ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಎಂಬ ನಕಲಿ BBC ಸಮೀಕ್ಷೆ ವೈರಲ್ !
ಹೊಸದಿಲ್ಲಿ: ಬಿಬಿಸಿ ನಡೆಸಿದ್ದೆಂದು ಹೇಳಿಕೊಂಡ ಸಮೀಕ್ಷೆಯ ಪ್ರಕಾರ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ ಅಧಿಕಾರದ ಗದ್ದುಗೆಯೇರಲಿದೆ ಎಂದು ಹೇಳುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದರ ಪ್ರಕಾರ ಈ ಸಮೀಕ್ಷೆಯಲ್ಲಿ ಬಿಜೆಪಿಗೆ 130-142 ಸ್ಥಾನಗಳು, ಕಾಂಗ್ರೆಸ್ ಪಕ್ಷಕ್ಕೆ 58ರಿಂದ 66 ಸ್ಥಾನಗಳು, ಜೆಡಿ(ಎಸ್) ಪಕ್ಷಕ್ಕೆ 22-29 ಸ್ಥಾನಗಳು ಹಾಗೂ ಇತರರಿಗೆ 1-3 ಸ್ಥಾನಗಳು ದೊರಕಲಿವೆ. ಆದರೆ ವಾಸ್ತವದಲ್ಲಿ ಬಿಬಿಸಿ ಈ ವರ್ಷ ಇಂತಹ ಯಾವುದೇ ಸಮೀಕ್ಷೆ ಕೈಗೊಂಡಿಲ್ಲ. ಈ ವೈರಲ್ ಪೋಸ್ಟ್‌ನಲ್ಲಿರುವ ಲಿಂಕ್ ಒಂದನ್ನು ತೆರೆದಾಗ ಅದು ಬಿಬಿಸಿ ಹಿಂದಿ ಇದರ 'ಕರ್ನಾಟಕ' ವಿಭಾಗಕ್ಕೆ ಹೋಗುತ್ತದೆ. ಆದರೆ ಇಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಯಾವುದೇ ಬಿಬಿಸಿ ಸಮೀಕ್ಷೆ ಕುರಿತ ಉಲ್ಲೇಖವಿಲ್ಲ. ಬಿಬಿಸಿ ಇಂಡಿಯಾ ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣ ಖಾತೆಗಳಲ್ಲೂ ಈ ಕುರಿತು ಮಾಹಿತಿಯಿಲ್ಲ.
ಬಿಬಿಸಿ ನಡೆಸಿದ ಸಮೀಕ್ಷೆಯದ್ದೆಂದು ಹೇಳಿಕೊಂಡು ಇಂತಹುದೇ ಒಂದು ಪೋಸ್ಟ್ 2018 ಚುನಾವಣೆ ಸಂದರ್ಭವೂ ವೈರಲ್ ಆಗಿತ್ತು.