ಬಾಹ್ಯಾಕಾಶದಿಂದ ಮಕ್ಕಾ, ಮದೀನಾ ನಗರಗಳ ಸುಂದರ ವೀಡಿಯೋ ಪೋಸ್ಟ್ ಮಾಡಿದ ಯುಎಇ ಗಗನಯಾತ್ರಿ
ರಿಯಾದ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳು ಕಾಲ ಉಳಿದುಕೊಳ್ಳಲು ಮಾರ್ಚ್ ತಿಂಗಳಿನಲ್ಲಿ ತೆರಳಿದ್ದ ಯುಎಇ ಗಗನಯಾತ್ರಿ ಸುಲ್ತಾನ್ ಅಲ್‌ನೆಯದಿ ಬಾಹ್ಯಾಕಾಶದಿಂದ ತೆಗೆದ ಸುಂದರ ವೀಡಿಯೋವನ್ನು ಸೋಮವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸೌದಿ ಅರೇಬಿಯಾದ ಮಕ್ಕಾ, ಮದೀನಾ ಮತ್ತು ಜಿದ್ದಾ ನಗರಗಳು ರಮಝಾನ್ ತಿಂಗಳಿನಲ್ಲಿ ರಾತ್ರಿ ವೇಳೆ ಕಂಗೊಳಿಸುತ್ತಿರುವ ಈ ವೀಡಿಯೋ ಎಲ್ಲರ ಕಣ್ಮನ ಸೆಳೆದಿದೆ.
ತಮ್ಮ ಕ್ಯಾಮೆರಾವನ್ನು ಮದೀನಾ ನಗರದತ್ತ ತಿರುಗಿಸಿ ಮಾತನಾಡಿದ ಅಲ್‌ನೆಯದಿ, "ಇದು ಮದೀನಾ, ಪ್ರವಾದಿ ಮುಹಮ್ಮದ್ ಅವರು ತಮ್ಮ ಆಪ್ತ ಜನರೊಂದಿಗೆ ವಲಸೆ ಬಂದ ನಗರ." ಎಂದು ಬರೆದಿದ್ದಾರೆ. ಈ ಸ್ಪಷ್ಟ ಚಿತ್ರದಲ್ಲಿ ನಗರದ ಮಿನುಗುವ ದೀಪಗಳು ಮತ್ತು ಅದರ ರಸ್ತೆಗಳು ಕಾಣಿಸುತ್ತವೆ.
ನಂತರ ಜಿದ್ದಾ ನಗರದತ್ತ ಕ್ಯಾಮೆರಾ ತಿರುಗಿದೆ. "ಇದು ಜಿದ್ದಾ ನಗರ, ಇದನ್ನು ಕೆಂಪು ಸಮುದ್ರದ ವಧು ಎಂದು ಹೇಳಲಾಗುತ್ತದೆ," ಎಂದು ಅಲ್‌ನೆಯದಿ ಹೇಳುತ್ತಾರೆ.
ನಂತರ ಮಕ್ಕಾ ನಗರದತ್ತ ಕ್ಯಾಮೆರಾ ತಿರುಗಿದಾಗ ಮಾತನಾಡುವ ಅಲ್‌ನೆಯದಿ "ಪವಿತ್ರ ಮಕ್ಕಾ ನಗರ, ಇಲ್ಲಿ ಇಸ್ಲಾಂನ ಸಂದೇಶ ಪ್ರವಾದಿಯೊಂದಿಗೆ ಬೆಳೆಯಿತು," ಎಂದು ಹೇಳುತ್ತಾರೆ. ನಗರದ ಹೃದಯ ಭಾಗದಲ್ಲಿರುವ ಮಸ್ಜಿದ್ ಅಲ್ ಹರಾಮ್ ಇಲ್ಲಿಂದ ಮೂಡುವ ಬೆಳಕನ್ನೂ ಅವರು ತೋರಿಸುತ್ತಾರೆ.
"ಇದು ಅದ್ಭುತ ಚಿತ್ರಣ, ಅವುಗಳು ನಕ್ಷತ್ರಗಳಂತೆ ಹೊಳೆಯುತ್ತಿವೆ, ಮತ್ತು ನಾನು ಕಂಡು ಅತ್ಯಂತ ಸುಂದರ ದೃಶ್ಯಗಳು," ಎಂದು ಅಲ್‌ನೆಯದಿ ಹೇಳುತ್ತಾರೆ.
من محطة الفضاء الدولية،
— Sultan AlNeyadi (@Astro_Alneyadi) April 17, 2023
إهداء لعيال سلمان في هذه الليالي المباركة
إهداء لبلاد الحرمين الشريفين، مهبط الوحي وأرض الرسالة، المملكة العربية السعودية. pic.twitter.com/3OQTg4CgXb