಕರಾಗುತ್ತಾರೆ.ಅವರನ್ನು ರಾಜಕೀಯವಾಗಿ ಸೆಳೆದುಕೊಳ್ಳುವಲ್ಲಿ ಎಡಪಂಥೀಯ ನಾಯಕರು ಯಶಸ್ವಿಯಾಗಿಲ್ಲ. ಈಗ ವರ್ಗ ರಾಜಕೀಯ ಮಾಯವಾಗಿ ಜಾತಿ, ಮತಗಳ ಐಡಂಟಿಟಿ ರಾಜಕೀಯ ವಿಜ್ರಂಭಿಸುತ್ತಿದೆ. ಹೀಗಾಗಿ ದುಡಿಯುವ ವರ್ಗದ ರಾಜಕೀಯ ಈಗ ಸುಲಭವಲ್ಲ.
ಭಾರತದ ಪ್ರಭುತ್ವ ಈಗ ಫ್ಯಾಶಿಸ್ಟ್ ಶಕ್ತಿಗಳ ವಶಕ್ಕೆ ಹೋಗಿದೆ. ಭಿನ್ನಮತವನ್ನು ನಿರ್ದಯವಾಗಿ ಹತ್ತಿಕ್ಕಲಾಗುತ್ತಿದೆ. ಕಾರ್ಪೊರೇಟ್ ಬಂಡವಾಳಶಾಹಿಯ ಜೊತೆಗೆ ಸಂಘಪರಿವಾರದ ಕೋಮುವಾದಿ ಶಕ್ತಿಗಳು ಹೊಂದಾಣಿಕೆ ಮಾಡಿಕೊಂಡು ಮನುವಾದಿ ಹಿಂದೂ ರಾಷ್ಟ್ರವನ್ನು ನಿರ್ಮಿಸುವ ಷಡ್ಯಂತ್ರ ರೂಪಿಸಿವೆ. ತಮ್ಮ ಗುರಿ ಸಾಧನೆಗೆ ಅಡ್ಡಿಯಾಗಿರುವ ಬಾಬಾಸಾಹೇಬರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನವನ್ನು ನಿಷ್ಕ್ರಿಯಗೊಳಿಸಲು ಮಸಲತ್ತು ನಡೆಸಿವೆ.ಸಿಬಿಐ, ಐಟಿ, ರಾಷ್ಟ್ರೀಯ ತನಿಖಾ ಸಂಸ್ಥೆ ಮುಂತಾದ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿಪಕ್ಷಗಳನ್ನು ಮತ್ತು ಪ್ರತಿರೋಧವನ್ನು ಸಂಪೂರ್ಣವಾಗಿ ಹೊಸಕಿ ಹಾಕಲು ಮುಂದಾಗಿವೆ. ಇಂಥ ಸನ್ನಿವೇಶದಲ್ಲಿ ಎಡಪಂಥೀಯ ಪಕ್ಷಗಳು ಅದರಲ್ಲೂ ವಿಶೇಷವಾಗಿ ಕಮ್ಯುನಿಸ್ಟ್ ಪಕ್ಷಗಳು ಫ್ಯಾಶಿಸಂ ಬಗ್ಗೆ ಸ್ಪಷ್ಟ, ನಿರ್ದಿಷ್ಟವಾದ ಕಾರ್ಯತಂತ್ರ ರೂಪಿಸಬೇಕಾಗಿದೆ.
ನಮ್ಮ ನೈಜ ಶತ್ರು ಯಾರೆಂದು ಗುರುತಿಸಿ ಹೋರಾಟವನ್ನು ಹೊಸ ದಿಕ್ಕಿನತ್ತ ಸಾಗಿಸಬೇಕಾಗಿದೆ.ಆದರೆ ಫ್ಯಾಶಿಸ್ಟ್ ವಿರೋಧಿ ಹೋರಾಟದ ಬಗ್ಗೆ ಸಿಪಿಐ ಹೊರತು ಪಡಿಸಿ ಉಳಿದ ಎಡಪಂಥೀಯ ಪಕ್ಷಗಳಲ್ಲಿ ಸ್ಪಷ್ಟತೆ ಕಂಡು ಬರುತ್ತಿಲ್ಲ.