ಸಂಘದಲ್ಲಿ ಒಬ್ಬ್ಬಂಟಿ
ಆ ಉಪಾಧ್ಯಾಯಿನಿ ಜನಗಣತಿಯ ಸಲುವಾಗಿ ನಮ್ಮ ಮನೆಯ ಕದವನ್ನು ತಟ್ಟಿದಾಕೆ. ಬಂದ ಉದ್ದೇಶವನ್ನು ತಿಳಿದು ಒಳಗೆ ಬರಮಾಡಿಕೊಂಡು ಅವರಿಗೆ ಬೇಕಾದ ವಿಷಯವನ್ನು ನೀಡಲು ಉತ್ಸಾಹದಲ್ಲಿ ಮುಂದಾದೆವು. ಹೆಸರು, ವಯಸ್ಸು, ತಂದೆ, ತಾಯಿ, ಉದ್ಯೋಗಗಳಂತೆ ಜಾತಿ ಮತ್ತು ಧರ್ಮದ ಕಲಮುಗಳನ್ನು ತುಂಬಿಸುವ ಸರದಿ ಬಂದಿತು. ‘‘ನಿಮ್ಮ ಜಾತಿ ಯಾವುದು ಸರ್?’’ ಆಕೆಯ ಪ್ರಶ್ನೆ. ‘‘ನಮಗೆ ಜಾತಿ ಇಲ್ಲವಲ್ಲಮ್ಮಾ.’’ ಇದು ನನ್ನ ಉತ್ತರ. ‘‘ಇದೇನು ಸಾರ್ ಹೀಗೆ ಹೇಳ್ತೀರಿ? ಜಾತಿ ಇಲ್ಲದೆ ಹೇಗೆ ಹುಟ್ಟಿದಿರಿ?’’ ಎಂಬುದು ಆಕೆಯ ಅಚ್ಚರಿ! ಆದರೆ, ‘‘ಜಾತಿ ಇಲ್ಲದೇ ಹುಟ್ಟಿಬಿಟ್ಟಿದ್ದೇನಮ್ಮಾ ಏನು ಮಾಡೋದು?’’ ಕೊಂಚ ಹಾಸ್ಯ ಮಾಡುವ ಬಯಕೆ ನನ್ನಲ್ಲಿ. ‘‘ಅದು ಹೇಗಾಗುತ್ತೆ ಸಾರ್? ಮನುಷ್ಯ ಅಂತಂದ ಮೇಲೆ ಯಾವುದಾದರೂ ಜಾತಿ ಇರಲೇ ಬೇಕು ಸಾರ್. ನೋಡಿ, ನಿಮ್ಮ ತಂದೆಯವರ ಜಾತಿ ಯಾವುದು ಹೇಳಿ ಸಾರ್.’’ ನನ್ನ ಜಾತಿ ಸಂಶೋಧನೆಗೆ ಸಹಕರಿಸುವ ಇರಾದೆ ಆಕೆಗೆ. ‘‘ನನಗೆ ತಂದೆ ಇಲ್ಲ. ಅವರಿಗೂ ಜಾತಿ ಇರಲಿಲ್ಲವಲ್ಲಮ್ಮಾ.’’ ಎನ್ನುವ ನನ್ನ ಅಸಹಾಯಕತೆ. ‘‘ಇರಬಹುದು, ಆದರೆ ಹಾಗೆಂದರೆ ಹೇಗೆ ಸಾರ್? ಈಗ ಯಾವುದಾದರೂ ಒಂದು ಹೇಳಿ. ಕಾಲಂನಲ್ಲಿ ನಾವು ಬರೆಯಬೇಕು.’’ ಕಾಲಂನಲ್ಲಿ ತುಂಬಿಸುವ ಸಲುವಾಗಿ ಜಾತಿಯೊಂದನ್ನು ಆಯ್ಕೆ ಮಾಡುವ ಸಲಹೆ ಆಕೆಯಿಂದ. ಸುಪ್ರೀಂ ಕೋರ್ಟಿನಲ್ಲೇ ಜಾತಿಯನ್ನು ಬರೆಯದಿರುವ ಸ್ವಾತಂತ್ರ್ಯದ ಬಗ್ಗೆ ಆದೇಶವಿರುವುದನ್ನು ಆಕೆಗೆ ಕೊಂಚ ವಿವರಿಸಿ ಹೇಳಿದೆ. ‘‘ಸರಿ, ನಿಮ್ಮ ಧರ್ಮ ಹೇಳಿ ಸಾರ್. ಇದನ್ನೂ ಇಲ್ಲಾಂತ ಅಂದುಬಿಡಬೇಡಿ.’’ ಮೊದಲೇ ಆಕೆಯ ಎಚ್ಚರಿಕೆ.
