ರೈತ ಹಕ್ಕೊತ್ತಾಯಗಳು: ಬಾಕಿ ವಗೈರೆಗಳು
ಈ ಹಕ್ಕೊತ್ತಾಯದ ಪಟ್ಟಿ ರೈತ ಸಂಘಗಳ predictable ಬೇಡಿಕೆಗಳ ಪಟ್ಟಿಯೇ ಸರಿ. ಹೊಸ ಸವಾಲುಗಳ ಅರಿವಾಗಲೀ ನತದೃಷ್ಟರ ಪರವಾದ ಬೇಡಿಕೆಗಳಾಗಲೀ ಮಾಯವಾಗಿರುವುದು ಈ ಸಂಘಟನೆಗಳ ಬೌದ್ಧಿಕ ಮಿತಿಯನ್ನು ತೋರಿಸುತ್ತದೆ.
ಬೆಂಗಳೂರಿನಲ್ಲಿ ನಡೆದ ಕಿಸಾನ್ ಸಂಯಕ್ತ ಮೋರ್ಚಾದ ಸಮಾಲೋಚನಾ/ ಸಂವಾದ ಪಂಚಾಯತ್‌ನಲ್ಲಿ ರೈತರ ಹಕ್ಕೊತ್ತಾಯಗಳು ಬಿಡುಗಡೆಗೊಂಡವು. ಈ ಹಕ್ಕೊತ್ತಾಯಗಳ ಫೋಕಸ್‌ನಲ್ಲಿ ಮಳೆ ಆಶ್ರಿತ ಸಣ್ಣ ರೈತರು, ಕೃಷಿ ಕೂಲಿಕಾರರು, ಆದಿವಾಸಿಗಳ ಅರಣ್ಯ ಹಕ್ಕು ಹಾಗೂ ಉದ್ಯೋಗ ಖಾತರಿ ಯೋಜನೆಯ ಆಶಯಗಳ ಬಗ್ಗೆ ಹೆಚ್ಚೇನೂ ಇರಲಿಲ್ಲ. ಇದು ಅನಿರೀಕ್ಷಿತ ಅಲ್ಲವೆನಿಸುತ್ತದೆ.
ಬಹುತೇಕ ನಮ್ಮ ರೈತ ಸಂಘಗಳ ಹೊಕ್ಕುಳ ಬಳ್ಳಿ ಇರುವುದು ದೊಡ್ಡ/ನೀರಾವರಿ/ವ್ಯಾಪಾರಿ ಬೆಳೆಗಳಲ್ಲಿ. ಆದ್ದರಿಂದಲೇ ಈ ಬೇಡಿಕೆಗಳ ಪಟ್ಟಿಯಲ್ಲಿ ಈ ಛಾಯೆ ಢಾಳಾಗಿ ಕಾಣಿಸುತ್ತದೆ.
ಬೆಲೆ ಕುಸಿದಾಗ ಸರಕಾರ ಮಧ್ಯಪ್ರವೇಶ ಮಾಡಬೇಕು ಎನ್ನುವ ಪಟ್ಟಿಯ ಬೆಳೆಗಳು ಇದನ್ನು ಸೂಚಿಸುತ್ತವೆ. ಜೊತೆಗೆ ಎತ್ತಿನಹೊಳೆ, ಮೇಕೆದಾಟು ಯೋಜನೆಗಳ ಬಗ್ಗೆಯೂ ಹಕ್ಕೊತ್ತಾಯವಿದೆ.
ಈ ವೈರುಧ್ಯಗಳ ಬಗ್ಗೆ ಯಾರೂ ಚರ್ಚಿಸಲಿಲ್ಲ. ಚರ್ಚಿಸಲು ಸಮಯಾವಕಾಶವೂ ಇರಲಿಲ್ಲ. ಈ ಬಗ್ಗೆ ಈ ಮೋರ್ಚಾದ ಭಾಗವಾದ ಸಂಘಟನೆಗಳು ಚರ್ಚಿಸಿದ್ದವೋ ಗೊತ್ತಿಲ್ಲ.
ಈ ಹಕ್ಕೊತ್ತಾಯ ಅಂಚಿಗೆ ಸರಿಸಿರುವ ವಿಷಯಗಳು ಯಾಕೆ ಮುಖ್ಯ ಅನ್ನುವುದನ್ನು ಕೊಂಚ ಚರ್ಚಿಸಬೇಕಿದೆ.
