ಬಿಜೆಪಿ ಸರಕಾರ ಲೂಟಿ ಮಾಡಿದ 1.5 ಲಕ್ಷ ಕೋಟಿ ಹಣದಲ್ಲಿ ಮೂಲಸೌಕರ್ಯ ನೀಡಬಹುದಿತ್ತು: ಪ್ರಿಯಾಂಕಾ ಗಾಂಧಿ
ಕಾರವಾರ: ಇಂದು 40% ಕಮಿಷನ್ ಸರಕಾರ ರಾಜ್ಯದಲ್ಲಿದ್ದು, ಇಂದಿನವರೆಗೆ 1.5 ಲಕ್ಷ ಕೋಟಿ ಹಣವನ್ನು ಬಿಜೆಪಿ ಸರಕಾರ ಜನರಿಂದ ಲೂಟಿ ಮಾಡಿದೆ. ಬಿಜೆಪಿಯವರು ಲೂಟಿ ಮಾಡಿದ ಹಣದಿಂದ ಹಲವು ರಸ್ತೆ, ಶಿಕ್ಷಣ ಸಂಸ್ಥೆ, ಆರೋಗ್ಯ ಸಂಸ್ಥೆ ನಿರ್ಮಾಣ ಮಾಡಬಹುದಿತ್ತು ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ದಾಂಡೇಲಿಯಲ್ಲಿ ಎಲ್ಲಾ ಸಮುದಾಯದ ಜನರು ಒಗ್ಗಟ್ಟಾಗಿ ಬಾಳುತ್ತಿರುವುದು ಸಂತೋಷ. ಆದರೆ ಇಂದಿನ ರಾಜಕೀಯ ದಾರಿ ತಪ್ಪಿಸುವ ರಾಜಕೀಯವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಯಾವ ವಿಷಯ ತರಬೇಕೆಂದು ಬಿಜೆಪಿಯವರು ಕಾಯುತ್ತಿರುತ್ತಾರೆ. ಯಾರು ಜನರ ಅಭಿವೃದ್ಧಿಗಾಗಿ ಶ್ರಮ ವಹಿಸ್ತಾರೆ, ಯಾರು ತಮ್ಮ ಸ್ವಾರ್ಥಕ್ಕಾಗಿ ಮಾತನಾಡ್ತಾರೆ ಎಂಬುದು ಜನರಿಗೆ ತಿಳಿದಿದೆ. ಕರ್ನಾಟಕದ ಜನರು ಆಡಳಿತ ಚುಕ್ಕಾಣಿ ನಮಗೆ ನೀಡಿ ಎಂದು ಬಿಜೆಪಿಯವರು ಹೇಳ್ತಾರೆ. ಕಳೆದ ಮೂರುವರೆ ವರ್ಷದಿಂದ ರಾಜ್ಯದಲ್ಲಿ ಯಾರ ಸರಕಾರವಿತ್ತು..? ಎಂದು ಪ್ರಶ್ನಿಸಿದರು.
ನಾನೇನು ಮಾಡಿಲ್ಲ, ಆದರೆ ಇಂದಿರಾ ಗಾಂಧಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹಿರಿಯರು ಇಂದಿಗೂ ನನ್ನನ್ನು ಭೇಟಿಯಾದಾಗ ಇಂದಿರಾ ಗಾಂಧಿಯವರನ್ನು ನೆನಪು ಮಾಡಿಕೊಳ್ಳುತ್ತಾರೆ. ನಾನು ನನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡ್ತೇನೆ, ನನ್ನಂತೆ ಜನಸಾಮಾನ್ಯರು ಕೂಡಾ ಜೀವನ ನಡೆಸ್ತಾರೆ. ಯಾರಿಂದ ಬೆಲೆ ಏರಿಕೆ ಕಡಿಮೆಯಾಗ್ತದೆ, ಭ್ರಷ್ಟಾಚಾರ ಕಡಿಮೆಯಾಗ್ತದೆ, ಉದ್ಯೋಗ, ಭವಿಷ್ಯ ದೊರೆಯುತ್ತದೆ ಎಂದು ನಿರ್ಧರಿಸಿ. ನಾರಾಯಣ ಗುರು, ಬಸವಣ್ಣ ಹುಟ್ಟಿದ ನಾಡಿನ ಜನರು ಸತ್ಯದ ಮಾರ್ಗದಲ್ಲಿ ಸಾಗಿ, ನೈಜತೆ ಅರಿತುಕೊಳ್ಳಿ. ಬಿಜೆಪಿ ಸರಕಾರ ಕರ್ನಾಟಕದಲ್ಲಿ ಮಹಿಳೆಯರಿಗಾಗಿ 24 ಯೋಜನೆಯ ಆಶ್ವಾಸನೆ ನೀಡಿ, 2 ಮಾತ್ರ ಜಾರಿಗೊಳಿಸಿದ್ದಾರೆ ಎಂದರು.
ಕರ್ನಾಟಕವನ್ನು ಸದೃಢಗೊಳಿಸಲು ಈ ಬಾರಿ ರಾಜ್ಯದಲ್ಲಿ ಬದಲಾವಣೆ ತನ್ನಿ. ರಾಜ್ಯದಲ್ಲಿ ಬಿಜೆಪಿಯ ಲೂಟಿ ತಡೆದು ನಿಮ್ಮ ಸಂಪತ್ತು ನಿಮ್ಮ ಪಾಲಿಗೆ ಸಿಗುವಂತಾಗಬೇಕಿದೆ. ಈ ಬಾರಿ ಯಾವ ಪಕ್ಷ ಜನಪರವಾಗಿದೆ, ಯಾವುದು ವಿರುದ್ಧವಾಗಿದೆ ಎಂದು ನೋಡಿಕೊಂಡು ಮತಹಾಕಿ ಎಂದು ಮನವಿ ಮಾಡಿದರು.
ಕನ್ನಡದಲ್ಲೇ ಭಾಷಣ ಆರಂಭ: ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಮಾತು ಪ್ರಾರಂಭಿಸಿದ ಪ್ರಿಯಾಂಕಾ ಗಾಂಧಿ, ದಾಂಡೇಲಿ ಇದು ಮಿನಿ ಇಂಡಿಯಾ ಆಗಿರುವುದು ನನಗೆ ಖುಷಿಯಾಗಿದೆ ಎಂದರು. ತಡವಾಗಿ ಬಂದಿದ್ದಕ್ಕೆ ಆರ್.ವಿ.ದೇಶಪಾಂಡೆಯವರು ನನಗೆ ಬೈದಿದ್ದಾರೆ. ತುಂಬಾ ತಡವಾಗಿ ಬಂದಿದ್ದರಿಂದ ಕಡಿಮೆ ಮಾತನಾಡು ಎಂದಿದ್ದಾರೆ. 50 ವರ್ಷದಿಂದ ರಾಜಕೀಯದಲ್ಲಿರುವ ಅವರಿಗೆ ನನ್ನನ್ನು ಬೈಯ್ಯಲು ಕೂಡ ಅಧಿಕಾರ ಇದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.