ಪರಸ್ಪರರ ಧರ್ಮವನ್ನು ಗೌರವಿಸುತ್ತ ಬದುಕನ್ನು ನಡೆಸಬೇಕು-ಮನಮೋಹನ್ ನಾಯ್ಕ
ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮ
ಭಟ್ಕಳ: ಧರ್ಮವು ಶಾಂತಿ, ಸೌಹಾರ್ದತೆ, ಬ್ರಾತೃತ್ವ ಹಾಗೂ ಪ್ರೀತಿ, ಅನುಕಂಪವನ್ನು ಬೆಳೆಸುತ್ತದೆ. ನಾವು ಪರಸ್ಪರರ ಧರ್ಮಗಳನ್ನು ಗೌರವಿಸುತ್ತ ಗೌರವಯುತವಾದ ಬದುಕನ್ನು ನಡೆಸಬೇಕಾಗಿದೆ ಎಂದು ಉ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಮನಮೋಹನ್ ನಾಯ್ಕ ಹೇಳಿದರು.
ಅವರು ಗುರುವಾರ ಜಾಲಿ ಪ.ಪಂ. ವ್ಯಾಪ್ತಿಯ ಹುರುಳಿಸಾಲ್ ಆಹ್ಮದ್ ಸಯೀದ್ ಜಾಮಿಯಾ ಮಸೀದಿಯಲ್ಲಿ ಆಯೋಜಿಸಿದ್ದ ಮಸೀದಿ ದರ್ಶನ ಮತ್ತು ಇಫ್ತಾರ್ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸದ್ಭಾವನಾ ಮಂಚ್ ನ ಕಾರ್ಯದರ್ಶಿ ಪತ್ರಕರ್ತ ಎಂ.ಆರ್ ಮಾನ್ವಿ, ರಮಝಾನ್ ತಿಂಗಳು ಅಂತರಂಗ ಶುದ್ಧಿಯ ತಿಂಗಳಾಗಿದ್ದು 30 ದಿನಗಳ ಉಪವಾಸಾಚರಣೆಯ ಮೂಲಕ ಮನಸ್ಸಿನ ಕೊಳೆಯನ್ನು ದೂರಿಕರಿಸಿ ಆತನಲ್ಲಿ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನುಂಟು ಮಾಡುತ್ತದೆ ಎಂದರು.
ರಮಝಾನ್ ತಿಂಗಳಲ್ಲಿ ಪವಿತ್ರ ಕುರಾನ್ ಅವತೀರ್ಣಗೊಳಿಸುವುದರ ಮೂಲಕ ಸೃಷ್ಟಿಕರ್ತನು ಮನುಷ್ಯನಿಗೆ ಮಾರ್ಗದರ್ಶನ ನೀಡಿದನು. ಕುರ್‌ಆನ್ ಗ್ರಂಥವು ಜಗತ್ತಿನ ಎಲ್ಲ ಮಾನವರ ಕಲ್ಯಾಣಕ್ಕಾಗಿ ಮನುಷ್ಯ ಕುಲದ ಮಾರ್ಗದರ್ಶನಕ್ಕಾಗಿ ದೇವನ ಕಡೆಯಿಂದ ಪ್ರವಾದಿ ಮುಹಮ್ಮದ್ (ಸ)ರ ಮೇಲೆ ಅವತೀರ್ಣಗೊಳಿಸಿದ ಅಂತಿಮ ದೇವವಾಣಿಯಾಗಿದೆ ಎಂದರು. ನಾವು ಪರಸ್ಪರ ಧರ್ಮಗಳನ್ನು ಅರಿತುಕೊಳ್ಳಬೇಕು, ಧರ್ಮಗಳಲ್ಲಿನ ಸಮನಾಂಶಗಳ ಕುರಿತು ಚಿಂತಿಸಬೇಕು. ಎಲ್ಲರೂ ಏಕೋದರ ಸಹೋದರರು ಎಂಬ ನೆಲೆಯಲ್ಲಿ ಮನುಷ್ಯಕುಲಂ ತಾನೊಂದೆ ವಲಂ ಎಂಬ ಪಂಪ ವಾಣಿಯಂತೆ ಬದುಕುವುದನ್ನು ಕಲಿತುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯದ್ಯ ಝುಬೇರ್ ಎಸ್.ಎಂ. ಸಾಮಾಜ ಸೇವಕ ವಿನಯಾಕ ಗಾಂಧಿ ಮಾತನಾಡಿದರು. ಜಾಲಿ ಪ.ಪಂ. ಸದಸ್ಯರಾದ ಮಿಸ್ಬಾಉಲ್ ಹಖ್, ಇಶ್ವರ್ ಮೊಗೇರ್, ರಮೇಶ್ ಗೊಂಡಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಹ್ಮದ್ ಸಯೀದ್ ಮಸೀದಿಯ ಖತೀಬ್ ಮತ್ತು ಇಮಾಮ್ ಮೌಲಾನ ಮುಹಮ್ಮದ್ ಜಾಫರ್ ನದ್ವಿ ಧನ್ಯವಾದ ಅರ್ಪಿಸಿದರು.