ನಕ್ಸಲ್ ಹಿಂಸಾಚಾರಕ್ಕೆ ಎಣ್ಣೆ ಸುರಿಯುತ್ತಿದೆಯೆ ಸರಕಾರ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪುಲ್ವಾಮಾದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಗೆ 40 ಸೈನಿಕರು ಬಲಿಯಾಗಿರುವ ಪ್ರಕರಣ ಮತ್ತೆ ಜೀವ ಪಡೆದಿದೆ. ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಈ ದಾಳಿಯ ಬಗ್ಗೆ ನೀಡಿರುವ ಹೇಳಿಕೆಗಳು ಕೇಂದ್ರ ಸರಕಾರದ ಕುರಿತಂತೆ ಅನುಮಾನಗಳನ್ನು ಹುಟ್ಟಿಸಿ ಹಾಕಿವೆ. ಸರಕಾರದ ವೈಫಲ್ಯವೇ ನಮ್ಮ ಸೈನಿಕರ ಬರ್ಬರ ಸಾವಿಗೆ ಕಾರಣವಾಯಿತೆ? ಚುನಾವಣೆ ದೃಷ್ಟಿಯಿಂದ ಇಂತಹದೊಂದು ದಾಳಿಗೆ ಸರಕಾರವೇ ಅವಕಾಶ ಮಾಡಿಕೊಟ್ಟಿತೆ? ಎಂಬಿತ್ಯಾದಿ ಪ್ರಶ್ನೆಗಳು ಚರ್ಚೆಯಲ್ಲಿವೆ. ಪುಲ್ವಾಮಾದಲ್ಲಿ ನಮ್ಮ ಯೋಧರ ಬಲಿದಾನ ತೀವ್ರ ಚರ್ಚೆಯಲ್ಲಿರುವಾಗಲೇ, ಜಮ್ಮು -ಕಾಶ್ಮೀರದ ಪೂಂಛ್ನಲ್ಲಿ ವಾರದ ಹಿಂದೆ ಇನ್ನೊಂದು ಭಯೋತ್ಪಾದಕ ದಾಳಿ ನಡೆದಿದ್ದು, ನಮ್ಮ ಐದು ಮಂದಿ ಸೈನಿಕರು ಬಲಿಯಾಗಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಸಂಪೂರ್ಣ ನಿಯಂತ್ರಿಸಿದ್ದೇವೆ ಎಂದು ಹೇಳಿಕೆ ನೀಡುತ್ತಿರುವ ಸಂದರ್ಭದಲ್ಲೇ ಈ ದಾಳಿ ನಡೆದಿದೆ. ಕೇಂದ್ರ ಸರಕಾರ ಬಾಹ್ಯ ಜಗತ್ತಿಗೆ ಜಮ್ಮು-ಕಾಶ್ಮೀರದ ಬಗ್ಗೆ ನೀಡುತ್ತಿರುವ ಚಿತ್ರಣಕ್ಕೆ ವಿರುದ್ಧವಾದುದನ್ನು ಈ ದಾಳಿ ಹೇಳುತ್ತಿದೆ. ಸೇನೆಯ ಮೂಲಕ ಜಮ್ಮು ಕಾಶ್ಮೀರವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಅಲ್ಲಿ ಭಯೋತ್ಪಾದನೆ ಇಳಿಕೆಯಾಗಿದೆ ಎಂದು ಕೇಂದ್ರ ಸರಕಾರ ಹೇಳಿಕೆ ನೀಡುತ್ತಿದ್ದರೆ, ಇತ್ತ ನಮ್ಮ ಸೈನಿಕರ ಮೇಲೆಯೇ ದಾಳಿ ನಡೆಸಿ ಭಯೋತ್ಪಾದಕರು ವಿಜೃಂಭಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಇತ್ತ ಈಶಾನ್ಯ ಭಾರತದಲ್ಲೂ ಉಗ್ರರು ವಿಜೃಂಭಿಸಿದ್ದಾರೆ. ಛತ್ತೀಸ್ಗಡದ ದಂತೇವಾಡಾದಲ್ಲಿ ಮಾವೋವಾದಿಗಳು ಎಂದು ಗುರುತಿಸಿಕೊಂಡ ಉಗ್ರರು ಸ್ಫೋಟಕಗಳನ್ನು ಸಿಡಿಸುವ ಮೂಲಕ, 10 ಪೊಲೀಸರನ್ನು ಬಲಿತೆಗೆದುಕೊಂಡಿದ್ದಾರೆ. ಪ್ರಧಾನಿ ಮೋದಿಯವರು ಎಂದಿನಂತೆಯೇ ವಿಷಾದ ಹೇಳಿಕೆಗಳನ್ನು ನೀಡುವ ಮೂಲಕ ದುರಂತವನ್ನು ಸರಿದೂಗಿಸಲು ಮುಂದಾಗಿದ್ದಾರೆ.