‘‘ನನ್ನ ಕರ್ಮಕ್ಕೆ ಧರ್ಮವೂ ಇಲ್ಲವಲ್ಲಮ್ಮಾ. ನಾವು ಯಾವುದೇ ಧರ್ಮವನ್ನೂ ಅನುಸರಿಸೋದಿಲ್ಲವಲ್ಲಮ್ಮಾ.’’ ಮತ್ತೆ ನನ್ನ ಅಸಹಾಯಕತೆ. ‘‘ಇರಬಹುದು ಸಾರ್. ನೀವು ಯಾವುದನ್ನೇ ಅನುಸರಿಸದಿದ್ದರೂ ಸಮಾಜದಲ್ಲಿ, ಸರಕಾರದಲ್ಲಿ ನಿಮಗೇ ಎಂದು ಒಂದು ಜಾತಿ, ಧರ್ಮ ಇಟ್ಟುಕೊಳ್ಳಲೇ ಬೇಕು. ಹೋಗಲಿ ನೀವು ಯಾವ ದೇವರನ್ನು ಪೂಜೆ ಮಾಡ್ತೀರಾ ಸಾರ್?’’ ಹೇಗಾದರೂ ಧರ್ಮವನ್ನು ತಿಳಿಯುವ ಸಾಹಸ ಆಕೆಯದು. ‘‘ಯಾವ ದೇವರನ್ನೂ ಪೂಜೆ ಮಾಡೋಲ್ಲವಲ್ಲಮ್ಮಾ.’’ ಮತ್ತದೇ ನನ್ನ ಸಿದ್ಧ ಕೈಚೆಲ್ಲುವಿಕೆ. ‘‘ಈ ಪ್ರಪಂಚದಲ್ಲಿ ಬದುಕಬೇಕಂದ್ರೆ, ಯಾವುದಾದರೂ ಧರ್ಮವನ್ನು ಪಾಲಿಸಲೇ ಬೇಕಾಗುತ್ತೆ. ನಿಮ್ಮದೆಲ್ಲಾ ಹಿಂದೂ ಹೆಸರುಗಳಿವೆ. ನೀವು ಹಿಂದೂ ಅಂತ ಬರೆದುಕೊಳ್ತೀನಿ.’’ ಇದಾಕೆಯ ನಿರ್ಧಾರ.
‘‘ಬೇಡಮ್ಮಾ, ತಪ್ಪಾಗುತ್ತೆ. ನಾನು ಹಿಂದೂ ಧರ್ಮಕ್ಕೆ ಬದ್ಧನಾಗಿಲ್ಲ. ಹಾಗೆ ಬರೆಯಲೇ ಬೇಕೆಂದರೆ, ಮಾನವ ಧರ್ಮ ಅಂತ ಬರ್ಕೊಮ್ಮ. ಯಾಕೆಂದರೆ, ಮಾನವತೆಯ ವಿರುದ್ಧವಾಗಿ ನಾನು ಯಾವುದೇ ಕಾರಣಕ್ಕೂ ನಡೆದುಕೊಳ್ಳದಿರಲು ಯತ್ನಿಸುತ್ತೇನೆ.’’ ಆಕೆಯ ಧರ್ಮದ ಕಲಮನ್ನು ತುಂಬಲು ನಾನು ಸಹಕರಿಸಲು ಯತ್ನಿಸಿದೆ. ‘‘ಹೌದು ಸಾರ್, ಆದರೆ ಅದನ್ನು ಕಾಲಂನಲ್ಲಿ ಬರೆಯೋ ಹಾಗಿಲ್ಲ. ಧರ್ಮ ಅಂದರೆ, ಹಿಂದೂ, ಜೈನ, ಮುಸಲ್ಮಾನ, ಕ್ರೈಸ್ತ- ಈ ಥರದ್ದು. ಇದರಲ್ಲಿ ಯಾವುದಾಗಿದ್ದರೂ ಮಾನವ ಧರ್ಮ ಕೂಡ ಆಗಿರುತ್ತೆ. ಯಾವುದಾದರೂ ಒಂದು ಧರ್ಮ ಹೇಳಿ ಸಾರ್.’’ ಆಕೆಗೂ ಸಾಕಷ್ಟು ತಾಳ್ಮೆಯಿತ್ತು. ನನಗೂ ಅಷ್ಟೇ ಪುರುಸೊತ್ತಿತ್ತು. ‘‘ಧರ್ಮದ ಆಯ್ಕೆಯೂ ನಮ್ಮ ಸ್ವಾತಂತ್ರ್ಯ. ಆಯ್ಕೆ ಮಾಡಿಕೊಳ್ಳಲು ಇರುವ ಸ್ವಾತಂತ್ರ್ಯವೇ ನಿರಾಕರಿಸಲೂ ಇದೆ’’ ಎಂದು ಆಕೆಗೆ ಹೇಳುವಷ್ಟರಲ್ಲಿ ನನಗೆ ಸಾಕಾಗಿತ್ತು, ಆಕೆಗೆ ರೇಗಿತ್ತು. ‘‘ಹೌದು ಸಾರ್, ನೀವು ಹೇಳೋದನ್ನೆಲ್ಲಾ ಒಪ್ತೀನಿ. ಆದರೆ, ನೀವು ನಿಮ್ಮ ಪ್ರಕಾರ ಹೇಗಾದರೂ ಇರಬಹುದು. ಆದರೆ, ಸಮಾಜದ, ಸರಕಾರದ ಸಲುವಾಗಿ ನೀವು ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ನೀವು ಯಾವುದರಲ್ಲಾದರೂ ಗುರುತಿಸಿಕೊಳ್ಳಬೇಕು. ನಮಗೆ ಹೀಗೆಲ್ಲಾ ತೊಂದರೆ ಕೊಡಬಾರದು.’’ ಎಂದು ಮುಕ್ತಾಯಗೊಳಿಸುವ ತವಕ ಆಕೆಯಲ್ಲಿ ಕಾಣುತಿತ್ತು. ನನಗೆ ಪುರುಸೊತ್ತಿದ್ದರೂ, ಆಕೆಯ ತಾಳ್ಮೆ ಮೀರಿದ ಮೇಲೆ ನಾನೂ ಮುಗಿಸಲೇ ಬೇಕಾಗಿತ್ತು. ‘‘ಸರಿ, ಯಾವುದಾದರೂ ಎಸ್‌ಸಿ, ಎಸ್‌ಟಿಗೆ ಸೇರಿಕೊಳ್ತೀನಿ.’’
‘‘ಓ, ಹಂಗೆಲ್ಲಾ ನೀವು ಎಸ್‌ಸಿ, ಎಸ್‌ಟಿ ಆಗ್ಬಿಡಕ್ಕೆ ಆಗಲ್ಲ. ಸರಕಾರ ಅದಕ್ಕೆಲ್ಲಾ ಅವಕಾಶ ಕೊಡಲ್ಲ.’’ ಆಕೆಯದು ಗಂಭೀರ ಉತ್ತರ. ‘‘ಹೋಗಲಿ ಬ್ರಾಹ್ಮಣ ಜಾತಿಗೆ ಸೇರಿಕೊಳ್ಳಲೇ?’’ ಎಂದು ನಾನು ಕೇಳಿದರೆ, ‘‘ಅವರು ಸೇರಿಸಿಕೊಳ್ಳಬೇಕಲ್ಲಾ!’’ ಎಂಬುದು ಆಕೆಯ ಉತ್ತರ. ‘‘ಮತ್ತೆ?’’ ಮತ್ತೆ ಅಮಾಯಕ ಪ್ರಶ್ನೆ ನನ್ನಿಂದ! ‘‘ಕ್ರಿಶ್ಚಿಯನ್, ಮುಸ್ಲಿಮ್, ಬೌದ್ಧರಾಗಬಹುದು. ಜೈನರಾಗೋ ಬಗ್ಗೆ ನಂಗೊತ್ತಿಲ್ಲ. ನೀವು ಹಿಂದೂಗಳೇ ಆಗಿರ್ಬೇಕೂಂದ್ರೆ ಲಿಂಗಾಯತರಾಗಬಹುದು ನೋಡಿ.’’ ಆಕೆಯಿಂದೊದಗಿತು ಒಂದು ಅತ್ಯಮೂಲ್ಯವಾದ ಸಲಹೆ.
