ಗುಜರಾತಿನ ದ್ವೇಷ ಬೀಜಗಳನ್ನು ರಾಜ್ಯಕ್ಕೆ ಹಂಚಲು ಹೊರಟವರು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೇಂದ್ರ ಗೃಹ ಸಚಿವರು ಬೆಳಗಾವಿಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಾ ''ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಗಲಭೆಗಳಾಗುತ್ತವೆ'' ಎಂದು ಜನರನ್ನು ಬೆದರಿಸಿರುವುದು ವಿವಾದಕ್ಕೊಳಗಾಗಿದೆ. ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಈ ಮಾತುಗಳನ್ನು ಖಂಡಿಸುತ್ತಾ ''ಇದು ನಿರ್ಲಜ್ಜತನದ ಮಾತು. ಈ ಮೂಲಕ ಜನರನ್ನು ಬೆದರಿಸಿ ಅಮಿತ್ ಶಾ ಮತ ಯಾಚನೆಗೆ ಹೊರಟಿದ್ದಾರೆ'' ಎಂದು ಆರೋಪಿಸಿದ್ದಾರೆ. ಶಾ ವಿರುದ್ಧ ಚುನಾವಣಾ ಆಯೋಗಕ್ಕೂ ದೂರನ್ನು ಸಲ್ಲಿಸಿದ್ದಾರೆ. ಈ ಬಾರಿ ಕರ್ನಾಟಕದಲ್ಲಿ ದ್ವೇಷ ರಾಜಕೀಯವನ್ನು ಬದಿಗಿಟ್ಟು ಚುನಾವಣೆ ಎದುರಿಸಲಿದ್ದೇವೆ ಎನ್ನುವ ಸೂಚನೆಯನ್ನು ಯಡಿಯೂರಪ್ಪ ಅವರು ನೀಡಿದ್ದರು. 'ಹಿಜಾಬ್, ಹಲಾಲ್ ಕಟ್' ವಿಷಯಗಳು ಅನಗತ್ಯ ಎಂದೂ ಅವರು ಮಾಧ್ಯಮಗಳ ಮೂಲಕ ಸ್ಪಷ್ಟಪಡಿಸಿದ್ದರು. ಮುಖ್ಯಮಂತ್ರಿ ಬೊಮ್ಮಾಯಿಯವರು ಕೂಡ, ದ್ವೇಷ ಭಾಷಣಗಳಿಗೆ ಅವಕಾಶವಿಲ್ಲ ಎಂಬ ಸೂಚನೆಯನ್ನು ತನ್ನ ಸಹೋದ್ಯೋಗಿಗಳಿಗೆ ರವಾನಿಸಿದ್ದರು. ಆದರೆ ದುರದೃಷ್ಟವಶಾತ್ ಕೇಂದ್ರ ಗೃಹ ಸಚಿವರೇ, ರಾಜ್ಯದಲ್ಲಿ ದ್ವೇಷ ಭಾಷಣಗಳಿಗೆ ಮುನ್ನುಡಿ ಬರೆಯುತ್ತಿದ್ದಾರೆ. ಬಿಜೆಪಿಯೊಳಗೆ ನಡೆಯುತ್ತಿರುವ ಅಂತರ್ ಕಲಹದಿಂದ ಹತಾಶರಾದಂತೆ ಕಾಣುವ ಅಮಿತ್ ಶಾ ಇದೀಗ ಚುನಾವಣೆ ಗೆಲ್ಲಲು ''ಕೋಮುಗಲಭೆ''ಗಳ ಪ್ರಸ್ತಾಪ ಅನಿವಾರ್ಯ ಎಂದು ಭಾವಿಸಿದಂತಿದೆ. ಆದುದರಿಂದಲೇ, ಬೆಳಗಾವಿಯಲ್ಲಿ ಭಾಷಣ ಮಾಡುತ್ತಾ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿ ಗಲಭೆಗಳಾಗುತ್ತವೆ ಎನ್ನುವ ಪರೋಕ್ಷ ಬೆದರಿಕೆಯನ್ನು ಹಾಕಿದ್ದಾರೆ.
ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ತನ್ನ ಸರಕಾರ ಜನರಿಗೆ ನೀಡುವ ಕೊಡುಗೆಗಳ ಬಗ್ಗೆ ಪ್ರಚಾರ ಮಾಡುವುದು ಧನಾತ್ಮಕ ನಡೆಯಾಗಿದೆ. ''ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕೋಮುಗಲಭೆಗಳಾಗುತ್ತವೆ'' ಎನ್ನುವ ಹೇಳಿಕೆ ಪರೋಕ್ಷವಾಗಿ ''ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರದೇ ಇದ್ದರೆ ಗಲಭೆಗಳಾಗುತ್ತವೆ'' ಎಂದೂ ಧ್ವನಿಸುತ್ತದೆ. ಒಂದು ಪಕ್ಷ ಅಧಿಕಾರಕ್ಕೆ ಬಂದರೆ ಗಲಭೆಗಳನ್ನು ಸೃಷ್ಟಿಸುವ ಅಗತ್ಯವಿರುವುದಿಲ್ಲ. ಯಾವ ಪಕ್ಷ ಅಧಿಕಾರದಲ್ಲಿಲ್ಲವೋ ಆ ಪಕ್ಷಕ್ಕೆ ಗಲಭೆಗಳ ಅನಿವಾರ್ಯತೆಗಳಿವೆ. ಆದರೆ ಬಿಜೆಪಿ ಅಧಿಕಾರದಲ್ಲಿದ್ದಾಗಲೂ, ಇಲ್ಲದೇ ಇದ್ದಾಗಲೂ ಗಲಭೆಗಳಲ್ಲಿ ಪಾತ್ರವಹಿಸಿರುವ ಕುರಿತಂತೆ ಆರೋಪಗಳಿವೆ. ಬಿಜೆಪಿಯೊಳಗೆ ಗಲಭೆಗಳನ್ನು ಸೃಷ್ಟಿಸುವುದಕ್ಕಾಗಿಯೇ ಕೆಲವೊಂದು ಸಂಘಟನೆಗಳಿವೆ. ಅದರ ನಾಯಕರ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳೂ ಇವೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಈ ಕ್ರಿಮಿನಲ್ ಸಂಘಟನೆಗಳ ಮೇಲಿರುವ ಪ್ರಕರಣಗಳನ್ನು ವಜಾ ಮಾಡಲಾಗುತ್ತದೆ. ಇನ್ನಷ್ಟು ಗಲಭೆಗಳನ್ನ ಸೃಷ್ಟಿಸುವುದಕ್ಕೆ ಈ ಮೂಲಕ ಆ ಸಂಘಟನೆಗಳಿಗೆ ಧೈರ್ಯವನ್ನು ತುಂಬಲಾಗುತ್ತದೆ. ಬಿಜೆಪಿ ಸೋತು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 'ರಾಜ್ಯದಲ್ಲಿ ಗಲಭೆಗಳಾಗುತ್ತವೆ'' ಎಂಬ ಅಮಿತ್ ಶಾ ಹೇಳಿಕೆಯನ್ನು ಜನತೆ ಈ ಕಾರಣಗಳಿಗಾಗಿ ಗಂಭೀರವಾಗಿ ತೆಗೆದುಕೊಳ್ಳ ಬೇಕಾಗುತ್ತದೆ.
ಯಾಕೆಂದರೆ, ಇದೇ ಅಮಿತ್ ಶಾ ಅವರು ಕಳೆದ ಗುಜರಾತ್ ವಿಧಾನಸಭೆಯ ಸಂದರ್ಭದಲ್ಲಿ ''ಗುಜರಾತ್ ಗಲಭೆ''ಯನ್ನು ಸಮರ್ಥಿಸಿಕೊಂಡು ಹೇಳಿಕೆಯನ್ನು ನೀಡಿದ್ದರು. ಅದನ್ನು ತನ್ನ ಸರಕಾರದ ಸಾಧನೆಯೆಂಬಂತೆ ಬಿಂಬಿಸಿಕೊಂಡಿದ್ದರು. ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರನ್ನೂ ಸಲ್ಲಿಸಲಾಗಿತ್ತು. ಆದರೆ ವಿಚಾರಣೆಯ ಬಳಿಕ ಅಮಿತ್ ಅವರಿಗೆ ಕ್ಲೀನ್‌ಚಿಟ್ ದೊರಕಿತ್ತು. '2002ರ ಗಲಭೆಯಲ್ಲಿ ಪಾತಕಿಗಳಿಗೆ ಪಾಠ ಕಲಿಸಲಾಗಿತ್ತು' ಎಂದು ಗುಜರಾತ್ ವಿದಾನಸಭಾ ಚುನಾವಣೆಯ ಪ್ರಚಾರ ಭಾಷಣವೊಂದರಲ್ಲಿ ಹೇಳಿದ್ದರು. ಈ ಮೂಲಕ ಗಲಭೆಯಲ್ಲಿ ಅಂದಿನ ಬಿಜೆಪಿ ಸರಕಾರದ ಪಾತ್ರವಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದರು ಮಾತ್ರವಲ್ಲ, ಗುಜರಾತ್ ಹತ್ಯಾಕಾಂಡದಲ್ಲಿ ಬಲಿಯಾದ ಸಂತ್ರಸ್ತರನ್ನು ಅವರು 'ಪಾತಕಿ'ಗಳು ಎಂದು ಕರೆದಿದ್ದರು. ಆ ಚುನಾವಣೆಯಲ್ಲಿ ಗುಜರಾತ್ ಗಲಭೆಯಲ್ಲಿ ಆರೋಪಿಗಳಾಗಿ ಗುರುತಿಸಿಕೊಂಡವರು ನೇರವಾಗಿ ಭಾಗಿಯಾಗಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಹತ್ಯಾಕಾಂಡದ ಮೂಲಕವೇ ಅಧಿಕಾರ ಹಿಡಿದ ಕುಖ್ಯಾತಿಯನ್ನು ಅಮಿತ್ ಶಾ ಅವರು ಹೊಂದಿದ್ದಾರೆ. ಇದೀಗ ಅವರು ಕರ್ನಾಟಕಕ್ಕೆ ಕಾಲಿಟ್ಟು 'ಕಾಂಗ್ರೆಸನ್ನು ಗೆಲ್ಲಿಸಿದರೆ ಗಲಭೆಗಳಾಗುತ್ತವೆ'' ಎನ್ನುವ ಹೇಳಿಕೆಯನ್ನು ''ಬಿಜೆಪಿಯನ್ನು ಸೋಲಿಸಿದರೆ ರಾಜ್ಯಗಳಲ್ಲಿ ಗಲಭೆಗಳನ್ನು ಸೃಷ್ಟಿಸಬೇಕಾಗುತ್ತದೆ, ಎಚ್ಚರಿಕೆ'' ಎಂದು ಜನರು ತಿಳಿಯುವಂತಾಗಿದೆ. ಆದುದರಿಂದಲೇ, ಅಮಿತ್ ಶಾ ಅವರ ಈ ಪರೋಕ್ಷ ಬೆದರಿಕೆ, ಬಿಜೆಪಿಯ ಪ್ರಣಾಳಿಕೆಯಲ್ಲಿ ಸೇರಿಸಲಾಗಿರುವ ಹೊಸ ಭರವಸೆಯಾಗಿದೆ. ಇದರ ವಿರುದ್ಧ ಚುನಾವಣಾ ಆಯೋಗ ಗಂಭೀರ ಕ್ರಮ ತೆಗೆದುಕೊಳ್ಳಲೇ ಬೇಕು.
ಈ ರಾಜ್ಯವನ್ನು ಸದ್ಯ ಆಳುತ್ತಿರುವುದು ಬಿಜೆಪಿ ಸರಕಾರ ಎನ್ನುವುದನ್ನು ಮರೆತಂತಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಗಲಭೆಗಳು ನಡೆದೇ ಇಲ್ಲವೆ? ನಡೆದಿದ್ದರೆ ಯಾರ ಕುಮ್ಮಕ್ಕಿನಿಂದ ನಡೆಯಿತು? ಹಿಜಾಬ್‌ನ ಹೆಸರಿನಲ್ಲಿ ಶಾಲೆ, ಕಾಲೇಜುಗಳನ್ನು ಸರಕಾರದ ನೇತೃತ್ವದಲ್ಲೇ ರಣರಂಗವಾಗಿಸುವ ಪ್ರಯತ್ನ ನಡೆಯಿತು. ನೂರಾರು ವಿದ್ಯಾರ್ಥಿನಿಯರು ಸರಕಾರದ ಸಂಚಿನಿಂದಾಗಿ ಸರಕಾರಿ ಕಾಲೇಜುಗಳನ್ನು ತೊರೆಯುವಂತಾಯಿತು. ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರುವಂತಾಯಿತು. ಕರಾವಳಿಯಲ್ಲಿ ನಡೆದ ಗಲಭೆಗಳಲ್ಲಿ ಸರಕಾರವೇ ಪಕ್ಷಪಾತ ನೀತಿಯನ್ನು ಅನುಸರಿಸಿತು. ಒಂದು ಗುಂಪಿನ ಸಂತ್ರಸ್ತ ಕುಟುಂಬಗಳಿಗೆ ಪರಿಹಾರವನ್ನು ನೀಡಿ, ಇನ್ನೊಂದು ಸಮುದಾಯಕ್ಕೆ ಸೇರಿದ ಸಂತ್ರಸ್ತರಿಗೆ ಪರಿಹಾರವನ್ನು ನಿರಾಕರಿಸಿತು. ಕರಾವಳಿಯಲ್ಲಿ ನಡೆದ ಅಮಾಯಕರ ಹತ್ಯೆಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬೊಮ್ಮಾಯಿಯವರು ''ಕ್ರಿಯೆಗೆ ಪ್ರತಿಕ್ರಿಯೆ ಸಹಜ'' ಎಂಬ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದರು. 