ಮತ ಬಾಚಿಕೊಳ್ಳುವ ತಂತ್ರಗಾರಿಕೆ ಯಾರಲ್ಲೆಷ್ಟು?
ಬಿಜೆಪಿಯ ಅಂತರಾತ್ಮ ಸದಾ ಆರೆಸ್ಸೆಸ್ ಹೃದಯದಲ್ಲಿ ಜೋಪಾನವಾಗಿ ಉಸಿರಾಡುತ್ತಿರುತ್ತದೆ. ಅದು ಜನಸಂಘದಿಂದ ಹುಟ್ಟಿದ ದಿನದಿಂದಲೂ ಅದರ ರಾಜಕೀಯ ಒಳ-ಹೊರ ನೋಟಗಳಲ್ಲಿ ಅನೇಕ ಸಾಮಾಜಿಕ ಪರಿವರ್ತನೆಗಳಾಗಿವೆ. ಕಾಂಗ್ರೆಸ್ ಪಕ್ಷ ತನ್ನ ಸೈದ್ಧಾಂತಿಕ ನಿಲುವುಗಳಲ್ಲಿ ಒಂದಿಷ್ಟು ಸಡಿಲವಾಗಿದ್ದರೂ ತನ್ನ ಮೂಲಾಶಯಗಳಿಗೆ ಕಟಿಬದ್ಧವಾಗಿದೆ. ಅದರ ರಾಷ್ಟ್ರೀಯ ವರ್ಚಸ್ಸಿನಲ್ಲಿ 2014ರ ತರುವಾಯ ಕೊಂಚ ಕಸಿವಿಸಿ ಯುಂಟಾಗಿದ್ದರೂ ಕಾರ್ಯಕರ್ತರ ಉತ್ಸಾಹ ಅಷ್ಟಿಷ್ಟು ಉಳಿದಿದೆ. ಅದರ ಛಾಯೆ ‘ಭಾರತ್ ಜೋಡೊ’ ಯಾತ್ರೆಯಲ್ಲಿ ಜಾಹೀರಾಯಿತು. ಪೀಳಿಗೆಯಿಂದ ಪೀಳಿಗೆಗೆ ಮತದಾನ ಮನೋಧರ್ಮ ಬದಲಾಗುತ್ತಿರುತ್ತದೆ. ರಾಜಕೀಯ ಪಕ್ಷಗಳು ಚುನಾವಣೆಗಳಲ್ಲಿ ನೀಡುವ ಆಶ್ವಾಸನೆ ಮತ್ತು ಪ್ರಣಾಳಿಕೆ ಭರವಸೆಗಳು ಎಳ್ಳೆಷ್ಟು-ಜಳ್ಳೆಷ್ಟು ತೂಕ ಮಾಡುವ ಮತದಾರರು ಕಡಿಮೆ ಎಂದರೆ ತಪ್ಪಾಗದು. ಅವುಗಳಲ್ಲಿ ಶೇ. 30-40ರಿಂದ ಅನುಷ್ಠಾನವಾದರೆ ಮತದಾರ ಧನ್ಯರಾಗುತ್ತಾರೆ. ಆಡಳಿತ ವಿರೋಧಿ ಅಲೆ ಅನ್ನುವುದು ಆಡಳಿತ ಪಕ್ಷವೊಂದನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ಮತ್ತು ಮತದಾರರು ಪರ್ಯಾಯ ರಾಜಕೀಯ ಪಕ್ಷಗಳನ್ನು ಚುನಾಯಿಸಲು ಇರುವ ಆಯಾಮಗಳು.
