ಈ ವಾರ
‘ದಂಗೆ’ಯ ಮಾತು
ಬಿಜೆಪಿ ರಾಜ್ಯಾಧ್ಯಕ್ಷ ಜೆಪಿ ನಡ್ಡಾ ‘‘ಕರ್ನಾಟಕದ ಜನತೆ ಮೋದಿ ಅವರ ಆಶೀರ್ವಾದದಿಂದ ವಂಚಿತರಾಗಬಾರದು’’ ಎಂದಿದ್ದ ಬೆನ್ನಲ್ಲೇ, ಅಮಿತ್ ಶಾ ‘‘ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸುವುದು ಎಂದರೆ ನರೇಂದ್ರ ಮೋದಿಯವರ ಕೈಯಲ್ಲಿ ಕರ್ನಾಟಕದ ಭವಿಷ್ಯ ಕೊಡುವುದು’’ ಎಂದರು. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಂಶಪಾರಂಪರ್ಯ ಆಡಳಿತ, ಭ್ರಷ್ಟಾಚಾರ ಮಿತಿ ಮೀರುವುದರ ಜೊತೆ ಕರ್ನಾಟಕದಲ್ಲಿ ದಂಗೆ ಆಗಲಿದೆ ಎಂದೂ ಹೇಳಿದರು. ಇದಕ್ಕೆ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಕೆಪಿಸಿಸಿ ಅಧ್ಯಕ್ಷರು ಚುನಾವಣಾ ಆಯೋಗಕ್ಕೆ ದೂರನ್ನೂ ಸಲ್ಲಿಸಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದಂತೆ ದಿಲ್ಲಿಯಲ್ಲಿ ಕೂತು ಇಲ್ಲಿನ ದರ್ಬಾರ್ ನಡೆಸಲು ಆಗದು. ಸಂವಿಧಾನ ಅದಕ್ಕೆ ಅವಕಾಶ ಕಲ್ಪಿಸಿಲ್ಲ. ಈ ಥರದ ಒಂದು ದೇಶ, ಒಬ್ಬ ನಾಯಕ ಕಲ್ಪನೆಯಿಂದ ಬಿಜೆಪಿ ಹೊರಬರಬೇಕಾಗಿದೆ. ಜೊತೆಗೆ ಒಂದು ಪಕ್ಷ ಅಧಿಕಾರಕ್ಕೆ ಬಂದರೆ ಭವಿಷ್ಯದಲ್ಲಿ ದಂಗೆ ಆಗುತ್ತದೆ ಎಂದು ಈ ದೇಶದ ಗೃಹ ಮಂತ್ರಿ ಹೇಳಬೇಕಾದರೆ ಒಂದೋ ಇದರ ಬಗ್ಗೆ ಗುಪ್ತಚರ ವರದಿ ಇರಬೇಕು; ಇಲ್ಲದಿದ್ದರೆ ದಂಗೆ ಎಬ್ಬಿಸುವ ಆಲೋಚನೆ ಇರಬೇಕು. ಇದರಲ್ಲಿ ಯಾವುದು ಸತ್ಯ ಎಂಬುದಕ್ಕೆ ಶಾ ಅವರೇ ಉತ್ತರಿಸಬೇಕು.
