ಭಟ್ಕಳ ಶಾಸಕ ಸುನೀಲ್ ನಾಯ್ಕರಿಂದ ಸರಕಾರಿ ಬಸ್ ನಿಲ್ದಾಣ ಮಾರಾಟ: ಮಾಂಕಾಳ್ ವೈದ್ಯ ಆರೋಪ
ಭಟ್ಕಳ, ಮೇ 2: ಕೇಂದ್ರದ ಬಿಜೆಪಿ ಆಡಳಿತ ಸರ್ಕಾರ ವಿಮಾನ ನಿಲ್ದಾಣ, ಬಂದರು, ಬ್ಯಾಂಕ್, ಬಿಎಸ್ಸೆನ್ನೆಲ್ ಸಂಸ್ಥೆಗಳನ್ನು ಮಾರಾಟ ಮಾಡಿದಂತೆಯೇ ಭಟ್ಕಳ ಶಾಸಕ ಸುನೀಲ್ ನಾಯ್ಕ್ ಭಟ್ಕಳದ ಸರಕಾರಿ ಬಸ್ ನಿಲ್ದಾಣವನ್ನೇ ಮಾರಾಟ ಮಾಡಿದ್ದಾರೆ ಎಂದು ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಮಾಂಕಾಳ್ ಎಸ್. ವೈದ್ಯ ಆರೋಪಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಎಲ್ಲವನ್ನೂ ಮಾರುತ್ತಿದೆ, ತನ್ನ ಕೆಂದ್ರದ ಬಿಜೆಪಿ ನಾಯಕರನ್ನು ಅನುಸರಿಸುತ್ತಿರುವ ಸ್ಥಳೀಯ ಶಾಸಕರು ಯಾವುದೇ ರೀತಿಯಲ್ಲಿ ಹಿಂದೆ ಬಿದ್ದಿಲ್ಲ. ನಿಮ್ಮ ಶಾಸಕ ಏನು ಮಾರಾಟ ಮಾಡಿದ್ದಾರೆ ಎಂದು ನಿಮಗೆ ತಿಳಿದಿದೆಯೇ ಎಂದು ಸಭಿಕರನ್ನು ಪ್ರಶ್ನಿಸಿದ ಮಾಂಕಾಳ್, ನಿಮ್ಮ ವಿಧಾನಸಭಾ ಸದಸ್ಯರು ಭಟ್ಕಳದ ಸರ್ಕಾರಿ ಬಸ್ ನಿಲ್ದಾಣವನ್ನೇ ಮಾರಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ.
ತಾನು ವಿಧಾನಸಭೆ ಸದಸ್ಯನಾಗಿದ್ದಾಗ ಬಸ್ ನಿಲ್ದಾಣಕ್ಕೆ ಸ್ಥಳಾವಕಾಶದ ಕೊರತೆಯಿಂದ ಬಸ್ ಡಿಪೋವನ್ನು ಸಾಗರ ರಸ್ತೆಗೆ ಸ್ಥಳಾಂತರಿಸಲಾಗಿತ್ತು. ಈಗಿರುವ ಬಸ್ ನಿಲ್ದಾಣಕ್ಕೆ ಮೂರು ಅಥವಾ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಜತೆಗೆ ಇತರೆ ನಗರಗಳಿಗೆ ತೆರಳುವ ಸರ್ಕಾರಿ ಹಾಗೂ ಖಾಸಗಿ ನೌಕರರಿಗೆ ವಾಹನ ನಿಲುಗಡೆ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸುವುದು ನನ್ನ ಯೋಜನೆಯಾಗಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ್ ಗೆದ್ದು ಬಂದು ಬಸ್ ನಿಲ್ದಾಣವನ್ನೇ ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ. ಇದರಿಂದಾಗಿ ನನ್ನ ಅಭಿವೃದ್ಧಿ ಯೋಜನೆಗೆ ಮತ್ತು ಜನಹಿತವನ್ನು ಹಾಳು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.