'ಮನ್ ಕಿ ಬಾತ್': ಭಾರತದ ಸಾಂಪ್ರದಾಯಿಕ ಕೈಮಗ್ಗದ ಧ್ವನಿ
ಸ್ವಾತಂತ್ರ್ಯ ಪೂರ್ವದಲ್ಲಿ 'ಖಾದಿ'ಯು ಭಾರತೀಯ ರಾಷ್ಟ್ರೀಯ ಆಂದೋಲನದ ಹೆಮ್ಮೆಯಾಗಿತ್ತು. ಸ್ವಾತಂತ್ರ್ಯದ ನಂತರ, 'ಖಾದಿ'ಯು ದೇಶಿಯತೆಯ ಹೆಮ್ಮೆಯಾಗಿದೆ. ಪ್ರಸ್ತುತ 'ಸ್ವಾವಲಂಬಿ ಭಾರತದ' ಗುರುತೆಂದರೆ ಅದು 'ಖಾದಿ'.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 'ವೋಕಲ್ ಫಾರ್ ಲೋಕಲ್' ಮಂತ್ರವು ಖಾದಿಯನ್ನು 'ಸ್ಥಳೀಯದಿಂದ ಜಾಗತಿಕ' ಮಟ್ಟಕ್ಕೆ ಕೊಂಡೊಯ್ದಿದೆ. ಈಗ ಖಾದಿ ಕೇವಲ ಫ್ಯಾಷನ್‌ನ ಸಂಕೇತವಲ್ಲ, ಅದು ಬಡವರ ಜೀವನದಲ್ಲಿ ಬದಲಾವಣೆಯ ಅತ್ಯಂತ ಶಕ್ತಿಯುತ ಮಾಧ್ಯಮವಾಗಿ ಮಾರ್ಪಟ್ಟಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಪೂಜ್ಯ ಬಾಪು ಅವರು ಭಾರತದ ರಾಷ್ಟ್ರೀಯ ಪರಂಪರೆಯಾದ ಖಾದಿಯನ್ನು ಅಹಿಂಸಾತ್ಮಕ ಚಳವಳಿಯ ಅತ್ಯಂತ ಪ್ರಬಲ ಮಾಧ್ಯಮವನ್ನಾಗಿ ಮಾಡಿದ್ದರು. ನವಭಾರತದ ʻಕುಶಲಕರ್ಮಿʼ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ಖಾದಿಯನ್ನು 'ಸ್ವಾವಲಂಬಿ ಭಾರತ' ನಿರ್ಮಾಣದ ಅತ್ಯಂತ ಶಕ್ತಿಯುತ ಆಧಾರಸ್ತಂಭವನ್ನಾಗಿ ಮಾಡಿದ್ದಾರೆ.
ಪ್ರಧಾನ ಮಂತ್ರಿಯವರ 'ಮನ್ ಕಿ ಬಾತ್' ಕಾರ್ಯಕ್ರಮವು ಖಾದಿಯನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಅತ್ಯಂತ ಮಹತ್ವದ ಕೊಡುಗೆ ನೀಡಿದೆ. ಇದರ ಪರಿಣಾಮವಾಗಿ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಒಟ್ಟು ವ್ಯವಹಾರವು 2021-2022ರಲ್ಲಿ 1.15 ಲಕ್ಷ ಕೋಟಿ ರೂ.ಗಳನ್ನು ದಾಟಿದೆ, ಇದು ಸ್ವತಃ ಒಂದು ಇತಿಹಾಸವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 'ಮನ್ ಕಿ ಬಾತ್'ನಲ್ಲಿ ಮಾತನಾಡಿ, “ನಾವು ಯಾವುದೇ ಖಾದಿ ಉತ್ಪನ್ನವನ್ನು ಖರೀದಿಸಿದಾಗ, ಹಗಲು ರಾತ್ರಿ ದುಡಿಯುವ ಲಕ್ಷಾಂತರ ನೇಕಾರರ ಜೀವನವನ್ನು ಬೆಳಗಿಸುತ್ತೇವೆ,ʼʼ ಎಂದು ಹೇಳಿದರು. ಇದು ಪ್ರಧಾನಮಂತ್ರಿಯವರ ನಾಯಕತ್ವದಲ್ಲಿ ಗ್ರಾಮೀಣ ಭಾರತದ ಬಗ್ಗೆ ಪ್ರಸ್ತುತ ಸರಕಾರದ ಬದ್ಧತೆಯನ್ನು ತೋರಿಸುತ್ತದೆ. ಇದರ ಪರಿಣಾಮವಾಗಿ ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಖಾದಿ ಉತ್ಪನ್ನಗಳ ಸ್ವೀಕಾರ ಹೆಚ್ಚಾಗಿದೆ. ಅದರ ಪ್ರಯೋಜನಗಳು ತಳಮಟ್ಟದಲ್ಲಿ ಕೆಲಸ ಮಾಡುವ ಖಾದಿ ಕಾರ್ಮಿಕರಿಗೆ ತಲುಪಿವೆ. ʻಖಾದಿ ಮತ್ತು ಗ್ರಾಮೋದ್ಯೋಗ ಆಯೋಗʼವು(ಕೆವಿಐಸಿ) 2023ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಖಾದಿ ಕುಶಲಕರ್ಮಿಗಳ ಸಂಭಾವನೆಯನ್ನು ಶೇಕಡಾ 33 ಕ್ಕಿಂತ ಹೆಚ್ಚಿಸಿದೆ. 2014ರಿಂದೀಚೆಗೆ ವೇತನದಲ್ಲಿ ಶೇ.150ರಷ್ಟು ಹೆಚ್ಚಳವಾಗಿದೆ.
ಸ್ವಾತಂತ್ರ್ಯದ ನಂತರ, ಖಾದಿ ಮತ್ತು ಗ್ರಾಮೋದ್ಯೋಗ ಚಟುವಟಿಕೆಗಳನ್ನು ಉತ್ತೇಜಿಸಲು 1956ರಲ್ಲಿ ʻಖಾದಿ ಮತ್ತು ಗ್ರಾಮೋದ್ಯೋಗ ಆಯೋಗʼವನ್ನು ಸ್ಥಾಪಿಸಲಾಯಿತು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ (ಎಂಎಸ್ಎಂಇ) ಸಚಿವಾಲಯದ ಅಡಿಯಲ್ಲಿ ಆಯೋಗವು ಭಾರತ ಸರಕಾರದ ಪ್ರಮುಖ ಉದ್ಯೋಗ ಆಧಾರಿತ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಅಕ್ಟೋಬರ್ 3, 2014ರಂದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಮೂಲಕ ಖಾದಿಯನ್ನು ಖರೀದಿಸುವಂತೆ ದೇಶದ ನಾಗರಿಕರಿಗೆ ಮನವಿ ಮಾಡಿದರು. ಇದು ಖಾದಿ ಕ್ಷೇತ್ರವನ್ನು ಪುನರುಜ್ಜೀವಗೊಳಿಸಿತು. "ನೀವು ಯಾವುದೇ ಖಾದಿ ಉತ್ಪನ್ನವನ್ನು ಖರೀದಿಸಿದರೆ, ನೀವು ಬಡ ವ್ಯಕ್ತಿಯ ಮನೆಯಲ್ಲಿ ಸಮೃದ್ಧಿಯ ದೀಪವನ್ನು ಬೆಳಗಿಸುತ್ತೀರಿ," ಎಂದು ಪ್ರಧಾನಿ ಹೇಳಿದ್ದರು. ಇದರ ಪರಿಣಾಮವಾಗಿ ಒಂದೇ ವಾರದೊಳಗೆ ಖಾದಿ ಮಾರಾಟದಲ್ಲಿ ಶೇ.125ರಷ್ಟು ಹೆಚ್ಚಳವು ಮರುಕಳಿಸಿತು.
