ಇಂದಿನ ಮೋದಿಯವರನ್ನು ನಿನ್ನೆಯ ಬುದ್ಧ-ಬಸವರು ಸೋಲಿಸಬಹುದೇ?
ಬುದ್ಧ-ಬಸವ-ಅಂಬೇಡ್ಕರ್ ಅವರು ತಮ್ಮ ಕಾಲದ ಅಂಧಕಾರವನ್ನು ಹೋಗಲಾಡಿಸಲು ಅನುಸರಿಸಿದ ವಿವೇಕದ ತಿರುಳನ್ನೇ ಗ್ರಾಮ್ಸ್ಕಿ ಇಪ್ಪತ್ತನೇ ಶತಮಾನದ ಭಾಷೆಯಲ್ಲಿ ಹೇಳಿದ್ದಾನೆ. ಇಂದು ಕೂಡ ಅದೇ ಬಗೆಯ ನಿಶಿತಮತಿ ಬದಲಾವಣೆಗೆ ಅಗತ್ಯವಿದೆ. ವಾಸ್ತವ ಎಷ್ಟೇ ಭೀಕರವಾಗಿದ್ದರೂ ಅದನ್ನು ನಮ್ಮ ತಯಾರಿಗೆ ತಕ್ಕಂತೆ ಅಥವಾ ಬಯಕೆಗೆ ತಕ್ಕಂತೆ ಕುಗ್ಗಿಸದೆ ಮತ್ತು ಹಿಗ್ಗಿಸದೆಯೇ ಹೇಗಿದೆಯೋ ಹಾಗೆ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಆಗ ಮಾತ್ರ ಹುಸಿಯಲ್ಲದ ನೈಜ ಬಿಡುಗಡೆಯ ದಾರಿಯ ಬಗ್ಗೆ ಸ್ಪಷ್ಟತೆಯೂ ಸಿಗುತ್ತದೆ. ಆ ಸ್ಪಷ್ಟತೆಯೇ ಬೇಕಿರುವ ಆತ್ಮಸ್ಥೈರ್ಯವನ್ನು ಒದಗಿಸುತ್ತದೆ. ಆ ಬಿಡುಗಡೆಯ ಮಾರ್ಗದಲ್ಲಿ ಜನರ ಐಕ್ಯ ಸಂಘರ್ಷವೇ ಬದಲಾವಣೆಗೆ ಬೇಕಿರುವ ಭರವಸೆಯನ್ನು ಒದಗಿಸುತ್ತದೆ.
ವರ್ತಮಾನದ ಮೋದಿಯನ್ನು, ಕೋಮುವಾದಿ ಫ್ಯಾಶಿಸಂ ಅನ್ನು ಈ ನಾಡಿನಲ್ಲಿ ಗತಿಸಿಹೋದ ಬುದ್ಧ ಬಸವರ ಬಂಡಾಯದ ಇತಿಹಾಸವು ಸೋಲಿಸಬಹುದೇ? ಆಗಿಹೋದ ಇತಿಹಾಸವು ನೆಲದ ಮಣ್ಣಲ್ಲಿ ಅಂತಹ ಬಂಡಾಯ ಗುಣವನ್ನು ಬಿತ್ತಿಹೋಗಿರುತ್ತದೆಯೇ? ಎಲ್ಲಕ್ಕಿಂತ ಹೆಚ್ಚಾಗಿ ಈ ನೆಲದ ಗುಣ ಎನ್ನುವುದು ನಿಶ್ಚಲವೇ? ನಿರಂತರವೇ? ಕಾಲಾನುವರ್ತಿಯಾಗಿ, ಯುಗಧರ್ಮಕ್ಕೆ ಪಕ್ಕಾಗಿ ನೆಲದ ಸ್ವಭಾವವೂ ಬದಲಾಗುವುದಿಲ್ಲವೇ? ಅದೆಲ್ಲಾ ಇರಲಿ, ಈ ನೆಲದ ಗುಣ ಎನ್ನುವುದು ಏಕಸ್ವರೂಪಿಯೇ? ಕರ್ನಾಟಕದಂಥ ಬುದ್ಧ-ಬಸವರ ನಾಡಿನಲ್ಲಿ ಬ್ರಾಹ್ಮಣಶಾಹಿ ಕೋಮುವಾದವು ಬಸವರ ಅನುಯಾಯಿಗಳೆಂದು ಹೇಳಿಕೊಳ್ಳುವವರಲ್ಲೇ ನೆಲೆಕಂಡುಕೊಂಡ ವರ್ತಮಾನ ಈ ಎಲ್ಲಾ ಪ್ರಶ್ನೆಗಳನ್ನು ಹುಟ್ಟಿಹಾಕುತ್ತಿದೆ. ಈ ಪ್ರಶ್ನೆಗಳಿಗೆ 'ಆಳ-ಅಗಲ'ದ ಉತ್ತರ ಕಂಡುಕೊಳ್ಳುವ ಮುನ್ನವೇ ಕೆಲವು ಲಿಂಗಾಯತ ನಾಯಕರು ಬಿಜೆಪಿಯನ್ನು ತೊರೆದಿರುವುದು ಈ ನೆಲದ ಗುಣದಲ್ಲೇ ಕೋಮುವಾದಿ ವಿರೋಧ ಸ್ವಭಾವವಿದೆ ಎಂಬ ಬೋಳೆ ಆಶಾವಾದಗಳಿಗೂ ಮರುಹುಟ್ಟು ಕೊಡುತ್ತಿದೆ. ಆದರೆ ಆಶಾವಾದವೇ ಇಲ್ಲದೇ ವರ್ತಮಾನದಲ್ಲಿ ಈಸುವುದು ಹೇಗೆ? ಭವಿಷ್ಯವನ್ನು ಕಟ್ಟುವುದು ಹೇಗೆ? ಎಂಬ ವಾಸ್ತವವಾದಿ ಅಸಹಾಯಕತೆಗಳು ಹಲವು ಸಂದೇಹಗಳನ್ನು ಒಡಲಲ್ಲಿ ಇಟ್ಟುಕೊಂಡೇ ಇಂಥಾ ಆಶಾವಾದಗಳನ್ನು ಕರ್ತವ್ಯವೆಂಬಂತೆ ಪ್ರಚಾರ ಮಾಡುತ್ತಿವೆ.
