ಸುಪ್ರೀಂ ಕೋರ್ಟ್ನಲ್ಲಿ ಮುಖ ಮುಚ್ಚಿಕೊಂಡ ರಾಜ್ಯ ಸರಕಾರ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಉದ್ಯೋಗ ಮತ್ತು ಶಿಕ್ಷಣದಲ್ಲಿ ಸುಮಾರು ಮೂರು ದಶಕಗಳಿಂದಲೂ ಮುಸ್ಲಿಮರಿಗೆ ನೀಡಲಾಗುತ್ತಿದ್ದ ಶೇ. 4 ಮೀಸಲಾತಿಯನ್ನು ರದ್ದು ಪಡಿಸಲು ಕರ್ನಾಟಕ ಸರಕಾರ ತೆಗೆದುಕೊಂಡಿರುವ ನಿರ್ಧಾರವು 'ತಪ್ಪು ಕಲ್ಪನೆಯ ತಳಹದಿಯಲ್ಲಿದೆ'' ಎಂದು ಸುಪ್ರೀಂಕೋರ್ಟ್ ಹೇಳಿದೆ. ಸರಕಾರದ ನಿರ್ಧಾರದಲ್ಲಿ ನ್ಯೂನತೆಗಳಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಹೇಳಿರುವ ಸುಪ್ರೀಂಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಅಷ್ಟೇ ಅಲ್ಲ, ಮುಂದಿನ ವಿಚಾರಣೆ ನಡೆಯುವವರೆಗೆ ಅಂದರೆ ಎ. 18ರವರೆಗೆ ಸರಕಾರದ ಆದೇಶದ ಆಧಾರದಲ್ಲಿ ಯಾವುದೇ ನೇಮಕಾತಿಗಳನ್ನು ನಡೆಸುವುದಿಲ್ಲ ಎಂದು ರಾಜ್ಯ ಸರಕಾರ ಸುಪ್ರೀಂಕೋರ್ಟ್ ಮುಂದೆ ನಾಚಿಕೆಯಿಂದ ಮುಖ ಮುಚ್ಚಿಕೊಂಡಿದೆ. ಸಾಮಾಜಿಕ ಅಸಮಾನತೆಯನ್ನು ಸರಿದೂಗಿಸುವ ಮೂಲಕ, ನಾಡಿನ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುವ ಮೀಸಲಾತಿಯನ್ನೇ ತನ್ನ ಒಡೆದು ಆಳುವ ರಾಜಕಾರಣಕ್ಕೆ ಬಳಸಿಕೊಳ್ಳಲು ಮುಂದಾದ ರಾಜ್ಯ ಸರಕಾರ ಸುಪ್ರೀಂಕೋರ್ಟ್ನಲ್ಲಿ ಮುಜುಗರಕ್ಕೊಳಗಾಗಿದೆ. ತನ್ನ ನಿರ್ಧಾರ ಸುಪ್ರೀಂಕೋರ್ಟ್ನಲ್ಲಿ ಮಾನ್ಯವಾಗುವುದಿಲ್ಲ ಎನ್ನುವುದು ಸುಪ್ರೀಂಕೋರ್ಟ್ನಲ್ಲಿ ಮಾನ್ಯವಾಗುವುದಿಲ್ಲ ಎನ್ನುವ ಅಂಶ ರಾಜ್ಯ ಸರಕಾರಕ್ಕೆ ಚೆನ್ನಾಗಿಯೇ ಗೊತ್ತಿತ್ತು. ಯಾಕೆಂದರೆ, ರಾಜ್ಯ ಸರಕಾರದ ಉದ್ದೇಶ ಚುನಾವಣೆಯ ಹೊತ್ತಿಗೆ ಮೀಸಲಾತಿಯ ಮೂಲಕ ಸಮಾಜದಲ್ಲಿ ಒಡಕುಂಟು ಮಾಡುವುದಾಗಿತ್ತೇ ಹೊರತು, ಮೀಸಲಾತಿಯನ್ನು ಹಂಚಿ ಸಮಾಜವನ್ನು ಉದ್ಧರಿಸುವುದು ಆಗಿರಲೇ ಇಲ್ಲ. ದ್ವೇಷ ರಾಜಕಾರಣದ ಮೂಲಕ ಜನರನ್ನು ಸಂತೃಪ್ತಿಗೊಳಿಸುವ ಪ್ರಯತ್ನವಾಗಿತ್ತು ಅದು. ಬಿಜೆಪಿ ಆಳದಲ್ಲಿ ಮೀಸಲಾತಿ ವ್ಯವಸ್ಥೆಯನ್ನೇ ವಿರೋಧಿಸುತ್ತಾ ಬಂದಿದೆ. ಆರೆಸ್ಸೆಸ್ ಇಂದಿಗೂ ಮೀಸಲಾತಿ ವಿರೋಧಿ ನಿಲುವನ್ನು ಹೊಂದಿದೆ. ಹೀಗಿರುವಾಗ ರಾಜ್ಯ ಸರಕಾರ ಹಿಂದುಳಿದ ವರ್ಗಗಳಿಗೆ, ದಲಿತರಿಗೆ ಮೀಸಲಾತಿಯನ್ನು