2013ರಲ್ಲಿ ಭಾಜಪ ವಿರುದ್ಧವಾಗಿ ಎರಡು ಹೊಡೆತ ಬಿದ್ದವು; ಒಂದು ಯಡಿಯೂರಪ್ಪಅವರ ಕೆಜೆಪಿ; ಇನ್ನೊಂದು ನಾಯಕರ ಆಂತರಿಕ ಕಲಹಗಳು. ಆಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ 122 ಸ್ಥಾನಗಳನ್ನು ಪಡೆದು ನಿಚ್ಚಳ ಬಹುಮತದೊಂದಿಗೆ ಅಧಿಕಾರ ಹಿಡಿಯಿತು. ಡಿ.ದೇವರಾಜ ಅರಸು ತರುವಾಯ ಸಿದ್ದರಾಮಯ್ಯ 5 ವರ್ಷಗಳ ಆಡಳಿತ ನಿಭಾಯಿಸಿದವರೆಂಬ ಖ್ಯಾತಿಗಳಿಸಿದರು. ಭಿನ್ನಮತಗಳಿಗೆ ಅಷ್ಟೊಂದು ಆಸ್ಪದ ನೀಡದೆ ಆಡಳಿತ ನಿರ್ವಹಿಸಿ, ಪ್ರಣಾಳಿಕೆಯಲ್ಲಿ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದ್ದೇವೆೆಂದು ಬೀಗಿದರು. ವಲಯವಾರು ಅಭಿವೃದ್ಧಿಗಳಿಗೆ ಆದ್ಯತೆ ನೀಡಿ, ರಾಜ್ಯದ ಅಭಿವೃದ್ಧಿ ಸೂಚ್ಯಂಕದಲ್ಲಿ ಅಗ್ರಮಾನ್ಯ ಸ್ಥಾನ ಪಡೆದವರು. 2018ರಲ್ಲಿ ಅವರ ಹಲವು ಭಾಗ್ಯಗಳ ಫಲಾನುಭವಿಗಳಾದ ಮತದಾರರು ಮಾತ್ರ ಅವರನ್ನು ಕೈಬಿಡಲಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ 2013ರಲ್ಲಿ ರಾಜ್ಯದಲ್ಲಿ ಶೇ. 36.59ರಷ್ಟು ಮತಗಳನ್ನು ಪಡೆದಿದ್ದವರು; 2018ರಲ್ಲಿ ಶೆ.38.04 ರಷ್ಟು ಮತಗಳನ್ನು ಪಡೆದರು. 2018ರ ಚುನಾವಣೆಯಲ್ಲಿ ಶೇ. 1.45ರಷ್ಟು ಧನಾತ್ಮಕವಾಗಿ ಗಳಿಸಿದ್ದನ್ನು ನೋಡಿದರೆ ಆಡಳಿತ ವಿರೋಧಿ ಗುಣಲಕ್ಷಣಗಳು ಅಷ್ಟೊಂದಾಗಿ ಗೋಚರಿಸುವುದಿಲ್ಲ. ಠೇವಣಿ ಜಪ್ತಿಯಲ್ಲಿಯೂ ಸಹ ಕಾಂಗ್ರೆಸ್ ಗಣನೀಯ ಸಾಧನೆ ಮಾಡಿದೆ. ಅಂದರೆ ಮತದಾರರ ಕೃಪೆಯಲ್ಲಿ ಸಿದ್ದರಾಮಯ್ಯ ಗೆದ್ದಿದ್ದರೆ, ನಾಯಕರ ಕೈಯಲ್ಲಿ ಸೋತುಹೋದರು.
ಹೇಗೆಂದರೆ, ಹೆಚ್ಚಿನ ಮಂತ್ರಿಗಳು ಮತ್ತು ಹಿರಿಯ ಶಾಸಕರು ಸರಿಸುಮಾರು 49 ಜನರ ಸೋಲಿನಿಂದ ಸಿದ್ದರಾಮಯ್ಯವರನ್ನು ಅಧಿಕಾರದ ಗಾದಿಯಿಂದ ದೂರ ನೂಕಿತು. ಈ ಫಲಿತಾಂಶ ಸಾಧಿಸಲು ಭಾಜಪ ಸಿದ್ದರಾಮಯ್ಯ ಸುತ್ತಲೂ ರಾಜ್ಯಾದ್ಯಂತ ಅಗೋಚರ ಖೆಡ್ಡಾ ತೋಡಿತ್ತು. ಅದರ ಕಾವಲಿಗೆ ತೆನೆ ಹೊತ್ತವಳಿದ್ದಳು. ಆದರಲ್ಲೂ ಮೀಸಲು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳನ್ನು ಮಣಿಸಿತ್ತು. ಭಾಜಪ 2018ರಲ್ಲಿ ಯಡಿಯೂರಪ್ಪಅವರ ಆಗಮನದಿಂದ ಹೆಚ್ಚುವರಿಯಾಗಿ ಶೇ.16.33ರಷ್ಟು ಮತಗಳನ್ನು ಸೆಳೆದರೂ ಬಹುಮತ ಗಳಿಸುವಲ್ಲಿ ವಿಫಲವಾದರು. ಕಾಂಗ್ರೆಸ್ನ ಕೆಲವು ನಾಯಕರು ಏನಾದರೂ ಆಗಲಿ ಸಿದ್ದರಾಮಯ್ಯರನ್ನು ಸೋಲಿಸಿ ಅಧಿಕಾರ ನಡೆಸುತ್ತೇವೆಂದು ಕಂಡ ಹಗಲುಗನಸು ಧ್ವಂಸವಾಯಿತು.