ಸಂಘರ್ಷದ ಬೆಂಕಿಯಿಲ್ಲದೆ ಬಿಡುಗಡೆಯ ಬೆಳಕು ಸಿಗುವುದೆ?
ಹಾಗಿದ್ದಲ್ಲಿ, ಸುತ್ತಮುತ್ತಲೂ ಗಾಡಾಂಧಕಾರವೇ ತುಂಬಿಕೊಂಡಿರುವಾಗ ಬೆಳಕಿನ ಕಿರಣಗಳನ್ನು ಎಲ್ಲಿ ಹುಡುಕಬೇಕು? ಬುದ್ಧ-ಬಸವರು ತಮ್ಮ ಕಾಲದಲ್ಲಿ ಕಂಡುಕೊಡ ಬಿಡುಗಡೆಯ ಮಾರ್ಗದಲ್ಲಿ ಹಲವು ಸಾರ್ವತ್ರಿಕ ಸತ್ಯಗಳಿವೆ. ಯಾವ ಹುಸಿ ಆಶಾವಾದಗಳನ್ನು ನೆಚ್ಚಿಕೊಳ್ಳದೆ ಬಿಡುಗಡೆಯ ಅಗತ್ಯವೊಂದನ್ನೇ ಆತ್ಯಂತಿಕವಾಗಿ ನೆಚ್ಚಿಕೊಂಡು ಅಂದಿನ ಅಂಧಕಾರದ ವಿರುದ್ಧ ಅವರು ನಡೆಸಿದ ರಾಜಿರಹಿತ ಸಂಘರ್ಷವು ಹುಟ್ಟಿಸಿದ ಬೆಂಕಿ ಮತ್ತು ಬೆಳಕಿನಲ್ಲೇ ವಿಮೋಚನೆಯ ದರ್ಶನದ ಸಾಕ್ಷಾತ್ಕಾರವಾಗಿದ್ದು.. ಈ ಆಧುನಿಕ ಯುಗದಲ್ಲಿ ಮೋದಿಯ ಪಿತಾಮಹ ಇಟಲಿಯ ಮುಸ್ಸೋಲಿನಿಯ ಫ್ಯಾಶಿಸ್ಟ್ ದಮನದ ವಿರುದ್ಧ ಹೋರಾಡುತ್ತಾ ಸೆರೆಮನೆಯಲ್ಲೇ ಅಸುನೀಗಿದ ಖ್ಯಾತ ಮಾರ್ಕ್ಸ್ ವಾದಿ ಚಿಂತಕ ಗ್ರಾಮ್ಸ್ಕಿ ಸಹ ಕಗ್ಗತ್ತಲ ಕಾಲದಲ್ಲಿ ಆಶಾವಾದ ಇಟ್ಟುಕೊಳ್ಳುವ ಬಗ್ಗೆ ಸಾಕಷ್ಟು ಚಿಂತಿಸಿ ಹೀಗೆ ಹೇಳುತ್ತಾನೆ:Pessimism Of The Intellect and Optimism Of The Will ಇದರ ಭಾವಾರ್ಥವಿಷ್ಟೆ. ''ವಾಸ್ತವವನ್ನು ಹೇಗಿದೆಯೋ ಹಾಗೆ ಅರ್ಥಮಾಡಿಕೊಳ್ಳಬೇಕು- ಹೇಗಿದ್ದರೂ ಸರಿ ಅದನ್ನು ಬದಲಾಯಿಸಬೇಕು, ಬದಲಾಯಿಸಬಹುದು ಎಂಬ ಆತ್ಮ ಸ್ಥೈರ್ಯವನ್ನು ಹೊಂದಿರಬೇಕು.'' ಅಂದರೆ ವಾಸ್ತವದ ಭೀಕರತೆ ಭಯಪಡಿಸುವಂತಿದ್ದ ಮಾತ್ರಕ್ಕೆ ಅದನ್ನು ನಮಗೆ ಸಮಾಧಾನವಾಗುವ ಹಾಗೆ ವ್ಯಾಖ್ಯಾನ ಮಾಡಬಾರದು. ಬದಲಿಗೆ ಅದನ್ನು ಹೇಗಿದೆಯೋ ಹಾಗೆ ಅರ್ಥ ಮಾಡಿಕೊಂಡರೆ ಮಾತ್ರ ಅದನ್ನು ಬದಲಿಸುವ ಹುಸಿಯಲ್ಲದ ನೈಜ-ಮಾರ್ಗಗಳನ್ನು ಹುಡುಕಬಹುದು ಹಾಗೂ ವಾಸ್ತವವು ಎಷ್ಟೇ ಭೀಕರವಾಗಿದ್ದರೂ ಅದರಿಂದ ಧೃತಿಗೆಡದೆ ಅದನ್ನು ಸಮಷ್ಟಿ ಪ್ರಯತ್ನದಿಂದ ಬದಲಿಸಬಹುದು ಮತ್ತು ಬದಲಿಸಬೇಕು ಎಂಬ ಆತ್ಮಸ್ಥೈರ್ಯವನ್ನು ಹೊಂದಿದ್ದರೆ ಮಾತ್ರ ನೈಜ ಬದಲಾವಣೆ ಸಾಧ್ಯ ಎಂಬುದು ಗ್ರಾಮ್ಸ್ಕಿಯ ವಿವೇಕದ ತಿರುಳು.
