ಸಸ್ಯಗಳ ಮಾತು!
ಸಸ್ಯದ ಮಾತು ಕೇಳಿದ್ದೀರಾ? ಎಂದು ಯಾರಾದರೂ ಕೇಳಿದರೆ ನಮ್ಮ ಉತ್ತರ ಇಲ್ಲ ಎಂಬುದೇ ಆಗಿರುತ್ತದೆ. ಏಕೆಂದರೆ ಇದುವರೆಗೂ ನಾವು ಸಸ್ಯದ ಮಾತುಗಳನ್ನು ಕೇಳಿಯೇ ಇಲ್ಲ. ನಿತ್ಯವೂ ನಮ್ಮ ಜೊತೆಗಿರುವ ಅನೇಕ ಪ್ರಾಣಿಗಳ ಭಾಷೆಯೇ ನಮಗಿನ್ನೂ ಅರ್ಥವಾಗಿಲ್ಲ. ಇನ್ನು ಸಸ್ಯದ ಮಾತು ಕೇಳಿಸಿಕೊಳ್ಳುವುದು ದೂರವೇ ಉಳಿಯಿತು. ಸಸ್ಯಗಳಿಗೂ ಜೀವ ಇದೆ ಎಂಬುದನ್ನು ಜಗದೀಶ್ಚಂದ್ರ ಬೋಸ್ ಹೇಳಿದಾಗ ಅನೇಕರು ಅವರನ್ನು ಗೇಲಿ ಮಾಡಿದ್ದರು. ಇನ್ನು ಸಸ್ಯಗಳು ಮಾತನಾಡುತ್ತವೆ ಎಂದರೆ ಈಗಲೂ ಅದನ್ನು ನಂಬಲಾರದ ಜನರೇ ಹೆಚ್ಚು. ಏಕೆಂದರೆ ಇದುವರೆಗೂ ಸಸ್ಯದ ಯಾವ ಮಾತೂ ಸಹ ರೆಕಾರ್ಡ್ ಆಗಿಲ್ಲ ಮತ್ತು ಸಸ್ಯದ ಧ್ವನಿ ವೈರಲ್ ಆಗಿಲ್ಲ. ಅಕಸ್ಮಾತ್ ಆಗಿ ಯಾವುದಾದರೂ ಧ್ವನಿಯನ್ನು ನಮಗೆ ಕೇಳಿಸಿ ಇದು ಸಸ್ಯದ ಧ್ವನಿ ಎಂದರೆ ನಾವು ನಂಬಲು ಸಿದ್ಧರಿಲ್ಲ ಅಲ್ಲವೇ? ಯಾಕೆಂದರೆ ಸಸ್ಯದ ಧ್ವನಿ ಹೇಗಿರುತ್ತದೆ ಎಂದು ಇದುವರೆಗೂ ನಮಗೆ ತಿಳಿದಿಲ್ಲ. ಆದರೆ ಈಗ ಇಂತಹ ಒಂದು ಅದ್ಭುತ ಕಾರ್ಯವನ್ನು ಇಸ್ರೇಲಿನ ವಿಜ್ಞಾನಿಗಳ ಗುಂಪು ಮಾಡಿದೆ. ಇಸ್ರೇಲ್‌ನ ಟೆಲ್ ಅವೀವ್ ವಿಶ್ವವಿದ್ಯಾನಿಲಯದ ಜೀವಶಾಸ್ತ್ರ ವಿಜ್ಞಾನ ವಿಭಾಗದ ತಂಡವೊಂದು ಇಂತಹ ಕಾರ್ಯವನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿ ಸಸ್ಯದ ಧ್ವನಿಯನ್ನು ರೆಕಾರ್ಡ್ ಮಾಡಿದೆೆ. ಅಧ್ಯಯನದ ತಂಡದ ಪ್ರಕಾರ, ಪಾಪಾಸುಕಳ್ಳಿ, ಗೋಧಿ, ಜೋಳ ಮತ್ತು ದ್ರಾಕ್ಷಿ ಸೇರಿದಂತೆ ಅನೇಕ ಸಸ್ಯಗಳು