‘ಗ್ಯಾರಂಟಿ’ಯ ಹೊರೆ
ಚುನಾವಣೆಗೆ ಕೆಲ ದಿನಗಳಷ್ಟೇ ಇರುವಂತೆ ಯೋಜನೆಗಳ ಘೋಷಣೆ ಹೆಚ್ಚುತ್ತಿದೆ. ಕಾಂಗ್ರೆಸ್ ಉಚಿತ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ಟೀಕೆ ಮತ್ತು ವ್ಯಂಗ್ಯ ವ್ಯಕ್ತಪಡಿಸಿದ ಬೆನ್ನಲ್ಲೇ ರಾಹುಲ್ ಗಾಂಧಿ ಕಾಂಗ್ರೆಸ್‌ನ 5ನೇ ಗ್ಯಾರಂಟಿ ಘೋಷಣೆ ಮಾಡಿದರು. ಸರಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿ ನೀಡಲಾಯಿತು. ಅಷ್ಟೇ ಅಲ್ಲದೆ, ಈ ಎಲ್ಲ ಘೋಷಣೆಗಳನ್ನು ಮೊದಲ ಸಚಿವ ಸಂಪುಟ ಸಭೆಯಲ್ಲೇ ಜಾರಿಗೆ ತರುವ ಭರವಸೆ ನೀಡಿದರು. ಈ ಗ್ಯಾರಂಟಿ ಜನರಿಗೆ ನೀಡುತ್ತಿರುವ ಆಮಿಷ ಮತ್ತು ಮೋಸ ಎಂದು ಬಿಜೆಪಿ ವಾಗ್ದಾಳಿ ನಡೆಸಿತು. ಆರ್ಥಿಕ ಪರಿಸ್ಥಿಯ ಅರಿವಿಲ್ಲದೆ ಕೇವಲ ಚುನಾವಣೆಗಾಗಿ ಯೋಜನೆಗಳನ್ನು ಘೋಷಿಸಿದರೆ, ಅದರ ಹೊರೆಯನ್ನು ಮತ್ತೆ ಜನರೇ ಹೊರಬೇಕಾಗುತ್ತದೆ. ಸಿದ್ದರಾಮಯ್ಯನವರಂಥ ಮೇಧಾವಿ ವಿತ್ತ ಪರಿಣತರಿದ್ದೂ ಈ ಥರದ ಘೋಷಣೆ ಮಾಡುತ್ತಿರುವುದು ಯಾಕೋ?
ಸೋಲಿಸುವ ಹಠ
ಶೆಟ್ಟರ್ ಮತ್ತು ಬಿಜೆಪಿ ಕದನ ಮುಂದುವರಿದಿದೆ. ಬಿ.ಎಸ್. ಯಡಿಯೂರಪ್ಪಮುಂಚೂಣಿಯಲ್ಲಿ ನಿಂತು ಶೆಟ್ಟರ್ ಸೋಲಿಸುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ನೇರವಾಗಿ ಬಿ.ಎಲ್. ಸಂತೋಷ್ ವಿರುದ್ಧ ತೊಡೆ ತಟ್ಟಿರುವ ಶೆಟ್ಟರ್, ತಮಗೆ ಮಾತ್ರವಲ್ಲದೆ ತೇಜಸ್ವಿನಿ ಅನಂತ್ ಕುಮಾರ್ ಅವರಿಗೂ ಟಿಕೆಟ್ ತಪ್ಪಿಸಿದ್ದು ಇದೇ ಬಿ.ಎಲ್. ಸಂತೋಷ್ ಎಂದರು. ‘‘ಲಿಂಗಾಯತ ನಾಯಕತ್ವ ಇಲ್ಲದೆ ಸರಕಾರ ರಚಿಸಲು ಹೊರಟಿದ್ದಾರೆ, ಅದು ಸಾಧ್ಯವಾಗದು. ಸಂತೋಷ್ ಬೇರೆಯವರ ಹೆಗಲ ಮೇಲೆ ಬಂದೂಕು ಇಡುವುದನ್ನು ಬಿಟ್ಟು ನೇರವಾಗಿ ನನ್ನ ವಿರುದ್ಧ ಹೋರಾಟಕ್ಕೆ ಬರಲಿ’’ ಎಂದು ಸವಾಲು ಹಾಕಿದ್ದಾರೆ. ಈ ನಡುವೆ ತಾನು ಯಾರಿಗೂ ಪ್ರತಿಸ್ಪರ್ಧಿ ಅಲ್ಲ ಎಂದು ಬಿ.ಎಲ್. ಸಂತೋಷ್ ಹೇಳಿದ್ದಾರೆ. ಹಿಂದೆ ಯಡಿಯೂರಪ್ಪಬಿಜೆಪಿ ಬಿಟ್ಟಾಗಲೂ ಬಿ.ಎಲ್. ಸಂತೋಷ್ ಹೆಸರು ಹೇಳಿದ್ದರು. ಶೆಟ್ಟರ್ ಕೂಡ ಅದನ್ನೇ ಹೇಳುತ್ತಿದ್ದಾರೆ. ಒಳಗೆ ನಿಂತು ಆಟ ಆಡಿಸುತ್ತಿದ್ದ ಬಿ.ಎಲ್. ಸಂತೋಷ್ ಮತ್ತವರ ತಂಡಕ್ಕೆ ಇದು ಒಂದು ಆಘಾತವನ್ನಂತೂ ತಂದಿದೆ. ಶೆಟ್ಟರ್ ಸೋಲಿಸಲು ಶತಾಯ ಗತಾಯ ಪ್ರಯತ್ನ ನಡೆದಿದೆ. ಸೋಲು ಗೆಲುವಿನ ನಿರ್ಧಾರ ಮುಂದಿನ ಹೋರಾಟದ ಬಗ್ಗೆಯೂ ಭವಿಷ್ಯ ಬರೆಯಲಿದೆ.
