ಕರುನಾಡ ಅಸ್ಮಿತೆ ನಂದಿನಿ
ಕವನ
ನಂದಿನಿ ನಮ್ಮ ನಂದಿನಿ
ಕರುನಾಡ ಅಸ್ಮಿತೆ ನಂದಿನಿ.
ಬಡರೈತರ ಬಾಳಿನ
ಮನೆ ಮನೆ ದೀವಿಗೆ ನಂದಿನಿ
ಕನ್ನಡ ಬದುಕಿನ
ಜಗಂಜ್ಯೋತಿ ನಮ್ಮ ನಂದಿನಿ
ನಂದಿನಿಯಿಂದ
ಮನೆ ಮಂದಿಗಳ ಹಸಿವು ನೀಗಿತು
ನಂದಿನಿಯಿಂದ
ಹೊಲ ಗದ್ದೆಗಳಿಗೆ ಗೊಬ್ಬರ ಬಂದಿತು.
ನಂದಿನಿಯಿಂದ
ನೆಲದ ಜೈವಿಕತೆ ಸಮೃದ್ಧವಾಯಿತು
ನಂದಿನಿಯಿಂದ
ಕ್ಷೀರಭಾಗ್ಯವು ಶಾಲೆಗೆ ಬಂದಿತು
ನಂದಿನಿಯಿಂದ
ಬಡಮಕ್ಕಳ ಶಿಕ್ಷಣ ಸಾಧ್ಯವಾಯಿತು.
ನಂದಿನಿಯಿಂದ
ಪಾಠಶಾಲೆಗಳು ಬೆಳಗುತ ಬೆಳೆದುವು
ನಂದಿನಿಯಿಂದ
ಹೊಟ್ಟೆಗೆ ಬಟ್ಟೆಗೆ ದಾರಿಯಾಯಿತು
ನಂದಿನಿಯಿಂದ
ವಸಗೆ ಮದುವೆಗಳು ಸುಸೂತ್ರವಾದುವು
ನಂದಿನಿ ನಮ್ಮ ನಂದಿನಿ
ಕರುನಾಡ ಬದುಕಿನ ಭಾಗ್ಯ ಸಂಜೀವಿನಿ.
ನಂದಿನಿ ಕೊಲ್ಲಲು ಬರುವ ಘಡವರಿಗೆ
ಸಾರೇ ಸಾರುತ ಹೇಳುವೆವು
ಕರುನಾಡ ಸಿಟ್ಟಿಗೆ ಬಲಿಯಾಗದಿರಿ
ಬಡವರ ಹೊಟ್ಟೆಗೆ ವಿಷ ಹಾಕದಿರಿ
ನಮಗೆ ಬೇಡ ನಿಮ್ಮ ಅಮುಲ್
ನಮಗೆ ಇರಲಿ ನಮ್ಮ ನಂದಿನಿ
ಮೈಸೂರು ಬ್ಯಾಂಕು ಮುಚ್ಚಿದಿರಿ
ನಾಲ್ವಡಿ ಇತಿಹಾಸ ಅಳಿಸಿದಿರಿ
ಸಿಂಡಿಕೇಟ್ ಕಾರ್ಪೊರೇಷನ್
ವಿಜಯ ಬ್ಯಾಂಕುಗಳು
ಕಾಣಾ ಕಾಣಾ ಕಾಣೆಯಾದವು
ಕನ್ನಡನಾಡಲಿ ಕನ್ನಡ ಕಳೆದಿರಿ
ಕನ್ನಡಿಗರ ಉದ್ಯೋಗವ ಕಸಿದಿರಿ
ಕನ್ನಡ ಬದುಕಿನ ಅಸ್ಮಿತೆ ನುಂಗುವ
ನಿಮ್ಮ ಸಹಕಾರ ಬೇಡವೇ ಬೇಡ
ಬೇಡ ನಿಮ್ಮ ಬೆಣ್ಣೆ ಮಾತಿನ
ಅಮುಲ್ ಕಮಾಲು
ನಮಗಿರಲಿ ನಮ್ಮ ನಂದಿನಿ
ಚಿರ ಸಂಜೀವಿನಿ.