ಬುದ್ಧ-ಬಸವ-ಅಂಬೇಡ್ಕರ್ ಅವರು ತಮ್ಮ ಕಾಲದ ಅಂಧಕಾರವನ್ನು ಹೋಗಲಾಡಿಸಲು ಅನುಸರಿಸಿದ ವಿವೇಕದ ತಿರುಳನ್ನೇ ಗ್ರಾಮ್ಸ್ಕಿ ಇಪ್ಪತ್ತನೇ ಶತಮಾನದ ಭಾಷೆಯಲ್ಲಿ ಹೇಳಿದ್ದಾನೆ. ಇಂದು ಕೂಡ ಅದೇ ಬಗೆಯ ನಿಶಿತಮತಿ ಬದಲಾವಣೆಗೆ ಅಗತ್ಯವಿದೆ. ವಾಸ್ತವ ಎಷ್ಟೇ ಭೀಕರವಾಗಿದ್ದರೂ ಅದನ್ನು ನಮ್ಮ ತಯಾರಿಗೆ ತಕ್ಕಂತೆ ಅಥವಾ ಬಯಕೆಗೆ ತಕ್ಕಂತೆ ಕುಗ್ಗಿಸದೆ ಮತ್ತು ಹಿಗ್ಗಿಸದೆಯೇ ಹೇಗಿದೆಯೋ ಹಾಗೆ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಆಗ ಮಾತ್ರ ಹುಸಿಯಲ್ಲದ ನೈಜ ಬಿಡುಗಡೆಯ ದಾರಿಯ ಬಗ್ಗೆ ಸ್ಪಷ್ಟತೆಯೂ ಸಿಗುತ್ತದೆ. ಆ ಸ್ಪಷ್ಟತೆಯೇ ಬೇಕಿರುವ ಆತ್ಮಸ್ಥೈರ್ಯವನ್ನು ಒದಗಿಸುತ್ತದೆ. ಆ ಬಿಡುಗಡೆಯ ಮಾರ್ಗದಲ್ಲಿ ಜನರ ಐಕ್ಯ ಸಂಘರ್ಷವೇ ಬದಲಾವಣೆಗೆ ಬೇಕಿರುವ ಭರವಸೆಯನ್ನು ಒದಗಿಸುತ್ತದೆ. ಸ್ಪಷ್ಟತೆ, ಬದ್ಧತೆ, ಧೈರ್ಯ ಮತ್ತು ಐಕ್ಯ ಪ್ರಯತ್ನಗಳೇ ಭರವಸೆಯ ಒರತೆಗಳು ಬುದ್ಧ-ಬಸವರ ಕಾಲಕ್ಕೂ ಅದೇ ನಿಜ. ಇಂದಿಗೂ ಅದೇ ನಿಜ.
ಬೆಳಕಿನ ಕೆಳಗೆ ಕತ್ತಲೇಕಿದೆ?
ಅದರ ಬದಲಿಗೆ ಇತಿಹಾಸದಲ್ಲಿ ಆಗಿಹೋದ ಮಹನೀಯರ ಹೋರಾಟದ ಬಾವುಟಗಳ ಅಥವಾ ಪಂಥದ ಅನುಯಾಯಿಗಳಾದ ಮಾತ್ರಕ್ಕೆ ಅದು ಬದಲಾವಣೆಯ ಖಾತ್ರಿ ಕೊಡುವುದಿಲ್ಲ. ಹಾಗೆ ನೋಡಿದರೆ ಜಗತ್ತಿನ ಇತಿಹಾಸದಲ್ಲಿ ಹಿಂದೊಮ್ಮೆ ಬಂಡಾಯ ಹಾಗೂ ಬದಲಿ ಬಿಡುಗಡೆಯ ಮಾರ್ಗಗಳನ್ನು ಒದಗಿಸಿದ್ದ ಪಂಥಗಳನ್ನು ಮತ್ತು ಧರ್ಮಗಳನ್ನು ಅದರ ಸಮಕಾಲೀನ ಅನುಯಾಯಿಗಳು ಅದರ ಮೂಲತಾತ್ವಿಕ ಪ್ರಣಾಳಿಗೆ ವಿರುದ್ಧವಾದ ಶೋಷಕ ಹಾಗೂ ಯಥಾಸ್ಥಿತಿವಾದಿ ಸಿದ್ಧಾಂತಗಳನ್ನಾಗಿ ಬದಲಿಸಿದ್ದಾರೆ. ಮಮತಾಮಯಿ ಬುದ್ಧನ ಅನುಯಾಯಿಗಳೆಂದು ಹೇಳಿಕೊಳ್ಳುವ ಶ್ರೀಲಂಕಾ ಮತ್ತು ಬರ್ಮಾದ ಪಟ್ಟಭದ್ರ ಆಳುವ ವರ್ಗಗಳು ಮತ್ತು ದ್ವೇಷೋನ್ಮತ್ತ ಬೌದ್ಧ ಭಿಕ್ಷುಗಳೇ ಅಲ್ಲವೇ ಆಯಾ ದೇಶಗಳ ಅಮಾಯಕ ಮತ್ತು ಅಸಹಾಯಕ ಜನರ ಕಗ್ಗೊಲೆ ಮಾಡುತ್ತಿರುವುದು? ಬುದ್ಧನ ದಮ್ಮ ನೆಲೆಯೂರಿ ಶತಮಾನಗಳೇ ಕಳೆದಿದ್ದರೂ ಅದು ವರ್ತಮಾನದ ದ್ವೇಷವನ್ನೇಕೆ ಅಳಿಸಲಿಲ್ಲ?
ಪ್ರೀತಿಯ ಬಂಡಾಯಗಾರ ಏಸುಕ್ರಿಸ್ತನ ಅನುಯಾಯಿಗಳೆಂದು ಹೇಳಿಕೊಂಡ ಸಮಕಾಲೀನ ಶೋಷಕ ಅಧಿಕಾರರೂಢರ ಬಣವೇ ಏಸುವಿನ ಹೆಸರಲ್ಲಿ ಅಂದೂ ಮತ್ತು ಇಂದೂ ಕೂಡ ಜಗತ್ತನ್ನು ವಸಾಹತುವಾಗಿ ಮಾಡಿಕೊಂಡು ಸುಲಿಯುತ್ತಿಲ್ಲವೇ? ಬಡದೇಶಗಳ ಮೇಲೆ ಟ್ಯಾಂಕರ್‌ಗಳನ್ನು ಹರಿಸಿದ ಅಮೆರಿಕನ್, ಬ್ರಿಟನ್, ಇಟಲಿ, ಫ್ರೆಂಚ್ ಇತ್ಯಾದಿಗಳ ಬಂಡವಾಳಶಾಹಿ ಪ್ರಭುತ್ವಗಳ ವರ್ತಮಾನದ ಲಾಭ ಲಾಲಸೆಯನ್ನು ಏಸುಕ್ರಿಸ್ತನ ಸಮತಾ ದರ್ಶನ ಏಕೆ ತಡೆದು ನಿಲ್ಲಿಸಲಿಲ್ಲ?