ವಿಸ್ತರಿಸಿ ಅವರ ಉದ್ಧಾರಕ್ಕೆ ಮುಂದಾಗುತ್ತದೆ ಎಂದು ನಿರೀಕ್ಷಿಸುವುದೇ ತಪ್ಪಾಗಿ ಬಿಡುತ್ತದೆ. ಚುನಾವಣೆಯ ಸಂದರ್ಭದಲ್ಲಿ 'ಕೊಟ್ಟಂತೆ ನಟಿಸಿ' ಜನರನ್ನು ವಂಚಿಸುವ ಪ್ರಯತ್ನವನ್ನು ಸರಕಾರ ಮಾಡಿತು. ಅಂತಿಮವಾಗಿ ಮೀಸಲಾತಿಯ ಕುರಿತಂತೆ ಸಮಾಜದಲ್ಲಿ ಗೊಂದಲಗಳನ್ನು ಸೃಷ್ಟಿಸಿ, ಪರಸ್ಪರ ಹೊಡೆದಾಟಕ್ಕೆ ಹಚ್ಚುವುದು ಬಿಜೆಪಿ, ಆರೆಸ್ಸೆಸ್ನ ಗುರಿ. ಮುಸ್ಲಿಮರ ಶೇ.4 ಮೀಸಲಾತಿ ರದ್ದು ಈ ಸಂಚಿನ ಮುಂದುವರಿದ ಭಾಗ .
ಒಳಮೀಸಲಾತಿಯ ಕುರಿತಂತೆ ಸರಕಾರ ತೆಗೆದುಕೊಂಡ ತೀರ್ಮಾನವೂ ದಲಿತರ ಬೆನ್ನಿಗೆ ಹಾಕಿದ ಚೂರಿ ಎಂದು ದಲಿತ ಪರ ಚಿಂತಕರು ಈಗಾಗಲೇ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರದಿಂದ ದಲಿತರ ಬದುಕಿನಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಬದಲಿಗೆ, ದಲಿತರೊಳಗೇ ಒಡಕುಗಳು ಸೃಷ್ಟಿಯಾದವು. ಇನ್ನುಳಿದಂತೆ, ಮುಸ್ಲಿಮರ ಮೀಸಲಾತಿ ರದ್ದತಿಯಿಂದ ಯಾರಿಗೆ ಲಾಭ? ಬಡ ವರ್ಗದ ಮುಸ್ಲಿಮರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಂದಕ್ಕೆ ಸಾಗದಂತೆ ಅದಕ್ಕೆ ತಡೆ ತಂದಿದ್ದೇವೆ ಎಂದು ಒಂದು ಸರಕಾರ ಸಂಭ್ರಮದಿಂದ ಸಾರ್ವಜನಿಕವಾಗಿ ಘೋಷಣೆ ಮಾಡುವುದೇ ನಾಚಿಕೆಗೇಡು. ಶೋಷಿತ ಸಮುದಾಯದ ಶಿಕ್ಷಣ, ಉದ್ಯೋಗಕ್ಕೆ ನೆರವಾಗಿ ಈ ನಾಡನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ ಎನ್ನುವ ಬದಲು, ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ''ನೋಡಿ...ಮುಸ್ಲಿಮರ ಶಿಕ್ಷಣ, ಉದ್ಯೋಗದ ಹಕ್ಕನ್ನು ಕಿತ್ತುಕೊಂಡಿದ್ದೇವೆ'' ಎಂದು ಹೇಳಿ ಜನರಿಂದ ಮತ ಕೇಳುವ ದೈನೇಸಿ ಸ್ಥಿತಿಗೆ ಬಿಜೆಪಿ ಬಂದು ನಿಂತಿದೆ. ಅಷ್ಟೇ ಅಲ್ಲ, ''ನೋಡಿ, ಮುಸ್ಲಿಮರ ಶಿಕ್ಷಣ ಮತ್ತು ಉದ್ಯೋಗವನ್ನು ಕಿತ್ತು ನಾವು ಲಿಂಗಾಯತ ಮತ್ತು ಒಕ್ಕಲಿಗರಿಗೆ ನೀಡಿದ್ದೇವೆ'' ಎಂದು ಆ ಸಮುದಾಯದ ಮುಖಂಡರನ್ನು ಓಲೈಸಲು ನೋಡುತ್ತಿದೆ. ತಮಗೆ ಸಿಗಬೇಕಾಗಿರುವ ನ್ಯಾಯಬದ್ಧ ಹಕ್ಕನ್ನು ಲಿಂಗಾಯತರು ಮತ್ತು ಒಕ್ಕಲಿಗರು ಕೇಳುತ್ತಿದ್ದಾರೆಯೇ ಹೊರತು, ದಲಿತರು, ಮುಸ್ಲಿಮರ ತಟ್ಟೆಯಲ್ಲಿರುವ ಅನ್ನವನ್ನು ಕಿತ್ತು