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಖಾದಿ ಬಟ್ಟೆಗಳಲ್ಲಿ ನಾವೀನ್ಯವನ್ನು ತರುವ ಮೂಲಕ ಖಾದಿಯನ್ನು ಭಾರತದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಫ್ಯಾಷನ್ ಆಯ್ಕೆಯನ್ನಾಗಿ ಮಾಡಿದೆ. ಪ್ರಧಾನಿಯವರ 'ರಾಷ್ಟ್ರಕ್ಕಾಗಿ ಖಾದಿ, ಫ್ಯಾಷನ್‌ಗಾಗಿ ಖಾದಿ ಮತ್ತು ಪರಿವರ್ತನೆಗಾಗಿ ಖಾದಿ' ಎಂಬ ಮಂತ್ರವು ಬದಲಾವಣೆಯ ಪ್ರಮುಖ ಮಾಧ್ಯಮವಾಗಿ ಮಾರ್ಪಟ್ಟಿದೆ. ಹಾಗೆಯೇ, ಗುಡಿ ಕೈಗಾರಿಕೆಗಳ ಉತ್ತೇಜನಕ್ಕಾಗಿ 2017-18ರಿಂದ ಇಲ್ಲಿಯವರೆಗೆ "ಹನಿ ಮಿಷನ್" ಕಾರ್ಯಕ್ರಮದಡಿಯಲ್ಲಿ, 1.80 ಲಕ್ಷ ಜೇನು ಪೆಟ್ಟಿಗೆಗಳು ಮತ್ತು ʻಜೇನು ಕಾಲೋನಿʼಗಳನ್ನು 18 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ನೀಡಲಾಗಿದೆ. ʻಕುಂಬಾರರ ಸಬಲೀಕರಣʼ ಕಾರ್ಯಕ್ರಮದಡಿಯಲ್ಲಿ ಕುಂಬಾರರಿಗೆ 25 ಸಾವಿರಕ್ಕೂ ಹೆಚ್ಚು ವಿದ್ಯುತ್ ಕಿಟ್‌ಗಳನ್ನು ನೀಡಲಾಗಿದೆ. ಚರ್ಮ ಉದ್ಯಮದ ಅಡಿಯಲ್ಲಿ ಸುಮಾರು 3,100 ಕುಶಲಕರ್ಮಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗಿದೆ. ಪಾದರಕ್ಷೆಗಳ ತಯಾರಿಕೆಗೆ 1600ಕ್ಕೂ ಹೆಚ್ಚು ಸುಧಾರಿತ ಉಪಕರಣಗಳ ಕಿಟ್‌ಗಳನ್ನು ಒದಗಿಸಲಾಗಿದೆ. ಅಂತೆಯೇ, ಅಗರಬತ್ತಿ ಕುಶಲಕರ್ಮಿಗಳಿಗೆ ತರಬೇತಿಯ ನಂತರ 1080 ಪೆಡಲ್ ಚಾಲಿತ ಯಂತ್ರಗಳನ್ನು ವಿತರಿಸಲಾಗಿದೆ. ಇದರೊಂದಿಗೆ, ಕೃಷಿ ಆಧಾರಿತ ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆಗಳು, ಟರ್ನ್‌ವುಡ್ ಕರಕುಶಲತೆ, ಖಾದಿ ನೈಸರ್ಗಿಕ ಪೇಂಟ್, ʻಪ್ರಾಜೆಕ್ಟ್ ರಿ-ಹ್ಯಾಬ್ʼ, ʻಖಾದಿ ಫ್ಯಾಬ್ರಿಕ್ʼ ಪಾದರಕ್ಷೆಗಳು ಮತ್ತು ʻಕೈಯಿಂದ ತಯಾರಿಸಿದ ಕಾಗದ ಉತ್ಪಾದನಾ ಯೋಜನೆʼಯು ಗ್ರಾಮೀಣ ಕೈಗಾರಿಕೆಗಳಿಗೆ ಹೊಸ ಗುರುತನ್ನು ನೀಡಿವೆ.
