ಕಾರವಾರ: ಚುನಾವಣೆ ಪ್ರಚಾರಕ್ಕೆ ಬಂದ ಬಿಜೆಪಿ ಮುಖಂಡರಿಗೆ ಗ್ರಾಮಸ್ಥರ ತರಾಟೆ
ಪ್ರಮೋದ್ ಮಧ್ವರಾಜ್ ರಿಗೆ ಪ್ರಶ್ನೆಗಳ ಸುರಿಮಳೆ, ಶಾಸಕಿ ರೂಪಾಲಿ ವಿರುದ್ಧ ಅಸಮಾಧಾನ
ಕಾರವಾರ, ಎ.28: ಪಕ್ಷದ ಅಭ್ಯರ್ಥಿ ಪರ ಚುನಾವಣೆ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಮುಖಂಡರಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿರುವ ಘಟನೆ ಕಾರವಾರ ತಾಲೂಕಿನ ಮಾಜಾಳಿಯ ಬಾವಳದಲ್ಲಿ ನಡೆದಿರುವುದು ವರದಿಯಾಗಿದೆ.
ಬಾವಳ ಗ್ರಾಮದಲ್ಲಿ ಬಿಜೆಪಿ ಮುಖಂಡ, ಪಕ್ಕದ ಉಡುಪಿ ಜಿಲ್ಲೆಯವರಾದ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹಾಗೂ ಸ್ಥಳೀಯ ಮುಖಂಡರು ಬಿಜೆಪಿ ಅಭ್ಯರ್ಥಿ ಶಾಸಕಿ ರೂಪಾಲಿ ನಾಯ್ಕ ಪರ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಆದರೆ ಈ ಪ್ರಚಾರ ಕಾರ್ಯದಲ್ಲಿ ಶಾಸಕಿ ಪಾಲ್ಗೊಂಡಿರಲಿಲ್ಲ.
ಶಾಸಕಿ ಪ್ರಚಾರಕ್ಕೆ ಆಗಮಿಸದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸ್ಥಳೀಯರು, ರೂಪಾಲಿ ಶಾಸಕಿಯಾದ ಐದು ವರ್ಷದಲ್ಲಿ ಒಮ್ಮೆಯೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಜನರ ಸಮಸ್ಯೆಗಳನ್ನ ಆಲಿಸಿಲ್ಲ. 2018ರ ಚುನಾವಣೆಯಲ್ಲಿ ಮತ ಯಾಚನೆಗೆ ಬಂದಿದ್ದವರು ಮತ್ತೆ ಮುಖ ತೋರಿಸಿಲ್ಲ. ಸ್ಥಳೀಯವಾಗಿ ಯಾವುದೇ ಅಭಿವೃದ್ಧಿ ಮಾಡದೇ ಈಗ ಮತ ಯಾಚನೆಗೆ ಬಂದಿದ್ದೀರಾ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇರೆ ಜಿಲ್ಲೆಯ ನಾಯಕರು ಇಲ್ಲಿನವರ ಪರ ಬಂದು ಪ್ರಚಾರ ಮಾಡುವುದೇನಿದೆ? ಶಾಸಕಿಯೇ ಸ್ಥಳಕ್ಕೆ ಬಂದು ಗ್ರಾಮಸ್ಥರ ಸಮಸ್ಯೆ ಕೇಳಲಿ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ ಆಕ್ರೋಶಗೊಂಡವರನ್ನ ಎಂಎಲ್‌ಸಿ ಗಣಪತಿ ಉಳ್ವೇಕರ್ ಸಮಾಧಾನಪಡಿಸಲೆತ್ನಿಸಿದರು. ಮನವಿ ಕೂಡ ಮಾಡಿಕೊಂಡರೂ ಸ್ಥಳೀಯರು ಸಭೆಗೆ ಆಗಮಿಸದೇ ವೇದಿಕೆ ಹೊರಗೆ ನಿಂತು ಬಿಜೆಪಿಗರ ಭಾಷಣ ಕೇಳಿದರು.
ಇನ್ನು ಮಾಜಾಳಿ ವ್ಯಾಪ್ತಿಯಲ್ಲೇ ಪ್ರಚಾರ ಕೈಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಸತೀಶ್ ಸೈಲ್ ಈ ಕುರಿತು ಮಾತನಾಡಿದ್ದು, ಐದು ವರ್ಷ ಮಾಡಬೇಕಾಗಿದ್ದ ಕಾರ್ಯಗಳನ್ನ ಸರಿಯಾಗಿ ಮಾಡಿದ್ದರೆ ಅವರಿಗೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಕಾಲೆಳೆದಿದ್ದಾರೆ.