ಬಿಜೆಪಿ ಮೊದಲ ಪಟ್ಟಿ; ಅಸಮಾಧಾನದ ಹೊಗೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕರ್ನಾಟಕದ ವಿಧಾನಸಭೆ ಚುನಾವಣೆಯ ಅಧಿಸೂಚನೆ ಹೊರಡುತ್ತಿದ್ದಂತೆ ಮೂರು ಪ್ರಮುಖ ಪಕ್ಷಗಳು ಬಿರುಸಿನ ಕಾರ್ಯಾಚರಣೆ ಆರಂಭಿಸಿವೆ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಹೊರಬಂದಿದೆ. ಈ ಪಟ್ಟಿ ಬರುವ ಮೊದಲು ಮಾಧ್ಯಮಗಳಲ್ಲಿ ಗುಜರಾತ್ ಮಾದರಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ, ಹೊಸಬರಿಗೆ ಹೆಚ್ಚಿನ ಅವಕಾಶ ಸಿಗುತ್ತದೆ ಎಂದೆಲ್ಲ ವರದಿಗಳು ಬರುತ್ತಿದ್ದವು. ರಾಜ್ಯದ ಬಿಜೆಪಿ ನಾಯಕರಿಗೂ ದಿಲ್ಲಿಯಲ್ಲಿ ತಮ್ಮ ಪಕ್ಷದ ಒಳಗೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅಸ್ಪಷ್ಟ ಮಾಹಿತಿ ಇರುವುದು ಮೇಲ್ನೋಟಕ್ಕೆ ಗೋಚರವಾಗುತ್ತಿತ್ತು. ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವಾಗ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪಅವರನ್ನು ಹೊರಗಿಟ್ಟು ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಭೆ ನಡೆಸಿರುವ ಸುದ್ದಿ ಬಯಲಿಗೆ ಬಂದಿತ್ತು. ಅಂತೂ ಇಂತೂ ಮಂಗಳವಾರ ಪಟ್ಟಿ ಪ್ರಕಟವಾಗಿದೆ.
ಕರ್ನಾಟಕದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಾಗಲಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಾಗಲಿ ಇರಲಿಲ್ಲ. ಅಭ್ಯರ್ಥಿಗಳ ಹೆಸರನ್ನು ಸರಿಯಾಗಿ ಓದಲು ಬಾರದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮತ್ತು ಇತರ ನಾಯಕರಿದ್ದರು. ಅಂದರೆ ದಿಲ್ಲಿಯ ಮಟ್ಟದಲ್ಲಿ ಕರ್ನಾಟಕದ ಬಿಜೆಪಿ ನಾಯಕರಿಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಅಳೆದು, ಸುರಿದು ಸಿದ್ಧಪಡಿಸಿದ ಪಟ್ಟಿಯಲ್ಲಿ ಗುಜರಾತ್ ಮಾದರಿಯೂ ಇಲ್ಲ, ಬೇರೆ ಏನೂ ಇಲ್ಲ. ಅವೇ ಮುಖಗಳು, ಬಾಂಬೆ ಬಾಯ್‌ಗಳು, ಅಪರಾಧ ಪ್ರಕರಣಗಳ ಕುಖ್ಯಾತರು. ರೌಡಿ ಶೀಟರ್‌ಗಳು, ಅನ್ನಭಾಗ್ಯದ ಅಕ್ಕಿಯನ್ನು ಕದ್ದು ಮಾರಾಟ ಮಾಡುವಾಗ ಸಿಕ್ಕಿಬಿದ್ದವರು, ‘ಚಾರಿತ್ರ್ಯವಂತ’ರ ಪಕ್ಷದ ಹಿಂದಿನ ಅವತಾರವೇ ಮುಂದುವರಿದಿದೆ. ಕ್ರಿಮಿನಲ್ ಪ್ರಕರಣದಲ್ಲಿ ಗಡಿಪಾರಾಗಿದ್ದ ವ್ಯಕ್ತಿಗೂ ಟಿಕೆಟ್ ದೊರಕಿದೆ. ಇವರಿಗೆ ಟಿಕೆಟ್ ನೀಡಿದವರು ಪರಮ ಪವಿತ್ರ ‘ಸಂಘ’ದಿಂದ ಬಂದವರು.
