ಬಡವರ ನೋವಿಗೆ ಸ್ಪಂದಿಸುವುದರಲ್ಲಿ ಸಾರ್ಥಕ್ಯವಿದೆ : ಕೆ.ಎಸ್. ಶೇಖ್ ಕರ್ನಿರೆ
ಫಲಾನುಭವಿಗಳಿಗೆ ಮನೆಯ ಕೀಲಿ ಹಸ್ತಾಂತರ ಕಾರ್ಯಕ್ರಮ
ಮಂಗಳೂರು, ಎ.30: ಸಮಾಜದಲ್ಲಿರುವ ದುರ್ಬಲ ವರ್ಗದ ದುಖ: ದುಮ್ಮಾನಗಳಿಗೆ ಸ್ಪಂದಿಸುವುದರಲ್ಲಿ ಸಾರ್ಥಕ್ಯವಿದೆ ಎಂದು ಎಕ್ಸ್ ಪರ್ಟೈಸ್ ಸಂಸ್ಥೆಯ ಮುಖ್ಯಸ್ಥ ಕೆ. ಎಸ್. ಶೇಖ್ ಕರ್ನಿರೆ ಹೇಳಿದ್ದಾರೆ.
ಇಲ್ಲಿ ನಡೆದ ಫಲಾನುಭವಿಗಳಿಗೆ ಮನೆಯ ಕೀಲಿ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯನ ಮೂಲಭೂತ ಅವಶ್ಯಕತೆಯಾದ ಮನೆಯಿಲ್ಲದೆ ಕಷ್ಟಪಡುವವರು ಹಲವರಿದ್ದಾರೆ. ಇಂತಹ ಏಳು ಕುಟುಂಬಗಳನ್ನು ಗುರುತಿಸಿ ಕರ್ನಿರೆ ಸಯ್ಯಿದ್ ಚಾರಿಟೇಬಲ್ ಟ್ರಸ್ಟ್ ಅವರಿಗೆ ಮೂಲ ಸೌಕರ್ಯಗಳನ್ನೊಳ ಗೊಂಡ ಏಳು ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡುತ್ತಿರುವುದು ಅತೀವ ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ದ.ಕ. ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, ಮಾತನಾಡಿ ಸಯ್ಯದ್ ಹಾಜಿ ಚಾರಿಟೇಬಲ್ ಟ್ರಸ್ಟ್ ಬಡಮಕ್ಕಳ ಶಿಕ್ಷಣ, ವೈದ್ಯಕೀಯ ನೆರವು, ಮನೆ ರಿಪೇರಿ ಮತ್ತು ಮನೆ ನಿರ್ಮಾಣಕ್ಕೆ ನಿರಂತರ ಸಹಾಯಹಸ್ತ ನೀಡುತ್ತಿರುವುದನ್ನು ಶ್ಲಾಘಿಸಿದರು.
ಕರ್ನಿರೆ ವಲಯ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮಾತನಾಡಿ, ಸಮಾಜದ ದೀನ ದಲಿತರ ಕಷ್ಟ-ಕಾರ್ಪಣ್ಯಗಳಿಗೆ ಕಣ್ಣು ಕಿವಿಯಾಗುತ್ತಿದ್ದ ಸಯ್ಯದ್ ಹಾಜಿಯವರ ಉದಾತ್ತ ಗುಣವನ್ನು ಸ್ಮರಿಸಿ ಅವರ ಜೀವನ ಎಲ್ಲರಿಗೆ ಆದರ್ಶವಾಗಿತ್ತು ಎಂದರು.
ಮಹಮ್ಮದ್ ಅಶ್ಫಾಕ್ ಮಾತನಾಡಿ ಈಗ ಕೆ.ಎಸ್. ಸಯ್ಯದ್ ಹಾಜಿ ಕಂಪೌಂಡ್’ ಎಂಬ ನಾಮಧೇಯದಲ್ಲಿ ಬಡವರಿಗೆ ಏಳು ಮನೆಗಳನ್ನು ನಿರ್ಮಿಸಿಕೊಟ್ಟಂತೆ ಮುಂಬರುವ ದಿನಗಳಲ್ಲಿ ಇಂತಹ ಸೇವೆಯನ್ನು ವ್ಯಾಪಕಗೊಳಿಸಿ ಸುತ್ತಮುತ್ತಲಿನ ಗ್ರಾಮದ ದುರ್ಬಲ ವರ್ಗದವರಿಗೆ ಮತ್ತಷ್ಟು ಸಹಕಾರ ನೀಡುವ ಗುರಿಯನ್ನಿಟ್ಟು ಕೊಳ್ಳಲಾಗಿದೆ ಎಂದರು.
ಉಡುಪಿ, ದ.ಕ. ಜಿಲ್ಲಾ ಜಂಇಯ್ಯತ್ತುಲ್ ಫಲಾಹ್ ಅಧ್ಯಕ್ಷ ಸಬೀಕ್ ಖಾಝಿ, ಕೆ. ಎಸ್, ಅಬೂಬಕರ್, ಹರೀಶ್ಚಂದ್ರ ಶೆಟ್ಟಿ, ಎಂ.ಕೆ. ಅಬ್ದುಲ್ ಹಮೀದ್ ಮುಲ್ಕಿ, ಕರ್ನಿರೆ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಅಲಿ, ಖತೀಬ್ ಫಾರೂಖ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.
ಎಕ್ಸ್ ಪರ್ಟೈಸ್ ಸಂಸ್ಥೆಯ ಮಂಗಳೂರು ಘಟಕದ ನಿರ್ದೇಶಕ ಅಬ್ದುಲ್ ರಹೀಮ್ ಸ್ವಾಗತಿಸಿದರು. ಮಹಮ್ಮದ್ ಸಈದ್ ಕಿರಾಅತ್ ಪಠಿಸಿದರು. ಮಹಮ್ಮದ್ ಅನ್ಸೀಫ್ ವಂದಿಸಿದರು.