ಸೌದಿ ಅರೇಬಿಯಾ: ಮಸೀದಿಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ; ಮಂಗಳೂರಿನ ಯುವಕ ಮೃತ್ಯು
ರಿಯಾದ್,ಎ.21: ಮಸೀದಿಗೆ ಹೋಗಲು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟು ಮಂಗಳೂರು ಮೂಲದ ಯುವಕ ದಾರುಣವಾಗಿ ಮೃತಪಟ್ಟ ಘಟನೆ ಸೌದಿ ಅರೇಬಿಯಾದ ರಿಯಾದ್‌ನ ಬತ್‌ಹ ಸಮೀಪದ ದಬಾಬ್ ಸ್ಟ್ರೀಟ್‌ನಲ್ಲಿ ನಡೆದಿದೆ.
ಗುರುವಾರ ಸಂಜೆ 6.30 ಸುಮಾರಿಗೆ ಈ ಘಟನೆ ನಡೆದಿದ್ದು, ಮೃತಪಟ್ಟ ಯುವಕನನ್ನು ಮಂಗಳೂರು ಹೊರ ವಲಯದ ಸಜಿಪ ಎಂಬಲ್ಲಿನ ಕೋಟೆಕಣಿ ಮೂಲದ ಖಾಸಿಮ್ ಮತ್ತು ಝೈನಬಾ ದಂಪತಿಗಳ ಪುತ್ರ ಸಿರಾಜುದ್ದೀನ್(30) ಎಂದು ಗುರುತಿಸಲಾಗಿದೆ.
ಸಿರಾಜುದ್ದೀನ್ ಜೊತೆ ರಸ್ತೆ ದಾಟುತ್ತಿದ್ದ ಉಪ್ಪಳ ಮೂಲದ ಮಹಮ್ಮದ್ ಅಯಾಝ್ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಕಿಂಗ್ ಫಹದ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಸಿರಾಜುದ್ದೀನ್ ಹೌಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮಗ್ರಿಬ್ ನಮಾಝ್ ನಿರ್ವಹಿಸಲು ಮಸೀದಿಗೆ ತೆರಳಲು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಸಿರಾಜುದ್ದೀನ್ ಮತ್ತು ಅಯಾಝ್‌ಗೆ ಡಿಕ್ಕಿ ಹೊಡೆದಿದೆ. ಸಿರಾಜುದ್ದೀನ್ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತದೇಹವನ್ನು ಶುಮೈಸಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.