ಈ ಚುನಾವಣೆಯಲ್ಲಿ ಕುಮಾರಸ್ವಾಮಿಯವರು ಬಿಎಸ್ಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು, ದಲಿತ ಸಮುದಾಯದ ಯುವ ಮತದಾರರು ಜೊತೆಯಾದ ಕಾರಣ ಸಂಖ್ಯಾಬಲ ಕುಸಿಯಲಿಲ್ಲ. ಆದರೆ ಬಿಎಸ್ಪಿಗೆ ಜನತಾ ದಳದಿಂದ ಧನಾತ್ಮಕ ಮತಗಳು ವರ್ಗಾವಣೆ ಆಗಲಿಲ್ಲ. ಕೊಳ್ಳೇಗಾಲದಲ್ಲಿ ಜೆಡಿಎಸ್-ಬಿಎಸ್ಪಿ ಹೊಂದಾಣಿಕೆ ಅತಿ ಹೆಚ್ಚಾಗಿ ದಳಕ್ಕೆ ಅನುಕೂಲವಾಗಿದೆ; ಹತ್ತಾರು ಕ್ಷೇತ್ರಗಳಲ್ಲಿ ಭಾಜಪ ಗೆಲ್ಲಲು ಅವಕಾಶವಾಯಿತು. 2018ರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮಂತ್ರಿ ಹಾಗೂ ಹಿರಿಯ ಶಾಸಕರ ಮತ ಕ್ಷೇತ್ರಗಳಲ್ಲಿ ಮಾನಸಿಕ ಹೊಂದಾಣಿಕೆ ಏರ್ಪಡಲಿಲ್ಲ. ಅದರ ಮುನಿಸಿನ ಪರಿಣಾಮ ಅತ್ಯಲ್ಪಅಂತರದಲ್ಲಿ 40-60 ಕ್ಷೇತ್ರಗಳು ಕಾಂಗ್ರೆಸ್ನಿಂದ ದೂರವಾದವು.
