ಬಿಜೆಪಿ ಹಿಂದುತ್ವ ಮತ್ತು ಅಭಿವೃದ್ಧಿಯ ಪರವಾಗಿದೆ: ಪ್ರಮೋದ್ ಮಧ್ವರಾಜ್
ಉಳ್ಳಾಲ,ಎ.29: ಬಿಜೆಪಿ ಹಿಂದುತ್ವ ರಾಷ್ಟ್ರೀಯತೆ ಮತ್ತು ಅಭಿವೃದ್ಧಿ ಪರವಾಗಿರುವ ಪಕ್ಷವಾಗಿದ್ದು, ಈ ಬಾರಿ ಈ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿ ಇದೆ. ಸತೀಶ್ ಕುಂಪಲ ಅವರನ್ನು ಮಂಗಳೂರು ಕ್ಷೇತ್ರದ ಅಭ್ಯರ್ಥಿ ಆಗಿ ಬಿಜೆಪಿ ಕಣಕ್ಕಿಳಿಸಿದೆ. ಮಂಗಳೂರು ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿ ಇದ್ದರೂ ಎಲ್ಲರೂ ಜೊತೆಯಾಗಿ ಅಭ್ಯರ್ಥಿ ಪರ ನಿಂತಿದ್ದಾರೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಅವರು ಪಂಡಿತ್ ಹೌಸ್ ನಲ್ಲಿ ರುವ ಬಿಜೆಪಿ ಚುನಾವಣಾ ಪ್ರಚಾರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರ ಮಾತ್ರ ಕಾಂಗ್ರೆಸ್ ಪಾಲಾಗಿತ್ತು. ಶಾಸಕ ಯುಟಿ ಖಾದರ್ ಕೂಡಾ ನಾನೊಬ್ಬನೇ ಗೆಲ್ಲಬೇಕು ಎಂದು ಬಯಸುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು. ಇದಕ್ಕಾಗಿ ಕಾರ್ಯಕರ್ತರು ಶ್ರಮಪಡಬೇಕು ಎಂದರು.
ಕಾಂಗ್ರೆಸ್ ಯಾವುದೇ ಅರ್ಹತೆಗಳು ಇಲ್ಲದ, ಯೋಗ್ಯರಲ್ಲದ ಖರ್ಗೆ ಗೆ ಅಧ್ಯಕ್ಷ ಸ್ಥಾನ ನೀಡಿದೆ. ಸಿದ್ದರಾಮಯ್ಯ ಮತ್ತು ರಾಹುಲ್ ಹಿಂದು ವಿರೋಧಿಗಳು. ಅವರು ಅಲ್ಪಸಂಖ್ಯಾತರ ಪರ ಮಾತನಾಡುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ನೋವಾದಾಗ ಇವರು ಹೋರಾಟ ಮಾಡುವುದಿಲ್ಲ. ಕೇವಲ ಕಣ್ಣೊರೆಸುವ ಕೆಲಸ ಮಾತ್ರ ಮಾಡುತ್ತಾರೆ. ನಾವು ಹಿಂದೂಗಳಿಗೆ ನೋವಾದಾಗ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಈ ಅರ್ಹತೆ ಕಾಂಗ್ರೆಸ್ ನಾಯಕರಿಗಿಲ್ಲ. ಶಾಸಕ ಯುಟಿ ಖಾದರ್ ಕೂಡಾ ಅಲ್ಪಸಂಖ್ಯಾತರಿಗೆ ನೋವಾದಾಗ ಹೋರಾಟ ಮಾಡುವ ಬದಲು ಕೇವಲ ಸುದ್ದಿಗೋಷ್ಠಿ ನಡೆಸಿ ಕಣ್ಣೊರಿಸಿ ಬಿಡುತ್ತಾರೆ ಎಂದು ಆರೋಪಿಸಿದರು.
ಸಬ್ ಕಾ ಸಾಥ್ ಸಬ್ಕಾ ವಿಕಾಸ್ ಯೋಜನೆ ಯಡಿ ಮೋದಿ ಹಾಗೂ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಕೇವಲ ಹಿಂದೂಗಳಿಗೆ ಮಾತ್ರ ಮಾಡುವುದಲ್ಲ. ಈ ಕಾರ್ಯಕ್ರಮ ಸರ್ವ ಜನಾಂಗದ ಜನರಿಗೂ ಅನ್ವಯವಾಗುತ್ತದೆ. ಮುಂದಿನ ಹಂತದಲ್ಲಿ ಎಲ್ಲಾ ಜಾತಿ ಧರ್ಮ ವರಿಗೆ ಅನುಕೂಲ ಮಾಡಿಕೊಡುವ ಯೋಜನೆ ಬಿಜೆಪಿ ಹಮ್ಮಿಕೊಳ್ಳಲಿದೆ ಎಂದು ಹೇಳಿದರು.
ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಬೋಳಿಯಾರ್, ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರ ಶೇಖರ್ ಉಚ್ಚಿಲ, ಜೀವನ್ ಕುಮಾರ್ ತೊಕ್ಕೊಟ್ಟು, ಹೇಮಂತ್ ಶೆಟ್ಟಿ, ನವೀನ್ ಪಾದಲ್ಪಾಡಿ, ಮೋಹನ್ ರಾಜ್ ಸುದ್ದಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.