ಕೋಮುಹಿಂಸಾಚಾರ ಸಂತ್ರಸ್ತರಿಗೆ ಏಕರೂಪದ ಪರಿಹಾರ ಅಗತ್ಯ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಗಲಭೆ, ಕೋಮು ಹಿಂಸಾಚಾರ, ದಂಗೆಯಂತಹ ಸಂದರ್ಭಗಳಲ್ಲಿ ಬಲಿಯಾದ ಅಮಾಯಕರಿಗೆ ದೇಶಾದ್ಯಂತ ಏಕರೂಪ ಮತ್ತು ನ್ಯಾಯಸಮ್ಮತ ಪರಿಹಾರ ನೀತಿ ರೂಪಿಸುವಂತೆ ಸಂಘಟನೆಯೊಂದು ಸುಪ್ರೀಂಕೋರ್ಟನ್ನು ಕೋರಿದೆ. ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸೂಕ್ತ ಉತ್ತರ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ. ‘‘ದ್ವೇಷಾಪರಾಧ ಮತ್ತು ಗುಂಪು ಹತ್ಯೆಯ ಸಂತ್ರಸ್ತರಿಗೆ ಪರಿಹಾರ ನೀಡುವಾಗ ಕೇಂದ್ರ ಅಥವಾ ರಾಜ್ಯ ಸರಕಾರಗಳು ನ್ಯಾಯವನ್ನು ಪರಿಪಾಲಿಸುತ್ತಿಲ್ಲ. ಪರಿಹಾರ ನೀಡುವುದಕ್ಕೆ ಯಾವುದೇ ಮಾನದಂಡಗಳಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ತಾರತಮ್ಯವನ್ನು ಅನುರಿಸಲಾಗುತ್ತಿದೆ’’ ಎಂದು ಮುಸ್ಲಿಮ್ ಫಾರ್ ಪ್ರೋಗ್ರೆಸ್ ಆ್ಯಂಡ್ ರಿಫಾರ್ಮ್ಸ್ ಸಲ್ಲಿಸಿದ ಅರ್ಜಿಯಲ್ಲಿ ದೂರಿಕೊಂಡಿದೆ. ‘‘ರಾಜಸ್ಥಾನದಲ್ಲಿ ಹತ್ಯೆಗೀಡಾದ ಕನ್ಹಯ್ಯಲಾಲ್ ಪ್ರಕರಣದಲ್ಲಿ ಸರಕಾರ 50 ಲಕ್ಷ ರೂ. ಪರಿಹಾರ ಮತ್ತು ಸರಕಾರಿ ಉದ್ಯೋಗವನ್ನು ನೀಡಿದೆ. ಇದೇ ರಾಜ್ಯದಲ್ಲಿ ಅಲ್ಪಸಂಖ್ಯಾತ ವ್ಯಕ್ತಿಯೊಬ್ಬ ನಕಲಿ ಗೋರಕ್ಷಕರಿಂದ ಹತ್ಯೆಯಾದಾಗ ಕೇವಲ 5 ಲಕ್ಷ ರೂ ಪರಿಹಾರ ನೀಡಿತ್ತು’’ ಎಂದು ಅರ್ಜಿಯಲ್ಲಿ ಉದಾಹರಿಸಲಾಗಿದೆ. ಸುಪ್ರೀಂಕೋರ್ಟ್ ಇದೀಗ ವಿಚಾರಣೆಗೆ ಅಂಗೀಕರಿಸಿದ್ದು ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಉತ್ತರವನ್ನು ನಿರೀಕ್ಷಿಸುತ್ತಿದೆ.
ಹಿಂಸಾಚಾರದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ಸರಕಾರದ ತಾರತಮ್ಯದ ಉದಾಹರಣೆಗಾಗಿ ನಾವು ದೂರದ ರಾಜಸ್ಥಾನಕ್ಕೆ ಹೋಗಬೇಕಾಗಿಲ್ಲ. ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಕೋಮುಹಿಂಸಾಚಾರದಲ್ಲಿ ಇಲ್ಲಿನ ಸರಕಾರ ಪರಿಹಾರ ನೀಡುವ ಸಂದರ್ಭದಲ್ಲಿ ಮಾಡಿದ ಪಕ್ಷಪಾತ, ಮಲತಾಯಿ ಧೋರಣೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು. ಸಂಘಪರಿವಾರದ ಕಾರ್ಯಕರ್ತನೊಬ್ಬನ ಹತ್ಯೆಯಾದಾಗ ಆ ಸಂತ್ರಸ್ತನ ಕುಟುಂಬಕ್ಕೆ ಸರಕಾರ 25 ಲಕ್ಷ ರೂ. ಪರಿಹಾರವನ್ನು ನೀಡಿತ್ತು. ಇದೇ ಸಂದರ್ಭದಲ್ಲಿ ಮಸೂದ್ ಮತ್ತು ಫಾಝಿಲ್ ಎನ್ನುವವರೂ ದ್ವೇಷ ಕಾರಣಕ್ಕೆ ಪ್ರಾಣ ತೆತ್ತಿದ್ದರು. ಇವರ ಕುಟುಂಬಕ್ಕೆ ಸರಕಾರ ಯಾವುದೇ ಪರಿಹಾರವನ್ನು ನೀಡಲಿಲ್ಲ. ಹತ್ಯೆಗೀಡಾದ ಸಂಘಪರಿವಾರ ಕಾರ್ಯಕರ್ತನ ಮನೆಗೆ ಮುಖ್ಯಮಂತ್ರಿ ಭೇಟಿ ನೀಡಿದ್ದರೆ, ಇತ್ತ ಈ ಇಬ್ಬರು ಸಂತ್ರಸ್ತರ ನಿವಾಸಗಳಿಗೆ ಭೇಟಿ ನೀಡುವುದು ತನ್ನ ಕರ್ತವ್ಯ ಎಂದು ಮುಖ್ಯಮಂತ್ರಿ ಭಾವಿಸಲಿಲ್ಲ. ಶಿವಮೊಗ್ಗದಲ್ಲಿ ಹರ್ಷ ಎನ್ನುವ ಸಂಘಪರಿವಾರದ ಕಾರ್ಯಕರ್ತನ ಹತ್ಯೆಯಾದಾಗಲೂ ಸರಕಾರ ದೊಡ್ಡ ಮಟ್ಟದ ಪರಿಹಾರವನ್ನು ಘೋಷಣೆ ಮಾಡಿತ್ತು. ಇತ್ತೀಚೆಗೆ ಮಂಡ್ಯದಲ್ಲಿ ನಕಲಿ ಗೋರಕ್ಷಕರಿಂದ ಬರ್ಬರವಾಗಿ ಓರ್ವ ಹತ್ಯೆಗೀಡಾದಾಗ ಸರಕಾರ ಯಾವುದೇ ಪರಿಹಾರವನ್ನು ಘೋಷಣೆ ಮಾಡಿಲ್ಲ. ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಅಮಾಯಕರು ದ್ವೇಷಕ್ಕೆ ಬಲಿಯಾದಾಗ ಯಾವುದೇ ಪರಿಹಾರ ನೀಡದೆ ವೌನವಾಗಿರುವುದೆಂದರೆ, ಪರೋಕ್ಷವಾಗಿ ಆ ಹತ್ಯೆಯನ್ನು ಸರಕಾರ ಸಮರ್ಥಿಸುತ್ತಿದೆ ಎಂದು ಅರ್ಥ. ಸುರತ್ಕಲ್ನಲ್ಲಿ ಅಮಾಯಕ ಯುವಕನೊಬ್ಬನ ಹತ್ಯೆ ನಡೆದಾಗ ನಮ್ಮ ಮುಖ್ಯಮಂತ್ರಿ ಬೊಮ್ಮಾಯಿಯವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ‘‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ’’ ಎಂದು ಉತ್ತರಿಸಿ ಕಗ್ಗೊಲೆಗೆ ಪರೋಕ್ಷ ಮಾನ್ಯತೆಯನ್ನು ನೀಡಿದ್ದರು.