ಭಾಜಪ ಸಹ ಯಾವಾಗಲೂ ಗುಪ್ತಗಾಮಿನಿ ಕಾರ್ಯತಂತ್ರವನ್ನು ಹೊಂದಿರುತ್ತದೆ. ಅದರಲ್ಲೂ ಸಂಘ ಅಖೈರು ಮಾಡುವ ಕೇತ್ರವಾರು ಹೋರಾಟದ ಮಾರ್ಗಸೂಚಿಗಳಂತೆ ಕೆಲಸಮಾಡುತ್ತದೆ. ಅವುಗಳನ್ನು ಕಾರ್ಯಗತ ಮಾಡಲು ಕೆಲವನ್ನು ಬಹಿರಂಗವಾಗಿ ಮಾತನಾಡುತ್ತದೆ. ಇನ್ನು ಕೆಲವನ್ನು ನೇರಾನೇರ ಮತದಾರರ ಸಂಪರ್ಕದಿಂದ ಸಂಘದ ಕಾರ್ಯಕರ್ತರ ಮೂಲಕ ಸಾಧಿಸುತ್ತದೆ. ಆದ್ದರಿಂದ ಅದರ ಆತ್ಮವಾದ ಸಂಘವೆ ಅದರ ಪರಮೋಚ್ಚ ನಾಯಕ; ಮುಖ್ಯಮಂತ್ರಿ, ಮಂತ್ರಿ ಹಾಗೂ ಶಾಸಕರೆಲ್ಲೂ ಕೇವಲ ಕಾರ್ಯಕರ್ತರೆನ್ನುವ ಅರ್ಪಿತಭಾವ ತುಂಬಿತುಳುಕಾಡುತ್ತಿದೆ. ಚುನಾವಣೆ ಕೆಲಸಗಳನ್ನು ವಿಭಜನೆ ಮಾಡುವಾಗ ಭಾಜಪ ಪ್ರದೇಶ, ಜಾತಿ-ಉಪಜಾತಿ, ಧರ್ಮ ಮತ್ತು ರಾಷ್ಟ್ರೀಯ ಸಮಸ್ಯೆಗಳನ್ನು ಹೇಗೆ ಪ್ರಚಾರ ಮಾಡಬೇಕೆಂಬ ನಿರ್ದಿಷ್ಟ ಮಾಹಿತಿಗಳನ್ನು ನೀಡುತ್ತದೆ.
ಆಯಾ ಸುಮುದಾಯದ ಮತದಾರರನ್ನು ಅವರವರ ಸಮುದಾಯದ ನಾಯಕರ ಮೂಲಕ ಸೆಳೆಯುವ ತಂತ್ರಗಳಿಗೇನೂ ಕೊರತೆಯಿಲ್ಲ. ಅದರ ಅಂತರಂಗದಲ್ಲಿ ಮೀಸಲಾತಿಯನ್ನು ಅಷ್ಟೊಂದಾಗಿ ಸ್ವಾಗತಿಸುವ ಮನೋಧರ್ಮಗಳಿಲ್ಲ. ಆದರೂ ಮತ ಬೇಟೆಗಾಗಿ ಇತ್ತೀಚೆಗೆ ನಾಟಕೀಯವಾಗಿ ಅದರ ವೈಭವೀಕರಣಕ್ಕೂ ಮುಂದಾಗಿದೆ. ಬಹುಸಂಖ್ಯಾತರ ಓಲೈಕೆಗಾಗಿ ಮುಸ್ಲಿಮ್ ಮೀಸಲಾತಿ ಕಿತ್ತು ಹಾಕುವ ಹುನ್ನಾರವನ್ನು ಸಮರ್ಥಿಸುವ ಜಾಣ್ಮೆ ಹೊಂದಿದೆ. ಆದರೆ ಕಾಂಗ್ರೆಸ್ ತನ್ನ ಗೆಲುವಿನ ಹಾದಿಯನ್ನು ರಾಜಬೀದಿಗಳಲ್ಲಿ ಕಾಣುತ್ತದೆ. ಭಾಜಪ ಸಂಧಿ-ಗೊಂದಿ, ಗಲ್ಲಿ-ಗಟಾರಗಳಿಗೆ ಪಾದಾರ್ಪಣೆ ಮಾಡುತ್ತದೆ. ದಲಿತರ ಮನೆಯ ಊಟದ ನಾಟಕೀಯ ಪ್ರದರ್ಶನದಿಂದ ಮತಗಳು ಸಿಗುತ್ತವೆ ಎಂದರೆ ಹೊಟೇಲ್ ಊಟವನ್ನು ದಲಿತರ ಮುಂದೆ ಸವಿದು ಪ್ರಚಾರಗಿಟ್ಟಿಸುತ್ತದೆ. ಇಂದಿಗೂ ಕಾಂಗ್ರೆಸ್ ಬಹುತೇಕ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಮನ್ವಯತೆಯ ಕೊರತೆಗಳನ್ನು ಎದುರಿಸುತ್ತಿದೆ. ಅದರ ಬಹುತೇಕ ಅಂಗ ಸಂಘಟಣೆಗಳಿಂದ ಮತಗಳನ್ನು ಬಾಚಿಕೊಳ್ಳುವ ತಂತ್ರಗಾರಿಕೆ ಇನ್ನೂ ಕ್ರೋಡೀಕೃತವಾಗಿಲ್ಲ.