ಕಾಶ್ಮೀರದ ಜನರ ಪ್ರಜಾಸತ್ತಾತ್ಮಕವಾದ ಹಕ್ಕುಗಳನ್ನು ಕಿತ್ತುಕೊಂಡು ಅವರನ್ನು ಸೇನೆಯ ನಿಯಂತ್ರಣಕ್ಕೆ ಒಳಪಡಿಸಿ ಅಲ್ಲಿ ಶಾಂತಿ ಸ್ಥಾಪಿಸುತ್ತೇನೆ ಎಂದು ಹೊರಟು ಎಡವಿರುವ ಪ್ರಧಾನಿ, ಈಶಾನ್ಯ ಭಾರತದಲ್ಲಿಯೂ ಉಗ್ರರ ನಿಯಂತ್ರಣದಲ್ಲಿ ವಿಫಲರಾಗುತ್ತಿರುವುದನ್ನು ನಕ್ಸಲ್ ದಾಳಿ ಸ್ಪಷ್ಟಪಡಿಸಿದೆ. ಛತ್ತೀಸ್ಗಡದ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಮಾವೋವಾದಿಗಳ ಉಪಸ್ಥಿತಿಯ ಕುರಿತು ಗುಪ್ತಚರ ಮಾಹಿತಿಯ ಮೇರೆಗೆ ನಕ್ಸಲ್ ನಿಗ್ರಹ ಕಾರ್ಯಾಚರಣೆಗಾಗಿ ದಂತೇವಾಡಾದಿಂದ ರಾಜ್ಯ ಪೊಲೀಸ್ ತಂಡವನ್ನು ಅಲ್ಲಿಗೆ ರವಾನಿಸಲಾಗಿತ್ತು. ಕಾರ್ಯಾಚರಣೆಯನ್ನು ಮುಗಿಸಿ ಮರಳುವಾಗ ನಕ್ಸಲೀಯರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಇಲ್ಲಿಯೂ ಗುಪ್ತಚರ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ.
ಗುಪ್ತಚರ ಇಲಾಖೆಯ ಮಾಹಿತಿಯಲ್ಲಿರುವ ಗೊಂದಲ, ಪೊಲೀಸರನ್ನು ತಾವಾಗಿಯೇ ನಕ್ಸಲರು ಹಾಕಿದ್ದ ಉರುಳಿಗೆ ಹೋಗಿ ಬೀಳುವಂತೆ ಮಾಡಿತೆ ಎನ್ನುವ ಪ್ರಶ್ನೆ ಎದ್ದಿದೆ. ಈಶಾನ್ಯ ಭಾರತದಲ್ಲಿ ಪೊಲೀಸರು ಮತ್ತು ಯೋಧರ ಮೇಲೆ ನಕ್ಸಲ್ ದಾಳಿಗಳು ಪದೇ ಪದೇ ನಡೆಯುತ್ತಿವೆ. 2021ರಲ್ಲಿ ಸುಕ್ಮಾ ಜಿಲ್ಲೆಯ ಗಡಿಯ ತೆರ್ರಂ ಅರಣ್ಯದಲ್ಲಿ ನಕ್ಸಲರೊಂದಿಗಿನ ಗುಂಡಿನ ಕಾಳಗದಲ್ಲಿ 22 ಮಂದಿ ಸಿಬ್ಬಂದಿ ಮೃತಪಟ್ಟಿದ್ದರು. 2018ರಲ್ಲಿ ಇದೇ ಜಿಲ್ಲೆಯಲ್ಲಿ ಒಂಭತ್ತು ಸಿಆರ್ಪಿಎಫ್ ಸಿಬ್ಬಂದಿ ಬಲಿಯಾಗಿದ್ದರು. ಅದಕ್ಕೂ ಒಂದು ತಿಂಗಳ ಮೊದಲು ನಕ್ಸಲರ ದಾಳಿಗೆ ಇಬ್ಬರು ಮೃತಪಟ್ಟಿದ್ದರು. 2017ರಲ್ಲಿ ಸುಕ್ಮಾದಲ್ಲಿ ಮಾವೋವಾದಿಗಳ ಗುಂಡಿನ ದಾಳಿಗೆ 24 ಸಿಆರ್ಪಿಎಫ್ ಸಿಬ್ಬಂದಿ ಬರ್ಬರವಾಗಿ ಹತರಾಗಿದ್ದರು. ಇವೆಲ್ಲ ದುರಂತಗಳು ಸಂಭವಿಸಿರುವುದು ಮೋದಿಯವರು ಅಧಿಕಾರಕ್ಕೇರಿದ ಬಳಿಕ. ಹಾಗೆಂದು ಈ ಮೊದಲು ನಕ್ಸಲ್ ದಾಳಿಗಳು ಸಂಭವಿಸಿಲ್ಲ ಎಂದಲ್ಲ.
ತನ್ನ ಆಡಳಿತದಲ್ಲಿ ಉಗ್ರರನ್ನು ಸಂಪೂರ್ಣ ದಮನಿಸಲಾಗಿದೆ, ಈಶಾನ್ಯ ಭಾರತದಲ್ಲಿ ಉಗ್ರವಾದ ನಿಯಂತ್ರಣದಲ್ಲಿದೆ ಎಂದು ಪದೇ ಪದೇ ಪ್ರಧಾನಿ ಮೋದಿ ಸರಕಾರ ಹೇಳಿಕೆ ನೀಡುತ್ತಿರುವ ಬೆನ್ನಿಗೇ ಇಂತಹ ದಾಳಿಗಳು ಯಾಕೆ ನಡೆಯುತ್ತಿವೆ? ಹಾಗೆಯೇ, ನಕ್ಸಲ್ ಕಾರ್ಯಾಚರಣೆಯ ಸಂದರ್ಭದಲ್ಲಿ ಸ್ಥಳೀಯ ನಾಗರಿಕರನ್ನು ಕೂಡ ‘ಬಲಿಪಶು’ಗಳಾಗಿ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ. ಅರಣ್ಯದಲ್ಲಿ ಬದುಕು ಕಟ್ಟಿಕೊಂಡಿರುವ ಜನರ ಸ್ಥಿತಿ ಅತ್ತ ದರಿ-ಇತ್ತ ಪುಲಿ ಎನ್ನುವಂತಾಗಿದೆ. ಒಂದೆಡೆ ಪೊಲೀಸರು, ಇನ್ನೊಂದೆಡೆ ನಕ್ಸಲರು. ಪೊಲೀಸರಿಗೆ ಸಹಕರಿಸಿದರೆ ನಕ್ಸಲ್ ದಾಳಿಯನ್ನು ಎದುರಿಸಬೇಕು. ನಕ್ಸಲರಿಗೆ ಸಹಕರಿಸಿದರೆ ಪೊಲೀಸರ ದೌರ್ಜನ್ಯವನ್ನು ಅನುಭವಿಸಬೇಕು. ಈ ಹಿಂದೆ ‘ಸಲ್ವಾ ಜುಡುಂ’ ಮೂಲಕ ಸ್ಥಳೀಯ ನಾಗರಿಕರನ್ನೇ ನಕ್ಸಲರ ವಿರುದ್ಧ ಗುರಾಣಿಯನ್ನಾಗಿ ಬಳಸುವ ಪ್ರಯತ್ನ ನಡೆದಿತ್ತು. ಮಾನವ ಹಕ್ಕು ಸಂಘಟನೆಗಳು ಮತ್ತು ನ್ಯಾಯಾಲಯ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಸಲ್ವಾ ಜುಡುಂ ಯೋಜನೆಯನ್ನು ಹಿಂದೆಗೆದುಕೊಳ್ಳಲಾಯಿತಾದರೂ, ಇಂದಿಗೂ ಸ್ಥಳೀಯರನ್ನೇ ಬಳಸಿಕೊಂಡು ಸರಕಾರ ನಕ್ಸಲರನ್ನು ಎದುರಿಸುತ್ತಿದೆ. ಬಲಿಯಾಗುವ ನಕ್ಸಲರು ಮತ್ತು ಪೊಲೀಸರು ಸ್ಥಳೀಯ ಆದಿವಾಸಿಗಳೇ ಆಗಿರುತ್ತಾರೆ ಎನ್ನುವುದು ಮಾನವ ಹಕ್ಕು ಹೋರಾಟಗಾರರ ಅಭಿಪ್ರಾಯ.