ಕೊರೋನ ಸಾಂಕ್ರಾಮಿಕದ ಅವಧಿಯಲ್ಲಿ ʻಖಾದಿ ಮತ್ತು ಗ್ರಾಮೋದ್ಯೋಗ ಆಯೋಗʼವು ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮದ(ಪಿಎಂಇಜಿಪಿ) ಮೂಲಕ ಹೊಸ ನವೋದ್ಯಮಗಳನ್ನು ನೇಮಿಸಿಕೊಂಡು ದಾಖಲೆಯನ್ನು ನಿರ್ಮಿಸಿತ್ತು. ಈ ಬಿಕ್ಕಟ್ಟನ್ನು ಒಂದು ಅವಕಾಶವಾಗಿ ತೆಗೆದುಕೊಂಡು, ದೇಶವ್ಯಾಪಿ ಲಾಕ್‌ಡೌನ್‌ನಿಂದಾಗಿ ಅತಿ ಹೆಚ್ಚು ಪರಿಣಾಮ ಬೀರಿದ ಅವಧಿಯಾದ ಮಾರ್ಚ್ 31, 2021ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ, ಆಯೋಗವು 2188.78 ಕೋಟಿ ರೂ.ಗಳನ್ನು ವಿತರಿಸುವ ಮೂಲಕ 5,95,320 ಉದ್ಯೋಗಗಳನ್ನು ಸೃಷ್ಟಿಸಿದೆ. ಇದು 2008ರಲ್ಲಿ ಪ್ರಾರಂಭವಾದಾಗಿನಿಂದ ಗರಿಷ್ಠವೆನಿಸಿದೆ. 'ಆತ್ಮನಿರ್ಭರ ಭಾರತ್' ಅಭಿಯಾನದಲ್ಲಿ ದೈತ್ಯ ಹೆಜ್ಜೆ ಇಟ್ಟಿರುವ ʻಕೆವಿಐಸಿʼ, 2008 ರಿಂದ 64,30,618 ಜನರಿಗೆ ಉದ್ಯೋಗ ನೀಡಿದೆ, ಕಳೆದ ಹಣಕಾಸು ವರ್ಷದಲ್ಲಿ 2021-22ರಲ್ಲಿ 19148.01 ಕೋಟಿ ರೂ.ಗಳ ಮಾರ್ಜಿನ್ ಹಣವನ್ನು ವಿತರಿಸಿದೆ.
ಪ್ರಧಾನ ಮಂತ್ರಿಯವರ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಖಾದಿಯ ಪ್ರಚಾರದಿಂದಾಗಿ ಸಾಮಾನ್ಯ ದಿನಗಳಲ್ಲೂ ಖಾದಿ ಮಾರಾಟ ಹೆಚ್ಚಾಗಿದ್ದು, ಕಳೆದ ಹಣಕಾಸು ವರ್ಷದಲ್ಲಿ, ಅಕ್ಟೋಬರ್ 2, 2022 ರಂದು, ನವದೆಹಲಿಯ ʻಕೊನಾಟ್ ಪ್ಲೇಸ್ʼಲ್ಲಿರುವ 'ಖಾದಿ ಇಂಡಿಯಾ' ಶೋರೂಂ 34 ಕೋಟಿ ರೂ. ಗಳ ಮೌಲ್ಯದ ಸುಮಾರು 1 ಖಾದಿ-ಗ್ರಾಮೋದ್ಯೋಗ ಉತ್ಪನ್ನಗಳನ್ನು ಮಾರಾಟ ಮಾಡಿದೆ. ಇದು ಒಂದೇ ದಿನದಲ್ಲಿ ಅತಿದೊಡ್ಡ ಮಾರಾಟವಾಗಿದೆ. ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಭಾರತ ಸರಕಾರದ ʻಹರ್ ಘರ್ ತಿರಂಗಾʼ ಕಾರ್ಯಕ್ರಮದ ಸಮಯದಲ್ಲಿ, ಖಾದಿಯಿಂದ ತಯಾರಿಸಿದ ರಾಷ್ಟ್ರಧ್ವಜದ ಬೇಡಿಕೆಯಲ್ಲಿ ಶೇಕಡಾ 75 ರಷ್ಟು ಹೆಚ್ಚಳ ಕಂಡುಬಂದಿತು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಖಾದಿ ವಿಶೇಷವಾಗಿ ಯುವಜನರಲ್ಲಿ ಜನಪ್ರಿಯ ಬ್ರಾಂಡ್ ಆಗಿ ಮಾರ್ಪಟ್ಟಿದೆ. ಇದು ದೇಶದ ಉನ್ನತ ಫ್ಯಾಷನ್ ವಿನ್ಯಾಸಕರ ಪ್ರಮುಖ ಆಯ್ಕೆಯಾಗಿದೆ. 2014-15 ರಿಂದ 2021-22ರ ಹಣಕಾಸು ವರ್ಷದಲ್ಲಿ ಖಾದಿ ಉತ್ಪಾದನೆ ಶೇಕಡಾ 191 ರಷ್ಟು ಹೆಚ್ಚಾಗಿದ್ದು, ಮಾರಾಟದಲ್ಲಿ ಶೇಕಡಾ 332 ರಷ್ಟು ಏರಿಕೆ ಕಂಡುಬಂದಿದೆ. ಇದೇ ಅವಧಿಯಲ್ಲಿ ಗ್ರಾಮೀಣ ಕೈಗಾರಿಕಾ ವಲಯದ ಉತ್ಪಾದನೆ ಶೇಕಡಾ 206ರಷ್ಟು ಹೆಚ್ಚಾಗಿದ್ದರೆ, ಮಾರಾಟವು ಶೇಕಡಾ 245 ರಷ್ಟು ಹೆಚ್ಚಾಗಿದೆ. ಕೋವಿಡ್ ಸಾಂಕ್ರಾಮಿಕದ ಎರಡನೇ ಲಾಕ್‌ಡೌನ್ ಸಮಯದಲ್ಲಿ ʻಕೆವಿಐಸಿʼಗೆ 45 ಕೋಟಿ ರೂ.ಗಳ ಸರಕಾರಿ ಖರೀದಿ ಆದೇಶವು ಲಭಿಸಿದ್ದು, ಇದು ಖಾದಿ ಕುಶಲಕರ್ಮಿಗಳಿಗೆ ದೊಡ್ಡ ಉತ್ತೇಜನ ನೀಡಿತು.