ಒತ್ತಡದಲ್ಲಿ ಶಬ್ದಗಳನ್ನು ಹೊರಹಾಕುತ್ತವೆ ಎಂದು ತಿಳಿದುಬಂದಿದೆ. ಆದರೂ ತಂಡದವರು ಟೊಮೆಟೊ ಮತ್ತು ತಂಬಾಕನ್ನು ಅಧ್ಯಯನ ಮಾಡಲು ಆರಿಸಿಕೊಂಡಿದ್ದರು. ಈ ಎರಡೂ ಸಸ್ಯಗಳನ್ನು ಸೌಂಡ್ ಪ್ರೂಫ್ ಅಕೌಸ್ಟಿಕ್ ಚೇಂಬರ್ ಸೌಲಭ್ಯವುಳ್ಳ ಪ್ರಯೋಗಾಲಯದಲ್ಲಿ ಪ್ರತ್ಯೇಕವಾಗಿ ಬೆಳೆಸಿದರು. ಟೊಮೆಟೊ ಮತ್ತು ತಂಬಾಕು ಸಸ್ಯಗಳ ಧ್ವನಿಯನ್ನು ರೆಕಾರ್ಡ್ ಮಾಡಲು ಅವರು ಮೊದಲು ಮೈಕ್ರೊಫೋನ್‌ಗಳನ್ನು ಬಳಸಿದರು ಮತ್ತು ನಂತರ ಗದ್ದಲದ ಹಸಿರುಮನೆ ಸೆಟ್ಟಿಂಗ್‌ನಲ್ಲಿ ಅವುಗಳ ಧ್ವನಿಯನ್ನು ಸಂಗ್ರಹಿಸಿದರು.
ಆರೋಗ್ಯಕರ ಸಸ್ಯಗಳ ಧ್ವನಿಗಳನ್ನು ರೆಕಾರ್ಡ್ ಮಾಡಿದ ನಂತರ ಅವರು ಅದೇ ಸಸ್ಯಗಳಿಗೆ ನೀರುಹಾಕುವುದನ್ನು ನಿಲ್ಲಿಸಿದರು ಮತ್ತು ಅವುಗಳ ಕಾಂಡಗಳನ್ನು ಕತ್ತರಿಸುವ ಮೂಲಕ ಸಸ್ಯಗಳಿಗೆ ಮತ್ತಷ್ಟು ಒತ್ತಡ ನೀಡಿದರು. ಈ ಪ್ರಕ್ರಿಯೆಯು ಕೆಲವು ದಿನಗಳವರೆಗೆ ಮುಂದುವರಿಯಿತು. ನಂತರ ಅವರು ಪುನಃ ಸಸ್ಯದ ಶಬ್ದಗಳನ್ನು ರೆಕಾರ್ಡ್ ಮಾಡಿದರು. ಈ ಸಂದರ್ಭದಲ್ಲಿನ ಅದರ ಧ್ವನಿ ದಾಖಲೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಗಮನಿಸಿದರು. ಸಸ್ಯಗಳು ಆರೋಗ್ಯಕರವಾಗಿದ್ದಕ್ಕಿಂತ ಒತ್ತಡದಲ್ಲಿದ್ದಾಗ ಹೆಚ್ಚು ಶಬ್ದಗಳನ್ನು ಉಂಟು ಮಾಡಿರುವುದನ್ನು ಸಂಶೋಧನೆಗಳಿಂದ ಪತ್ತೆ ಹಚ್ಚಿದ್ದರು. ಆರೋಗ್ಯಕರ ಸಸ್ಯಗಳು, ಬಾಯಾರಿದ ಸಸ್ಯಗಳು ಮತ್ತು ಕತ್ತರಿಸಿದ ಸಸ್ಯಗಳ ಧ್ವನಿಯ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಅಲ್ಗಾರಿದಮ್‌ಗಳನ್ನು