ಅಂತ್ಯಸಂಸ್ಕಾರವೂ ಒಂದು ಉದ್ಯಮವಾಗುತ್ತಿರುವ ಈ ಸಮಯದಲ್ಲಿ..!
ನಾವು ಎಷ್ಟೇ ಧೈರ್ಯವಂತರೂ, ಆಶಾವಾದಿಗಳೂ ಮತ್ತು ವಿಚಾರವಾದಿಗಳಾದರೂ ಒಂದಲ್ಲ ಒಂದು ದಿನ ಸಾವು ಎಂಬ ಅಂತಿಮ ಸತ್ಯವನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ನಮ್ಮಎಲ್ಲಾ ಒಳ್ಳೆಯದಕ್ಕೂ ಕೆಟ್ಟದಕ್ಕೂ ಭೂತ, ವರ್ತಮಾನ ಹಾಗೂ ಭವಿಷ್ಯಕ್ಕೂ ಸಾವೇ ಅಂತಿಮ ಮುದ್ರೆ. ಸಾವನ್ನು ಸತ್ಯವನ್ನು ಅರಗಿಸಿಕೊಳ್ಳಲು ನಾವು ಉನ್ನತ ಮಟ್ಟದ ಮಾನಸಿಕ ಧೈರ್ಯವನ್ನು ಹೊಂದಿರಬೇಕು. ನೂರಾರು ವರ್ಷ ಬದುಕುವ ಮನುಷ್ಯ ಕೊನೆಗೆ ತನ್ನ ಸಾವನ್ನು ಸಹ ಅತ್ಯಂತಜತನತೆಯಿಂದ ಮತ್ತು ಪ್ರೀತಿಯಿಂದ ಸ್ವೀಕರಿಸಬೇಕಾಗುತ್ತದೆ. ಭೂಮಿಯ ಮೇಲೆ ಲಕ್ಷಾಂತರ ವರ್ಷಗಳ ಹಿಂದೆ ಮೊಟ್ಟಮೊದಲ ಬಾರಿಗೆ ಸಾವನ್ನು ಮಾನವ ಹೇಗೆ ಎದುರಿಸಿದ? ಹುಟ್ಟಿದ ಮೇಲೆ ನಾವು ಸಾಯಲೇಬೇಕು ಎನ್ನುವ ಪರಿಕಲ್ಪನೆ ಮೊದಲ ಬಾರಿಗೆ ಆತನಿಗೆ ಹೇಗೆ ಬಂತು? ಸಂಪೂರ್ಣ ಮಾನವ ವಿಕಾಸದ ಹಾದಿಯಲ್ಲಿ ಸಾವು ಎನ್ನುವುದು ಸಂಕೀರ್ಣವಾದ ಮತ್ತು ಕ್ಲಿಷೆಯಿಂದ ಕೂಡಿದ ಪದ. ಮನುಕುಲದ ವಿಕಾಸದ ಹಾದಿಯಲ್ಲಿ ಸಾವಿನ ಪದ ಉಂಟು ಮಾಡಿರುವಷ್ಟು ಸೋಜಿಗ, ಕುತೂಹಲ, ಭಯ, ಹೆದರಿಕೆ, ವೈರಾಗ್ಯ, ಸಂಭ್ರಮ ಬೇರೆ ಯಾವುದೂ ಸಹ ಇದುವರೆಗೂ ಉಂಟು ಮಾಡಿಲ್ಲ, ಮುಂದೆ ಉಂಟು ಮಾಡುವುದೂ ಇಲ್ಲ ಸಹ. ತತ್ವಜ್ಞಾನಿಗಳು, ಮನಃಶಾಸ್ತ್ರಜ್ಞರು ಮತ್ತು ಇತರರು ಸಾವಿನ ಪದಕ್ಕೆ ಸೂಕ್ತವಾದ ಅರ್ಥ ಮತ್ತು ಪರಿಕಲ್ಪನೆ ನೀಡಲು ಸಂಪೂರ್ಣ ಸೋತು ಹೋಗಿದ್ದಾರೆ, ಆದರೆಅವರ ಪ್ರಯತ್ನ ನಿಂತಿಲ್ಲ. ಬಹುಶಃ ಸಾವು ಇರುವವರೆಗೆ ಆ ಪ್ರಯತ್ನ ನಿಲ್ಲುವುದಿಲ್ಲ ಕೂಡ.