► ಕರ್ನಾಟಕದ ಶೇ.೬೦ರಷ್ಟು ಕೃಷಿ ಮಳೆ ಆಶ್ರಿತ ಕೃಷಿಯ ಹಂಗಿನಲ್ಲಿದೆ. ಕರ್ನಾಟಕದ ಬಹುತೇಕ ರೈತರು ಸಣ್ಣ /ಅತಿ ಸಣ್ಣ ರೈತರಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಸಣ್ಣ /ಅತಿ ಸಣ್ಣ ರೈತರು ತಮ್ಮ ಹೆಚ್ಚಿನ ಆದಾಯವನ್ನು ಕೂಲಿ ಮೂಲಕ ಪಡೆಯುತ್ತಿದ್ದಾರೆ. ಅಂದರೆ ಈ ರೈತರು ಕೃಷಿ ಕೂಲಿಕಾರರಾಗಿಯೂ ಬದಲಾಗಿದ್ದಾರೆ. ಈ ರೈತರು/ಕೂಲಿಕಾರರಿಗೆ ಕೃಷಿಯಾಚೆ ಆದಾಯ ಮೂಲಗಳ ಖಚಿತತೆ ಇಲ್ಲ. ಈ ಗ್ರಾಮ ಭಾರತದ ಸಂಕಟ ಕಣ್ಣಿಗೆ ಹಿಡಿಯುವಂತಿದೆ. ಇವರ ಸಂಕಟ ಪರಿಹಾರವಾಗುವವರೆಗೂ ಗ್ರಾಮ ಭಾರತಕ್ಕೂ ಕೃಷಿ ಲೋಕಕ್ಕೂ ಬಿಡುಗಡೆ ಇಲ್ಲ.
► ಅರಣ್ಯ ಹಕ್ಕು ಎಂಬುದು ಆದಿವಾಸಿಗಳಿಗೆ ಬಹುಮುಖ್ಯ. ಬಗರ್ ಹುಕುಂ ಬಗ್ಗೆ ಮಾತಾಡುವ ರೈತ ಮುಖಂಡರು ಈ ನತದೃಷ್ಟರ ಬಗ್ಗೆ ಬಾಯುಪಚಾರದ ಒಕ್ಕಣೆ ಬಿಟ್ಟರೆ ಹೆಚ್ಚಿನ ಕಾಳಜಿ ತೋರಿಲ್ಲ. ಆದಿವಾಸಿಗಳ ಸಮುದಾಯ ಹಕ್ಕು ಬೇರೆ. ಅರಣ್ಯದಲ್ಲಿರುವ ಆದಿವಾಸಿಯೇತರರ ಬೇಡಿಕೆಗಳು ಬೇರೆ. ಈ ದೇಶದ ಮೂಲನಿವಾಸಿಗಳ ಕೈಯಿಂದ ಅರಣ್ಯವನ್ನು ಕಸಿದುಕೊಂಡು ಅವರನ್ನೇ ಅನ್ಯರು ಎಂಬಂತೆ ನೋಡುವ ನೀತಿ ಧೋರಣೆ ಖಾಯಂ ಆಗಿದೆ. ಖಾಸಗಿ ಆಸ್ತಿ ಹಕ್ಕಿಲ್ಲದ ಸಾಮುದಾಯಿಕ ಹಕ್ಕು ಮಾತ್ರ ಇರುವ ಈ ಆದಿವಾಸಿಗಳ ಹಕ್ಕುಗಳು ನಮ್ಮ ಆದ್ಯತೆಯೂ ಆಗಬೇಕು. ಮನುಷ್ಯ ಸಂಘರ್ಷ ತಾರಕಕ್ಕೇರಿರುವ ಕರ್ನಾಟಕದಲ್ಲಿ ಕಾಡಿನ ಮಕ್ಕಳ ದುಸ್ಥಿತಿ ಇನ್ನೂ ದಯನೀಯವಾಗಿಯೇ ಇದೆ.