ಈಶಾನ್ಯ ಭಾರತದಲ್ಲಿ ಮಾವೋವಾದಿಗಳ ಪ್ರಾಬಲ್ಯಕ್ಕೆ ಸ್ಥಳೀಯರ ಸಹಾನುಭೂತಿಯೂ ಕಾರಣ ಎನ್ನುವ ಆರೋಪಗಳಿವೆ. ಈ ಆರೋಪ ತೀರಾ ನಿರಾಕರಿಸುವಂತಹದಲ್ಲ. ಸ್ಥಳೀಯ ಆದಿವಾಸಿಗಳ ಮೇಲೆ ಸರಕಾರ ನಡೆಸುತ್ತಿರುವ ದೌರ್ಜನ್ಯವನ್ನು ಉಗ್ರವಾದಿಗಳು ತಮಗೆ ಪೂರಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಮೋದಿ ಪ್ರಧಾನಿಯಾದ ಬಳಿಕ ಕಾರ್ಪೊರೇಟ್ ವಲಯಗಳು ದೊಡ್ಡ ಮಟ್ಟದಲ್ಲಿ ಈಶಾನ್ಯ ಭಾರತದ ಅರಣ್ಯ ಪ್ರದೇಶಗಳ ಲೂಟಿಗೆ ಸಜ್ಜಾಗಿ ನಿಂತಿವೆ. ಇದರಲ್ಲಿ ಮೋದಿಯವರ ಸ್ನೇಹಿತರಾಗಿರುವ ಅದಾನಿಯ ಕಂಪೆನಿ ಮುಂಚೂಣಿಯಲ್ಲಿದೆ. ಛತ್ತೀಸ್ಗಡದ ಗಣಿಯೊಂದರಲ್ಲಿ ಹೊರ ತೆಗೆಯದ ಲಕ್ಷಾಂತರ ಟನ್ ಕಲ್ಲಿದ್ದಲು ಹಾಗೆಯೇ ಉಳಿದಿರುವಾಗಲೇ, ರಾಜ್ಯದಲ್ಲಿ ಗಣಿಗಾರಿಕೆಗಾಗಿ ಕೇಂದ್ರ ಸರಕಾರ 3,000 ಹೆಕ್ಟೇರ್ ಅರಣ್ಯ ಜಮೀನನ್ನು ತೆರವುಗೊಳಿಸಲು ಅನುಮತಿ ನೀಡಿ ಅದಾನಿ ಕಂಪೆನಿಗೆ ಸಹಕರಿಸಿತ್ತು ಎನ್ನುವ ಅಂಶ ಇತ್ತೀಚೆಗೆ ಮಾಧ್ಯಮಗಳಲ್ಲಿ ಬಹಿರಂಗಗೊಂಡಿತ್ತು. ಅರಣ್ಯ ಪ್ರದೇಶದಲ್ಲಿರುವ ಅಪಾರ ಗಣಿ ಸಂಪತ್ತು ಕಾರ್ಪೊರೇಟ್ ದನಿಗಳ ಕಣ್ಣುಕುಕ್ಕುತ್ತಿದೆ. ಆದುದರಿಂದ ಅವರು ಅರಣ್ಯದ ಮೇಲೆ ಹಕ್ಕು ಸ್ಥಾಪಿಸಲು ಯತ್ನಿಸುತ್ತಿದ್ದಾರೆ. ತಲೆ ತಲಾಂತರದಿಂದ ಅರಣ್ಯದಲ್ಲಿ ಬದುಕುತ್ತಾ, ಅದರ ಒಂದು ಭಾಗವಾಗಿರುವ ಆದಿವಾಸಿಗಳ ಮೇಲೆ ದೌರ್ಜನ್ಯವೆಸಗಿ ಅವರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಈ ಭಾಗದಲ್ಲಿ ಬಹುತೇಕ ಮಾವೋವಾದಿಗಳು ಇಂತಹ ಒಕ್ಕಲೆಬ್ಬಿಸುವಿಕೆಯನ್ನು ಪ್ರತಿಭಟಿಸಿ ಬಂಡಾಯವೆದ್ದವರು.