ಕೋಮು ಹಿಂಸಾಚಾರಗಳಲ್ಲಿ ಭಾಗಿಯಾದ ಸಂಘಟನೆಗಳು ರಾಜಕೀಯ ಪಕ್ಷಗಳ ಜೊತೆಗೆ ಸಹಭಾಗಿತ್ವವನ್ನು ಹೊಂದಿದಾಗ ಪರಿಹಾರ ನೀಡುವಿಕೆಯಲ್ಲಿ ತಾರತಮ್ಯ ಸಹಜ. ಕೋಮು ಹಿಂಸಾಚಾರದ ಸಂದರ್ಭದಲ್ಲಿ ಬಲಿಯಾದವರಿಗೆ ಪರಿಹಾರ ನೀಡುವ ಸಂದರ್ಭದಲ್ಲಿ ಕರ್ನಾಟಕ ಸರಕಾರ ಅನುಸರಿಸಿದ ಪಕ್ಷಪಾತಗಳಿಗೆ ಇದೇ ಕಾರಣವಾಗಿದೆ. ಅಲ್ಪಸಂಖ್ಯಾತ ಸಮುದಾಯದ ಸಂತ್ರಸ್ತರಿಗೆ ಪರಿಹಾರ ನೀಡಿದರೆ ‘ಎಲ್ಲಿ ಸಂಘಪರಿವಾರದ ಸಂಘಟನೆಯ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆಯೋ’ ಎನ್ನುವ ಆತಂಕ ಸರಕಾರಕ್ಕಿತ್ತು. ಇದೇ ಸಂದರ್ಭದಲ್ಲಿ, ಸಂಘಪರಿವಾರ ಸಂಘಟನೆಗೆ ಸೇರಿದ ಕಾರ್ಯಕರ್ತರ ಹತ್ಯೆ ನಡೆದಾಗ ಸರಕಾರ ಗರಿಷ್ಠ ಮಟ್ಟದ ಪರಿಹಾರವನ್ನು ಘೋಷಣೆ ಮಾಡಿ ಆ ಸಂಘಟನೆಗಳು ತನ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸದಂತೆ ನೋಡಿಕೊಂಡಿತು. ಆದರೆ ಸರಕಾರ ಪರಿಹಾರ ಧನವನ್ನು ಒದಗಿಸುವುದು ಜನರು ಕಟ್ಟಿರುವ ತೆರಿಗೆಯ ಹಣದಿಂದಲೇ ಹೊರತು, ಪಕ್ಷದ ತಿಜೋರಿಯಿಂದಲ್ಲ.
ರಾಜ್ಯದ ಬೊಕ್ಕಸದಿಂದ ಪರಿಹಾರವನ್ನು ವಿತರಿಸುವ ಸಂದರ್ಭದಲ್ಲಿ ತನ್ನ ಪಕ್ಷದ ಕಾರ್ಯಕರ್ತರಿಗೆ ಒಂದು, ಉಳಿದವರಿಗೆ ಇನ್ನೊಂದು ಎನ್ನುವಂತಹ ಭೇದಭಾವವನ್ನು ವ್ಯಕ್ತಪಡಿಸುವುದು ಸಂವಿಧಾನ ವಿರೋಧಿಯಾಗಿದೆ. ಜನರ ಹಣದ ಸ್ಪಷ್ಟ ದುರುಪಯೋಗವಾಗಿದೆ. ಸದ್ಯ ದೇಶದಲ್ಲಿ ರಾಜಕೀಯ ಪಕ್ಷಗಳ ಕೈವಾಡವಿಲ್ಲದೆ ಕೋಮುಗಲಭೆ ನಡೆಯಲು ಸಾಧ್ಯವೇ ಇಲ್ಲ ಎನ್ನುವ ವಾತಾವರಣವಿದೆ. ಅಧಿಕಾರಕ್ಕೆ ಬರಲು ಕೋಮುಗಲಭೆಗಳು ಸುಲಭದ ದಾರಿ ಎಂದು ಅವುಗಳು ನಂಬಿಕೊಂಡಿವೆ. ಹೀಗೆ ಕೋಮುಗಲಭೆಗಳಿಂದ ಅಧಿಕಾರ ಹಿಡಿದ ಸರಕಾರ, ಕೋಮುಗಲಭೆ ಸಂತ್ರಸ್ತರಿಗೆ ಪರಿಹಾರ ವಿತರಿಸುವಲ್ಲಿ ನ್ಯಾಯವನ್ನು ಯಾಕಾದರೂ ಪಾಲಿಸುತ್ತದೆ? ಈ ಕಾರಣದಿಂದ, ದೇಶದಲ್ಲಿ ನ್ಯಾಯಸಮ್ಮತ ಪರಿಹಾರಕ್ಕಾಗಿ ಕಾನೂನನ್ನು ರೂಪಿಸುವುದು ಅತ್ಯಗತ್ಯವಾಗಿದೆ.