ಭಾರತದಲ್ಲಿ ಖಾಸಗಿ ವ್ಯಕ್ತಿಗಳು ಚಿತಾಗಾರ ನಡೆಸುವ ವ್ಯವಸ್ಥೆಯನ್ನು ಹೊಂದುವುದು ತೀರಾ ಅಪರೂಪ ಎನ್ನಬಹುದು. ನಮ್ಮ ದೇಶದಲ್ಲಿ ಸರಕಾರವೇ ಸ್ಮಶಾನ ಅಥವಾ ಚಿತಾಗಾರ ವ್ಯವಸ್ಥೆಯನ್ನು ನಡೆಸುತ್ತದೆ.ಆದರೆ ಅಮೆರಿಕ ಮತ್ತು ಕೆಲ ದೇಶಗಳಲ್ಲಿ ಸರಕಾರದೊಂದಿಗೆ ಖಾಸಗಿ ವ್ಯಕ್ತಿಗಳು ಸಹ ಚಿತಾಗಾರ ನಡೆಸಬಹುದು. ಅಲ್ಲಿ ಖಾಸಗಿ ವ್ಯಕ್ತಿಗಳು ಚಿತಾಗಾರ ನಡೆಸುವುದು ಕಾನೂನುಬದ್ಧ. ಇಂತಹ ಒಂದು ಚಿತಾಗಾರ ನಡೆಸುವ ಕೈಟ್ಲಿನ್‌ಡೌಟಿ ಎಂಬ ಅಮೆರಿಕದ ಲೇಖಕಿ ಜಗತ್ತಿನ ಬೇರೆ ಬೇರೆ ಸಂಸ್ಕೃತಿಗಳಲ್ಲಿ ಶವಗಳ ಅಂತ್ಯಸಂಸ್ಕಾರವನ್ನು ಹೇಗೆ ಮಾಡಲಾಗುತ್ತದೆ ಎನ್ನುವುದರ ಕುರಿತು ಜಗತ್ತಿನ ಕೆಲವು ದೇಶಗಳಿಗೆ ಭೇಟಿ ನೀಡಿಅಲ್ಲಿ ಸಾವಿನ ಬಗ್ಗೆ ಇರಬಹುದಾದ ಸಾಂಸ್ಕೃತಿಕ ಪರಿಕಲ್ಪನೆಗಳು, ಸತ್ತ ನಂತರ ವ್ಯಕ್ತಿಯ ಅಂತ್ಯಸಂಸ್ಕಾರದ ವಿಧಿವಿಧಾನಗಳು ಮತ್ತು ಅದರ ವಿಶೇಷಗಳ ಕುರಿತು ಮಾನವ ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ‘From Here to Eternity’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕವನ್ನು ಮೈಸೂರು ವಿಶ್ವವಿದ್ಯಾನಿಲಯದ ಡಾ. ಡಿ.ಸಿ. ನಂಜುಂಡರವರು ‘ಶಾಶ್ವತ ಸಾವಿನ ಲಹರಿ ಹುಡುಕುತ್ತಾ..’ ಎನ್ನುವ ಶೀರ್ಷಿಕೆಯಲ್ಲಿ ಉತ್ತಮವಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಪುಸ್ತಕ ಪ್ರೀತಿಪಾತ್ರರ ಮರಣವನ್ನು ಹೇಗೆ ನಿಭಾಯಿಸಬೇಕೆಂಬುದರ ಬಗ್ಗೆ ಸಾಮಾನ್ಯ ಜನರ ತಿಳುವಳಿಕೆಯನ್ನು ಹೆಚ್ಚಿಸುತ್ತದೆ. ಇತರ ಸಂಸ್ಕೃತಿಗಳಲ್ಲಿ ಸಾವನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದನ್ನು ನೇರವಾಗಿ ನಾವು ಈ ಪುಸ್ತಕದ ಮೂಲಕ ವೀಕ್ಷಿಸಬಹುದು! ಅಲ್ಲದೆ ಸಾವನ್ನು ಅರ್ಥಮಾಡಿಕೊಳ್ಳಲು ಯಾವ ನಿಗದಿತ ಮತ್ತು ನಿರ್ದಿಷ್ಟ ಮಾರ್ಗಗಳಿಲ್ಲ ಎಂದು ಈ ಪುಸ್ತಕ ನಮಗೆ ತೋರಿಸಬಲ್ಲದು.