ಹಾಗೆಯೇ ಅಂದಿನ ಬಂಡಾಯಗಾರ ಪೈಗಂಬರನ ಪ್ರೀತಿಯ ಶಾಂತಿಯ ಪೈಗಾಮುಗಳನ್ನು ಜಗತ್ತನ್ನೇ ಇಸ್ಲಾಮೀಕರಿಸುವ ಉದ್ದೇಶವುಳ್ಳವರು, ವರ್ತಮಾನದ ತೈಲ ಸಮೃದ್ಧ ಮುಸ್ಲಿಮ್ ದೇಶಗಳು, ಇತರ ದೇಶದೊಳಗಿನ ಸಮುದಾಯದೊಳಗಿನ ಕುಲೀನರು ಮತ್ತು ಸಿರಿವಂತರು ಏಕೆ ಅನುಸರಿಸುವುದಿಲ್ಲ? ಇನ್ನು ಭಾರತದ ಸಂದರ್ಭದಲ್ಲಂತೂ ಇಲ್ಲಿನ ಹಲವು ಬಂಡಾಯ ದರ್ಶನಗಳನ್ನು ಇಲ್ಲಿನ ಯೋಜಿತ ಮತ್ತು ವ್ಯವಸ್ಥಿತ ಆಳುವ ಸಿದ್ಧಾಂತವಾದ ಬ್ರಾಹ್ಮಣ್ಯ ಯಥಾಸ್ಥಿತಿವಾದಕ್ಕೆ ತಕ್ಕಂತೆ ಒಗ್ಗಿಸಿ ಬಗ್ಗಿಸಿ ಉಳಿಸಿಕೊಂಡಿದೆ. ಲಿಂಗಾಯತ, ಜೈನ, ಸಿಖ್ ಇತ್ಯಾದಿಗಳಂತೆ.. ಅಥವಾ ಬಗ್ಗಿಸಲಾಗದ್ದನ್ನು ಶತ್ರುವಂತೆ ಚಿತ್ರಿಸಿ ಹೊಸಕಿಹಾಕಿದೆ.. ಚಾರ್ವಾಕ, ಲೋಕಾಯತಗಳಂತೆ.. ಉರಿಯದ ದೀಪ ಬೆಳಕು ಕೊಡುವುದಿಲ್ಲ
ಹೀಗಾಗಿ ಒಂದು ನೆಲದಲ್ಲಿ, ಒಂದು ಕಾಲದಲ್ಲಿ ಆಗಿನ ಅಂಧಕಾರದ ವಿರುದ್ಧ ಸಂಘರ್ಷ ಮಾಡುತ್ತಾ ಬೆಳಕನ್ನು ಒದಗಿಸಿದ ದರ್ಶನಗಳ ಅನುಯಾಯಿಗಳು, ಬಾವುಟವನ್ನು ಹಿಡಿದ ಮಾತ್ರಕ್ಕೆ ಬೆಳಕು ಕೊಡಲಾರರು. ಬದಲಿಗೆ ಆ ಬಾವುಟವೇ ವರ್ತಮಾನದ ಅಂಧಕಾರಕ್ಕೆ ಕಾರಣವೂ ಆಗಿರಬಹುದು. ಹೀಗಾಗಿ ಆಯಾ ಕಾಲದ ಅಂಧಕಾರಗಳ ವಿರುದ್ಧ ಅದೇ ಬಗೆಯ ಸಂಘರ್ಷ ವನ್ನು ಮುಂದುವರಿಸಿದ್ದರೆ ಮಾತ್ರ ವರ್ತಮಾನದ ಬೆಳಕನ್ನು ಕಾಣಬಲ್ಲರು. ಏಕೆಂದರೆ ದೀಪವು ಬೆಳಕು ನೀಡುವುದು ಉರಿದಾಗ ಮಾತ್ರ... ಹಾಗಿಲ್ಲದೆ ಸಮಕಾಲೀನ ಶೋಷಕರು ಮತ್ತು ಯಥಾಸ್ಥಿತಿವಾದಿಗಳು ಆ ದೀಪದ ವಾರಸುದಾರರಾದಾಗ ಅದು ಚಿತ್ರಪಟದ ದೀಪವಾಗುವುದೇ ವಿನಾ ಬೆಳಗುವ ದೀಪವಾಗುವುದಿಲ್ಲ. ಕರ್ನಾಟಕದಲ್ಲಿ ಈ ನೆಲದ ಗುಣದ ಬಗ್ಗೆ ಮತ್ತು ಇಲ್ಲಿನ ಡಾಮಿನೆಂಟ್ ಜಾತಿಗಳಾದ ಲಿಂಗಾಯತ ಮತ್ತು ಒಕ್ಕಲಿಗ ಜಾತಿಗಳ ಮೇಲೆ ಹಿಂದುತ್ವದ ಪ್ರಭಾವದ ಇತಿಮಿತಿಗಳ ಬಗ್ಗೆ ಚರ್ಚಿಸುವಾಗ ಮೇಲಿನ ವಿಷಯಗಳು ಮತ್ತಷ್ಟು ಮಹತ್ವ ಪಡೆದುಕೊಳುತ್ತವೆ. ಬ್ರಾಹ್ಮಣ್ಯಕ್ಕೆ ತದ್ವಿರುದ್ಧವಾದ ಬಸವ ತತ್ವ ಮತ್ತು ಅವಧೂತ ತತ್ವಗಳ ಆಧಾರದ ಮೇಲೆ ಹುಟ್ಟಿಕೊಂಡ ಲಿಂಗಾಯತ ಧರ್ಮ ಮತ್ತು ಒಕ್ಕಲಿಗ ಪಂಥಗಳ ಪ್ರಭಾವಶಾಲಿ ಸ್ತರಗಳು ಮತ್ತು ಅವುಗಳ ಮಠಗಳು ಇಂದು ಅತಿವೇಗವಾಗಿ ಬ್ರಾಹ್ಮಣೀಯ ಹಿಂದುತ್ವದ ತೆಕ್ಕೆಗೆ ಒಳಪಡುತ್ತಿವೆ. ಉತ್ತರ ಪ್ರದೇಶ ಮತ್ತು ಗುಜರಾತಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ಅದರ ವೇಗ ಕಡಿಮೆ ಎನಿಸಿದರೂ ದಕ್ಷಿಣದ ಇತರ ಎಲ್ಲಾ ರಾಜ್ಯಗಳಿಗೂ ಹಾಗೂ ಪೂರ್ವದ ಒಡಿಶಾ ಮತ್ತು ಬಂಗಾಳಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಿಂದುತ್ವದ ಪ್ರಭಾವ ಸಾಪೇಕ್ಷವಾಗಿ ಹೆಚ್ಚುತ್ತಲೇ ಇದೆ ಹಾಗೂ ಕಳೆದ ಐದು ವರ್ಷಗಳಲ್ಲಿ ಅದರ ವೇಗ ಉತ್ತರ ಪ್ರದೇಶಕ್ಕೆ ಪ್ರತಿಸ್ಪರ್ಧಿಯಾಗಿದೆ. ಹೀಗಾಗಿ ಈ ಬೆಳವಣಿಗೆಗಳು ಹಲವು ಐತಿಹಾಸಿಕ ಮತ್ತು ರಾಜಕೀಯ ಪ್ರಶ್ನೆಗಳನ್ನು ಬದಲಾವಣೆ ಬಯಸುವವರ ಮುಂದೆ ಎಸೆಯುತ್ತದೆ. ಅದಕ್ಕೆ ತಕ್ಕ ಉತ್ತರಗಳನ್ನು ಪಡೆದುಕೊಳ್ಳದಿದ್ದರೆ ಹುಸಿ ಪರಿಹಾರಗಳ ಬೆನ್ನ ಹಿಂದೆ ಬಿದ್ದು ಭ್ರಮ ನಿರಸನಕ್ಕೊಳಗಾಗಬಹುದು.