ಭಾಜಪ ಮಾತ್ರ ತನ್ನ ಅಂಗ ಸಂಘಟನೆಗಳಿಂದ ಇಂತಿಷ್ಟೇ ಶೇಕಡವಾರು ಮತಗಳಿಸುವ ಸುಳಿಸೂತ್ರಗಳ ಗುಟ್ಟನ್ನು ಯಾರಿಗೂ ಬಿಡದೆ ಸಾಧಿಸುತ್ತದೆ. ಆರೆಸ್ಸೆಸ್ ಮೂಲದ ಭಾಜಪ ಕಾರ್ಯಕರ್ತರು ದಲಿತ-ಹಿಂದುಳಿದ ವರ್ಗಗಳ ಕೇರಿಗಳಲ್ಲಿ; ವ್ಯಕ್ತಿ-ಸಮುದಾಯಗಳ ಮಧ್ಯದಲ್ಲಿ ಅದರ ಕಚೇರಿಗಳಿಲ್ಲದೆ ಕೇಸರಿ ಶಾಲು ಹೊದಿಸಿ ಮತಗಳಿಸುವ ವಿನೂತನ ರಾಜಕೀಯ ತಂತ್ರಗಾರಿಕೆಯನ್ನು ನಾಜೂಕಾಗಿ ಜಾರಿಗೊಳಿಸುವಷ್ಟು ಸಶಕ್ತವಾಗಿದ್ದಾರೆೆ. ಸುದೀರ್ಘ ಇತಿಹಾಸವಿರುವ ಕಾಂಗ್ರೆಸ್ ಇಂದಿಗೂ ಓಬಿರಾಯನ ಕಾಲದ ಚುನಾವಣಾ ಸಾಮಾಜಿಕ ತಂತ್ರಗಳನ್ನು ಅಳವಡಿಸಿಕೊಂಡಿರುವುದರಿಂದ ಯುವ ಮತದಾರರನ್ನು ಮುಟ್ಟಲು ಸಾಧ್ಯವಾಗುತ್ತಿಲ್ಲ. ಇಂದು ಭಾಜಪ ರಾಜಕೀಯ ಪಕ್ಷಗಳೆಲ್ಲವೂ ನಾಚುವಷ್ಟು ಹಣ, ಹೆಂಡ ಮತ್ತು ಅಕ್ರಮಗಳನ್ನು ನಿರ್ವಹಿಸುವಲ್ಲಿ ದಾಪುಗಾಲಿಡುತ್ತಿದೆ. ಸಮಾಜಬಾಹಿರರನ್ನು ಸಹ ಕೈಹಿಡಿದು ಮುತ್ತಿಡುವುದನ್ನು ಕಲಿತಿದೆ.
ತನ್ನ ಅನೈತಿಕತೆಯನ್ನು ತಾನೇ ಪ್ರಶ್ನೆ ಮಾಡಿಕೊಳ್ಳದಿರುವುದು ಅದು ಪ್ರತಿಪಾದಿಸುವ ಚುನಾವಣಾ ಮೌಲ್ಯಗಳನ್ನು ಮುಂದೆ ಹೇಗೆ ಕಾಪಾಡುತ್ತದೆಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಅದರಲ್ಲೂ ಕಾಂಗ್ರೆಸ್ ಮತ್ತು ಇತರ ಪಕ್ಷಗಳನ್ನು ಚುನಾವಣೆಗಳಲ್ಲಿ ಮಣಿಸಲು ಆದಷ್ಟು ದುಬಾರಿ ವೆಚ್ಚಗಳನ್ನು ಸುರಿಯುತ್ತದೆ. ಅದನ್ನು ಹಿಮ್ಮೆಟ್ಟಿಸಲು ಇತರ ಪಕ್ಷಗಳೂ ಮತ್ತಷ್ಟು ಭ್ರಷ್ಟರನ್ನು ಮುದ್ದಾಡುತ್ತಿರುವುದರಿಂದ ಮುಂದೊಂದು ದಿನ ಪ್ರಜಾಪ್ರಭುತ್ವದ ಪರಿಕಲ್ಪನೆ ಅಪಹಾಸ್ಯದ ಸರಕಾಗುವುದಂತೂ ಕಟು ಸತ್ಯ. ವಂಶಾಡಳಿತ ಟೀಕಿಸುವ ಭಾಜಪ ಇದನ್ನೇ ಉಸಿರಾಡುತ್ತಿದೆ. ತಾನೇ ಬೆಳೆಸಿದ ಪ್ರಾದೇಶಿಕ, ಸಮಾಜವಾದಿ, ಸಮತವಾದಿ ಪಕ್ಷಗಳು ಅವಸಾನ ಕಂಡ ಮೇಲೆ ಕಾಂಗ್ರೆಸನ್ನು ತುಳಿಯಲು ಶಕ್ತವಾಯಿತು. ಆದುದರಿಂದ, 1991ರಿಂದಾಚೆಗೆ ಭಾಜಪ ಪ್ರತೀ ಚುನಾವಣೆಗಳನ್ನು ಅತಿ ಸಿರಿವಂತಿಕೆಯಿಂದ ವೈಭವೀಕರಿಸಿ ನಿರ್ವಹಿಸುತ್ತಾ ಬಂದಿದೆ. ಬಹುಶಃ ಅಧಿಕಾರಕ್ಕಾಗಿ ಶಾಸಕರ ಖರೀದಿಯನ್ನು ಸಾರ್ವತ್ರೀಕರಣಗೊಳಿಸಿರುವ ಕಾರಣ ಜನರಿಗೆ ಬೇಡದ ಆರ್ಥಿಕ ಅನೀತಿಗಳಿಗೆ ಬೆಂಬಲ ನೀಡಬೇಕಾಗುತ್ತದೆ. ಶಾಸಕರ ಖರೀದಿಗಾಗಿ ತೆರೆಮರೆಯಲ್ಲಿ ನಿಂತ ಹೂಡಿಕೆದಾರರು ಸಹಜವಾಗಿ ಅಭಿವೃದ್ಧಿ ಹೆಸರಿನಲ್ಲಿ ಗೋಲ್ಮಾಲ್ ಮಾಡುತ್ತಾರೆ. ಬಹುಮತ ಪಡೆದ ಪಕ್ಷಗಳಲ್ಲಿಯೂ ಇಂತಹ ದೋಚುವ ಕೈಂಕರ್ಯ ಒಳಸುಳಿಯ ಹೆಜ್ಜೆಗಳಂತಿರುತ್ತವೆ.
ಭಾಜಪ ಜಾತಿಗೊಂದು ಆರ್ಥಿಕ ಬಲವಿಲ್ಲದ ನಿಗಮಗಳು, ಜಾತಿವಾರು ಮಠಗಳ ಉದ್ಧಾರದ ಕೋಮು ಪ್ರಜ್ಞೆ 2023 ವಿಧಾನ ಸಭಾ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಕೈಗೂಡುತ್ತದೆ ನೋಡಬೇಕು. ಅಬದ್ಧವಲ್ಲದ ಖರ್ಚು ಬಾಬ್ತುಗಳು ಈಗ ಶೇ. 92ರಷ್ಟು ದಾಟಿದೆ. ಆಗ ಸಹಜವಾಗಿ ಯೋಜನಾ ವೆಚ್ಚಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಭಾಜಪ ಸರಕಾರ ದುಬಾರಿ ಉಪ ಚುನಾವಣೆಗಳ ಮೂಲಕ ಅಧಿಕಾರ ಹಿಡಿದ ಮೇಲೆ ಭ್ರಷ್ಟಾಚಾರದ ಕಮಟು ಕೇವಲ ಒಂದು ಇಲಾಖೆಯ ಕಥೆಯಲ್ಲವೆಂಬಂತೆ ವರದಿಗಳು ನಾಡಿನ ನಿತ್ಯ ಕಥೆಯಾದವು. ಅದರ ಪ್ರತಿಕೂಲತೆಗಳು ಮತದಾರರನ್ನು ಹೇಗೆ ಪ್ರಭಾವಿಸುತ್ತದೆ ಅನ್ನುವುದು ಚುನಾವಣೆಯ ಫಲಿತಾಂಶದಿಂದ ಗೋಚರಿಸಬೇಕಿದೆ.