ಇಂದಿಗೂ ಕಾಂಗ್ರೆಸ್-ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂಬ ಹಳೆಯ ವಾದವನ್ನೇ ಕೆಲವು ಎಡಪಂಥೀಯ ಪಕ್ಷಗಳು ಮುಂದಿಡುತ್ತಿವೆ. ಇದು ಅತ್ಯಂತ ಅಪಾಯಕಾರಿ. ಆರ್ಥಿಕ ನೀತಿಯಲ್ಲಿ ಎರಡೂ ಒಂದೇ ಆಗಿದ್ದರೂ ಕೋಮು ಆಧಾರದಲ್ಲಿ ಜನರನ್ನು ಒಡೆಯುವ, ಮತ ಕೇಳುವ ಪಕ್ಷ ಅತ್ಯಂತ ಅಪಾಯಕಾರಿ. ಕೆಲವು ಎಡಪಂಥೀಯ ಪಕ್ಷಗಳು ಕಾಂಗ್ರೆಸ್-ಬಿಜೆಪಿ ಒಂದೇ ಎಂದು ಹೇಳುತ್ತವೆ. ಆದರೆ ಕಾಂಗ್ರೆಸ್ ವಿರುದ್ಧ ಪ್ರತಿಭಟನೆಗೆ ತೋರಿಸುವ ಆಸಕ್ತಿಯನ್ನು ಬಿಜೆಪಿ ವಿರುದ್ಧ ತೋರಿಸುವುದಿಲ್ಲ. ಇದಕ್ಕೆ ನನಗೆ ಅನಿಸಿದಂತೆ ಪ್ರಮುಖ ಕಾರಣ, ಎಡಪಂಥೀಯ ಪಕ್ಷಗಳ ಸಾಮೂಹಿಕ ಸಂಘಟನೆಗಳ ಬಹುತೇಕ ಸದಸ್ಯರ ನಿಲುವು, ಅದು ಪ್ರತಿಭಟನೆಯ ಸ್ವರೂಪದಲ್ಲಿ ವ್ಯಕ್ತವಾಗುತ್ತದೆ. ಸಾಮೂಹಿಕ ಸಂಘಟನೆಗಳನ್ನು ನಿಯಂತ್ರಿಸುವ ಸ್ಥಿತಿಯಲ್ಲಿ ಕಮ್ಯುನಿಸ್ಟ್ ಪಕ್ಷಗಳು ಇದ್ದಂತಿಲ್ಲ.ಆದರೂ ಕೋಮುವಾದಿ ಶಕ್ತಿಗಳ ಜೊತೆ ಕಮ್ಯುನಿಸ್ಟ್ ಪಕ್ಷಗಳು ಉಳಿದ ಪಕ್ಷಗಳಂತೆ ರಾಜಿ ಮಾಡಿಕೊಂಡಿಲ್ಲ ಎಂಬುದು ಅವುಗಳ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ.
ಅದೇನೇ ಇರಲಿ ಶಾಸನ ಸಭೆಗಳಲ್ಲಿ ಎಡಪಂಥೀಯ ಸದಸ್ಯರು ಇಲ್ಲದಿರುವುದು ನಮ್ಮ ಜನತಂತ್ರದ ಬಹುದೊಡ್ಡ ಕೊರತೆ.ಜನಸಾಮಾನ್ಯರ, ನೊಂದವರ,ಶ್ರಮಜೀವಿಗಳ, ದಮನಿತ ಸಮುದಾಯಗಳ ಧ್ವನಿಯಾಗಿ ಒಬ್ಬಿಬ್ಬರಾದರೂ ಶಾಸಕರು ಇರಬೇಕು. ನಾನು ಬಿ.ವಿ.ಕಕ್ಕಿಲ್ಲಾಯರು, ಎಂ.ಎಸ್.ಕೃಷ್ಣನ್‌ರಿಂದ ಹಿಡಿದು ಜಿ.ವಿ.ಶ್ರೀ ರಾಮರೆಡ್ಡಿ ಅವರವರೆಗೆ ಪ್ರಮುಖ ಕಮ್ಯುನಿಸ್ಟ್ ಶಾಸಕರ ಭಾಷಣಗಳನ್ನು ಸದನದಲ್ಲಿ ಕೇಳಿದ್ದೇನೆ. ಅದೇ ರೀತಿ ಶಾಂತವೇರಿ ಗೋಪಾಲಗೌಡರು, ಪಟೇಲರು,ಬಂಗಾರಪ್ಪ, ಸಿದ್ದರಾಮಯ್ಯನವರು, ರಮೇಶ್ ಕುಮಾರ್ ಮುಂತಾದವರು ಸದನದ ಕಲಾಪದಲ್ಲಿ ಪಾಲ್ಗೊಂಡು ಮಾತಾಡಿದ್ದನ್ನು ಕೇಳಿದ್ದೇನೆ. ಎಡಪಂಥೀಯ ಸದಸ್ಯರು ಇಲ್ಲದಿದ್ದರ ಅನ್ಯಾಯಕ್ಕೆ ಒಳಗಾದವರ ಪರವಾಗಿ ಮಾತಾಡುವವರೇ ಇರುವುದಿಲ್ಲ. ಇನ್ನಾದರೂ ಈ ಕೊರತೆ ನೀಗಬೇಕಾಗಿದೆ.