ಬಳಸಿದರು. ಇದಲ್ಲದೆ ಶಬ್ದವು ಟೊಮೆಟೊ ಸಸ್ಯದಿಂದ ಬಂದಿದೆಯೇ ಅಥವಾ ತಂಬಾಕು ಸಸ್ಯದಿಂದ ಬಂದಿದೆಯೇ ಎಂಬುದೂ ಸಹ ತಿಳಿಯಬಹುದು ಎಂದು ಹೇಳಿದ್ದಾರೆ. ಒತ್ತಡಕ್ಕೊಳಗಾದ ಸಸ್ಯಗಳು ಹೆಚ್ಚು ಧ್ವನಿಯನ್ನು ಉತ್ಪಾದಿಸುತ್ತವೆ (ಗಂಟೆಗೆ 30-50 ಕ್ಲಿಕ್‌ಗಳು ಅಥವಾ ಪಾಪ್‌ಗಳು) ಮತ್ತು ಆರೋಗ್ಯಕರ ಸಸ್ಯಗಳು ಹೆಚ್ಚಿನ ಸಮಯ ಶಾಂತವಾಗಿರುತ್ತವೆ ಎಂದು ಅವರು ಗಮನಿಸಿದರು. ವಾಸ್ತವವಾಗಿ ಕ್ರಿಯೆಯಲ್ಲಿ ಯಾವುದೇ ಒತ್ತಡದ ಅಂಶವಿಲ್ಲದಿದ್ದಾಗ ಟೊಮೆಟೊಗಳು ಬಹುತೇಕ ಮೌನವಾಗಿದ್ದವು. ಸಸ್ಯಗಳಿಗೆ ನೀರಿಲ್ಲದಿದ್ದಾಗ ಮತ್ತು ಐದು ದಿನಗಳವರೆಗೆ ಬಾಯಾರಿಕೆಯಾಗಿದ್ದಾಗ ಗರಿಷ್ಠ ಶಬ್ದವು ಉತ್ಪತ್ತಿಯಾಗುತ್ತದೆ ಎಂಬುದು ಸಂಶೋಧಕರ ಅಭಿಮತ.
ಸಸ್ಯಗಳು ಶಬ್ದಗಳನ್ನು ಉತ್ಪಾದಿಸುವ ಮೂಲಕ ಇತರ ಸಸ್ಯಗಳೊಂದಿಗೆ ಸಂವಹನ ನಡೆಸುತ್ತವೆ. ತಮಗೆ ಬಂದಿರುವ ಒತ್ತಡದ ಪರಿಸ್ಥಿತಿಯನ್ನು ಇತರ ಸಸ್ಯಗಳೊಂದಿಗೆ ಹಂಚಿಕೊಳ್ಳುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಜೊತೆಗೆ ಸಂಶೋಧಕರು ಸಸ್ಯದ ಶಬ್ದಗಳು ಕೀಟಗಳು ಮತ್ತು ಇತರ ಜೀವಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಸಹ ಅಧ್ಯಯನ ಮಾಡುತ್ತಿದ್ದಾರೆ. ಸಸ್ಯದ ಶಬ್ದಗಳ ಹಿಂದಿನ ನಿಖರವಾದ ಕಾರ್ಯವಿಧಾನವು ಅಸ್ಪಷ್ಟವಾಗಿದ್ದರೂ, ಸಸ್ಯದ ನಾಳಗಳ ವ್ಯವಸ್ಥೆಯಲ್ಲಿ ಗಾಳಿಯ ಗುಳ್ಳೆಗಳ ರಚನೆ ಮತ್ತು ಸಿಡಿಯುವಿಕೆಯಿಂದಾಗಿ ಶಬ್ದಗಳು ಉಂಟಾಗಬಹುದು ಎಂದು ಸಂಶೋಧಕರು