ಭಾಜಪ ಸೀಟು ಹಂಚಿಕೆಯಲ್ಲಿ ಗುಜರಾತ್ ಮಾದರಿ ಮಾಡಲು ಕೈಹಾಕಿ ಇಲ್ಲದ ರಗಳೆ ಅನುಭವಿಸುತ್ತಿದೆ. ಈಗ ಸೋತರೂ ಮುಂದಿನ ದಾರಿ ಸುಗಮ ಮಾಡುವ ಚಿಂತನೆ ಹೊಂದಿದೆ. ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಅಂತಹ ಗೊಂದಲ ಕಾಣಲಿಲ್ಲ. ಆದರೆ ಎರಡನೆ ಪಟ್ಟಿಯಲ್ಲಿ ಅನೇಕರ ಮುನಿಸಿಗೆ ಕಾರಣವಾಗಿದೆ. ಅದರಲ್ಲೂ ಮಾದಿಗ ಮತ್ತು ಅದರ ಉಪಸಮುದಾಯಗಳಿಗೆ ಸರಿಯಾದ ಪ್ರಾತಿನಿಧ್ಯ ನೀಡಿಲ್ಲವೆಂಬ ತಕರಾರನ್ನು ಕಾಂಗ್ರೆಸ್ ಹೇಗೆ ಮಣಿಸುತ್ತದೆಂದು ಕಾದು ನೋಡಬೇಕಿದೆ. ಅತ್ಯಧಿಕ ಮೀಸಲು ಸ್ಥಾನಗಳನ್ನು ಪಡೆದಿರುವ ಹೊಲೆಯ ಮತ್ತು ಅದರ ಉಪಸಮುದಾಯಗಳು ಎಷ್ಟರ ಮಟ್ಟಿಗೆ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಉತ್ತರದಾಯಿತ್ವ ಸ್ಥಾಪಿಸುತ್ತಾರೆ? ಈ ಸಮುದಾಯ ಪರಿಪೂರ್ಣವಾಗಿ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಸಲು ಭಾಜಪ, ಜನತಾದಳಗಳನ್ನು ಹೇಗೆ ಹಿಮ್ಮೆಟ್ಟಿಸುವುದು ಎಂದು ಫಲಿತಾಂಶಗಳಿಂದ ತಿಳಿಯುತ್ತದೆ. ಅಲ್ಪಸಂಖ್ಯಾತರ ಮತಗಳು ಜನತಾದಳಕ್ಕೆ ಅಲ್ಪಾನುಪಾತ ಹೋದರೆ, ಕಾಂಗ್ರೆಸ್ ಗೆಲುವಿನ ಹಾದಿ ಸುಗಮವಾಗುತ್ತದೆ.
ಕಾಂಗ್ರೆಸ್ 2018ರಲ್ಲಿ ಗಳಿಸಿದ್ದ ಮತಗಳನ್ನು ಕಾಪಾಡಿಕೊಂಡು ಅದು ಪಡೆಯುವ ಹೆಚ್ಚುವರಿ ಅಧಿಕ ಶೇಕಡಾವಾರು ಮತಗಳಿಂದ ಬಹುಮತದ ಸಂಖ್ಯೆಗಳ ಏರಿಕೆಗಳನ್ನು ನಿರ್ಧರಿಸುತ್ತದೆ. ಒಂದುವೇಳೆ ಗುಪ್ತಗಾಮಿನಿಯಲ್ಲಿ ನಾಯಕರೆಲ್ಲರೂ ಆಯ್ದ ಕ್ಷೇತ್ರಗಳಲ್ಲಿ ತಮ್ಮ ರಾಜಕೀಯ ವೈರಿಗಳ ಬೆನ್ನತ್ತಿದರೆ ಮರ್ಮಾಘಾತವನ್ನು ಅದು ಅನುಭವಿಸದೆ ಇರದು. 2018ರಲ್ಲಿ ಇದೇ ತರಹದ ಚಟುವಟಿಕೆಗಳಿಂದ ಹತ್ತಾರು ಕ್ಷೇತ್ರಗಳಲ್ಲಿ ಸೋಲಿನ ರುಚಿ ಕಂಡಿದೆ. ಅದಕ್ಕೆ ಚಾಮುಂಡೇಶ್ವರಿ ಕ್ಷೇತ್ರವೇ ತಾಜಾ ಉದಾಹರಣೆ. ಭಾಜಪದ ಸುತ್ತಲೂ ಕಂಡರಿಯದಷ್ಟು ಭ್ರಷ್ಟಾಚಾರದ ಕಮರಿಗಳಿದ್ದರೂ ಅದನ್ನು ದಾಟುವ ಪರಿಪಕ್ವತೆ ಹೊಂದಿದೆ.
