ಪಡುಬಿದ್ರೆ: ಮರಕ್ಕೆ ಕಟ್ಟಿ ಹಾಕಿ ನಿವೃತ್ತ ಬಿಎಸ್ಸೆನ್ನೆಲ್ ಉದ್ಯೋಗಿಗೆ ಹಲ್ಲೆ
ಪಡುಬಿದ್ರೆ, ಎ.19: ನಿವೃತ್ತ ಬಿಎಸ್‌ಎನ್‌ಎಲ್ ಉದ್ಯೋಗಿಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಘಟನೆ ಎ.17ರಂದು ಬೆಳಗ್ಗೆ ಇನ್ನಾ ಗ್ರಾಮದ ಗುರುಮೇರು ಬಳಿ ನಡೆದಿದೆ.
ಹಲ್ಲೆಗೊಳಗಾದ ಎರ್ಮಾಳ್ ತೆಂಕ ಗ್ರಾಮದ ಲಕ್ಷ್ಮೀನಾರಾಯಣ(69) ಎಂಬವರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ಇನ್ನಾ ಗ್ರಾಮದಲ್ಲಿರುವ ಮುಂಡ್ಕೂರು ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಹೋಗಿ, ಬಂಗಾರದ ಸರವನ್ನು ಅಡವಿಟ್ಟು 18,000ರೂ. ಹಣವನ್ನು ಸಾಲವಾಗಿ ಪಡೆದು, ಗುರುಮೇರುವಿನಲ್ಲಿರುವ ಬಿಎಸ್‌ಎನ್‌ಎಲ್ ಮೈಕ್ರೋ ಸ್ಟೇಷನ್ ಬಳಿ ಹೋಗಿದ್ದರು.
ಈ ವೇಳೆ ಅಲ್ಲೇ ಪಕ್ಕದಲ್ಲಿರುವ ಗಿರಿಜನ ಕಾಲನಿಯ ನಿವಾಸಿಗಳಾದ ಶೈಲೇಶ್, ವಿಠಲ, ರಂಜಿತ್ ಹಾಗೂ ಇತರೆ ಇಬ್ಬರು ಯುವಕರು ಅಲ್ಲಿಗೆ ಬಂದು ಲಕ್ಷ್ಮೀನಾರಾಯಣಗೆ ಹೊಡೆದು, ನಂತರ ಮರಕ್ಕೆ ಹಗ್ಗದಿಂದ ಕಟ್ಟಿ ಹಾಕಿ ಕೈಯಿಂದ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಬಳಿಕ ಮನೆಯವರು ಬಂದು ಲಕ್ಷ್ಮೀನಾರಾಯಣ ಅವರನ್ನು ಬಿಡಿಸಿ ಕರೆದುಕೊಂಡು ಹೋಗಿದ್ದು, ಮತ್ತೆ ಇಲ್ಲಿಗೆ ಬಂದರೆ ಅದೇ ಮರಕ್ಕೆ ನೇತು ಹಾಕುವುದಾಗಿ ಆರೋಪಿಗಳು ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.