ಮುಸ್ಲಿಂ ಮೀಸಲಾತಿ ರದ್ದತಿ: ವಿಚಾರಣೆ ಮುಂದೂಡುವ ಬಿಜೆಪಿ ಸರಕಾರದ ಮನವಿ ಚುನಾವಣಾ ಕುತಂತ್ರವಲ್ಲವೇ ?
"ಇದು ಮುಸ್ಲಿಮರಿಗೆ, ಲಿಂಗಾಯತರಿಗೆ ಹಾಗೂ ಒಕ್ಕಲಿಗರಿಗೂ ಮಾಡುತ್ತಿರುವ ವಂಚನೆಯಲ್ಲವೇ ?"
"ಮುಸ್ಲಿಂ ಮೀಸಲಾತಿ ರದ್ದಿನ ಆದೇಶ ಮೇ 9 ರ ತನಕ ಜಾರಿ ಇಲ್ಲ- ಅಲ್ಲಿಯವರೆಗೆ 2002 ರ ಆದೇಶವೇ ಜಾರಿ"
"ಸುಪ್ರೀಂ ನಲ್ಲಿ ಮುಸ್ಲಿಮ್ ಮೀಸಲಾತಿ ರದ್ದು ಆದೇಶದ ವಿಚಾರಣೆಯನ್ನು ಪದೇ ಪದೇ ಮುಂದೂಡಲು ಬಿಜೆಪಿ ಸರ್ಕಾರದ ಮಾಡುತ್ತಿರುವ ಮನವಿ ಚುನಾವಣಾ ಕುತಂತ್ರವಲ್ಲವೇ?"
"ಇದು ಮುಸ್ಲಿಮರಿಗೂ, ಲಿಂಗಾಯತರಿಗೂ, ಒಕ್ಕಲಿಗರಿಗೂ ಕೂಡ ಮಾಡುತ್ತಿರುವ ವಂಚನೆಯಲ್ಲವೇ?"
ಆತ್ಮೀಯರೇ,
ಇಂದು ಕರ್ನಾಟಕದ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಮಾರ್ಚ್ 23ರ ಮುಸ್ಲಿಂ ಮೀಸಲಾತಿ ರದ್ದು ಆದೇಶದ ಬಗ್ಗೆ ತನ್ನ ಅಫಿಡವಿಟ್ ಮಂಡಿಸಲು ಸುಪ್ರೀಂ ಕೋರ್ಟಿನಲ್ಲಿ ಮೇ 9 ರ ತನಕ ಮತ್ತೊಂದು ಗಡುವು ಕೇಳಿದೆ.
ಇದು ತನ್ನ ಅಸಾಂವಿಧಾನಿಕ ನಡೆಯನ್ನು ಸಮರ್ಥಿಸಿಕೊಳ್ಳಲಾಗದೆ ಬಿಜೆಪಿ ಸರ್ಕಾರ ಕೇಳಿದ ನಾಲ್ಕನೇ ವಿಸ್ತರಣೆ. ಮೇ 9 ರಂದೂ ಕೂಡ ಅದು ವಿಸ್ತರಣೆ ಕೇಳಿದರೆ ಸುಪ್ರೀಂ ಕೋರ್ಟಿನ ಬೇಸಿಗೆ ರಜಾ ಪ್ರಾರಂಭವಾಗುತ್ತದೆ. ಹಾಗಿದ್ದಲ್ಲಿ ತಾನು ಲಿಂಗಾಯತ-ಒಕ್ಕಲಿಗರ ಪರವಾಗಿ ಮೀಸಲಾತಿ ಹೆಚ್ಚಿಸಿದ್ದೇನೆ ಎಂದು ಚುನಾವಣಾ ಪ್ರಚಾರ ಮಾಡುತ್ತಿರುವ ಬಿಜೆಪಿ ಸರ್ಕಾರ ಅದನ್ನು ಸುಪ್ರೀಂ ಕೋರ್ಟಿನಲ್ಲಿ ಏಕೆ ಸಮರ್ಥಿಸಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದೆ?
ಏಕೆಂದರೆ ಬಿಜೆಪಿ ಸರ್ಕಾರದ ಈ ಮೀಸಲಾತಿ ನೀತಿ ಅಸಾಂವಿಧಾನಿಕ. ಕಾನೂನು ಬಾಹಿರ.
