ಮೇ 15ರವರೆಗೆ ನೀರು ಪೂರೈಕೆಗೆ ಸಮಸ್ಯೆ ಇಲ್ಲ: ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್
ಉಡುಪಿ, ಎ.19: ಉಡುಪಿ ನಗರಕ್ಕೆ ನೀರು ಪೂರೈಕೆ ಮಾಡುವ ಬಜೆ ಡ್ಯಾಂನಲ್ಲಿ ಸದ್ಯ 4.36 ಮೀಟರ್ ನೀರಿನ ಸಂಗ್ರಹ ಇದೆ. ಈ ನೀರು ಮೇ 15ರವರೆಗೂ ಸಾಕಾಗಬಹುದು. ಆದುದರಿಂದ ಸದ್ಯ ನೀರಿನ ಯಾವುದೇ ಸಮಸ್ಯೆ ಇಲ್ಲ ಎಂದು ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಶಿರೂರು ಡ್ಯಾಮ್ ಮೇಲ್ಭಾಗ ದಲ್ಲಿ ನದಿಯ ಹೊಂಡದಲ್ಲಿರುವ ನೀರನ್ನು ಪಂಪಿಂಗ್ ಮೂಲಕ ಬಜೆಗೆ ಹಾಯಿಸುವ ಕಾರ್ಯ ನಡೆಯುತ್ತಿದೆ. ಅಲ್ಲದೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಎರಡು ಬಾರಿ ಟೆಂಡರ್ ಕರೆದಿದರೂ ಯಾರಿಂದಲೂ ಸ್ಪಂದನೆ ದೊರೆತಿಲ್ಲ. ಮೇ ತಿಂಗಳಲ್ಲಿ ಮಳೆ ಬಂದರೆ ಯಾವುದೇ ಸಮಸ್ಯೆೆಯಾಗುವುದಿಲ್ಲ. ನೀರು ಪೂರೈಕೆಯ ಪಂಪ್‌ಸೆಟ್‌ಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ ಎಂದರು.
ನಗರಸಭೆಯಿಂದ ನೀರಿನ ಬಿಲ್ ಆನ್‌ಲೈನ್ ಮೂಲಕ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಎರಡು ಹೊಸ ಬೋರ್‌ವೇಲ್ ಕೂಡ ತೆಗೆಯಲಿ ದ್ದೇವೆ. ವಾರಾಹಿ ನೀರಿಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳು ಇನ್ನೂ ಹಾಗೆಯೇ ಮುಂದುವರೆದಿದೆ. ಆದರೆ ಈ ಸಮಸ್ಯೆಗೂ ನಗರಸಭೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಗರಸಭೆಯ ಅಧಿಕಾರ ವಹಿಸಿಕೊಂಡು ಎರಡುವರೆ ವರ್ಷ ಪೂರ್ಣ ಗೊಳ್ಳುತ್ತಿದ್ದು, ಈ ಅವಧಿಯಲ್ಲಿ ಸುಮಾರು 40 ಕೋಟಿ ರೂ.ಗಳ ಕಾಮಗಾರಿ ನಡೆಸಲಾಗಿದೆ. 48 ಲಕ್ಷ ರೂ. ವೆಚ್ಚದಲ್ಲಿ ತೋಡುಗಳ ಹೂಳೆತ್ತುವ ಕಾರ್ಯ ಮಾಡಲಾಗುತ್ತಿದೆ. ಶಿವಳ್ಳಿಯಲ್ಲಿ ವಸತಿ ಸಮುಚ್ಛಯ ನಿರ್ಮಾಣ, ಮಣಿಪಾಲದಲ್ಲಿ ವಾಣಿಜ್ಯ ಸಂಕೀರ್ಣ ಒಳಗೊಂಡ ವಸತಿ ಸಮುಚ್ಛಯ, ಪರ್ಕಳ ಮಾರುಕಟ್ಟೆ ನಿರ್ಮಾಣ ಮಾಡುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ದೊರೆತಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶ ಕೊಡವೂರು, ಸದಸ್ಯರಾದ ಗಿರೀಶ್ ಅಂಚನ್, ಟಿ.ಜಿ.ಹೆಗ್ಡೆ, ಅಶೋಕ್ ನಾಯಕ್ ಉಪಸ್ಥಿತರಿದ್ದರು.
ಶಾಸಕರಿಂದ ನೀರಿನ ಮಟ್ಟ ಪರಿಶೀಲನೆ
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗ್ರಾಮ ಪಂಚಾಯತ್‌ಗಳಿಗೆ ಕುಡಿಯುವ ನೀರು ಪೂರೈಸುತ್ತಿರುವ ಬಜೆ ಡ್ಯಾಮ್ ಹಾಗೂ ಶಿರೂರು, ಪುತ್ತಿಗೆ ಭಾಗಗಳಿಗೆ ಶಾಸಕ ಕೆ.ರಘುಪತಿ ಭಟ್ ಇಂದು ಭೇಟಿ ನೀಡಿ ನೀರಿನ ಮಟ್ಟವನ್ನು ಪರಿಶೀಲಿಸಿದರು.
ನಗರ ಸಭೆ ಅಧ್ಯಕ್ಷರು, ಸದಸ್ಯರುಗಳೊಂದಿಗೆ ಡ್ಯಾಮ್‌ನ ನೀರಿನ ಮಟ್ಟ ವೀಕ್ಷಿಸಿ ಚರ್ಚಿಸಿದ ಶಾಸಕ ರಘುಪತಿ ಭಟ್ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಈ ಸಂದರ್ಭದಲ್ಲಿ ನಗರ ಸಭೆಯ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ನಗರ ಸಭಾ ಸದಸ್ಯರಾದ ಗಿರೀಶ್ ಅಂಚನ್, ಸಂತೋಷ್ ಜತ್ತನ್, ಅಶೋಕ್ ನಾಯ್ಕ್ ಉಪಸ್ಥಿತರಿದ್ದರು.