ಲಿಂಗಾಯತದ ಮೇಲೆ ಹಿಂದುತ್ವದ ಯಾಜಮಾನ್ಯವೇ?
ಮೊದಲನೆಯದಾಗಿ 12ನೇ ಶತಮಾನದ ಸಮಾನತೆಯ ಸಂತ ಬಸವನ ತತ್ವದ ಅನುಯಾಯಿಗಳು ಎಂದು ಹೇಳಿಕೊಳ್ಳುವ ಲಿಂಗಾಯತರ ಮೇಲ್ವರ್ಗಗಳು ವರ್ತಮಾನದಲ್ಲಿ ತದ್ವಿರೋಧಿ ಬ್ರಾಹ್ಮಣ್ಯಕ್ಕೆ ಪಕ್ಕಾಗಿದ್ದು ಹೇಗೆ? ಬಹುವ್ಯಾಖ್ಯಾನ ಉಳ್ಳ ಲಿಂಗಾಯತ ದರ್ಶನವನ್ನು ಕೇವಲ ಹಿಂದೂ ಭಕ್ತಿ ಪಂಥವಾಗಿಸುವ, ಬಸವಣ್ಣನನ್ನು ಭಕ್ತಿ ಭಂಡಾರಿ ಮಾತ್ರವಾಗಿಸುವ ಪ್ರಯತ್ನಗಳು 13-14ನೇ ಶತಮಾನದಿಂದಲೇ ಪ್ರಾರಂಭವಾದವು. ಲಿಂಗಾಯತದೊಳಗೆ ಸವರ್ಣೀಯ ಹಿಂದೂಗಳೊಳಗಿನ ಹತ್ತು ಹಲವು ಜಾತಿಗಳು ಬಂದು ಸೇರಿಕೊಂಡವು. ಬ್ರಾಹ್ಮಣ ಹಾಗೂ ಇತರ ಮೇಲ್ಜಾತಿಗಳು ಬಂದು ಸೇರಿಕೊಂಡವು. ರಾಜರಿಕೆಯ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಭೂಮಿ ಒಡೆತನ-ಸಾಮಾಜಿಕ ಅಧಿಕಾರ ಪಡೆದುಕೊಂಡ ಲಿಂಗಾಯತದೊಳಗಿನ ಮೇಲ್‌ವರ್ಗಗಳು ಮತ್ತೆ ಲಿಂಗಾಯತದಲ್ಲೂ ತಮ್ಮ ಹಳೆಯ ಜಾತಿ ಮೇಲರಿಮೆಯನ್ನು ಮುಂದುವರಿಸಿದವು. ಲಿಂಗಾಯತವು ಕೂಡ ಪರಸ್ಪರ ವಿವಾಹ ಸಂಬಂಧವಿಲ್ಲದ, ಮೇಲು-ಕೀಳಿನ ಒಳ ಪಂಗಡಗಳುಳ್ಳ ಜಾತಿಗಳಾದವು. ಸಮಾಜದೊಳಗಿನ ಅದರ ವರ್ತಮಾನದ ಮೇಲ್ವರ್ಗ ಮತ್ತು ಮೇಲ್ಜಾತಿ ಸ್ಥಾನಮಾನ ಈ ಮೇಲರಿಮೆಗೆ ಪೂರಕವಾಗಿ ಲಿಂಗಾಯತ ಮೇಲ್ವರ್ಗಕ್ಕೆ ತಾವೂ ಹಿಂದೂಗಳ ಒಳಗಿನ ಶೈವ ಸಂಪ್ರದಾಯದ ವೀರಶೈವವಷ್ಟೆ ಎನ್ನುವುದು ಅಪ್ಯಾಯವಾಗತೊಡಗಿತು.