ಬಿಜೆಪಿಯ ಮೊದಲ ಪಟ್ಟಿಯಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಲಕ್ಷ್ಮಣ ಸವದಿ, ಉಡುಪಿಯ ರಘುಪತಿ ಭಟ್, ಕಾಪುವಿನ ಲಾಲಾಜಿ ಮೆಂಡನ್, ಅಂಗಾರ ಮುಂತಾದವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಇದಕ್ಕಿಂತ ಮೊದಲು ಈಶ್ವರಪ್ಪಮತ್ತು ಜಗದೀಶ್ ಶೆಟ್ಟರ್ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಬಹಿರಂಗವಾಗಿ ಹೇಳಿಕೆಯನ್ನು ನೀಡಬೇಕೆಂದು ಬಿಜೆಪಿ ವರಿಷ್ಠರು ಒತ್ತಡ ಹೇರಿದ್ದಾರೆನ್ನಲಾಗಿದೆ. ಹೀಗಾಗಿ ಒಲ್ಲದ ಮನಸ್ಸಿನಿಂದ ಈಶ್ವರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಆದರೆ ಹುಬ್ಬಳ್ಳಿಯ ಜಗದೀಶ್ ಬಂಡಾಯದ ಬಾವುಟ ಹರಿಸಿದ್ದಾರೆ.
ಈಶ್ವರಪ್ಪಮತ್ತು ಯಡಿಯೂರಪ್ಪನವರಿಗೆ ಟಿಕೆಟ್ ನಿರಾಕರಿಸುವಾಗ ಎಪ್ಪತ್ತು ದಾಟಿದವರಿಗೆ ಟಿಕೆಟ್ ಇಲ್ಲ ಎಂದು ನೆಪ ನೀಡಲಾಯಿತು. ಆದರೆ ಎಪ್ಪತ್ತು ವರ್ಷ ದಾಟಿರುವ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ವಿ.ಸೋಮಣ್ಣ, ಶ್ರೀಮಂತ ಪಾಟೀಲ, ಹಾಲಪ್ಪಆಚಾರ್, ಜಿ.ಎಚ್. ತಿಪ್ಪಾರೆಡ್ಡಿ ಮೊದಲಾದವರಿಗೆ ಟಿಕೆಟ್ ನೀಡಲಾಗಿದೆ. ಅದರಲ್ಲೂ ಸೋಮಣ್ಣ ಅವರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ವಿರುದ್ಧ ಹಾಗೂ ಕಂದಾಯ ಮಂತ್ರಿ ಅಶೋಕ್ ಅವರಿಗೆ ಕನಕಪುರದಿಂದ ಡಿ.ಕೆ. ಶಿವಕುಮಾರ್ ಎದುರು ಸ್ಪರ್ಧಿಸುವಂತೆ ಅವರ ಒಪ್ಪಿಗೆ ಪಡೆಯದೆ ಸೂಚಿಸಿ ಪ್ರಕಟಿಸಲಾಗಿದೆ. ತಮ್ಮನ್ನು ಕೇಳದೆ ತಮ್ಮ ಹೆಸರನ್ನು ಪ್ರಕಟಿಸಲಾಗಿದೆ ಎಂದು ಅಶೋಕ್ ಪತ್ರಕರ್ತರೆದುರು ಹೇಳಿದ್ದಾರೆ. ವಿ. ಸೋಮಣ್ಣನವರು ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಬಹಿರಂಗವಾಗಿ ಹೇಳುತ್ತಿದ್ದರೂ ಅಸಮಾಧಾನದಿಂದ ಭುಸುಗುಡುತ್ತಿದ್ದಾರೆ. ಸೋಮಣ್ಣನವರು ಮುಂಚಿನಿಂದ ಸ್ಪರ್ಧಿಸುತ್ತಾ ಬಂದಿದ್ದ ಗೋವಿಂದರಾಜ ನಗರ ಮತಕ್ಷೇತ್ರದ ಬದಲಿಗೆ ವರುಣಾ ಜೊತೆಗೆ ಚಾಮರಾಜನಗರ ಮತಕ್ಷೇತ್ರದಿಂದ ಸ್ಪರ್ಧಿಸಲು ಸೂಚಿಸಲಾಗಿದೆ. ಗೋವಿಂದ ರಾಜ ನಗರಕ್ಕೆ ತಮ್ಮ ಮಗನನ್ನು ಕಣಕ್ಕಿಳಿಸಬೇಕೆಂಬ ಸೋಮಣ್ಣ ನವರ ಆಸೆಯೂ ಈಡೇರಿಲ್ಲ. ವಾಸ್ತವವಾಗಿ ವರುಣಾದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಸ್ಪರ್ಧೆ ಸಾಂಕೇತಿಕ ಎಂಬುದು ಗೊತ್ತಿರುವ ಸಂಗತಿ, ಆದರೆ ತಾವು ಗೆಲ್ಲುವ ಗೋವಿಂದರಾಜನಗರ ಕ್ಷೇತ್ರದ ಬದಲಿಗೆ ಚಾಮರಾಜನಗರದಲ್ಲಿ ಸ್ಪರ್ಧಿಸಲು ಹೇಳಿರುವುದು ಸೋಮಣ್ಣ ನವರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಜೆಪಿಯಲ್ಲಿ ವಂಶಾಡಳಿತಕ್ಕೆ ಅವಕಾಶ ಇಲ್ಲ. ಅದು ಕಾಂಗ್ರೆಸ್ ಸಂಸ್ಕೃತಿ ಎಂದು ಸಂಘ ಪರಿವಾರದ ನಾಯಕರು ಬಡಾಯಿ ಕೊಚ್ಚಿಕೊಳ್ಳುತ್ತ ಬಂದಿದ್ದರು. ಆದರೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಶಿಕಾರಿಪುರದಲ್ಲಿ ಯಡಿಯೂರಪ್ಪನವರ ಮಗ ವಿಜಯೇಂದ್ರ, ಹುಕ್ಕೇರಿಯಲ್ಲಿ ಉಮೇಶ್ ಕತ್ತಿಯವರ ಪುತ್ರ ನಿಖಿಲ್ ಕತ್ತಿ, ಚಿಕ್ಕೋಡಿಯಲ್ಲಿ ಉಮೇಶ್ ಕತ್ತಿಯವರ ಸೋದರ ರಮೇಶ್ ಕತ್ತಿ, ನಾಗಮಂಗಲದಲ್ಲಿ ಶಿವರಾಮೇಗೌಡರ ಹೆಂಡತಿ ಸುಧಾ ಶಿವರಾಮ್, ವಿಜಯನಗರದಲ್ಲಿ ಆನಂದ ಸಿಂಗ್‌ರ ಮಗ ಸಿದ್ಧಾರ್ಥ ಸಿಂಗ್ ಅವರಿಗೆ ಟಿಕೆಟ್ ನೀಡಿರುವುದು ವಂಶ ಪಾರಂಪರ್ಯ ರಾಜಕಾರಣವಲ್ಲದೆ ಮತ್ತೇನು?
ಬಿಜೆಪಿಯಲ್ಲಿ ಮೊದಲಿನಿಂದಲೂ ದುಡಿದವರನ್ನು ಕಡೆಗಣಿಸಿ ವಲಸೆ ಬಂದವರಿಗೆ ಆದ್ಯತೆಯನ್ನು ನೀಡಲಾಗಿದೆ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ. ತಮಗೆ ಟಿಕೆಟ್ ನಿರಾಕರಿಸಿರುವ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿಯವರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಹುತೇಕ ಅವರು ಅಥಣಿ ಮತಕ್ಷೇತ್ರದಿಂದ ಸ್ಪರ್ಧಿಸುವ ಸಂಭವವಿದೆ.