‘ವಿಷ’ದ ಬಲೆ
ಚುನಾವಣೆ ಹೊತ್ತಲ್ಲಿ ನಾಯಕರು ಆಡುವ ಒಂದೊಂದು ಮಾತು ಚುನಾವಣೆ ದಿಕ್ಕನ್ನೇ ಬದಲಿಸಬಹುದು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ ಇದ್ದಂತೆ ಎಂದು ಹೇಳಿ, ಬಳಿಕ ತಮ್ಮ ಹೇಳಿಕೆ ಪ್ರಧಾನಿ ಬಗ್ಗೆ ಅಲ್ಲ, ಬಿಜೆಪಿ ಕುರಿತು ಎಂದು ಸ್ಪಷ್ಟನೆ ನೀಡಿದರು. ಖರ್ಗೆ ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಕಕ್ತವಾಗಿದೆ. ಸಿದ್ದರಾಮಯ್ಯನವರ ಲಿಂಗಾಯತ ಭ್ರಷ್ಟ ಸಿಎಂ ಹೇಳಿಕೆ ಇನ್ನೂ ನೆನಪಿರುವಾಗಲೇ ಮತ್ತೊಂದು ಅಸ್ತ್ರ ಬಿಜೆಪಿ ಬತ್ತಳಿಕೆ ಸೇರಿತು. ಕಾಂಗ್ರೆಸ್ ಇಂಥ ಎಡವಟ್ಟು ಮಾಡಿಕೊಳ್ಳುತ್ತಿರುವುದು ಇದೇ ಮೊದಲಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ‘‘ಚೌಕಿದಾರ್ ಚೋರ್ ಹೈ’’, ಗುಜರಾತ್ ಚುನಾವಣೆ ಸಂದರ್ಭದ 10 ತಲೆಯ ರಾವಣ ಹೇಳಿಕೆ, ಮಣಿಶಂಕರ್ ಅಯ್ಯರ್ ಅವರ ಚಾಯ್ ವಾಲಾ ಈ ಎಲ್ಲ ಹೇಳಿಕೆಗಳು ಬಿಜೆಪಿಗೆ ಲಾಭವನ್ನೇ ತಂದಿವೆ. ಆದರೆ ಈ ಮಧ್ಯೆ, ಬಿಜೆಪಿಯ ಯತ್ನಾಳ್, ಮೋದಿ ವಿಷಸರ್ಪವಾದರೆ ಸೋನಿಯಾ ಗಾಂಧಿ ವಿಷಕನ್ಯೆಯಾ ಎಂದು ಕೇಳಿರುವುದು ಕಾಂಗ್ರೆಸ್ ನಾಯಕರ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಇದಕ್ಕಾಗಿ ಕ್ಷಮೆ ಯಾಚಿಸಬೇಕೆಂದು ಕಾಂಗ್ರೆಸ್ ನಾಯಕಿಯರು ಆಗ್ರಹಿಸಿದರೆ, ಕ್ಷಮೆ ಕೇಳಬೇಕಿರುವುದು ಯತ್ನಾಳ್ ಅಲ್ಲ, ಬದಲಾಗಿ ಮೋದಿ ಮತ್ತು ಬೊಮ್ಮಾಯಿ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಅಲ್ಲಿಗೆ, ಖರ್ಗೆ ಹೇಳಿಕೆಯಲ್ಲಿ ಸಿಕ್ಕಬಿದ್ದಿದ್ದ ಕಾಂಗ್ರೆಸ್‌ಗೆ ಕೊಂಚ ನಿರಾಳವಾಗಲು ಯತ್ನಾಳ್ ಹೇಳಿಕೆ ಸಿಕ್ಕಂತಾಗಿದೆ.