ಇದು ಅಮೆರಿಕದ ಶ್ರೀಮತಿ ಕೈಟ್ಲಿನ್‌ಡೌಟಿಯವರ ಎರಡನೇಯ ಪುಸ್ತಕ. ಮೆಕ್ಸಿಕೊ, ಇಂಡೋನೇಶ್ಯ, ಜಪಾನ್, ಸ್ಪೇನ್, ಬೊಲಿವಿಯಾ ಮತ್ತು ಅಮೆರಿಕದಲ್ಲಿ ಶವಗಳ ಅಂತ್ಯಸಂಸ್ಕಾರದ ಪದ್ಧತಿಗಳನ್ನು ತನ್ನದೇ ಆದ ರೀತಿಯಲ್ಲಿ ಓದುಗರಿಗೆ ಈ ಪುಸ್ತಕ ವಿವರಿಸುತ್ತದೆ. ರಾಸಾಯನಿಕಗಳಿಂದ ಶವಗಳ ಸಂರಕ್ಷಣೆ (ಮಮ್ಮೀಕರಣ), ಶವಗಳನ್ನು ಜೀವನ ಪೂರ್ತಿ ಮನೆಯಲ್ಲಿ ಇಟ್ಟುಕೊಳ್ಳುವುದು (ಇಂಡೋನೇಶ್ಯಯಾದ ಥೋರ್ಜನ್ ಎಂಬ ಬುಡಕಟ್ಟು ಪಂಗಡದಲ್ಲಿ), ಶವಗಳನ್ನು ಮಣ್ಣಿನಲ್ಲಿ ಗೊಬ್ಬರದಂತೆ ಕೊಳೆಯಿಸುವುದು, ಶವಗಳ ಹಬ್ಬ, ಗಾಳಿಯಲ್ಲಿ ಅಂತ್ಯಕ್ರಿಯೆ ನಡೆಸುವುದು ಇತ್ಯಾದಿ. ತೀರಾ ನಂಬಲು ಅಸಾಧ್ಯವಾದ ರೀತಿಯ ಶವ ಸಂಸ್ಕಾರಗಳ ಪರಿಚಯ ನಮಗೆ ಈ ಪುಸ್ತಕದಿಂದ ಉಂಟಾಗುತ್ತದೆ. ಸಾವಿನ ಕುರಿತು ದುಃಖಿಸುವ ಮತ್ತು ಸಾವಿನ ಬಗ್ಗೆ ಮಾತನಾಡುವ ವಿಶ್ವದ ವಿವಿಧ ಸಂಸ್ಕೃತಿಗಳನ್ನು ಈ ಕೃತಿ ನಮಗೆ ಪರಿಚಯಿಸುತ್ತದೆ. ಅಮೆರಿಕ ಮತ್ತು ಕೆಲವು ದೇಶಗಳಲ್ಲಿ ಶವಸಂಸ್ಕಾರ ಹೇಗೆ ಹಣತರುವ ಒಂದು ಉದ್ಯಮವಾಗಿ ಬೆಳೆದಿದೆ ಎಂಬುದನ್ನು ಕೇಳಿದರೆ ನಮಗೆ ಆಶ್ಚರ್ಯ ಮತ್ತು ದು:ಖ ಎರಡು ಸಹ ಆಗುತ್ತದೆ.