ಸಮಾನತೆಯ ಬಸವ ತತ್ವಗಿಂತ ಹುಟ್ಟಿನಿಂದ ಶ್ರೇಷ್ಠತೆಯನ್ನು ಬಿತ್ತುವ ಬ್ರಾಹ್ಮಣ್ಯ ತತ್ವವು ಅದರ ವರ್ತಮಾನದ ಸಾಮಾಜಿಕ ಸ್ಥಾನಮಾನಕ್ಕೆ ಅಗತ್ಯವಾಗಿತ್ತು. ಹೀಗಾಗಿ ಬಸವ ಫೋಟೊದೊಳಗೆ ಸೇರಿಕೊಂಡು ಹಿಂದೂತನ ಢಾಳಾಗಿ ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಆಚರಣೆಗೆ ಬಂದಿತು. ಇದು ಲಿಂಗಾಯತದೊಳಗಿನ ಮೇಲ್ ಚಲನೆ ಹೊಂದಿದ ಅಲ್ಪಸಂಖ್ಯಾತ ವರ್ಗವೇ ಆಗಿದ್ದರೂ ಇದು ಅತ್ಯಂತ ಪ್ರಭಾವಶಾಲಿ ಅಲ್ಪಸಂಖ್ಯಾತ ವರ್ಗವಾಗಿದ್ದು ಇಡೀ ಸಮುದಾಯದ ನೀತಿ ನಿಲುವುಗಳನ್ನು ಪ್ರಭಾವಿಸುವಷ್ಟು, ಅದರ ದಿಕ್ಕನ್ನು ನಿರ್ಧರಿಸುವಷ್ಟು ಪ್ರಭಾವಶಾಲಿಯಾಗಿತ್ತು. ಇದಕ್ಕೆ ಪೂರಕವಾಗಿ, ಶಿಕ್ಷಣವನ್ನು ದಾಸೋಹದ ರೀತಿ ಉಚಿತವಾಗಿ ನೀಡುತ್ತಿದ್ದ ಲಿಂಗಾಯತ ಮಠಗಳು 1980ರ ದಶಕದ ನಂತರ ವಿಶೇಷವಾಗಿ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳನ್ನು ತೆರೆದು ಉದ್ಯಮಿಗಳಾದವು. ಆವರೆಗೆ ಇತರ ಹಲವು ಕ್ಷೇತ್ರಗಳಲ್ಲಿ ಬಸವ ತತ್ವದ ಭಾಗವಾಗಿ ಸಾಮಾಜಿಕ ಸೇವೆ ಮಾಡುತ್ತಿದ್ದ ಹಲವು ಮಠಗಳು 90ರ ನಂತರದ ಖಾಸಗೀಕರಣ ಮತ್ತು ಉದಾರೀಕರಣದ ಭಾಗವಾಗಿ ಆ ಸೇವೆಗಳನ್ನು ಸೇವಾ ಉದ್ಯಮಗಳನ್ನಾಗಿಸಿಕೊಂಡವು. ಇದರ ಜೊತೆಗೆ ಕಾಲಕಾಲಕ್ಕೆ ಬಸವ ಜಯಂತಿಗಳು ನಡೆಸುತ್ತಿದ್ದರೂ ಈ ಮಠಗಳಿಗೆ ಮತ್ತು ಅದರ ಹಿಂದಿನ ಪ್ರಭಾವಶಾಲಿ ಲಿಂಗಾಯತ ಮೇಲ್ವರ್ಗಗಳಿಗೆ ಸಮಾಜಕ್ಕಿಂತ ಪ್ರಭುತ್ವದ ಸಾಮೀಪ್ಯ, ಸೇವೆಗಿಂತ ಉದ್ಯಮ, ದಾಸೋಹಕ್ಕಿಂತ ಉದ್ಯಮ ವಿಸ್ತರಣೆ ಪ್ರಮುಖವಾಗತೊಡಗಿತು. ವರ್ತಮಾನದ ಈ ಸಾಮಾಜಿಕ-ಆರ್ಥಿಕ ನೆಲೆ ನಿಲುವುಗಳ ಬದಲಾವಣೆಯೇ ಈ ವರ್ಗವನ್ನು ಅಸಮಾನತೆ ಮತ್ತು ತಾರತಮ್ಯದ ಆರ್ಥಿಕ ನೀತಿಗಳಾದ ನವ ಉದಾರವಾದ ಮತ್ತು ಅದರ ಸಾಮಾಜಿಕ ಸಿದ್ಧಾಂತದ ಬ್ರಾಹ್ಮಣ್ಯ ಮತ್ತು ಹಿಂದೂ ರಾಷ್ಟ್ರದ ಸಿದ್ಧಾಂತಗಳಿಗೆ ಅವರನ್ನು ಹತ್ತಿರವಾಗಿಸಿದವು.
ಇದರೊಡನೆ ಸ್ವಾತಂತ್ರ್ಯಾನಂತರದಲ್ಲಿ ಇಂದಿರಾ ಗಾಂಧಿ- ದೇವರಾಜ ಅರಸು ಅವರ ಮೇಲ್ಜಾತಿ ವಿರೋಧಿ ನೀತಿಗಳು ಸಹ ಲಿಂಗಾಯತ ಊಳಿಗಮಾನ್ಯ ಶಕ್ತಿಗಳಲ್ಲಿ ಕಾಂಗ್ರೆಸ್ ವಿರೋಧಿ ಧೋರಣೆಯನ್ನು ಹುಟ್ಟುಹಾಕಿತು. ಕ್ರಮೇಣವಾಗಿ ಈ ಪ್ರಭಾವಿಗಳು ಕಾಂಗ್ರೆಸ್‌ನಿಂದ ದೂರಸರಿದು ಮೊದಲು ಜನತಾದಳದಲ್ಲಿ ಮತ್ತು ಆನಂತರದಲ್ಲಿ ಬಿಜೆಪಿಯಲ್ಲಿ ತಮ್ಮ ಸೈದ್ಧಾಂತಿಕ ಹಾಗೂ ರಾಜಕೀಯ ಆಸರೆಯನ್ನು ಕಂಡುಕೊಂಡರು. ಹೀಗೆ ವರ್ತಮಾನದಲ್ಲಿ ಲಿಂಗಾಯತದ ಮೇಲ್ವರ್ಗದಲ್ಲಿ ಈ ವೇಳೆಗೆ ಅಸಮಾನತೆಯ ಬಗ್ಗೆಯಾಗಲೀ ತಾರತಮ್ಯದ ಬಗ್ಗೆಯಾಗಲೀ ಬಸವಾನುಯಾಯಿ ಗಳಿಗೆ ಇರಬೇಕಾದ ಯಾವ ವಿರೋಧವೂ ಇರಲಿಲ್ಲ. ಇದರೊಡನೆ ಬಿಜೆಪಿಯು ರಾಷ್ಟ್ರಮಟ್ಟದಲ್ಲಿ ಅಧಿಕಾರ ಹಿಡಿದು ಇಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಲಿಂಗಾಯತ ಮಠಗಳು ತಮ್ಮ ನಾಯಕನನ್ನು ಕಂಡುಕೊಳ್ಳುವುದರ ಜೊತೆಗೆ ಪ್ರಭಾವಶಾಲಿ ಲಿಂಗಾಯತದ ಒಂದು ಹಂತದ ಹಿಂದುತ್ವೀಕರಣ ಪ್ರಾರಂಭಗೊಂಡಿತ್ತು.