'ಹಲಾಲ್ ಕಟ್' ಹೆಸರಿನಲ್ಲಿ ಬೀದಿ ಪುಂಡರು ಶ್ರೀಸಾಮಾನ್ಯರ ಅಂಗಡಿಗಳ ಮೇಲೆ ದಾಳಿ ನಡೆಸಿದರು. ಆಗಲೂ ಮುಖ್ಯಮಂತ್ರಿ ದುಷ್ಕರ್ಮಿಗಳ ವಿರುದ್ಧ ಕಟು ಮಾತುಗಳನ್ನಾಡದೆ ವೌನವಾಗಿದ್ದರು. ಚುನಾವಣೆ ಹತ್ತಿರ ಬರುತ್ತಿರುವಾಗ ''ಹಲಾಲ್ ಕಟ್, ಹಿಜಾಬ್ ಮುಖ್ಯ ವಿಷಯವಲ್ಲ'' ಎಂದು ಹೇಳಿಕೆ ನೀಡುತ್ತಿದ್ದಾರೆ. ಮುಖ್ಯ ವಿಷಯವಲ್ಲ ಎಂದಾದರೆ, ಆ ವಿಷಯಗಳನ್ನು ಮುಂದಿಟ್ಟುಕೊಂಡು ಬೀದಿ ಪುಂಡರು ಸಮಾಜದ ಶಾಂತಿ ಕೆಡಿಸುತ್ತಿದ್ದಾಗ ಸರಕಾರ ಯಾಕೆ ವೌನವಾಗಿತ್ತು? ಹಿಜಾಬ್ ಹೆಸರಿನಲ್ಲಿ ಶಾಲಾ ಕಾಲೇಜುಗಳ ಶಾಂತಿ, ನೆಮ್ಮದಿಯನ್ನು ಯಾಕೆ ಕೆಡಿಸಲಾಯಿತು?
ಕರ್ನಾಟಕದಲ್ಲಿ ನಡೆಯುವ ಗಲಭೆಗಳ ಬಗ್ಗೆ ಅಮಿತ್ ಶಾ ಭವಿಷ್ಯ ನುಡಿಯುತ್ತಿದ್ದಾರೆ. ಆದರೆ ಬಿಜೆಪಿ ಅಧಿಕಾರದಲ್ಲಿರುವಾಗಲೇ ಗುಜರಾತ್‌ನಲ್ಲಿ ಇಡೀ ದೇಶವೇ ಬೆಚ್ಚಿ ಬೀಳುವಂತಹ ಹತ್ಯಾಕಾಂಡಗಳು ಯಾಕೆ ನಡೆದವು? ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ ಗಲಭೆಗಳಿಗಾಗಿಯೇ ಇತರ ದೇಶಗಳು ಅವರಿಗೆ ವೀಸಾ ನಿರಾಕರಿಸಿದ್ದವು. ಅಭಿವೃದ್ಧಿಗೆ, ಶಾಂತಿ ಸೌಹಾರ್ದಕ್ಕೆ ಕರ್ನಾಟಕ ಇತರೆಲ್ಲ ರಾಜ್ಯಗಳಿಗೆ ಮಾದರಿಯಾಗಿದೆ. ಬಸವಣ್ಣ, ಸೂಫಿಸಂತರು, ದಾಸರು, ಕುವೆಂಪುರಂತಹ ಮಹಾನ್ ದಾರ್ಶನಿಕರು ಆಗಿ ಹೋದ ನೆಲವಿದು. ಅವರೆಲ್ಲರ ಅರಿವಿನ ಬೆಳಕಿನಲ್ಲಿ ಕರ್ನಾಟಕವನ್ನು ಕಟ್ಟಿ ನಿಲ್ಲಿಸಲಾಗಿದೆ. ಇಂದು ವಿಜ್ಞಾನ, ತಂತ್ರಜ್ಞಾನಗಳಿಗಾಗಿಯೂ ಕರ್ನಾಟಕ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಇಂತಹ ಕರ್ನಾಟಕಕ್ಕೆ ಗುಜರಾತಿನಲ್ಲಿ ಬಿತ್ತಿ ಬೆಳೆದ ದ್ವೇಷದ ಬೀಜಗಳನ್ನು ತಂದು ಹಂಚುವ ಪ್ರಯತ್ನವನ್ನು ಅಮಿತ್ ಶಾ ನಿಲ್ಲಿಸಬೇಕು. ಸೌಹಾರ್ದ ಪರಂಪರೆ ಕನ್ನಡದ ಹಿರಿಮೆಯಾಗಿದೆ. ಆ ಹಿರಿಮೆಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಕನ್ನಡಿಗರು ಸಹಿಸಲಾರರು ಎನ್ನುವುದನ್ನು ರಾಜ್ಯ ಬಿಜೆಪಿಯ ವರಿಷ್ಠರು ಶಾ ಅವರಿಗೆ ಮನವರಿಕೆ ಮಾಡಿಕೊಡಬೇಕು.