ಕಾರ್ಪೊರೇಟ್ ಕಂಪೆನಿಗಳ ದುರಾಸೆ ಒಂದೆಡೆ ಅರಣ್ಯ ಭೂಮಿಯನ್ನು ಗಬ್ಬೆಬ್ಬಿಸುತ್ತಿದ್ದರೆ, ಮಗದೊಂದೆಡೆ ಮನುಷ್ಯರ ಬದುಕನ್ನೂ ನರಕವಾಗಿಸುತ್ತಿದೆ. ಉಗ್ರವಾದಿಗಳಿಗೆ ಪರೋಕ್ಷವಾಗಿ ಶಕ್ತಿಯನ್ನು ತುಂಬುತ್ತಿರುವುದು ಇವರ ದುರಾಸೆಯೇ. ಈಶಾನ್ಯ ಭಾರತದಲ್ಲಿ ನಕ್ಸಲ್ ವಾದಿಗಳನ್ನು ನಿಯಂತ್ರಿಸಬೇಕಾದರೆ, ಮೊದಲಾಗಿ ಸ್ಥಳೀಯರನ್ನು ಸರಕಾರ ತನ್ನವರನ್ನಾಗಿಸಿಕೊಳ್ಳಬೇಕು. ಬೃಹತ್ ಕಾರ್ಪೊರೇಟ್ ಒಡೆಯರಿಗಾಗಿ ಸ್ಥಳೀಯರನ್ನು ಪರಕೀಯರಾಗಿಸಿ ಅವರನ್ನು ದಮನಿಸುವುದರಿಂದ ಉಗ್ರವಾದದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತೆ. ಸ್ಥಳೀಯರ ಮೇಲೆ ದೌರ್ಜನ್ಯ ಹೆಚ್ಚಾದಂತೆಯೇ ಅದರ ಲಾಭವನ್ನು ಉಗ್ರವಾದಿಗಳು ತಮ್ಮದಾಗಿಸಿಕೊಳ್ಳುತ್ತಾರೆ.ಈ ಕಾರಣದಿಂದ, ಮೊದಲು ಈಶಾನ್ಯ ಭಾರತದ ಆದಿವಾಸಿಗಳು, ಬುಡಕಟ್ಟು ಜನರ ಕುರಿತಂತೆ ತಾನು ಮಾಡುತ್ತಿರುವ ತಪ್ಪುಗಳನ್ನು ಸರಕಾರ ತಿದ್ದಿಕೊಳ್ಳಬೇಕು. ಆ ಮೇಲೆ ದಾರಿ ತಪ್ಪಿದ ಸ್ಥಳೀಯರನ್ನು ತಿದ್ದುವ ಕೆಲಸವನ್ನು ಮಾಡಬೇಕು. ಅರಣ್ಯ ಭೂಮಿಯ ಜೊತೆ ಜೊತೆಗೆ ಅಲ್ಲಿ ಬದುಕುತ್ತಿರುವ ಆದಿವಾಸಿಗಳನ್ನು ಕೂಡ ತಮ್ಮವರೆಂದು ಬಗೆದು ಕಾರ್ಯನಿರ್ವಹಿಸಿದರೆ ನಕ್ಸಲ್-ಪೊಲೀಸರ ನಡುವಿನ ಹಿಂಸಾಚಾರವನ್ನು ತಡೆಯಬಹುದಾಗಿದೆ. ಉಗ್ರವಾದನ್ನೂ ನಿಯಂತ್ರಿಸಬಹುದಾಗಿದೆ.