ಪ್ರಪಂಚದ ಸಾವಿರಾರು ಸಂಸ್ಕೃತಿಗಳಲ್ಲಿ ಸಾವಿನ ಬಗ್ಗೆ ಬಹಳ ವಿಚಿತ್ರವಾದ, ವಿಭಿನ್ನವಾದ ,ವಿಶೇಷವಾದ ಮತ್ತು ವಿಕಾರವಾದ ಆಚರಣೆಗಳಿವೆ. ಆಯಾ ಆಚರಣೆಗಳು ಆಯಾ ಸಂಸ್ಕೃತಿಗೆ ಸರಿ ಅನಿಸುತ್ತದೆ. ಬಹುಶಃ ನಮಗೆ ವಿಕಾರ ಎನಿಸುವ, ವಿಚಿತ್ರವೆನಿಸುವ ಸಾವಿನ ನಂತರದ ಆಚರಣೆಗಳು ಈ ಭೂಮಿಯ ಮೇಲೆ ವಿಶೇಷವಾಗಿ ಆದಿವಾಸಿಗಳಲ್ಲಿ ನೂರಾರು ವಷರ್ಗಳಿಂದ ನಡೆಯುತ್ತಿದೆ. ಇದನ್ನೇ ಈ ಕೃತಿಯ ಮೂಲ ಲೇಖಕಿ ಇಂಡೋನೇಶ್ಯದಲ್ಲಿ ಇರುವಒಂದು ವಿಶಿಷ್ಟ ಸಾವಿನ ಆಚರಣೆಯ ಬಗ್ಗೆ ವಿಶ್ವದ ಗಮನ ಸೆಳೆಯುವಂತೆ ಮಾಡಿದ್ದಾರೆ. ಇದರ ಮೂಲಕ ಸತ್ತನಂತರವೂ ಮನುಷ್ಯ ಬದುಕಲು ಸಾಧ್ಯ. ಸಾವಿನೊಂದಿಗೆ ಭೂಮಿಯ ಮೇಲಿನ ಯಾರ ಋಣ ಸಹ ಮುಗಿಯುವುದಿಲ್ಲ. ಸತ್ತ ನಂತರವೂ ಆತನ ಬದುಕು ವಾಸ್ತವದಲ್ಲಿ ನಡೆಯುತ್ತಲೇ ಇರುತ್ತದೆ ಎನ್ನುವುದಕ್ಕೆ ಇಂಡೋನೇಶಿಯಾದ ಥಾರ್ಜನ್ ಆದಿವಾಸಿ ಸಮುದಾಯವೇ ಉದಾಹರಣೆ. ಹಾಗಂತ ಇದು ಭೂಮಿಯಲಿ ್ಲಅತ್ಯಂತ ಉತ್ಕೃಷ್ಟ ವ್ಯವಸ್ಥೆಯೇ? ಅಲ್ಲ. ಏಕೆಂದರೆ ವಿವಿಧ ಸಂಸ್ಕೃತಿಗಳು ವಿವಿಧ ರೀತಿಯಲ್ಲಿ ತಮ್ಮೊಂದಿಗೆ ಬಾಳಿ ಬದುಕಿ ಕೊನೆಗೆ ತೀರಿಕೊಂಡ ಜನರನ್ನು ನೆನಪಿಟ್ಟುಕೊಳ್ಳಲು ತಮ್ಮದೇ ಆದ ರೀತಿಯನ್ನು ಅಳವಡಿಸಿಕೊಂಡಿವೆ.ಜಗತ್ತು ನಾಗಾಲೋಟದಿಂದ ಮುಂದುವರಿದ ಹಾಗೆ ನೆಮ್ಮದಿಯಿಂದ ಶವ ಸಂಸ್ಕಾರ ಮಾಡುವುದಕ್ಕೂ ಕೆಲವೊಮ್ಮೆ ಕುಟುಂಬಸ್ಥರಿಗೆ ಸಮಯ ಮತ್ತು ಆಸಕ್ತಿ ಎರಡು ಸಹ ಇರುವುದಿಲ್ಲ.