ಕಾಡುತ್ತಿರುವ ಭಯ
ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅದೇ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲುಗೆ ಫೋನ್ ಕರೆ ಮಾಡಿ ನಾಮಪತ್ರ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದ ಮತ್ತು ನಿನಗೆ ಗೂಟದ ಕಾರನ್ನು ಕೊಡಿಸುತ್ತೇನೆ, ನಿನ್ನ ಬದುಕಿಗೆ ಏನು ಬೇಕೋ ಅದನ್ನು ಮಾಡುತ್ತೇನೆ ಎಂದೆಲ್ಲಾ ಆಶ್ವಾಸನೆ ನೀಡಿದ್ದಾರೆನ್ನಲಾದ ಆಡಿಯೊ ವೈರಲ್ ಆಯಿತು. ಇದನ್ನು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿತ್ತು. ಬಳಿಕ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಕ್ರಮಕ್ಕೆ ಆಗ್ರಹಿಸಿ ದೂರು ದಾಖಲಿಸಿದೆ. ತನ್ನ ಕ್ಷೇತ್ರ ಬಿಟ್ಟು ನಾಯಕರು ಹೇಳಿದ ಚಾಮರಾಜನಗರ ಮತ್ತು ವರುಣಾದಲ್ಲಿ ಸ್ಪರ್ಧಿಸಿ ಈಗಲೇ ಅತಂತ್ರರಂತಾಗಿರುವ ಸೋಮಣ್ಣ, ಜೆಡಿಎಸ್ ಅಭ್ಯರ್ಥಿಗೆ ಹೀಗೊಂದು ಆಮಿಷ ಒಡ್ಡಿದ್ದು ವೈಯಕ್ತಿಕವಾಗಿಯೋ ಅಥವಾ ಅದು ಕೂಡ ನಾಯಕರ ಮರ್ಜಿಗೋ ಎಂಬುದು ಸ್ಪಷ್ಟವಿಲ್ಲ. ಅಂತೂ ಬಿಜೆಪಿಗೆ ಭಯ ಕಾಡುತ್ತಿದೆ ಎಂದಾಯಿತು.
ಮತದಾರರ ಮಾಹಿತಿ ಮಾರಾಟ
25 ಸಾವಿರ ರೂ.ಗೆ 6.5 ಲಕ್ಷ ಮತದಾರರ ಮಾಹಿತಿ ಮಾರಾಟ ಮಾಡುತ್ತಿದ್ದ ಕೋರಮಂಗಲದ ಖಾಸಗಿ ಸಂಸ್ಥೆ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯೊಬ್ಬರ ಮಾಹಿತಿ ಮೇರೆಗೆ ‘ದಿ ನ್ಯೂಸ್ ಮಿನಿಟ್’ ವೆಬ್‌ಸೈಟ್ ತನಿಖಾ ವರದಿ ಪ್ರಕಟಿಸಿದ ಬೆನ್ನಲ್ಲೇ ಸಂಸ್ಥೆ ವಿರುದ್ಧ ಕೇಸ್ ದಾಖಲಾಗಿದೆ. ವೆಬ್ಸೈಟ್ ಡೊಮೈನ್ ನೋಂದಣಿ ದಿಲ್ಲಿಯಲ್ಲಿ ಇದೇ ತಿಂಗಳಲ್ಲಿ ಆಗಿರುವ ವಿಚಾರವೂ ಟಿಎನ್‌ಎಂ ವರದಿಯಲ್ಲಿತ್ತು. ಸಂಸ್ಥೆ ಯಾರಿಗೆಲ್ಲ ಮಾಹಿತಿಗಳನ್ನು ಮಾರಾಟ ಮಾಡಿರಬಹುದು, ಈ ಲಕ್ಷಾಂತರ ಮತದಾರರು ಯಾವ್ಯಾವ ಕ್ಷೇತ್ರಕ್ಕೆ ಸೇರಿರಬಹುದು ಎಂಬುದು ಈಗ ಎದ್ದಿರುವ ಪ್ರಶ್ನೆ. ಚುನಾವಣೆ ಎಂಬುದು ಮತದಾರರಿಗೆ ಆಮಿಷ, ಬೆದರಿಕೆ ಮೊದಲಾದ ತಂತ್ರಗಳನ್ನು ಬಳಸಿ ಗೆಲ್ಲುವ ಕಾಲ ಇದಾಗಿರುವುದರಿಂದ, ಈ ಮತದಾರರ ಮಾಹಿತಿ ವಿಚಾರ ಬಹಳ ಗಂಭೀರ ಪ್ರಕರಣವಾಗಿದೆ. ಕಳೆದ ನವೆಂಬರ್‌ನಲ್ಲಿ ಚಿಲುಮೆ ಸಂಸ್ಥೆ ಮತದಾರರ ಮಾಹಿತಿ ಕದ್ದು ಸಿಕ್ಕಿಹಾಕಿಕೊಂಡ ಬಳಿಕ, ಈಗ ಅಂಥದೇ ವಿದ್ಯಮಾನ ನಡೆದಿರುವುದು ಆತಂಕದ ವಿಚಾರ. ರಾಜಕೀಯ ಪಕ್ಷಗಳಾಗಲಿ, ಮಾಧ್ಯಮವಾಗಲಿ ಈ ಗಂಭೀರ ವಿಚಾರದ ಬಗ್ಗೆ ಮೌನ ವಹಿಸಿರುವುದು ಅಚ್ಚರಿ ಮೂಡಿಸುತ್ತಿದೆ.