ಚುನಾವಣೆ ನಮಗೆ ಮುಖ್ಯವಲ್ಲ. ಹೋರಾಟ ಮುಖ್ಯ ಎಂದು ಕೆಲವು ಕಮ್ಯುನಿಸ್ಟ್ ನಾಯಕರು ಮಾತನಾಡುವುದನ್ನು ಕೇಳಿದ್ದೇನೆ. ವಾಸ್ತವವಾಗಿ ಕಮ್ಯುನಿಸ್ಟ್ ಪಕ್ಷಗಳು ಸ್ವಯಂ ಸೇವಾ ಸಂಸ್ಥೆಗಳಲ್ಲ.ಬರೀ ಸೇವೆಯಷ್ಟೇ ಅವುಗಳ ಗುರಿಯಲ್ಲ. ಸಮಾಜದ ಮೂಲಭೂತ ಬದಲಾವಣೆ ಮತ್ತು ಹೊಸ ಸಮಾಜದ ನಿರ್ಮಾಣ ಅವುಗಳ ಗುರಿಯಾಗಿವೆ. ಮಾವೋವಾದಿಗಳನ್ನು ಹೊರತು ಪಡಿಸಿ ದೇಶದ ಬಹುತೇಕ ಕಮ್ಯುನಿಸ್ಟ್ ಪಕ್ಷಗಳು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡಿವೆ. ಚುನಾವಣೆಗಳನ್ನು ಸಮಾಜ ಬದಲಾವಣೆಯ ಒಂದು ಅಸ್ತ್ರವನ್ನಾಗಿ ಬಳಸಿಕೊಂಡು ರಾಜ್ಯಾಧಿಕಾರ ಸ್ವಾಧೀನ ಪಡಿಸಿಕೊಳ್ಳು ವುದು ಎಡಪಂಥೀಯ ಪಕ್ಷಗಳ ನೈಜ ಗುರಿಯಾಗಿದೆ. ಹಾಗಿದ್ದಾಗ ಚುನಾವಣೆ ಗಳನ್ನು ಗಂಭೀರವಾಗಿ ಪರಿಗಣಿಸದಿರುವುದು ಸರಿಯಲ್ಲ.
ಟ್ರೇಡ್ ಯೂನಿಯನ್ ಕೆಲಸಗಳ ಜೊತೆಗೆ ಪ್ರಸಕ್ತ ರಾಜಕಾರಣದ ವಿದ್ಯಮಾನಗಳ ಬಗ್ಗೆ ಎಡಪಂಥೀಯ ಪಕ್ಷಗಳು ಗಮನ ಹರಿಸಿ ಭರವಸೆ ಕಳೆದು ಕೊಂಡ ದಮನಿತ ಸಮುದಾಯಗಳ ಮತ್ತು ಭಯದಲ್ಲಿರುವ ಅಲ್ಪಸಂಖ್ಯಾತ ಸಮುದಾಯಗಳ ಮತ್ತು ಸಮಾಜದ ಎಲ್ಲ ಜನ ವಿಭಾಗಗಳ ಸಮಸ್ಯೆಗಳ ನಿವಾರಣೆಗೆ ಹೋರಾಟ ರೂಪಿಸಬೇಕಾಗಿದೆ. ಈ ಹೋರಾಟಗಳು ಬರೀ ಅಧಿಕಾರಿಗಳು ಮತ್ತು ಮಂತ್ರಿಗಳಿಗೆ ಮನವಿ ಕೊಡುವ ಹೋರಾಟಗಳಾಗದೇ ವಿಧಾನಸಭೆ ಮತ್ತು ಸಂಸತ್ತನ್ನು ಪ್ರವೇಶಿಸುವ ನಿಟ್ಟಿನತ್ತ ಸಾಗಬೇಕಾಗಿದೆ. ಕಮ್ಯುನಿಸ್ಟರನ್ನು ಬಹುತೇಕ ಜನ ರಾಜಕೀಯ ಪಕ್ಷಗಳೆಂದು ಪರಿಗಣಿಸಿಯೇ ಇಲ್ಲ. ಅವು ಬರೀ ಕಾರ್ಮಿಕರಿಗೆ ಸವಲತ್ತುಗಳನ್ನು ಕೊಡಿಸುವ ಸಂಘಟನೆ ಗಳಾಗಿ ಉಳಿದಿವೆ.ಈ ಕೊರತೆಯನ್ನು ನಿವಾರಿಸುವುದು ಸದ್ಯದ ಆದ್ಯತೆಯಾಗಬೇಕಾಗಿದೆ.
ಎಡಪಂಥೀಯರು ಇಲ್ಲವೇ ಇಲ್ಲವೆಂದಲ್ಲ, ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ಹೋರಾಟ ಸೇರಿದಂತೆ ಅನೇಕ ಹೋರಾಟಗಳ ಮುಂಚೂಣಿ ಯಲ್ಲಿ ಅವರಿದ್ದಾರೆಂಬುದು ನಿಜ. ಆದರೆ ಬೀದಿ ಹೋರಾಟಗಳಲ್ಲಿ ಮಾತ್ರವಲ್ಲ ಸದನ ಸಂಘರ್ಷಗಳಲ್ಲಿ ಅವರು ಶಾಸನ ಸಭೆಗಳಿಗೆ ಗೆದ್ದು ಬರಬೇಕೆಂಬುದು ಅನೇಕರ ಆಶಯವಾಗಿದೆ.