ಬಸವ ಪರಿವಾರ ವರ್ಸಸ್ ಸಂಘಪರಿವಾರ
ಇವೆಲ್ಲ ಆಗುವಾಗಲೂ ಒಂದು ಪ್ರಜ್ಞಾವಂತ ನೈಜ ಬಸವಾನುಯಾಯಿ ಲಿಂಗಾಯತ ಸಮೂಹ ನೈಜ ಬಸವ ಪಥಕ್ಕಾಗಿ ಪ್ರಚಾರ ಮಾಡುತ್ತಿತ್ತು ಮತ್ತು ಸಂಘಟಿಸುತ್ತಿತ್ತು. ಆದರೆ ಅದರ ಧ್ವನಿ ಹಿಂದುತ್ವವಾದಿ ಲಿಂಗಾಯತ ಧ್ವನಿಯನ್ನು ಮೆಟ್ಟುವಷ್ಟು ಸಾಮಾಜಿಕ ಶಕ್ತಿಯನ್ನು ಪಡೆದುಕೊಳ್ಳುತ್ತಿಲ್ಲ. ಸಮಾಜದಲ್ಲಿ ಹಿಂದುತ್ವದ ನರಬಲಿಯ ಸಿದ್ಧಾಂತ ಏರುಗತಿಯಲ್ಲಿ ಸಾಗುತ್ತಿರುವ ಹೊತ್ತಿನಲ್ಲೇ, ಉದ್ಯಮಶೀಲರಾದ ಲಿಂಗಾಯತರ ಮೇಲೆ ಮಠಗಳ ಮೇಲೆ ನವ ಉದಾರವಾದ ಮತ್ತು ಹಿಂದೂ ರಾಷ್ಟ್ರ ಸಿದ್ಧಾಂತದ ಪ್ರಭಾವ ದಟ್ಟವಾಗತೊಡಗಿದಂತೆ ಕಾಣುತ್ತದೆ. ಇದು ಮೋದಿ ನೇತೃತ್ವದ ಸರಕಾರ ದಿಲ್ಲಿಯನ್ನು ಮುಟ್ಟುವ ಹೊತ್ತಿಗೆ ಪ್ರಭುತ್ವ ಬೆಂಬಲ, ಪೋಷಣೆ ಮತ್ತು ಸೈದ್ಧಾಂತಿಕ ಆಕರ್ಷಣೆಗಳು ಹಲವು ರೀತಿಯಲ್ಲಿ ಲಿಂಗಾಯತ ಸಮುದಾಯವನ್ನು ಪ್ರಭಾವಿಸತೊಡಗಿದೆ. ಇದೇ ಸಮಯದಲ್ಲಿ ರೈತ, ಕಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿನ ಪ್ರಗತಿಪರತೆಯ ಕಾವು ಕಡಿಮೆಯಾದದ್ದು ಇದಕ್ಕೆ ಇಂಬುಕೊಟ್ಟಿದೆ. ಇವೆಲ್ಲದರ ಪರಿಣಾಮ ಬಿಜೆಪಿಯ ಚುನಾವಣಾ ಸಾಧನೆಗಳಲ್ಲಿ ಸ್ಪಷ್ಟವಾಗಿ ಕಾಣತೊಡಗಿತು. 1989ರಲ್ಲಿ ಕೇವಲ ಶೇ. 4ರಷ್ಟು ಮತಗಳನ್ನು, 4 ಸೀಟುಗಳನ್ನು ಮಾತ್ರ ಪಡೆದಿದ್ದ ಬಿಜೆಪಿ, 1999ರ ವೇಳೆಗೆ ಶೇ. 20ರಷ್ಟು ಮತಗಳನ್ನು ಮತ್ತು 44 ಸೀಟುಗಳನ್ನು ಪಡೆಯಿತು. 2004ರಲ್ಲಿ ಶೇ. 24 ಮತಗಳು ಮತ್ತು 79 ಸೀಟುಗಳು, 2008ರಲ್ಲಿ ಶೇ.33ರಷ್ಟು ಮತಗಳು ಮತ್ತು 110 ಸೀಟುಗಳು ಮತ್ತು 2018ರಲ್ಲಿ ಶೇ. 36ರಷ್ಟು ಮತಗಳು ಮತ್ತು 104 ಸೀಟುಗಳನ್ನು ಗಳಿಸಿತು. ಸಂಸತ್ ಚುನಾವಣೆಯಲ್ಲಂತೂ 2009ರಿಂದ ಸತತವಾಗಿ ಬಿಜೆಪಿ ಕಾಂಗ್ರೆಸ್‌ಗಿಂತ ಹೆಚ್ಚಿನ ವೋಟುಗಳನ್ನು ಮತ್ತು ಸೀಟುಗಳನ್ನು ಪಡೆದುಕೊಳ್ಳುತ್ತಿದೆ.