ನಮಗೆ ಕೊಡಿ ಎಂದು ಅವರು ಕೇಳುತ್ತಿಲ್ಲ. ಇಂದು ಆ ಎರಡೂ ಸಮುದಾಯಗಳನ್ನು ಬಿಜೆಪಿ ಮುಜುಗರಕ್ಕೆ ತಳ್ಳಿದೆ. ಇದೇ ಸಂದರ್ಭದಲ್ಲಿ ಮುಸ್ಲಿಮರು ಮತ್ತು ಆ ಎರಡು ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುವ ಪ್ರಯತ್ನವನ್ನೂ ಬಿಜೆಪಿ ಮಾಡಿತು. ಆದರೆ ಮುಸ್ಲಿಮರು, ಲಿಂಗಾಯತರು ಮತ್ತು ಒಕ್ಕಲಿಗರ ಪ್ರಬುದ್ಧತೆಯಿಂದಾಗಿ ಬಿಜೆಪಿ ನಾಯಕರ ಪ್ರಯತ್ನ ವಿಫಲವಾಯಿತು.
ಸುಪ್ರೀಂಕೋರ್ಟ್ 'ಮೀಸಲಾತಿ ರದ್ದು ತಪ್ಪು' ಎಂದರೆ ಶೇ. 4 ಮೀಸಲಾತಿಯನ್ನು ಸರಕಾರ ಮರುಸ್ಥಾಪಿಸಬೇಕಾಗುತ್ತದೆ. ಆಗ ಲಿಂಗಾಯತ, ಒಕ್ಕಲಿಗರಿಗೆ ಹಿನ್ನಡೆಯಾದಂತಾಗುತ್ತದೆ. ಮೀಸಲಾತಿ ಸಿಕ್ಕಿತೆಂದು ವಿಜಯೋತ್ಸವ ಆಚರಿಸಿದ ಸಮುದಾಯಗಳು ಮುಖಭಂಗಕ್ಕೀಡಾಗಬೇಕಾಗುತ್ತದೆ. ಇದಕ್ಕೆ ಬಿಜೆಪಿ ಸರಕಾರವೇ ನೇರ ಹೊಣೆ. ಶೇ. 4 ಮೀಸಲಾತಿಯನ್ನು ರದ್ದು ಮಾಡುವ ಮೂಲಕ ಬಿಜೆಪಿ ಮುಸ್ಲಿಮರನ್ನು ಎರಡು ರೀತಿಯಲ್ಲಿ ವಂಚಿಸಿದೆ. ಒಂದೆಡೆ, ಮುಸ್ಲಿಮರಿಗೆ ಧಾರ್ಮಿಕ ಹಕ್ಕಿನ ಆಧಾರದಲ್ಲಿ ಮೀಸಲಾತಿ ನೀಡಲಾಗುವುದಿಲ್ಲ ಎಂದು ಹೇಳುತ್ತಾ ಶೇ.4ನ್ನು ರದ್ದುಗೊಳಿಸಿತು. ಆದರೆ, ಕ್ರಿಶ್ಚಿಯನ್ನರು, ಬೌದ್ಧರು ಕೂಡ ಮೀಸಲಾತಿಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಮುಚ್ಚಿಟ್ಟಿತು. ಇಲ್ಲಿ 'ಮುಸ್ಲಿಮರು' ಎನ್ನುವ ಕಾರಣಕ್ಕಾಗಿಯೇ ಮೀಸಲಾತಿ ಯನ್ನು ರದ್ದುಗೊಳಿಸಿರುವುದು ಸ್ಪಷ್ಟವಾಗಿದೆ. ರಾಜ್ಯದಲ್ಲಿ ಮುಸ್ಲಿಮರು ಮೀಸಲಾತಿಯನ್ನು ಪಡೆದಿರುವುದು ಧಾರ್ಮಿಕ ಆಧಾರದಲ್ಲಿ ಅಲ್ಲ. 'ಮುಸ್ಲಿಮರು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ' ಎಂದು ವಿವಿಧ ಸಮಿತಿಗಳು ವರದಿ ಸಲ್ಲಿಸಿದ ಬಳಿಕ ಈ ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. ಹೀಗಿರುವಾಗ, ಏಕಾಏಕಿ ಬಿಜೆಪಿ ಸರಕಾರದ ಆಡಳಿತದಲ್ಲಿ ಮುಸ್ಲಿಮರು ಹಿಂದುಳಿದ ವರ್ಗದಿಂದ ಹೊರ ಬೀಳುವುದಕ್ಕೆ ಕಾರಣವೇನು? ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಸಾಮಾಜಿಕ, ಆರ್ಥಿಕವಾಗಿ ಮೇಲಕ್ಕೆ ಎತ್ತಲ್ಪಟ್ಟಿದ್ದಾರೆ ಎನ್ನುವ ಸರಕಾರದ ಮುಂದಿರುವ ಮಾನದಂಡ ಯಾವುದು?
