ಪುಲ್ವಾಮಾ ದಾಳಿಯ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ, NSA ದೋವಲ್ ಹೊರಬೇಕು: ಮಾಜಿ ಸೇನಾ ಮುಖ್ಯಸ್ಥ
ಹೊಸದಿಲ್ಲಿ: ಫುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಸಿಆರ್ಪಿಎಫ್ ಯೋಧರ ಸಾವುಗಳ ಪ್ರಾಥಮಿಕ ಹೊಣೆಗಾರಿಕೆ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ)ರಿಂದ ಸಲಹೆ ಪಡೆಯುವ ಪ್ರಧಾನಿಯವರ ನೇತೃತ್ವದ ಸರಕಾರದ ಮೇಲಿದೆ ಎಂದು ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ (ನಿ) ಶಂಕರ ರಾಯ್ ಚೌಧುರಿ ಹೇಳಿದ್ದಾರೆ.
ರಾಯ್ ಚೌಧುರಿ ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರು ಇತ್ತೀಚಿಗೆ ಸುದ್ದಿ ಜಾಲತಾಣ ‘thewire.in’ಗೆ ನೀಡಿದ್ದ ಸಂದರ್ಶನಕ್ಕೆ ಪ್ರತಿಕ್ರಿಯಿಸುತ್ತಿದ್ದರು. 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯು ಸರಕಾರದ ಅದಕ್ಷತೆ ಮತ್ತು ನಿರ್ಲಕ್ಷ್ಯದ ಫಲಶ್ರುತಿಯಾಗಿತ್ತು ಎನ್ನುವುದನ್ನು ಮಲಿಕ್ ತನ್ನ ಸಂದರ್ಶನದಲ್ಲಿ ಬಹಿರಂಗಗೊಳಿಸಿದ್ದರು.
ಪುಲ್ವಾಮಾದಲ್ಲಿ ಸಂಭವಿಸಿದ್ದ ಸಾವುಗಳ ಪ್ರಾಥಮಿಕ ಹೊಣೆಗಾರಿಕೆ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ)ರಿಂದ ಸಲಹೆ ಪಡೆಯುವ ಪ್ರಧಾನಿಯವರ ನೇತೃತ್ವದ ಸರಕಾರದ ಮೇಲಿದೆ. ಇದೊಂದು ಹಿನ್ನಡೆಯಾಗಿತ್ತು. ಎನ್ಎಸ್ಎ ಅಜಿತ್ ದೋವಲ್ ಕೂಡ ಈ ಹೊಂಚುದಾಳಿಯ ಹಿಂದಿನ ಗುಪ್ತಚರ ವೈಫಲ್ಯದಲ್ಲಿ ತಮ್ಮ ಪಾಲನ್ನು ಹೊಂದಿದ್ದಾರೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಾಯ್ ಚೌಧುರಿ ಹೇಳಿದರು.
2,500ಕ್ಕೂ ಅಧಿಕ ಸಿಆರ್ಪಿಎಫ್ ಸಿಬ್ಬಂದಿಗಳನ್ನು ಸಾಗಿಸುತ್ತಿದ್ದ 78 ವಾಹನಗಳ ಸಾಲನ್ನು ಪಾಕಿಸ್ತಾನದ ಗಡಿಗೆ ಅಷ್ಟೊಂದು ಹತ್ತಿರದಲ್ಲಿರುವ ಹೆದ್ದಾರಿಯ ಮೂಲಕ ಒಯ್ಯಬಾರದಿತ್ತು ಎಂದರು.