ತಾತ್ಕಾಲಿಕವಾಗಿ ಮತದಾರರನ್ನು ಸೆಳೆಯುವ ಸೂಕ್ಷ್ಮಗಳನ್ನು ಚೆನ್ನಾಗಿ ಮೈಗೂಡಿಸಿಕೊಂಡಿದೆ. 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಪರವಾಗಿ ಮತದಾರರಿದ್ದರು; ಮೂಲ ಕಾಂಗ್ರೆಸಿಗರೆಂಬ ಸವಕಲು ವಾದ ಈ ಚುನಾವಣೆಯಲ್ಲಿಯೂ ಮುನ್ನೆಲೆಯ ಮಿಂಚಿನ ಓಟವಾದರೆ, ಕಾಂಗ್ರೆಸ್ಗೆ ಭಾರೀ ನಷ್ಟವಾಗುತ್ತದೆ. ಭಾಜಪ ತನ್ನ ನಾಯಕರನ್ನು ಕೇವಲ ಮುಖವಾಣಿಗಳೆಂದು ಭಾವಿಸಿ ಕಾರ್ಯಕರ್ತರಲ್ಲಿ ಹುಮ್ಮಸ್ಸಿನ ಚಾಮರವಿಡಿದು ಮತ ಬೇಟೆಯಾಡುವ ಕಲೆಯನ್ನು ಸಮಯಕ್ಕೆ ಬೇಕಾದಂತೆ ಧಾರಣಮಾಡಿಕೊಳ್ಳುತ್ತದೆ. ಯಡಿಯೂರಪ್ಪನವರು ಲಿಂಗಾಯತರ ಮೇರು ನಾಯಕ; ಆದರೆ ಅವರೊಳಗೆ ಕುದಿಯುತ್ತಿರುವ ಸೇಡಿನ ಕಿಚ್ಚು ಕಾಂಗ್ರೆಸ್ಗೆ ಹೇಗೆ ಲಾಭವಾಗುತ್ತದೆಯೋ ತಿಳಿಯದು?. ಜಗದೀಶ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಪ್ರವೇಶದಿಂದ ಕಾಂಗ್ರೆಸ್ ಪಡೆಯುವ ಮತಗಳಿಂದಲೂ ಅದರ ಮುನ್ನ್ನಡೆ ಅಡಗಿದೆ. ರಾಜಕೀಯ ದಲ್ಲಿ ಪಕ್ಷಾಂತರ ಸಹಜ ಪ್ರಕ್ರಿಯೆ. ಇದು ಅಸ್ಥಿರ ಸರಕಾರದ ಗುರಿಯಾಗ ಬಾರದು. ಆದುದರಿಂದ, ಕರ್ನಾಟಕದ ಸಮಗ್ರ ಅಭಿವೃದ್ಧಿ ಮತ್ತು ಜನಾಂಗೀಯ ಸಾಮರಸ್ಯ ಸ್ಥಾಪಿಸುವ ಒಂದು ಸುಭದ್ರ ಸರಕಾರದ ಅನಿವಾರ್ಯತೆ ಮತದಾರರ ಆಯ್ಕೆ ಮೂಲಕ ಆಗಬೇಕಿದೆ.