► ಉದ್ಯೋಗ ಖಾತರಿಯನ್ನೇ ನೋಡಿ: ತೋಟಗಾರಿಕೆಗೆ ಪ್ರೋತ್ಸಾಹ ನೀಡಲು ಸಾವಿರಾರು ರೂಪಾಯಿಗಳ ಸಹಾಯ ಇಲ್ಲಿದೆ. ಆದರೆ ಈ ತೋಟಗಾರಿಕೆಗೆ ಬದಲಾಗುವುದೆಂದರೆ ಬೋರ್‌ವೆಲ್ ಹೊಂದುವುದೇ ಆಗಿದೆ. ಈ ಬೋರ್‌ವೆಲ್ ಭಾಗ್ಯ ಇಲ್ಲದ ನತದೃಷ್ಟರು ಮತ್ತು ತೋಟಗಾರಿಕೆಯ ಭಾಗ್ಯ ಪಡೆದವರ ನಡುವಿನ ಕಂದರವನ್ನು ಸರಕಾರವೇ ಹೆಚ್ಚಿಸುತ್ತಿದೆ. ಮಳೆ ಆಶ್ರಿತ ರೈತರ ಬೇಸಾಯಕ್ಕೆ ಕನಿಷ್ಠ ಸಹಾಯವೂ ಇಲ್ಲ. ಏನಿಲ್ಲವೆಂದರೂ ಹತ್ತಿಪ್ಪತ್ತು ದಿನಗಳ ಉದ್ಯೋಗ ಖಾತರಿ ದಿನಗಳನ್ನು ಈ ರೈತರಿಗೆ ನೀಡಿದರೂ ಮಳೆ ಆಶ್ರಿತ ಕೃಷಿ ಕೊಂಚ ಉಸಿರಾಡಬಹುದು.
ಇವೆಲ್ಲಾ ಒಳಗಿನ ಅನುಕಂಪದಿಂದ ಹುಟ್ಟಬೇಕೇ ಹೊರತು, ಹೇಳಿ ಕೊಟ್ಟು ಬರುವಂಥದ್ದಲ್ಲ.
► ಇನ್ನು ಕರ್ನಾಟಕದ ಇತ್ತೀಚೆಗಿನ ಪರಮ ಪರಿಸರ ಮತ್ತು ಆರ್ಥಿಕ ಫ್ರಾಡ್ ಆಗಿರುವ ಎತ್ತಿನ ಹೊಳೆ ಯೋಜನೆ ಬಗ್ಗೆಯೂ ಅಷ್ಟೇ. ಈ ಯೋಜನೆಯ ಭ್ರಷ್ಟಾಚಾರ ಮತ್ತು ನೀರಿನ ಲಭ್ಯತೆಯ ಕಣ್ಕಟ್ಟು ಗೊತ್ತೇ ಇಲ್ಲದಂತೆ ನಮ್ಮ ರೈತ ನಾಯಕರು ವರ್ತಿಸಿದರೆ ಹೇಗೆ? ಮೇಕೆ ದಾಟು ಇದಕ್ಕಿಂತಲೂ ವಿಪರೀತದ್ದು. ಇದರ ಪರಿಸರ ಪರಿಣಾಮ ಗಮನಿಸಿದರೆ ಈ ಯೋಜನೆ ಹೇಗೆ ಸಾಧು ಎಂಬುದು ಅರ್ಥವಾಗುತ್ತಿಲ್ಲ.
► ಕನಿಷ್ಠ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಈ ಕಾವೇರಿಯ ದುಪ್ಪಟ್ಟು ನೀರು ನಮ್ಮ ಪಾಲಿಗಿದ್ದರೂ ಅದು ಕುಂಟುತ್ತಾ ಸಾಗಿದೆ. ಒಂದು ಲಕ್ಷ ಎಕರೆಯಷ್ಟು ಜಮೀನು ಮುಳುಗಡೆಯಾಗಬಹುದಾದ ಈ ವಿಸ್ತರಣೆಯಲ್ಲಿ ಮುಳುಗಡೆಯಾಗುವ ರೈತರಿಗೆ ದೊರಕುವ ಪರಿಹಾರದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಅನುದಾನವಂತೂ ಅಷ್ಟಕ್ಕಷ್ಟೇ. ಇದು ಆದ್ಯತೆಯಾಗಬೇಕಲ್ಲವೇ.
