ಶಾಸಕ ಸುನೀಲ್ ನಾಯ್ಕರ ಕುಮ್ಮಕ್ಕಿನಿಂದ ಸಾಮಾಜಿಕ ಜಾಲಾತಾಣಗಳಲ್ಲಿ ನಾಮಧಾರಿ ಮಹಿಳೆಯರ ತೇಜೋವಧೆ: ನಯನಾ
ಭಟ್ಕಳ, ಮೇ 2: ಸಾಮಾಜಿಕ ಜಾಲಾತಾಣಗಳಲ್ಲಿ ನಾಮಧಾರಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ತೇಜೋವಧೆ ನಡೆಸಲಾಗುತ್ತಿದೆ. ಇದಕ್ಕೆ ನಾಮಧಾರಿ ಸಮಾಜದವರೇ ಆಗಿರುವ ಶಾಸಕ ಸುನೀಲ್ ನಾಯ್ಕ ಹಾಗೂ ಪೊಲೀಸ್ ಇಲಾಖೆಯೇ ನೇರಾ ಹೊಣೆ ಎಂದು ನಾಮಧಾರಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನಯನಾ ಶ್ರೀಧರ್ ನಾಯ್ಕ ಆರೋಪಿಸಿದ್ದಾರೆ.
ಅವರು ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮಹಿಳೆಯರ ಮೇಲೆ ವಿಶೇಷವಾಗಿ ನಾಮಧಾರಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅಪಪ್ರಚಾರ ಹಾಗೂ ತೇಜೋವಧೆ ಮಾಡುವಂತಹ ಬರಹಗಳನ್ನು ಫೇಕ್ ಅಕೌಂಟ್ ಮತ್ತು ಫೇಕ್ ಐಡಿ ಮೂಲಕ ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲಾತಾಣಗಳಲ್ಲಿ ಹರಿಯಬಿಡಲಾಗುತ್ತಿದೆ. ಇದರಿಂದಾಗಿ ಸಮಾಜದಲ್ಲಿ ನಾವು ತಲೆ ಎತ್ತಿ ತಿರುಗಾಡದ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತಂತೆ ಪೊಲೀಸ್ ಇಲಾಖೆಗೆ ಲಿಖಿತ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರ ಹಿಂದೆ ಶಾಸಕ ಸುನೀಲ್ ನಾಯ್ಕರ ಕುಮ್ಮಕ್ಕೂ ಇದೆ ಎಂದು ಆರೋಪಿಸಿದರು.
ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ಇಷ್ಟೊಂದು ನಿರ್ಲಕ್ಷ್ಯ ಏಕೆ? ನಾಮಧಾರಿ ಸಮಾಜದ ಶಾಸಕರಿದ್ದೂ ನಮಗೆ ನ್ಯಾಯ ಸಿಕ್ಕಿಲ್ಲ ಎಂದಾದರೆ ನಾವು ಯಾರಿಂದ ನ್ಯಾಯ ನಿರೀಕ್ಷೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಮೇಘನಾ ನಾಯ್ಕ ಮಾತನಾಡಿ, ನಾಮಧಾರಿ ಸಮಾಜದ ಮಹಿಳೆಯರ ಅವಹೇಳನ ಅಪಮಾನದ ಹಿಂದೆ ಶಾಸಕರ ಚೇಲಾಗಳ ಕೈವಾಡ ಇದೆ ಎಂದು ಆರೋಪಿಸಿದರು. ಮೂವರು ಶಾಸಕರ 15 ವರ್ಷಗಳ ಅವಧಿಯಲ್ಲಿ ಮಹಿಳೆಯರು ಗೌರವಯುತವಾಗಿ ಬದುಕುತ್ತಿದ್ದೇವು. ಆದರೆ ಈಗ ಶಾಸಕರ ಕುಮ್ಮಕ್ಕಿನಿಂದಲೇ ಅವರ ಚೇಲಾಗಳು ಮಹಿಳೆಯರನ್ನು ಅಪಮಾನ ಮಾಡುವಂತಹ ಹೀನಾ ಕೃತ್ಯಕ್ಕೆ ಇಳಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಮಹಿಳೆಯರಿಗೆ ಶೇ.50 ಮೀಸಲಾತಿ ನೀಡಿದೆ. ನಾವು ಕೂಡ ರಾಜಕೀಯದಲ್ಲಿ ಸಕ್ರಿಯರಾಗಿದ್ದೇವೆ. ರಾಜಕೀಯದಲ್ಲಿ ಮುಂದೆ ಬರುತ್ತಿರುವ ಮಹಿಳೆಯರ ಅಭಿವೃದ್ಧಿ ಸಹಿಸದವರು ಅವರನ್ನು ಅಪಮಾನಿಸುವ ಕೃತ್ಯಕ್ಕೆ ಇಳಿದಿದ್ದಾರೆ. ಗೌರವಾನ್ವಿತ ಕುಟುಂಬದ ಮಗಳು, ಸೊಸೆ ಎಂಬ ನೆಲೆಯಲ್ಲಿ ನಾವು ಯಾವುದೇ ಕಾರಣಕ್ಕೂ ಮಹಿಳೆಯರ ಮೇಲಾಗುತ್ತಿರುವ ಅಪಮಾನವನ್ನು ಸಹಿಸಲ್ಲ. ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಉಗ್ರ ಹೋರಾಟಕ್ಕೂ ತಾವು ಸಿದ್ಧ ಎಂದು ಮಹಿಳೆಯರು ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಿಂಧೂ ಭಾಸ್ಕರ್ ನಾಯ್ಕ, ರೇವತಿ ರವಿಶಂಕರ್ ನಾಯ್ಕ, ಪದ್ಮಾ ನಾಗೇಶ್ ನಾಯ್ಕ, ಬೇಬಿ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.