ಆರೆಸ್ಸೆಸ್ ವ್ಯಕ್ತಿಯ ಚಾರಿತ್ರ್ಯನಿರ್ಮಾಣ ಮಾಡುವ ಸಂಘಟನೆ ಎಂದು ಹೇಳಿಕೊಳ್ಳುತ್ತದೆ. ಆದರೆ ಅದರ ರಾಜಕೀಯ ವೇದಿಕೆಯಾದ ಬಿಜೆಪಿಯ ಚುನಾವಣಾ ಅಭ್ಯರ್ಥಿಗಳ ಪಟ್ಟಿ ನೋಡಿದರೆ ಚಾರಿತ್ರ್ಯವಂತರ ಮುಖವಾಡ ಕಳಚಿ ಬೀಳುತ್ತದೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ಬಿಜೆಪಿ ಸರಕಾರದ ಹಗರಣಗಳನ್ನು ಬಯಲಿಗೆಳೆಯುತ್ತ ಬಂದಿದ್ದ ಪ್ರಿಯಾಂಕ್ ಖರ್ಗೆಯವರು ಪ್ರತಿನಿಧಿಸುವ ಕಲಬುರಗಿ ಜಿಲ್ಲೆಯ ಚಿತ್ತಾಪುರ ಮತಕ್ಷೇತ್ರದಲ್ಲಿ ಬಿಜೆಪಿ ಕುಖ್ಯಾತ ರೌಡಿಶೀಟರ್‌ಗೆ ಟಿಕೆಟ್ ನೀಡಿದೆ. ಅನ್ನ ಭಾಗ್ಯದ ಅಕ್ಕಿಯ ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈಚೆಗೆ ಯಾದಗಿರಿ ಜಿಲ್ಲಾ ನ್ಯಾಯಾಲಯ ಈತನಿಗೆ ಶಿಕ್ಷೆ ನೀಡಿದೆ. ಕಲಬುರಗಿ ಪೊಲೀಸ್ ಆಯುಕ್ತರಾಗಿದ್ದ ಡಾ. ವೈ.ಎಸ್.ರವಿಕುಮಾರ್ ಅವರು ಆತನನ್ನು ಜಿಲ್ಲೆಯಿಂದ ಗಡಿಪಾರು ಮಾಡಿದ್ದರು. ಇದಕ್ಕೆ ಆತ ಹೈಕೋರ್ಟಿನಿಂದ ತಡೆಯಾಜ್ಞೆ ತಂದಿದ್ದಾನೆ. ಇಂತಹವನು ಬಿಜೆಪಿ ಅಭ್ಯರ್ಥಿ. ಇಂತಹ ಇನ್ನೂ ಕೆಲ ಹೆಸರುಗಳು ಬಿಜೆಪಿ ಪಟ್ಟಿಯಲ್ಲಿ ಹುಡುಕಿದರೆ ಸಿಗಬಹುದು.
ಮೇಲ್ನೋಟಕ್ಕೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೊಸಬರ, ಹಳಬರ ಮಿಶ್ರಣದಂತೆ ಕಂಡರೂ ದಶಕಗಳ ಕಾಲ ದುಡಿದ ಹಿರಿಯ ನಾಯಕರನ್ನು ಕಡೆಗಣಿಸಿರುವುದು ಸ್ಪಷ್ಟವಾಗುತ್ತದೆ. ತಮಗೆ ಗೌರವದ ಬೀಳ್ಕೊಡುಗೆಯನ್ನಾದರೂ ನೀಡಿ ಎಂಬರ್ಥದ ಮಾತುಗಳು ಜಗದೀಶ್ ಶೆಟ್ಟರ್ ಅವರಂಥ ಹಿರಿಯ ನಾಯಕರ ಬಾಯಿಯಿಂದ ಬಂದಿರುವುದು ಹೊಗೆಯಾಡುತ್ತಿರುವ ಅಸಮಾಧಾನಕ್ಕೆ ಒಂದು ಉದಾಹರಣೆಯಾಗಿದೆ.