► ನಮ್ಮ ಅಕಾಲ ಮಳೆ, ಬರ, ಎಲ್ಲವೂ ಹವಾಮಾನ ವೈಪರೀತ್ಯದಿಂದ ಉಂಟಾಗುತ್ತಿದೆ ಎಂಬುದನ್ನು ಪದೇ ಪದೇ ವಿಜ್ಞಾನಿಗಳು ಎಚ್ಚರಿಸುತ್ತಿದ್ದರೂ ಈ ಸರಕಾರ ರೂಪಾಯಿಗೆ ಒಂದಾಣೆ ಸನ್ನದ್ಧತೆಯನ್ನೂ ತೋರಿಲ್ಲ. ಸರಕಾರಕ್ಕಿರುವ ಅವಜ್ಞೆ ಮಾಮೂಲಿ. ರೈತ ನಾಯಕರಿಗಾದರೂ ಈ ಎಚ್ಚರ ಬೇಕಲ್ಲವೇ.
ಪ್ರೊಫೆಸರ್ ದೃಷ್ಟಾರ ಅನ್ನಿಸಿಕೊಳ್ಳೋದು ಈ ಕಾರಣಕ್ಕೆ. ತನ್ನ ಕಾಲದ ಎಲ್ಲಾ ಅಪಾಯಗಳನ್ನೂ ಗ್ರಹಿಸಿ ಸ್ಪಂದಿಸಿ ಪ್ರತಿಕ್ರಿಯಿಸುವ ಶಕ್ತಿ ಅವರಿಗಿತ್ತು.
ಈ ಹಕ್ಕೊತ್ತಾಯದ ಪಟ್ಟಿ ರೈತ ಸಂಘಗಳ predictable ಬೇಡಿಕೆಗಳ ಪಟ್ಟಿಯೇ ಸರಿ. ಹೊಸ ಸವಾಲುಗಳ ಅರಿವಾಗಲೀ ನತದೃಷ್ಟರ ಪರವಾದ ಬೇಡಿಕೆಗಳಾಗಲೀ ಮಾಯವಾಗಿರುವುದು ಈ ಸಂಘಟನೆಗಳ ಬೌದ್ಧಿಕ ಮಿತಿಯನ್ನು ತೋರಿಸುತ್ತದೆ.
ಮೂಲತಃ ಇಂತಹ ಹಕ್ಕೊತ್ತಾಯಗಳು ಚಾಲ್ತಿಯಲ್ಲಿರುವ ಆತ್ಮಹತ್ಯಾಕಾರಿ ನೀತಿಗಳ ಅನುಮೋದನೆಯ ಮೂಲಕವೇ ಹುಟ್ಟಿದರೆ ದೂರಗಾಮಿ, ಸುಸ್ಥಿರ ಪರ್ಯಾಯಗಳನ್ನು ಮುಂದಿಡುವವರು ಯಾರು? ಸರಕಾರೀ ಯಂತ್ರ, ಯೋಜನಾ ಪರಿಣಿತರು, ಕೃಷಿ ವಿಜ್ಞಾನಿಗಳು ಈ ಕಾಣ್ಕೆ ಹೊಂದಿಲ್ಲ. ಆದ್ದರಿಂದಲೇ ರೈತಾಪಿಯೇ ಈ ದಾರಿಯನ್ನು ತೋರಬೇಕು.
ಇದರ ಕರ್ಣ ಧಾರತ್ವ ವಹಿಸಿದ್ದ ರಾಷ್ಟ್ರ ಮಟ್ಟದ ನಾಯಕರೂ ಈ ತಕ್ಷಣದ ಅವಾಸ್ತವಿಕ ಬೇಡಿಕೆಗಳಿಂದಾಚೆ ಚಿಂತನೆ ನಡೆಸುತ್ತಿರುವ ಪುರಾವೆ ಇಲ್ಲಿ ಕಾಣಿಸುತ್ತಿಲ್ಲ.
ದಿಲ್ಲಿಯ ರೈತ ಹೋರಾಟದ ಬಗ್ಗೆ ಕೃತಜ್ಞತೆ ಇರುವಾಗಲೂ ಕರ್ನಾಟಕದ ಮುಖೇನ ಗ್ರಾಮ ಭಾರತ/+ ಕೃಷಿ ಲೋಕದ ಸುಸ್ಥಿರತೆಯ ಹೊಸ ಹೆಜ್ಜೆ, ಹೊಸ ಹಾದಿಗಳ ಬಗ್ಗೆ ಚರ್ಚಿಸಬೇಕಲ್ಲವೇ?