ದುರಂತವೆಂದರೆ, ಇಂದು ಸಂತ್ರಸ್ತರು ಪರಿಹಾರವನ್ನು ನಿರೀಕ್ಷಿಸುವುದಿರಲಿ, ಸಂತ್ರಸ್ತರನ್ನೇ ಅಪರಾಧಿಗಳನ್ನಾಗಿಸಿ ಜೈಲಿಗೆ ದೂಡುವಂತಹ ಸ್ಥಿತಿ ನಿರ್ಮಾಣವಾಗಿದೆ. ದಿಲ್ಲಿ ಗಲಭೆಯಲ್ಲಿ ಅನ್ಯಾಯಕ್ಕೊಳಗಾದವರನ್ನೇ ಗಲಭೆ ಸಂಚು ಆರೋಪದಲ್ಲಿ ಪೊಲೀಸರು ಬಂಧಿಸಲಾಯಿತು. ಅನ್ಯಾಯವೆಸಗಿದ ದುಷ್ಕರ್ಮಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದೇ ಸಂತ್ರಸ್ತರಿಗೆ ನೀಡಬಹುದಾದ ಅತ್ಯುತ್ತಮ ಪರಿಹಾರವಾಗಿದೆ. ಆದರೆ ಗುಜರಾತ್ ಹತ್ಯಾಕಾಂಡದಲ್ಲಿ ಭಾಗಿಯಾದ ದುಷ್ಕರ್ಮಿಗಳು ಒಬ್ಬೊಬ್ಬರಾಗಿ ಬಿಡುಗಡೆಯಾಗುತ್ತಿದ್ದಾರೆ. ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದ ಆರೋಪಿಗಳನ್ನು ಸರಕಾರವೇ ಮುಂದೆ ನಿಂತು ಬಿಡುಗಡೆ ಮಾಡುತ್ತವೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಇದರ ವಿರುದ್ಧ ಟೀಕೆಗಳು ವ್ಯಕ್ತವಾಗಿವೆಯಾದರೂ, ಸರಕಾರ ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಹೀಗಿರುವಾಗ, ಬಲಿಯಾದ ಅಮಾಯಕರಿಗೆ ಸರಕಾರದಿಂದ ನ್ಯಾಯಬದ್ಧವಾದ ಆರ್ಥಿಕ ಪರಿಹಾರವನ್ನು ನಿರೀಕ್ಷಿಸುವುದಾದರೂ ಹೇಗೆ ಸಾಧ್ಯ? ಈ ನಿಟ್ಟಿನಲ್ಲಿ ಯಾವುದೇ ಕೋಮುಹಿಂಸೆಯಲ್ಲಿ ಬಲಿಯಾದ ಸಂತ್ರಸ್ತರಿಗೆ ಏಕರೂಪವಾದ ಪರಿಹಾರವನ್ನು ನೀಡಲು ನ್ಯಾಯಾಲಯವೇ ಸ್ಪಷ್ಟ ಮಾರ್ಗದರ್ಶನವನ್ನು ನೀಡುವುದು ಅತ್ಯಗತ್ಯವಾಗಿದೆ.