ಇದು ವಿಚಾರಣೆಗೆ ಬಂದರೆ ಬಿಜೆಪಿ ಆದೇಶ ಆದೇಶ ಸಿಂಧುವಾಗುವುದಿಲ್ಲ. ಆ ಆದೇಶವನ್ನು ಸುಪ್ರೀಂ ರದ್ದು ಮಾಡುತ್ತದೆ. ಆಗ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗುತ್ತದೆ. ಆದ್ದರಿಂದಲೇ ಇಂದು ಮತ್ತೊಮ್ಮೆ ಮೇ 9ರ ತನಕ ವಿಸ್ತರಣೆ ಕೇಳಿದೆ.
ಏಕೆಂದರೆ ಮೇ 10 ಕ್ಕೆ ಚುನಾವಣೆ. ಮೇ 8 ಕ್ಕೆ ಚುನಾವಣಾ ಪ್ರಚಾರ ಮುಕ್ತಾಯ. ಸುಪ್ರೀಂನಲ್ಲಿ ಅಲ್ಲಿಯವರೆಗೆ ಗಡುವು ಪಡೆದುಕೊಂಡರೆ, ತಾವು ಮುಸ್ಲಿಂ ಮೀಸಲಾತಿ ರದ್ದು ಮಾಡಿ ಲಿಂಗಾಯತ-ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಿದೆವು ಎಂದು ಸುಳ್ಳು ಪ್ರಚಾರ ಮಾಡುತ್ತಾ ಲಿಂಗಾಯತ ಮತ್ತು ಒಕ್ಕಲಿಗರಿಬ್ಬರಿಗೂ ವಂಚಿಸುತ್ತಿರಬಹುದು..!
ಈ ಚುನಾವಣಾ ಕುತಂತ್ರದ ಭಾಗವಾಗಿಯೇ ಬಿಜೆಪಿ ಸರ್ಕಾರ ಮೇ 9ರ ತನಕ ಗಡುವು ಕೇಳಿದೆ. ಇದಲ್ಲದೆ ವಿಚಾರಣೆಯಲ್ಲಿ ಮೇ 9 ರ ತನಕ ವಿಸ್ತರಣೆ ಕೇಳುವುದಾದರೆ ಅಲ್ಲಿಯ ತನಕ ತಡೆಯಾಜ್ಞೆ ಕೊಡಬೇಕು ಎಂದು ಅಹವಾಲುದಾರ ಪರ ವಕೀಲರು ಕೇಳಿದಾಗ: "ಅದರ ಅಗತ್ಯವಿಲ್ಲ. ನಾವು ಅಲ್ಲಿಯ ತನಕ ಹೊಸ ನೀತಿಯನ್ನು ಜಾರಿ ಮಾಡುವುದಿಲ್ಲ" ಎಂದಷ್ಟೇ ಸರ್ಕಾರಿ ವಕೀಲರು ಹೇಳಿದ್ದಾರೆ.
ಆದರೆ ಅಹವಾಲುದಾರ ಪರ ವಕೀಲರು ಅಷ್ಟು ಸಾಲುವುದಿಲ್ಲ. ಬದಲಿಗೆ ಹೊಸ ನೀತಿ ಜಾರಿ ಮಾಡದಿರುವುದರ ಜೊತೆಗೆ 2002ರಲ್ಲಿ ಜಾರಿಯಾದ ಹಳೆಯ ನೀತಿಯನ್ನೇ ಜಾರಿ ಮಾಡುತ್ತೇವೆ ಎಂದು ಸರ್ಕಾರ ಭರವಸೆ ಕೊಡಬೇಕು ಎಂದು ಬಲವಾಗಿ ವಾದಿಸಿದ್ದಾರೆ. ಅನಿವಾರ್ಯವಾಗಿ ಸರ್ಕಾರಿ ವಕೀಲರು ಅದನ್ನು ಒಪ್ಪಿಕೊಂಡಿದ್ದಾರೆ.