ವಿಪರ್ಯಾಸವೆಂದರೆ, ಸಂವಿಧಾನಬಾಹಿರವಾಗಿ ಜಾರಿಗೆ ತಂದಿರುವ ಆರ್ಥಿಕ ಮೀಸಲಾತಿಯ ಅಡಿಗೆ ಮುಸ್ಲಿಮರನ್ನು ತರುವ ಪ್ರಯತ್ನವನ್ನು ಸರಕಾರ ಮಾಡಿದೆ. ಈ ಮೂಲಕ, ಶೋಷಿತ ಸಮುದಾಯವಾಗಿ ಗುರುತಿಸಲ್ಪಟ್ಟಿರುವ ಮುಸ್ಲಿಮರನ್ನು ಬ್ರಾಹ್ಮಣರಿಗೆ ಸರಿಸಮಾನವಾಗಿ ನಿಲ್ಲಿಸಿದೆ. ಇದನ್ನೂ ಯಾವ ಮಾನದಂಡದಲ್ಲಿ ಮಾಡಿದೆ ಎನ್ನುವುದರ ಬಗ್ಗೆ ಸರಕಾರದ ಬಳಿ ವಿವರಣೆಗಳಿಲ್ಲ. ಮೀಸಲಾತಿಯನ್ನು ರದ್ದುಗೊಳಿಸಿದಂತೆಯೇ, ಆರ್ಥಿಕ ಮೀಸಲಾತಿಗೆ ಮುಸ್ಲಿಮರನ್ನು ಸೇರಿಸಿರುವುದು ಕೂಡ ಇನ್ನೊಂದು ಪ್ರಮಾದವಾಗಿದೆ. ಇಡಬ್ಲೂಎಸ್ನಲ್ಲಿ ಮುಸ್ಲಿಮರ ಸೇರ್ಪಡೆಯೂ ಮಾನ್ಯತೆಯನ್ನು ಪಡೆಯುವುದಿಲ್ಲ. ಒಟ್ಟಿನಲ್ಲಿ ಮೀಸಲಾತಿಯ ಹೆಸರಿನಲ್ಲಿ ಸಮಾಜದಲ್ಲಿ ಗೊಂದಲಗಳನ್ನು ಸೃಷ್ಟಿಸಿ ಶೋಷಿತ ಸಮುದಾಯಗಳು ಪರಸ್ಪರ ಹೊಡೆದಾಡುವಂತೆ ಮಾಡುವುದು ಸರಕಾರದ ಅಂತಿಮ ಉದ್ದೇಶವಾಗಿತ್ತು. ಇದು ಜನರಿಗೂ ಅರ್ಥವಾಗಿದೆ. ಸರಕಾರ ತನ್ನ ನಿರ್ಧಾರಕ್ಕೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ. ಮೀಸಲಾತಿಯ ಹೆಸರಿನಲ್ಲಿ ರಾಜ್ಯ ಸರಕಾರದಿಂದ ವಂಚನೆಗೊಳಗಾಗಿರುವ ದಲಿತರು, ಲಿಂಗಾಯತರು, ಒಕ್ಕಲಿಗರು, ಮುಸ್ಲಿಮರು ಜೊತೆ ಸೇರಿ ಬಿಜೆಪಿಗೆ ಪಾಠ ಕಲಿಸಲಿದ್ದಾರೆ.