ಭಾರತ ಸೇರಿದಂತೆ ಜಗತ್ತಿನ ಇತರ ಸಂಸ್ಕೃತಿಗಳಲ್ಲಿ ಸಾವಿನ ಬಗ್ಗೆ ವಿಚಿತ್ರ, ವಿಭಿನ್ನ ಮತ್ತು ಭಯದ ಕಲ್ಪನೆಗಳಿವೆ. ಏಕೆಂದರೆ ಸಾವಿನ ನಂತರ ಮುಂದೇನು ಎನ್ನುವ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿಲ್ಲ. ಮಾನವನಿಗೆ ಸಾವು ಎಂಬ ಶಬ್ದವೇ ಅತ್ಯಂತ ಭಯ ಹುಟ್ಟಿಸುವಂತಹ ಪದಪುಂಜ. ಇಂತಹ ಸಾವಿನ ಬಗ್ಗೆ ಸಾಹಿತಿಗಳು ತೀರಾ ಅಪರೂಪವಾಗಿ ಮತ್ತು ಕೆಲವು ಸಾಹಿತಿಗಳು ಕಥೆಗಳ ರೂಪದಲ್ಲಿ, ಪ್ರಬಂಧಗಳ ರೂಪದಲ್ಲಿ ಮತ್ತು ಕಾದಂಬರಿ ರೂಪದಲ್ಲಿ ಬರೆದಿದ್ದಾರೆ. ಭಾರತದ ಸಾಹಿತ್ಯ ಕ್ಷೇತ್ರದಲ್ಲಿ ಸಾವಿನ ಬಗ್ಗೆ ಸಾಹಿತ್ಯಗಳ ರಚನೆ ಬಹಳ ಅಪರೂಪ. ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ ಸಾವಿನ ಬಗ್ಗೆ ಬರೆಯುವ ಸಾಕಷ್ಟು ಲೇಖಕರು, ವಿದ್ವಾಂಸರು ಇದ್ದಾರೆ. ಭಾರತದ ಮಹಾನಗರಗಳಲ್ಲಿ ಶವಸಂಸ್ಕಾರವನ್ನು ಖಾಸಗಿಯವರಿಗೆ ವಹಿಸುವ ಸಂಪ್ರದಾಯ ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ. ನಮ್ಮ ದೇಶದಲ್ಲಿ ‘ವೈದ್ಯಕೀಯ ಕಾಲೇಜುಗಳಿಗೆ ಮೃತದೇಹವನ್ನು ದಾನ ಮಾಡುವ ಪದ್ಧತಿ ಕೆಲವೆಡೆ ಮಾತ್ರ ಕಂಡುಬರುತ್ತದೆ. ಭಾರತ ದೇಶ ಹಲವಾರು ಜಾತಿ ಧರ್ಮಗಳಿಂದ ಕೂಡಿರುವುದರಿಂದ ಇಲ್ಲಿ ಅಂತ್ಯಸಂಸ್ಕಾರದಲ್ಲಿ ವೈವಿಧ್ಯತೆಗಳು ಕಂಡುಬರುತ್ತವೆ. ನಮ್ಮಲ್ಲಿ ಪ್ರತೀ ಜಾತಿಯೂ ತನ್ನ ಅಂತ್ಯಸಂಸ್ಕಾರದ ವಿಧಿ ವಿಧಾನವನ್ನು ಹೊಂದಿದೆ.