ಹೀಗಾಗಿ ನ್ಯಾಯಾಧೀಶರು ಇವತ್ತಿನ ತಮ್ಮ ಆದೇಶದಲ್ಲಿ ಮುಂದಿನ ವಿಚಾರಣೆಯನ್ನು ಮೇ 9 ಕ್ಕೆ ಮುಂದೂಡಿರುವುದರ ಜೊತೆಗೆ ಸರ್ಕಾರಿ ವಕೀಲರು ಮುಂದಿನ ವಿಚಾರಣೆಯ ತನಕ ಹೊಸ ನೀತಿಯನ್ನು ಜಾರಿ ಮಾಡದೆ ಹಳೆ ಆದೇಶವನ್ನೇ ಅರ್ಥಾತ್ ಮುಸ್ಲಿಮರಿಗೆ ಶೇ. 4 ರ ಮೀಸಲಾತಿ ಆದೇಶವನ್ನೇ ಮೇ 9 ರವರೆಗೆ ಮುಂದುವರೆಸುವುದಾಗಿ ಭರವಸೆ ಕೊಟ್ಟಿರುವುದನ್ನು ದಾಖಲಿಸಿದ್ದಾರೆ
(ಹೆಚ್ಚಿನ ವಿವರಗಳನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ಪಡೆದುಕೊಳ್ಳಬಹುದು:
https://www.livelaw.in/top-stories/supreme-court-karnataka-muslim-reservation-sc-adjourns-hearing-may-9-records-assurance-earlier-regime-would-continue-227143)
ಅಂದರೆ ಬಿಜೆಪಿ ಸರ್ಕಾರದ ಮಾರ್ಚ್ 23 ರ ಮುಸ್ಲಿಂ ಮೀಸಲಾತಿ ರದ್ದಿನ ಆದೇಶಕ್ಕೆ ಸುಪ್ರೀಂಕೋರ್ಟು ಮೇ 9 ರತನಕ ತಡೆಯಾಜ್ಞೆಯನ್ನೇ ಕೊಟ್ಟಂತಾಗಿದೆ.
ಆದರೆ ಹಾಗೆ ಒಪ್ಪಿಕೊಂಡರೆ ಚುನಾವಣೆಯಲ್ಲಿ ತಮ್ಮ ಮುಸ್ಲಿಂ ವಿರೋಧಿ ಪ್ರಚಾರಕ್ಕೆ ಪೆಟ್ಟು ಎಂದು ಬಿಜೆಪಿ ಮಾತುಗಳ ಕಸರತ್ತನ್ನು ಮಾಡುತ್ತಿದೆ.
ಹೀಗಾಗಿ ಮಾರ್ಚ್ 23 ರ ಮುಸ್ಲಿಂ ಮೀಸಲಾತಿ ರದ್ದು, ಅವರಿಂದ ಕಿತ್ತು ಲಿಂಗಾಯತ ಮತ್ತು ಒಕ್ಕಲಿಗರಿಗೆ ಹಂಚುವ ಬಿಜೆಪಿ ಸರ್ಕಾರದ ಆದೇಶ ಮೇ 9ರ ತನಕವಂತೂ ಜಾರಿಯಲ್ಲಿರುವುದಿಲ್ಲ. ಇದರ ಬಗ್ಗೆ ಬಿಜೆಪಿ ಏನೇ ಹೇಳಿದರೂ ಅದು ಸುಳ್ಳು ಪ್ರಚಾರವೇ ಆಗಿರುತ್ತದೆ.
ಎಲ್ಲಕಿಂತ ಹೆಚ್ಚಾಗಿ ಬಿಜೆಪಿ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ತನ್ನ ಈ ಕೋಮುವಾದಿ ಆದೇಶವನ್ನು ಸಮರ್ಥಿಸಿಕೊಳ್ಳಲು ಆಗುವುದಿಲ್ಲ ಎಂದು ಗೊತ್ತಾಗಿದೆ, ಹೀಗಾಗಿಯೇ ವಿಚಾರಣೆಯನ್ನು ಪದೇಪದೇ ಮುಂದೂಡುತ್ತಿದೆ.
ಈಗಲಾದರೂ ಕರ್ನಾಟಕದ ಜನ ಬಿಜೆಪಿಯ ಈ ಕುತಂತ್ರಿ, ಕೋಮುವಾದಿ ಚುನಾವಣಾ ಪ್ರಚಾರಗಳನ್ನು ಅರ್ಥ ಮಾಡಿಕೊಳ್ಳುವರೇ ?
ಜಸ್ಟ್ ಆಸ್ಕಿಂಗ್
- ಶಿವಸುಂದರ್