ಬಡವರಿಗೆ ಉಚಿತ ಔಷಧಿ ಸಿಗಲಿ
ಮಾನ್ಯರೇ,
ನಮ್ಮ ರಾಜ್ಯದಲ್ಲಿ ವಿಶೇಷವಾಗಿ ನರರೋಗ, ಕ್ಯಾನ್ಸರ್ ಕಾಯಿಲೆ ಮತ್ತು ಮೂತ್ರಪಿಂಡದ ಕಾಯಿಲೆಗಳಿಂದ ನರಳುತ್ತಿರುವವರಿಗೆ ಸಕಾಲದಲ್ಲಿ ತಪಾಸಣೆಗಳನ್ನು ಮಾಡಿಸಿ ಔಷಧಿಗಳನ್ನು ನಿಯಮಿತವಾಗಿ ಪಡೆದುಕೊಳ್ಳುವುದು ಕಷ್ಟವಾಗುತ್ತಿದೆ. ಉದಾಹರಣೆಗೆ ಮೂರ್ಛೆ ರೋಗಕ್ಕೆ ಪ್ರತಿದಿನ ಬೆಳಗ್ಗೆ ಎರಡು ಮಾತ್ರೆ, ಸಂಜೆ ಎರಡು ಮಾತ್ರೆ ಹೀಗೆ ಒಟ್ಟು ನಾಲ್ಕು ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗಿದ್ದು, ಇದಕ್ಕೆ ಭರಿಸಬೇಕಾದ ತಿಂಗಳ ವೆಚ್ಚ ರೂ. 1,500 ಹೊಂದಿಸಲಾಗದೆ ಹಲವು ಮೂರ್ಛೆ ರೋಗಿಗಳು ಔಷಧಿಯನ್ನು ಅರ್ಧದಲ್ಲಿಯೇ ಬಿಟ್ಟು ತೊಂದರೆಗೊಳಗಾಗುತ್ತಾರೆ. ಬಿಪಿಎಲ್ ಕಾರ್ಡ್‌ದಾರರಿಗೆ ಕೆಲವು ರಿಯಾಯಿತಿಗಳಿರುತ್ತದೆ. ಆದರೆ ಔಷಧಿ ಉಚಿತವಾಗಿ ಯಾವ ಆಸ್ಪತ್ರೆಗಳಲ್ಲಿಯೂ ಕೊಡುತ್ತಿಲ್ಲ.
ರಾಜಕೀಯ ಪಕ್ಷದ ನಾಯಕರು ಪ್ರಣಾಳಿಕೆಗಳನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಅಗ್ಗದ ಜನಪ್ರಿಯವಾದ ಯೋಜನೆಗಳನ್ನು ಘೋಷಿಸುವ ಮೊದಲು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಗಂಭೀರವಾದಂತಹ ತೊಂದರೆಗಳನ್ನು ಗಮನಹರಿಸಬೇಕು.
ಮುಂದಿನ ಸರಕಾರವು ಕ್ಯಾನ್ಸರ್, ನರರೋಗ, ಮೂತ್ರಪಿಂಡ ಕಾಯಿಲೆ ಮತ್ತು ಕ್ಷಯ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ನೀಡುವಂತಹ ವ್ಯವಸ್ಥೆಯನ್ನು ರೂಪಿಸಬೇಕು.
ವಿಶೇಷವಾಗಿ ಹಿರಿಯ ನಾಗರಿಕರು, ಬಿಪಿಎಲ್ ಕಾರ್ಡ್‌ದಾರರು ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರಿಗೆ ಔಷಧಿಗಳನ್ನು ನೀಡುವ ಕಾರ್ಯಕ್ರಮವನ್ನು ರೂಪಿಸಿದರೆ ಹಣದ ಕೊರತೆಯಿಂದಾಗಿ ಸಕಾಲದಲ್ಲಿ ತಪಾಸಣೆ ಮಾಡಿಸಲಾಗದೆ ಅಥವಾ ನಿಯಮಿತವಾಗಿ ಔಷಧಿಗಳನ್ನು ಸೇವಿಸಲಾಗದೆ ನರಳುತ್ತಿರುವ ಅಥವಾ ಪ್ರಾಣಗಳನ್ನು ಕಳೆದುಕೊಳ್ಳುತ್ತಿರುವ ಜೀವಗಳಿಗೆ ನೆರವು ನೀಡಬಹುದು. ಸರಕಾರಗಳನ್ನು ನಡೆಸುವ ಜನರಿಗೆ ತಾಯಿಹೃದಯವಿರಬೇಕು.