ಕಳಂಕ ಯಾವುದು?
ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಮಹಿಳಾ ಕುಸ್ತಿಪಟುಗಳ ಎರಡನೇ ಸುತ್ತಿನ ಪ್ರತಿಭಟನೆ ಎಪ್ರಿಲ್ 23ರಿಂದ ನಡೆಯುತ್ತಿದ್ದು, ಗಂಭೀರ ಸ್ವರೂಪ ಪಡೆಯುತ್ತಿದೆ. ಈ ಮಧ್ಯೆ, ಬ್ರಿಜ್ ಭೂಷಣ್ ವಿರುದ್ಧ ಪ್ರಕರಣ ದಾಖಲಿಸುವುದಾಗಿ ದಿಲ್ಲಿ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದ್ದಾರೆ. ಈ ಮಧ್ಯೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪ್ರಿಯಾಂಕಾ ಗಾಂಧಿ, ಕುಸ್ತಿಪಟುಗಳನ್ನು ತಬ್ಬಿ ಸಂತೈಸಿದರು. ಮಹಿಳಾ ಕುಸ್ತಿಪಟುಗಳ ಈ ಪ್ರತಿಭಟನೆ ಅಶಿಸ್ತು, ಇದರಿಂದ ದೇಶಕ್ಕೆ ಕಳಂಕ ಎಂಬ ಪಿ.ಟಿ. ಉಷಾ ಹೇಳಿಕೆಯೂ ಅತ್ಲೀಟ್‌ಗಳ ತೀವ್ರ ನೋವಿಗೆ ಕಾರಣವಾಗಿದೆ. ದೇಶಕ್ಕೆ ಕೀರ್ತಿ ತಂದ ಕುಸ್ತಿಪಟುಗಳು ತಮಗಾದ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಿದರೆ ಅದು ವಿಶ್ವಗುರುವಿನ ಕಿವಿಗೂ ಮನಸ್ಸಿಗೂ ನಾಟದಿರುವುದು, ಆ ಹೆಣ್ಣುಮಕ್ಕಳ ಪ್ರತಿಭಟನೆ ಮತ್ತೊಬ್ಬ ಹಿರಿಯ ಮಹಿಳಾ ಕ್ರೀಡಾಟಪಟುವಿಗೆ ಅಶಿಸ್ತು ಎಂದು ಕಾಣಿಸುವುದು, ಆಳುವ ಬಿಜೆಪಿಗೆ ನೊಂದ ಕುಸ್ತಿಪಟುಗಳಿಗೆ ನ್ಯಾಯ ಕೊಡಿಸುವುದಕ್ಕಿಂತಲೂ ತಮ್ಮ ಸಂಸದನ ರಕ್ಷಣೆಯೇ ಮುಖ್ಯವಾಗಿರುವುದು ಈ ದೇಶದ ಪಾಲಿಗೆ ದೊಡ್ಡ ಕಳಂಕ ಎಂದು ಪಿ.ಟಿ. ಉಷಾ ಮೊದಲಾದವರಿಗೆ ಅನ್ನಿಸುತ್ತಿಲ್ಲವೇ ಎಂದು ಕೇಳಲೇಬೇಕಾಗಿದೆ.