ಐಪಿಎಲ್: ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೋಲುಣಿಸಿದ ರಾಜಸ್ಥಾನ ರಾಯಲ್ಸ್
ಯಶಸ್ವಿ ಜೈಸ್ವಾಲ್ ಅರ್ಧಶತಕ , ಶಿವಂ ದುಬೆ ಹೋರಾಟ ವ್ಯರ್ಥ
ಜೈಪುರ, ಎ.27: ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅರ್ಧಶತಕ(77 ರನ್, 43 ಎಸೆತ, 8 ಬೌಂಡರಿ, 4 ಸಿಕ್ಸರ್), ಆ್ಯಡಮ್ ಝಾಂಪ (3-22) ನೇತೃತ್ವದ ಬೌಲರ್‌ಗಳ ಕೊಡುಗೆಯ ನೆರವಿನಿಂದ ಐಪಿಎಲ್‌ನ 37ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 32 ರನ್ ಅಂತರದಿಂದ ಮಣಿಸಿದೆ.
ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 202 ರನ್ ಗಳಿಸಿತು. ಗೆಲ್ಲಲು 203 ರನ್ ಗುರಿ ಬೆನ್ನಿಟ್ಟಿದ ಚೆನ್ನೈ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು.
8ನೇ ಪಂದ್ಯದಲ್ಲಿ 5ನೇ ಗೆಲುವು ದಾಖಲಿಸಿದ ರಾಜಸ್ಥಾನ 10 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಚೆನ್ನೈ ಮೊದಲ ಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿದಿದೆ.
ಆಲ್‌ರೌಂಡರ್ ಶಿವಂ ದುಬೆ ಸರ್ವಾಧಿಕ ಸ್ಕೋರ್(52 ರನ್, 33 ಎಸೆತ, 2 ಬೌಂಡರಿ, 4 ಸಿಕ್ಸರ್) ಗಳಿಸಿದರು. ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್(47 ರನ್, 29 ಎಸೆತ), ಮೊಯಿನ್ ಅಲಿ(23 ರನ್, 12 ಎಸೆತ) ಹಾಗೂ ರವೀಂದ್ರ ಜಡೇಜ(ಔಟಾಗದೆ 23) ಎರಡಂಕೆಯ ಸ್ಕೋರ್ ಗಳಿಸಿದರು.
ರಾಜಸ್ಥಾನದ ಪರ ಆ್ಯಡಮ್ ಝಾಂಪ(3-22) ಯಶಸ್ವಿ ಪ್ರದರ್ಶನ ನೀಡಿದರೆ, ಆರ್.ಅಶ್ವಿನ್(2-35)ಎರಡು ವಿಕೆಟ್ ಗಳಿಸಿದರು.
ಇದಕ್ಕೂ ಮೊದಲು ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಜೈಪುರದಲ್ಲಿ 200ಕ್ಕೂ ಅಧಿಕ ರನ್ ಗಳಿಸಲಾಗಿದೆ. ರಾಜಸ್ಥಾನ ತಂಡ ತಾನಾಡಿದ 200ನೇ ಐಪಿಎಲ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದು ವಿಶೇಷ.