ಸೂಚಿಸುತ್ತಾರೆ. ಇದನ್ನು ಗುಳ್ಳೆಕಟ್ಟುವಿಕೆ ಎಂದು ಕರೆಯಲಾಗುತ್ತದೆ. ಮಾನವರಿಗೆ ಸಸ್ಯಗಳ ಶಬ್ದವನ್ನು ಕೇಳಲು ಸಾಧ್ಯವಾಗದಿರಬಹುದು. ಆದರೆ ಒತ್ತಡದ ಸಸ್ಯಗಳಿಂದ ಹೊರಸೂಸುವ ಶಬ್ದಗಳು ಕೀಟಗಳು, ಇತರ ಸಸ್ತನಿಗಳು ಮತ್ತು ಇತರ ಸಸ್ಯಗಳಿಗೆ ಕೇಳಬಹುದು ಎಂದು ಟೆಲ್ ಅವೀವ್ ವಿಶ್ವವಿದ್ಯಾನಿಲಯದ ವಿಕಸನೀಯ ಜೀವಶಾಸ್ತ್ರಜ್ಞ ಮತ್ತು ಸೈದ್ಧಾಂತಿಕ ಪ್ರೊಫೆಸರ್ ಲಿಲಾಚ್ ಹದನಿ ಹೇಳುತ್ತಾರೆ. ಉದಾಹರಣೆಗೆ ಪತಂಗವು ತನ್ನ ಮೊಟ್ಟೆಗಳನ್ನು ಎಲ್ಲಿ ಇಡಬೇಕು ಅಥವಾ ಯಾವ ಸಸ್ಯಗಳನ್ನು ತಿನ್ನಬೇಕು ಎಂಬುದನ್ನು ನಿರ್ಧರಿಸಲು ಸಸ್ಯದ ಶಬ್ದವು ಸಹಾಯ ಮಾಡುತ್ತದೆ ಎಂಬುದು ಅವರ ಅನಿಸಿಕೆ.
ಸಸ್ಯಗಳ ಜೀವನಕ್ರಮದ ಕುರಿತ ಅಧ್ಯಯನ ಇದೇ ಮೊದಲೇನಲ್ಲ. ಈ ಹಿಂದೆ ಕೆಲವು ಅಧ್ಯಯನಗಳು ಸಸ್ಯಗಳಿಂದ ಹೊರಸೂಸಲ್ಪಟ್ಟ ಅಲ್ಟ್ರಾಸಾನಿಕ್ ಕಂಪನವನ್ನು ವರದಿ ಮಾಡಿದ್ದವು. ಆದರೆ ವಾಯುಗಾಮಿ ಸಸ್ಯ ಶಬ್ದಗಳನ್ನು ಸೆರೆಹಿಡಿಯಲು ಸಾಧ್ಯವಾಗಿರುವುದು ಬಹುಶಃ ಇದೇ ಮೊದಲು.
ಅವರ ಈ ಸಂಶೋಧನೆಯು ನಮ್ಮ ಸುತ್ತಲಿನ ಸಸ್ಯ ಜೀವನವನ್ನು ಅರ್ಥಮಾಡಿಕೊಳ್ಳಲು ಮತ್ತು ನಮ್ಮನ್ನು ಸಸ್ಯಗಳ ಹತ್ತಿರಕ್ಕೆ ತರುವ ಪ್ರಯತ್ನ ಮಾಡುತ್ತಿದೆ. ಆ ಮೂಲಕವಾಗಿಯಾದರೂ ಸಸ್ಯಗಳ ಕಾಳಜಿ ಮಾಡುವ ಹಾಗೂ ಅವುಗಳ ಬೆಳವಣಿಗೆಗೆ ಸಹಾಯ ಮಾಡುವ ಪ್ರಯತ್ನ ಮುಂದುವರಿಯಲಿ. ಪ್ರಸಕ್ತ ಜಾಗತಿಕ ತಾಪಮಾನ ಏರಿಕೆಯನ್ನು ತಡೆಯುವಲ್ಲಿ ಸಸ್ಯಗಳ ಪಾತ್ರ ಮಹತ್ವದ್ದು ಎಂಬ ಅರಿವು ಎಲ್ಲರಲ್ಲೂ ಬರಲಿ ಎಂಬುದೇ ಈ ಬರಹದ ಆಶಯ.