ಸಿಬ್ಬಂದಿಗಳನ್ನು ಜಮ್ಮುವಿನಿಂದ ಶ್ರೀನಗರಕ್ಕೆ ವಾಯುಮಾರ್ಗದ ಮೂಲಕ ಸಾಗಿಸಲು ಬಯಸಿದ್ದ ಸಿಆರ್ಪಿಎಫ್ ಅದಕ್ಕಾಗಿ ರಾಜನಾಥ ಸಿಂಗ್ ನೇತೃತ್ವದ ಕೇಂದ್ರ ಗೃಹ ಸಚಿವಾಲಯವನ್ನು ಕೋರಿತ್ತು. ಆದರೆ ಸಚಿವಾಲಯವು ಅದಕ್ಕೆ ವಿಮಾನವನ್ನು ಒದಗಿಸಿರಲಿಲ್ಲ,ಸಿಆರ್ಪಿಎಫ್ ನ ಕೋರಿಕೆಯನ್ನು ಒಪ್ಪಿದ್ದರೆ ಸಿಬ್ಬಂದಿಗಳ ಸಾವುಗಳನ್ನು ತಪ್ಪಿಸಬಹುದಿತ್ತು ಎಂದು ಮಲಿಕ್ ಸಂದರ್ಶನದಲ್ಲಿ ಹೇಳಿದ್ದಕ್ಕೆ ರಾಯಚೌಧುರಿ ಸಹಮತವನ್ನು ವ್ಯಕ್ತಪಡಿಸಿದರು.
ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ತಡೆಯುವಲ್ಲಿ ಸರಕಾರಿ ಏಜೆನ್ಸಿಗಳ ಪ್ರಮುಖ ವೈಫಲ್ಯಗಳನ್ನು ತಾನು ಬೆಟ್ಟು ಮಾಡಿದ್ದಾಗ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ತನಗೆ ಮೌನವಾಗಿರುವಂತೆ ಸೂಚಿಸಿದ್ದರು ಎಂದೂ ಮಲಿಕ್ ಸಂದರ್ಶನದಲ್ಲಿ ಆರೋಪಿಸಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವ ಎಲ್ಲ ಬೃಹತ್ ವಾಹನಗಳು ಮತ್ತು ವಾಹನಗಳ ಸಾಲುಗಳು ಸದಾ ದಾಳಿಗೆ ಸುಲಭಭೇದ್ಯವಾಗಿರುತ್ತವೆ ಎಂದು ಹೇಳಿದ ರಾಯ್ಚೌಧುರಿ,ಪುಲ್ವಾಮಾ ದಾಳಿಯು ನಡೆದ ಪ್ರದೇಶವು ಯಾವಾಗಲೂ ಇಂತಹ ದಾಳಿಗಳ ಹೆಚ್ಚಿನ ಅಪಾಯವನ್ನು ಹೊಂದಿದೆ ಎಂದರು. ರಾಯ್ಚೌಧುರಿ 1991-92ರ ನಡುವೆ ಜಮ್ಮು-ಕಾಶ್ಮೀರದಲ್ಲಿ 16 ಕಾರ್ಪ್ಸ್ ನ ಮುಖ್ಯಸ್ಥರಾಗಿದ್ದರು.
ಭಯೋತ್ಪಾದಕ ದಾಳಿಯು ಗುಪ್ತಚರ ವೈಫಲ್ಯದ ಫಲಿತಾಂಶವಾಗಿತ್ತು ಎಂಬ ಮಲಿಕ್ ಹೇಳಿಕೆಯನ್ನೂ ಒಪ್ಪಿಕೊಂಡ ರಾಯ್ ಚೌಧುರಿ,‘ಸರಕಾರವು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ. ಸಿಬ್ಬಂದಿಗಳನ್ನು ನಾಗರಿಕ ವಾಯುಯಾನ ಇಲಾಖೆ,ವಾಯುಪಡೆ ಅಥವಾ ಬಿಎಸ್ಎಫ್ ಬಳಿ ಲಭ್ಯವಿದ್ದ ವಿಮಾನಗಳ ಮೂಲಕ ಸಾಗಿಸಬೇಕಿತ್ತು ಎನ್ನುವುದು ನನ್ನ ಖಚಿತ ಅಭಿಪ್ರಾಯವಾಗಿದೆ. ವೈಫಲ್ಯಕ್ಕೆ ಯಾರೂ ವಾರಸುದಾರರಿಲ್ಲ ’ ಎಂದು ಹೇಳಿದರು.