ಗೆಳತಿಯ ತಂದೆಯ ಮೊಬೈಲ್ ಕದ್ದು ಆದಿತ್ಯನಾಥ್ ಗೆ ಬೆದರಿಕೆ ಸಂದೇಶ ಕಳುಹಿಸಿದ್ದ ಯುವಕ !
ಲಕ್ನೊ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಜೀವ ಬೆದರಿಕೆ ಸಂದೇಶ ರವಾನಿಸಿದ್ದ ಯುವಕ, ಆ ಸಂದೇಶವನ್ನು ತನ್ನ ಗೆಳತಿಯ ತಂದೆಯ ಮೊಬೈಲ್ ಫೋನ್‌ನಿಂದ ರವಾನಿಸಿದ್ದ ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಅಮೀನ್ ಎಂದು ಗುರುತಿಸಲಾಗಿರುವ 19 ವರ್ಷದ ಯುವಕನು ಮುಖ್ಯಮಂತ್ರಿಯನ್ನು ಹತ್ಯೆಗೈಯ್ಯುವುದಾಗಿ ಪೊಲೀಸ್ ತುರ್ತು ಸೇವಾ ಸಂಖ್ಯೆ 112ಕ್ಕೆ ಸಂದೇಶ ರವಾನಿಸಿದ್ದ. ಎಪ್ರಿಲ್ 23ರಂದು ರಾತ್ರಿ 10.22ರ ವೇಳೆ ರವಾನೆಯಾಗಿದ್ದ ಆ ಸಂದೇಶದಲ್ಲಿ "ನಾನು ಮುಖ್ಯಮಂತ್ರಿಆದಿತ್ಯನಾಥರನ್ನು ಆದಷ್ಟೂ ಶೀಘ್ರವಾಗಿ ಹತ್ಯೆಗೈಯ್ಯಲಿದ್ದೇನೆ" ಎಂದು ಹೇಳಲಾಗಿತ್ತು ಎಂದು timesnownews.com ವರದಿ ಮಾಡಿದೆ.
ತನ್ನ ಗೆಳತಿಯ ತಂದೆ ಬಗ್ಗೆ ಅಸಮಾಧಾನಗೊಂಡಿದ್ದ ಅಮೀನ್, ಗೆಳತಿಯ ತಂದೆಯ ಮೊಬೈಲ್ ಫೋನ್‌ನಿಂದಲೇ ಮುಖ್ಯಮಂತ್ರಿಗೆ ಜೀವ ಬೆದರಿಕೆ ಸಂದೇಶ ಕಳಿಸಿದ್ದ. ಈ ಕುರಿತು ಮಾಹಿತಿ ನೀಡಿರುವ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತೆ ಅಂಕಿತಾ ಶರ್ಮ, "ಆರೋಪಿಯನ್ನು ಬೇಗಂಪೂರ್ವದಲ್ಲಿ ಬಂಧಿಸಲಾಗಿದ್ದು, ಆತನಿಂದ ಸಂದೇಶ ಕಳಿಸಲು ಬಳಸಲಾಗಿದ್ದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
ಅಮೀನ್ ಹಾಗೂ ತನ್ನ ಪುತ್ರಿಯ ಸಂಬಂಧದ ಬಗ್ಗೆ ಆತನ ಗೆಳತಿಯ ತಂದೆಗೆ ಅತೃಪ್ತಿ ಇದ್ದುದರಿಂದ ತನ್ನ ಗೆಳತಿಯ ತಂದೆಯ ಮೊಬೈಲ್ ಫೋನ್ ಮೂಲಕವೇ ಮುಖ್ಯಮಂತ್ರಿಗೆ ಜೀವ ಬೆದರಿಕೆ ಸಂದೇಶ ರವಾನಿಸುವ ಪಿತೂರಿಯನ್ನು ಅಮೀನ್ ಹೆಣೆದಿದ್ದಾನೆ ಎಂದು ತಿಳಿದು ಬಂದಿದೆ.
ವಿಚಾರಣೆಯ ಸಂದರ್ಭದಲ್ಲಿ ಆ ಯುವತಿಯನ್ನು ವಿವಾಹವಾಗಲು ಬಯಸಿದ್ದ ಆತ, ತನ್ನ ಗೆಳತಿಯ ತಂದೆಯನ್ನು ಸಿಲುಕಿಸಲು ಯೋಜನೆ ರೂಪಿಸುತ್ತಿದ್ದ ಎಂದು ಆತನ ನೆರೆಹೊರೆಯವರೂ ತಿಳಿಸಿದ್ದಾರೆ.
ಇದಕ್ಕೂ ಮುನ್ನ 10 ದಿನಗಳ ಕೆಳಗೆ ನಾನು ನನ್ನ ಮೊಬೈಲ್ ಫೋನ್ ಕಳೆದುಕೊಂಡಿದ್ದೆ ಎಂದು ಆಟೋರಿಕ್ಷಾ ಚಾಲಕನಾಗಿರುವ ಆ ಯುವತಿಯ ತಂದೆ ಪೊಲೀಸರಿಗೆ ತಿಳಿಸಿದ್ದ.
ತನ್ನ ಗೆಳತಿಯ ತಂದೆಯ ಮೊಬೈಲ್ ಫೋನ್ ಕದ್ದು, ತನ್ನ ಸಿಮ್ ಮೂಲಕ ಸಂದೇಶ ಕಳಿಸಿದ್ದೆ ಎಂಬ ಸಂಗತಿಯನ್ನು ಅಮೀನ್ ಕೂಡಾ ಒಪ್ಪಿಕೊಂಡಿದ್ದಾನೆ. ಆತನ ವಿರುದ್ಧ ಮೂರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಅಪರಾಧ ದಂಡ ಸಂಹಿತೆಯ ಸೆಕ್ಷನ್ 506, 507 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ರ ಅಡಿ ಪ್ರಕರಣ ದಾಖಲಾಗಿದೆ.