2019ರಲ್ಲಂತೂ ಅದು ಶೇ. 51.75 ಮತಗಳನ್ನು ಮತ್ತು 28ರಲ್ಲಿ 25 ಸೀಟುಗಳನ್ನು ಪಡೆದುಕೊಂಡಿತು. ಇವೆಲ್ಲದರ ಹಿಂದೆ ಲಿಂಗಾಯತ ಸಮುದಾಯದ ಬೆಂಬಲ ಮತ್ತು ಅದರ ಮಠಗಳ ಮತ್ತು ಲಿಂಗಾಯತ ಸಮುದಾಯದ ಪ್ರಭಾವಶಾಲಿ ಗಣ್ಯ ವರ್ಗದ ನಿರಂತರ ಬೆಂಬಲವಿದ್ದದ್ದು ಸ್ಪಷ್ಟ. ಮತ್ತು ಈ ಬೆಂಬಲ ಹೆಚ್ಚಿದ್ದು ಬಿಜೆಪಿಯಲ್ಲಿ ಮಾಡರೇಟ್ ಎಂದು ಕರೆಸಿಕೊಳ್ಳುತ್ತಿದ್ದ ವಾಜಪೇಯಿ ಕಾಲದಲ್ಲಲ್ಲ. ನಿರ್ಲಜ್ಜವಾಗಿ ಕ್ರೂರ ಕೋಮುವಾದಿ ಬ್ರಾಹ್ಮಣ್ಯವನ್ನು ಪ್ರತಿಪಾದಿಸುತ್ತಿದ್ದ ಮೋದಿಯುಗದಲ್ಲಿ ಎಂಬುದು ವರ್ತಮಾನವನ್ನು ಅರಿಯಲು ತುಂಬಾ ಮುಖ್ಯ. ಇದೇ ಕಾಲದಲ್ಲೇ, ಆರೆಸ್ಸೆಸ್- ಮತ್ತು ಅದರ ಇತರ ಅಂಗಸಂಸ್ಥೆಗಳು ಕೂಡ ಲಿಂಗಾಯತ ಮಠಗಳ ಮೇಲೆ ಮತ್ತು ಸಮುದಾಯದ ಮೇಲೆ ತಮ್ಮ ಪ್ರಭಾವವನ್ನು ಗಾಢವಾಗಿ ವಿಸ್ತರಿಸಿಕೊಳ್ಳಲಾರಂಭಿಸಿದ್ದವು. ಅದರ ಪರಿಣಾಮವಾಗಿಯೇ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನವನ್ನು ವಿರೋಧಿಸುವ ಅಜೆಂಡಾದ ಭಾಗವಾಗಿಯೇ ಉಡುಪಿಯಲ್ಲಿ ಸಂಘಟಿಸಲಾಗಿದ್ದ 10ನೇ ಹಿಂದೂ ಧರ್ಮ ಸಂಸತ್ತಿನ ಉದ್ಘಾಟನೆಗೆ ಸಿದ್ದಗಂಗಾ ಮಠದ ಕಿರಿಯ ಸ್ವಾಮಿಗಳನ್ನು ಮತ್ತು ರಂಭಾಪುರಿ ಮಠದ ವೀರಶೈವ ಸ್ವಾಮಿಗಳನ್ನು ಆಹ್ವಾನಿಸಲಾಗಿತ್ತು. ವಿಶ್ವ ಹಿಂದೂ ಪರಿಷತ್ ನಡೆಸಿದ ಹಲವು ಹಿಂದೂ ವಿರಾಟ್ ಸಂಗಮದ ಸಮ್ಮೇಳನದಲ್ಲಿ ಹಲವು ಪ್ರತಿಷ್ಠಿತ ಲಿಂಗಾಯತ ಸ್ವಾಮಿಗಳು ಪೈಪೋಟಿಯಲ್ಲಿ ಭಾಗವಹಿಸಿದರು. ಅದರ ನಿರ್ಣಯಗಳಿಗೆ ಬೆಂಬಲ ವ್ಯಕ್ತಪಡಿಸಿದರು. ಕೆಲವು ಪುಡಿ-ಕಿರಿ ಲಿಂಗಾಯತ ಮಠಗಳ ಸ್ವಾಮಿಗಳಂತೂ ಶ್ರೀರಾಮ ಸೇನೆಯ ಅಧಿಕೃತ ವಕ್ತಾರರಾಗಿ ಮುಸ್ಲಿಮ್ ವಿರೋಧಿ ಭಾಷಣಗಳನ್ನು ಮಾಡಿ ಜೈಲಿಗೂ ಹೋಗಿ ಬಂದರು. ಕೆಲವು ಲಿಂಗಾಯತ ವೀರಶೈವ ಸಂಘಟನೆಗಳು ಸಂಘಪರಿವಾರದ ಅಂಗಸಂಸ್ಥೆಗಳಂತೆ ಕೆಲಸ ಮಾಡುತ್ತಾ ಬೀದರಿನ ಪೀರ್ ಭಾಷಾ ಬಂಗ್ಲಾ ಅನುಭವ ಮಂಟಪವೆಂದೂ, ಮಂಗಳೂರಿನ ಹಲವು ದರ್ಗಾಗಳು ಲಿಂಗಾಯತ ಜಂಗಮರ ಮಠಗಳೆಂದು ಅದನ್ನು ವಿಮೋಚನೆ ಮಾಡಬೇಕೆಂದೂ ಹೋರಾಟ ಕಟ್ಟುತ್ತಿವೆ.
ಹಾಗೆಯೇ ಶಿವಮೊಗ್ಗದಲ್ಲಿ ಹಿಂದುತ್ವದ ಕಾರ್ಯಕರ್ತ ಹರ್ಷನ ಹತ್ಯೆಯಾದಾಗ ಹಲವು ಲಿಂಗಾಯತ ಮಠದ ಸ್ವಾಮಿಗಳು ಬಿಜೆಪಿಯ ರಾಜಕಾರಣಿಗಳಂತೆ ಹರ್ಷನ ಮನೆಗೆ ಮಾತ್ರ ಭೇಟಿ ಕೊಟ್ಟರೇ ವಿನಾ ಹಿಂದುತ್ವ ಕಾರ್ಯಕರ್ತರ ದಾಳಿಗೆ ಸಿಕ್ಕಿ ಮನೆಮಠ ಕಳೆದುಕೊಂಡ ಮುಸ್ಲಿಮರ ಮನೆಗಲ್ಲ ಹಾಗೂ ಇತ್ತೀಚೆಗೆ ಮೀಸಲಾತಿ ವಿಷಯದಲ್ಲೂ ಮುಸ್ಲಿಮರ ಮೀಸಲಾತಿ ಕಿತ್ತು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿರುವ ಪ್ರವರ್ಗಗಳಿಗೆ ಹಂಚಿದ ಕೋಮುವಾದಿ ಮತ್ತು ತಾರತಮ್ಯದ ಕ್ರಮವನ್ನು ಪ್ರಭಾವಶಾಲಿ ಲಿಂಗಾಯತ ಮಠಗಳು ಖಂಡಿಸುವುದಿರಲಿ ಸ್ವಾಗತಿಸಿರುವುದು ಲಿಂಗಾಯತದ ಈ ಹಿಂದುತ್ವೀಕರಣಕ್ಕೆ ಮತ್ತೊಂದು ಉದಾಹರಣೆಯಾಗಿದೆ.
ಆದರೆ ಇವೆಲ್ಲ ನಡೆಯುತ್ತಿದ್ದ ವೇಳೆಯಲ್ಲೂ ಕೆಲವು ಗೌರವಾನ್ವಿತ ಲಿಂಗಾಯತ ಮಠಗಳು, ಸಾಮಾಜಿಕ ಸಂಘಟನೆಗಳು ಹಿಂದುತ್ವದ ಬ್ರಾಹ್ಮಣ್ಯದ ವಿರುದ್ಧ, ಲಿಂಗಾಯತ ಮಠ ಹಾಗೂ ರಾಜಕಾರಣಿಗಳ ಹಾಗೂ ಸಮುದಾಯಗಳ �