ಖಾದಿ ಬಟ್ಟೆಗಳಾಗಿರಲಿ, ಕರಕುಶಲ ಉತ್ಪನ್ನಗಳಾಗಿರಲಿ ಅಥವಾ ಗ್ರಾಮೀಣ ಕೈಗಾರಿಕೆಗಳಲ್ಲಿ ತಯಾರಿಸಿದ ಆಹಾರವಾಗಿರಲಿ, ಈ ವಸ್ತುಗಳು ಭಾರತಕ್ಕೆ ಒಂದು ರಾಷ್ಟ್ರವಾಗಿ ಅಂತರರಾಷ್ಟ್ರೀಯ ಮಾನ್ಯತೆಯನ್ನು ತಂದುಕೊಟ್ಟಿವೆ ಮತ್ತು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಿವೆ. ಈ ಉತ್ಪನ್ನಗಳು ವಿಶ್ವ ದರ್ಜೆಯವು ಮಾತ್ರವಲ್ಲದೆ ಪ್ರಕೃತಿಗೆ ಹತ್ತಿರವಾಗಿವೆ. ಹವಾಮಾನ ಬದಲಾವಣೆಯೊಂದಿಗೆ ಹೆಣಗಾಡುತ್ತಿರುವ ಪ್ರಸ್ತುತ ಜಗತ್ತಿಗೆ, ನಮ್ಮ ಹಳ್ಳಿಗಳಿಂದ ಬರುವ ಈ ಉತ್ಪನ್ನಗಳು ಆದರ್ಶವೆಂದು ಸಾಬೀತುಪಡಿಸಬಹುದು, ಇದು ಸ್ವಾವಲಂಬಿ ಭಾರತದ ಗುರುತಾಗಿದೆ.
ಪ್ರಧಾನ ಮಂತ್ರಿಯವರ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮವು ಏಪ್ರಿಲ್ 30, 2023 ರಂದು ತನ್ನ ನೂರು ಕಂತುಗಳನ್ನು ಪೂರೈಸಲಿದೆ. ನಾವು ಖಾದಿಯನ್ನು ಅಳವಡಿಸಿಕೊಂಡ ರೀತಿಯಲ್ಲಿಲ್ಲೇ, ನಾವು ಮೊದಲಿಗಿಂತ ಹೆಚ್ಚಾಗಿ 'ವೋಕಲ್ ಫಾರ್ ಲೋಕಲ್' ಆಗಿರಲು ಮತ್ತು ಭಾರತವನ್ನು ಪ್ರತಿಯೊಂದು ಅರ್ಥದಲ್ಲಿಯೂ ಸ್ವಾವಲಂಬಿಯನ್ನಾಗಿ ಮಾಡಲು ಸಂಕಲ್ಪ ಮಾಡುತ್ತೇವೆ ಎಂದು ನಾನು ಆಶಿಸುತ್ತೇನೆ.
ಮನೋಜ್ ಕುಮಾರ್,
ಅಧ್ಯಕ್ಷರು, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಭಾರತ ಸರ್ಕಾರ