‘ಶಾಶ್ವತ ಸಾವಿನ ಲಹರಿ ಹುಡುಕುತ್ತಾ...’ ನಿಜಕ್ಕೂ ಒಂದು ಅದ್ಭುತ ಎನಿಸುವ ಗತಕಾಲದ ಮತ್ತು ಆಧುನಿಕ ಕಾಲದ ಮಧ್ಯದಒಂದು ಕೊಂಡಿಯಂತೆ ಇರುವ ವೈಚಾರಿಕ ಮತ್ತು ವೈಯಕ್ತಿಕ ಅನುಭವದಿಂದ ಕೂಡಿದ ವೈಜ್ಞಾನಿಕ ಕಾದಂಬರಿ ಎನ್ನುವುದು ನನ್ನ ಅನಿಸಿಕೆ. ನಮ್ಮ ಸಾವಿನ ನಂತರ ನಮ್ಮದೇಹ ಏನು ಎನ್ನುವುದು ತಿಳಿದುಕೊಳ್ಳಲು ಇದನ್ನು ಖಂಡಿತವಾಗಿ ಓದಬೇಕು. ಸಾವಿನ ಬಗ್ಗೆ ಮನುಕುಲದ ಉಗಮದಿಂದ ಹಿಡಿದು ಇಂದಿನವರೆಗೂ ಸಾವಿನ ಬಗ್ಗೆ ಜನರಲ್ಲಿ ಬಹಳಷ್ಟು ಕುತೂಹಲ, ಭಯ ಮತ್ತು ಉದ್ವೇಗ ಕೂಡಿಕೊಂಡಿವೆ. ಈ ವಿಶ್ವ ಇರುವ ತನಕ ಇಂತಹ ಕುತೂಹಲಗಳು ಮುಂದುವರಿಯುತ್ತಲೇ ಇರುತ್ತವೆ. ಸತ್ತ ನಂತರ ಏನು ಎಂಬ ಸಾವಿರಾರು ವರ್ಷಗಳ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ, ಮುಂದೆ ಸಿಗುವುದಿಲ್ಲ. ಮನುಷ್ಯ ಬದುಕಿದ್ದಾಗಲೇ ಯಾರು ಸಹ ಸಾವಿನ ಬಗ್ಗೆ ಯೋಚಿಸುವುದಿಲ್ಲ. ಹಾಗಂತ ಸಾವು ನಮ್ಮನ್ನು ಮರೆಯುವುದಿಲ್ಲ ಕೂಡ. ಸಾವನ್ನು ಸದಾ ಬೆನ್ನಿಗೆ ಕಟ್ಟಿಕೊಂಡೇ ನಾವು ಸಾಯುವ ತನಕ ಬದುಕಬೇಕಾಗಿದೆ. ಸತ್ತ ನಂತರವೂ ನಾವು ಬದುಕಬೇಕಾದರೆ ಏನು ಮಾಡಬೇಕು ಎನ್ನುವುದು ಕುತೂಹಲಕಾರಿ ಪ್ರಶ್ನೆ. ದೇಹವನ್ನು ದಾನ ಮಾಡುವುದು ಬಹಳ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪದ್ಧತಿಯಾದರೂ ಅದು ಇಂದಿಗೂ ಸಹ ಅಷ್ಟೊಂದು ಪ್ರಚಲಿತದಲ್ಲಿಲ್ಲ ಎನ್ನುವುದು ಅಷ್ಟೇ ಸತ್ಯ. ಈ ಪುಸ್ತಕವನ್ನು ಡಿ.ಸಿ. ನಂಜುಂಡರವರು ‘ಶಾಶ್ವತ ಸಾವಿನ ಲಹರಿ ಹುಡುಕುತ್ತಾ’ ಎನ್ನುವ ಶೀರ್ಷಿಕೆಯಲ್ಲಿ ಉತ್ತಮವಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.