‘‘ಈಗ ಯಾವುದೂ ಆಗಲಿಲ್ಲಾಂದ್ರೆ ಏನಮ್ಮಾ ಸಮಸ್ಯೆ?’’ ನಾನು ಹತಾಶನಾಗಿ ಚೆಲ್ಲಿದಂತಹ ಕೊನೆಯ ಪ್ರಶ್ನೆ. ‘‘ಈ ಪ್ರಪಂಚದಲ್ಲಿ ಎಲ್ಲರ ಜೊತೆ ಇರಬೇಕಂದ್ರೆ ಯಾವುದಾದರೂ ಈ ಥರ ಒಂದು ಜಾತಿ, ಧರ್ಮ ಅಂತ ಗುಂಪಿನ ಜೊತೆ ಇರಬೇಕು. ನನ್ನದೇ ನಂದು ದಾರಿ ಅಂತ ಹೋಗ್ಬಿಟ್ರೆ, ನಿಮ್ಮ ಜೊತೆಗೆ ಬರುವವರು ಯಾರು? ಯಾವುದಾದರೂ ಒಂದರಲ್ಲಿ ಇದ್ದರೆ, ನಮ್ಮ ಜಾತಿ, ನಮ್ಮ ಜನ ಅಂತ ನಿಮಗೇನಾದರೂ ಹೆಚ್ಚೂ ಕಮ್ಮಿಯಾದರೆ ಬರ್ತಾರೆ. ಅದಕ್ಕೇ ಎಲ್ಲರಿದ್ದಂಗೆ ನಾವೂ ಇದ್ದು ಬಿಡಬೇಕು.’’ ಆಕೆಯ ಶುಭಂ ಸಂದೇಶ. ಅಲ್ಲಿಗೆ ನಮ್ಮ ಮಾತುಕತೆಗೆ ತೆರೆ. ಎಲ್ಲರೂ ಹೋಗುವ ದಾರಿ ವಿಶಾಲವಾಗಿದ್ದು ಅನುಕೂಲಕರವಾಗಿ ರುವ ಕಾರಣಕ್ಕೆ ಮನಸ್ಸು ಅದರಲ್ಲಿ ಒಲವು ತೋರುವುದು. ಕಷ್ಟ ಪಡಲು ಅದಕ್ಕೆ ಇಷ್ಟವಿಲ್ಲ. ಒಂಟಿಯಾಗಿಬಿಟ್ಟರೆ ನಾನು ಎಂತು ಉಳಿಯುವೆ ಎಂಬ ಸಂಘಜೀವಿ ಹೋಮೋಸೇಪಿಯನ್ನಿನ ಅಳುಕು. ಅದಕ್ಕೆ ತಾನು ಒಂಟಿ ಎಂದು ಮನಸ್ಸಿಗೆ ತಿಳಿದಿದ್ದರೂ ಸಂಕಲಿತ ಮನಸ್ಸುಗಳಲ್ಲಿ ಸೇರಿ ಹನಿ ನೀರು ಸಾಗರದಲ್ಲಿ ಸೇರಿ ಮಹಾಬಲ ಪಡೆಯುವ ಆಸೆ. ಆದರೆ ಮಾನುಷ ಮನಸ್ಸು ಯಾವ ಜಾತಿ, ಧರ್ಮ, ಸಿದ್ಧಾಂತ, ಸಂಸ್ಕೃತಿ, ದೇಶ, ಭಾಷೆ ಎಂದೆಲ್ಲಾ ಗುರುತಿಸಿಕೊಂಡರೂ ಅದರ ನೆಲೆಯಲ್ಲೇ ಒಂಟಿತನದಲ್ಲಿ ಬಿಕ್ಕುತ್ತಿರುತ್ತದೆ. ಸಂಘ ಹೊರಗಿನ ಬದುಕು ನೋಡುವುದು. ಆದರೆ ಅಂತರಾಳ ತನ್ನ ಒಂಟಿತನವನ್ನೇ ನೋಡಿಕೊಳ್ಳುತ್ತಿರುತ್ತದೆ.